ಮಂಗಳೂರು : ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕೇವಲ ಬಹುಮಾನ ಗಳಿಕೆಯ ಉದ್ದೇಶದಿಂದ ಸ್ಪರ್ಧಿಸದೆ, ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಆರಾಧನೆಯಂತೆ ಎಂಬ ಭಾವಿಸಬೇಕು. ಎಂಬುದಾಗಿ ಎಸ್.ಕೆ.ಡಿ.ಬಿ. ಅಸೋಸಿಯೇಶನ್ನಿನ ಕಾರ್ಯದರ್ಶಿಗಳಾದ ಶ್ರೀ ಸುಬ್ರಹ್ಮಣ್ಯ ರಾವ್ ಅಭಿಪ್ರಾಯವಿತ್ತರು. ಇವರು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಾರದಾ ಮಹೋತ್ಸವ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ.ಪುರಾಣಿಕರು ಈ ಸಂದರ್ಭದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿ, ಕಲೆಗಳ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ಉತ್ತಮವಾದ ಸಂಸ್ಕಾರವನ್ನು ತುಂಬಿಸಿ ರಾಷ್ಟ್ರದ ಸುಯೋಗ್ಯ ಪ್ರಜೆಗಳನ್ನಾಗಿಸುವುದೇ ಈ ಸಾಂಸ್ಕೃತಿಕ ಸ್ಪರ್ಧೆಗಳ ಉದ್ದೇಶ ಎಂಬುದಾಗಿ ತಿಳಿಸಿದರು.
ಶಾರದಾ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯರು, ಶಾರದಾ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯರು, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ. ಮಡಿ, ಉಪ-ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಲಯದ ಅದ್ಯಾಪಕರಾದ ಶ್ರೀ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀ ನಾಗರಾಜ ಭಟ್ ಕಾರ್ಯಕ್ರಮ ನಿರ್ವಹಣೆಗೈದರೆ, ಸಾಂಸ್ಕೃತಿಕ ಸ್ಪರ್ಧೆಗಳ ಸಂಯೋಜಕರಾದ ಶ್ರೀ ಸತ್ಯನಾರಾಯಣ ಭಟ್ ವಂದಿಸಿದರು.
ಸಾಂಸ್ಕೃತಿಕ ಸ್ಪರ್ಧೆಗಳ ಅಂಗವಾಗಿ ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ಏಕಪಾತ್ರಾಭಿನಯ, ಭಜನೆ, ಚಿತ್ರಕಲೆ, ರಂಗೋಲಿ, ಗೀತಕಂಠಪಾಠ ಇತ್ಯಾದಿ ಸ್ಪರ್ಧೆಗಳು ನಡೆಯಿತು. ವಿಜೇತರನ್ನು ಅಭಿನಂದಿಸಿ ಸ್ಥಳದಲ್ಲೇ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.