News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 1st December 2022


×
Home About Us Advertise With s Contact Us

ಕಾಂಗ್ರೆಸ್ಸಿಗರಿಂದ ಸುಳ್ಳನ್ನು ಸತ್ಯವೆಂದು ಬಿಂಬಿಸುವ ಪ್ರಯತ್ನ: ಸುನೀಲ್ ಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸುಳ್ಳು ಪ್ರಚಾರಕ್ಕೆ ನಮ್ಮ ಕಾರ್ಯಕರ್ತರು ಸ್ಪಷ್ಟ ಉತ್ತರ ಕೊಡಬೇಕು, ನಮ್ಮ ಸರಕಾರಗಳ ಜನಪರ ಕೆಲಸಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಸಲಹೆ ನೀಡಿದರು.

ನಗರದ ವಯ್ಯಾಲಿಕಾವಲ್‍ನ “ಶ್ರೀ ಕೃಷ್ಣದೇವರಾಯ ಕಲಾಮಂದಿರ”ದಲ್ಲಿ ಇಂದು ನಡೆದ ಬಿಜೆಪಿ ಎಂಟು ಮೋರ್ಚಾಗಳ ‘ಮಾಧ್ಯಮ ಮಂಥನ’ ಮೋರ್ಚಾಗಳ ಮಾಧ್ಯಮ ಸಂಚಾಲಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದವರು ಹತ್ತು ಬಾರಿ ಸುಳ್ಳನ್ನು ಹೇಳಿ ಅದನ್ನು ಸತ್ಯವೆಂದು ಬಿಂಬಿಸಲು ಮುಂದಾಗಿದ್ದಾರೆ. ಆದರೆ, ಅದನ್ನು ಜನರು ನಂಬುತ್ತಿಲ್ಲ. ಆದರೂ, ಅದನ್ನು ತಪ್ಪಿಸಲು ನಾವು ಹೆಚ್ಚು ಜಾಗೃತರಾಗಬೇಕು; ಇದಕ್ಕಾಗಿ ನಮ್ಮ ವಿಷಯಗಳನ್ನು ಸಮರ್ಥವಾಗಿ ಹಾಗೂ ಸಕಾಲಿಕವಾಗಿ ಜನರಿಗೆ ತಲುಪಿಸಬೇಕು ಎಂದು ಕಿವಿಮಾತು ಹೇಳಿದರು.

ಅಪಪ್ರಚಾರಗಳೇ ಸದ್ದು ಮಾಡುತ್ತಿವೆ. ಒಳ್ಳೆಯ ವಿಚಾರಗಳಿಗೆ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ. ನಮ್ಮ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಮತಾಂತರ ನಿಷೇಧ, ಗೋಹತ್ಯಾ ನಿಷೇಧ ಮತ್ತು ಗೋಶಾಲೆಗಳ ನಿರ್ಮಾಣ, ಗ್ರಾಮ ಒನ್ ಯೋಜನೆ, ಯಶಸ್ವಿನಿ ಯೋಜನೆ ಮರುಜಾರಿಯಂಥ ವಿಚಾರಗಳನ್ನು ನಮ್ಮ ತಂಡವು ಜನರಿಗೆ ತಿಳಿಸಬೇಕು. ಅವುಗಳನ್ನು ತಿಳಿಸಿ ಜನಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರು. ಯಶಸ್ವಿನಿ ಯೋಜನೆಯನ್ನು ಹಿಂದಿನ ಸರಕಾರ ಕೈಬಿಟ್ಟಿತ್ತು ಎಂದು ವಿವರಿಸಿದರು.

ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳು, ನಾಲ್ಕು ಮನೆಗಳ ಮಧ್ಯದಲ್ಲಿ ವಿಚಾರಧಾರೆಯನ್ನು ಹಂಚಿಕೊಂಡು ಸಂಘಟನೆಗಳು ಬೆಳೆದುಬಂದಿದ್ದವು. ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಮಾಧ್ಯಮಗಳ ವ್ಯಾಪ್ತಿ ವಿಸ್ತಾರಗೊಂಡಿದೆ. ಅಲ್ಲದೆ, ಇಂದು ಮಾಧ್ಯಮಗಳ ಮೂಲಕ ಹೆಚ್ಚು ಸಂಗತಿ ತಿಳಿಸಬೇಕಾದ ವೇಗದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ತಿಳಿಸಿದರು.

ಸರಕಾರದ ಕಾರ್ಯಕ್ರಮಗಳು ಮತ್ತು ಪಕ್ಷದ ವಿಚಾರಧಾರೆಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಜ್ಯ ಸರಕಾರ ಜಾರಿಗೊಳಿಸಿದ 72 ಗಂಟೆಯೊಳಗೆ ಪಿಂಚಣಿ ಕೊಡುವ ಕಂದಾಯ ಇಲಾಖೆಯ ದೊಡ್ಡ ಕಾರ್ಯಕ್ರಮ, ಇಂಧನ ಇಲಾಖೆಯಿಂದ ಜಾರಿಗೊಳಿಸಲಾದ ಬೆಳಕು ಯೋಜನೆ, ಅಮೃತ ಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್ ಕೊಡುವ ಕಾರ್ಯಕ್ರಮ, ಸ್ತ್ರೀಶಕ್ತಿ ಗುಂಪುಗಳಿಗೆ 1 ಲಕ್ಷ ಅನುದಾನ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಗಳು, ಕೇಂದ್ರದ ಬಿಜೆಪಿ ಸರಕಾರವು ಕೋವಿಡ್ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳಿಂದ ಕೊಡುತ್ತಿರುವ ಉಚಿತ ಪಡಿತರದಂಥ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸುವಂತೆ ಅವರು ತಿಳಿಸಿದರು.

20 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯ ಲಾಭ ಸಿಗುತ್ತಿದೆ ಎಂದರು. ಮೀಸಲಾತಿ ಹೆಚ್ಚಳ ವಿಚಾರವನ್ನು ಮೋರ್ಚಾಗಳು ಜನಮಾನಸಕ್ಕೆ ತಿಳಿಸಬೇಕಿದೆ ಎಂದು ತಿಳಿಸಿದರು.

2 ಸಾವಿರ ಕೋಟಿ ರೂಪಾಯಿ ಮೌಲ್ಯದ ವಕ್ಫ್ ಬೋರ್ಡ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿದ ಹಗರಣ ನಡೆದಿದೆ. ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಇದನ್ನು ತಿಳಿಹೇಳಬೇಕು ಎಂದು ತಿಳಿಸಿದರು. ಕೇವಲ ಪತ್ರಿಕಾಗೋಷ್ಠಿ ಮಾಡಿದರೆ ಸಾಲದು. ಸಣ್ಣ ವಿಡಿಯೋ, ಕರಪತ್ರದಂಥ ಅವಕಾಶಗಳನ್ನೂ ಬಳಸಿಕೊಳ್ಳಿ ಎಂದು ತಿಳಿಸಿದರು. ಬೆಳಿಗ್ಗೆ ಪತ್ರಿಕೆಯನ್ನು ನೋಡಿ ಬಳಿಕ ಪ್ರತಿಕ್ರಿಯೆ ಕೊಡಿ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top