News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂ: ಸಿಎಂ

ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು.

ರಾಯಚೂರು ಜಿಲ್ಲೆಯ ಗಿಲ್ಲೇಸುಗೂರಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 371 ಜೆ ಬಂದಾಗ ಕಲ್ಯಾಣ ಕರ್ನಾಟಕದ ಕುರಿತು ಜನರು ಕನಸು ಕಂಡರು. ಆದರೆ, ಕಾಂಗ್ರೆಸ್‍ನವರು ಅನುದಾನ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಗರಿಷ್ಠ ಅನುದಾನ ಕೊಟ್ಟಿದ್ದೇವೆ. 3 ಸಾವಿರ ಕೋಟಿಯನ್ನು ನಾನು ನೀಡಿದ್ದೇನೆ. ರಾಯಚೂರು ವಿವಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಂದು ಕ್ಷೇತ್ರಕ್ಕೆ ಅನುದಾನ ಕೊಡಲಾಗಿದೆ ಎಂದರು.

ಮೀಸಲಾತಿ ಸಂಬಂಧ ಬಿಜೆಪಿ ದಿಟ್ಟ ನಿಲುವು ತೆಗೆದುಕೊಂಡಾಗ ಕಾಂಗ್ರೆಸ್‍ನವರಿಗೆ ದೀನದಲಿತರು ನೆನಪಾಗುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನುತ್ತಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಆಳ್ವಿಕೆ ಇತ್ತು. ಆಗ ನೀವು ದೀನದಲಿತರಿಗಾಗಿ ಮಾಡಿದ್ದೇನು ಎಂದು ಪ್ರಶ್ನಿಸಿದರು. ತುಳಿತಕ್ಕೆ ಒಳಗಾದವರು, ಶಿಕ್ಷಣ ವಂಚಿತರನ್ನು ಕಡೆಗಣಿಸಿದ ಪಕ್ಷ ಕಾಂಗ್ರೆಸ್ ಎಂದು ಆಕ್ಷೇಪಿಸಿದ ಅವರು, ರಾಜ್ಯಕ್ಕೇ ದೌರ್ಭಾಗ್ಯ ಕೊಟ್ಟ ಕಾಂಗ್ರೆಸ್ಸಿಗರು, ಎಸ್.ಸಿ, ಎಸ್.ಟಿಗೆ ದೊಡ್ಡ ದೌರ್ಭಾಗ್ಯವನ್ನೇ ನೀಡಿದ್ದಾರೆ ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿಗಳು ಆರೆಸ್ಸೆಸ್ ಕೈಗೊಂಬೆ ಎಂಬ ಟೀಕೆಗೆ ಉತ್ತರಿಸಿದ ಅವರು, ಆರೆಸ್ಸೆಸ್ ಒಂದು ದೇಶಭಕ್ತಿಯ ಸಂಸ್ಥೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ದೇಶ ನಿರ್ಮಾಣಕ್ಕಾಗಿ, ರಾಜಕೀಯ ಸ್ಥಾನಮಾನ ಬಯಸದೆ, ಸ್ವಾರ್ಥರಹಿತವಾಗಿ ದೀನದಲಿತರ ಸೇವೆ ಮಾಡುತ್ತ, ತಳ ಸಮುದಾಯಕ್ಕೆ ಧ್ವನಿ ಕೊಟ್ಟ ಶ್ರೇಷ್ಠ ಸಂಸ್ಥೆ ಆರೆಸ್ಸೆಸ್ ಎಂದು ತಿಳಿಸಿದರು. ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ ಎಂದು ನುಡಿದರು.
ಸಿದ್ದರಾಮಣ್ಣ ಸಮಾಜವಾದವನ್ನು ಮರೆತು ಬಿಟ್ಟಿದ್ದಾರೆ ಎಂಬುದು ದುಃಖದ ವಿಚಾರ. ಸಿದ್ದರಾಮಣ್ಣ ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ದಾರೆ. ರೀಲಾಂಚಿಂಗ್ ರಾಹುಲ್ ಗಾಂಧಿ ಚಿಂತನೆಯೊಂದಿಗೆ ರಾಜಕೀಯದಲ್ಲಿ ಪ್ರಸ್ತುತರಾಗಲು ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ದೇಶ, ಜನರು, ಬಡವರು ಮತ್ತು ದೀನದಲಿತರಿಗಾಗಿ ಈ ಯಾತ್ರೆ ಅಲ್ಲ ಎಂದು ವಿವರಿಸಿದರು.

ಅಂಥ ಭಾರತ್ ಜೋಡೋಗೆ ಸಿದ್ದರಾಮಯ್ಯ ಸಾಥ್ ಕೊಡುತ್ತಿದ್ದಾರೆ. ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದೆ. ಅದರಲ್ಲಿ ಇದ್ದವರು ಸ್ವಲ್ಪವೇ ದಿನದಲ್ಲಿ ಈ ಕಡೆ ಬರಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ರಾಯಚೂರು ಜಿಲ್ಲೆಯಲ್ಲೂ ಬಹಳ ದೊಡ್ಡ ಬದಲಾವಣೆ ಆಗಲಿದೆ ಎಂದು ನುಡಿದರು.

ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೈ ಕೊಟ್ಟಿದೆ. ರೈತರಿಗೆ ಕೈ ಕೊಟ್ಟಿದ್ದೀರಿ. ದೀನದಲಿತರಿಗೆ ಕೈ ಕೊಟ್ಟಿದ್ದೀರಿ. ಇಡೀ ಕರ್ನಾಟಕದ ಜನತೆಗೆ ಸುಳ್ಳು ಹೇಳುತ್ತಿದ್ದೀರಿ. ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳಿದರೆ ಜನಮನ್ನಣೆ ಸಿಗುವ ಕನಸು ಕಾಂಗ್ರೆಸ್ ಪಕ್ಷದವರದು ಎಂದು ಆಕ್ಷೇಪಿಸಿದರು.

ನರೇಂದ್ರ ಮೋದಿಜಿ ಅವರ ಆಶೀರ್ವಾದದಿಂದ ರಾಯಚೂರಿಗೆ ಏಮ್ಸ್ ಬರಲಿದೆ ಎಂದು ವಿಶ್ವಾಸದಿಂದ ತಿಳಿಸಿದರು. ರಾಯಚೂರಿನ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ ಎಂದು ಅವರು ಪ್ರಕಟಿಸಿದರು. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ ಎಂದು ನುಡಿದರು.

ಈ ಸಂಕಲ್ಪ ಯಾತ್ರೆ ಅಂತಿಮಗೊಂಡಾಗ ಇದು ವಿಜಯಯಾತ್ರೆಯಾಗಿ ಪರಿವರ್ತನೆಗೊಳ್ಳಲಿದೆ. ಕಾಂಗ್ರೆಸ್ ಕನಸು ಕನಸಾಗಿಯೇ ಉಳಿಯಲಿದೆ. ಕರ್ನಾಟಕದಲ್ಲಿ ಜನತೆ ಈಗಾಗಲೇ ಕಾಂಗ್ರೆಸ್ ದುರಾಡಳಿತವನ್ನು ನೋಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಹಲವು ಹಗರಣಗಳಾಗಿವೆ. ಆದರೆ, ಕ್ರಮ ಕೈಗೊಂಡಿಲ್ಲ. ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಇದು ನಮ್ಮ ತಾಕತ್ತು. ಅರ್ಜಿ ಕೊಡದವರಿಗೆ ನೌಕರಿ ಕೊಟ್ಟಿದ್ದಾರೆ. ಭ್ರಷ್ಟ ನೌಕರಿ ಭಾಗ್ಯ ಕಾಂಗ್ರೆಸ್ ಸಾಧನೆ. ದಿಂಬೂ ಬಿಡಲಿಲ್ಲ; ಹಾಸಿಗೆ ಬಿಡಲಿಲ್ಲ. ಬೋರ್‍ವೆಲ್ ಬಿಡಲಿಲ್ಲ. 36 ಸಾವಿರ ಬೋರ್ ವೆಲ್ ಒಂದೇ ದಿನ ಕೊರೆದಂತೆ ತೋರಿಸಿದ್ದೀರಿ ಎಂದು ಟೀಕಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಹಗರಣ ಬೇಕು? ತನಿಖೆ ಮಾಡ್ತೇವೆ ಎಂದರಲ್ಲದೆ, ಇದೇಥರ ಸುಳ್ಳು ಆರೋಪ ಮಾಡುತ್ತಿದ್ದರೆ ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಾವು, ರೈತರು, ರೈತರ ಮಕ್ಕಳು, ವಿದ್ಯಾರ್ಥಿಗಳು, ಹಾಲು ಉತ್ಪಾದಕರು ಸೇರಿ ಎಲ್ಲ ವರ್ಗದ ಜನರಿಗಾಗಿ ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಕಾನೂನು ಮತ್ತು ಯೋಜನೆಗಳು ಕೇವಲ ಪುಸ್ತಕದಲ್ಲಷ್ಟೇ ಉಳಿದಿದ್ದವು. ಜನರಿಗೆ ಅದರ ಪ್ರಯೋಜನ ಸಿಗಲಿಲ್ಲ ಎಂದು ತಿಳಿಸಿದರು. ಎಸ್‍ಸಿ, ಎಸ್‍ಟಿ ಜನಾಂಗದವರಿಗೆ ಉಚಿತ ವಿದ್ಯುತ್ ಯೋಜನೆಯನ್ನು ನಮ್ಮ ಸರಕಾರ ಜಾರಿಗೊಳಿಸಿದೆ ಎಂದರು. ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಸಂಕಲ್ಪವನ್ನು ಮಾಡಬೇಕೆಂದು ಮನವಿ ಮಾಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top