ಬೆಂಗಳೂರು: ಪೇಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರ ಮತ್ತು ಸಮಗ್ರ ಕರ್ನಾಟಕದ ಜನರ ಅವಮಾನ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಣ್ಣತನವನ್ನು ಹೊಂದಿದೆ. ಅವರ ಈ ಸಣ್ಣತನವನ್ನು ಜನರು ಕ್ಷಮಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಸಣ್ಣತನದ ಧೋರಣೆಗೆ ಬಡಜನರು, ರೈತರು ಸೇರಿದಂತೆ ಎಲ್ಲ ಮತದಾರರು ಸಮರ್ಥ ಉತ್ತರ ಕೊಟ್ಟು ಆ ಪಕ್ಷವನ್ನು ರಾಜ್ಯದಲ್ಲಿ ನಾಮಾವಶೇಷಗೊಳಿಸಲಿದ್ದಾರೆ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿಯವರ ಸರಕಾರವು ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ಹೆಚ್ಚುವರಿ ನಿಧಿ, ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ಕೊಡುತ್ತಿದೆ. ಎಸ್ಸಿ, ಎಸ್ಟಿ ವರ್ಗಕ್ಕೆ ವಿಶೇಷ ಪ್ಯಾಕೇಜ್ ಮೂಲಕ ಜನಸಾಮಾನ್ಯರ ಸರಕಾರ ಇಲ್ಲಿದೆ. ಅವರು ಕಾಮನ್ ಮ್ಯಾನ್ ಸಿಎಂ ಆಗಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಎಸ್ಸಿ ಹಾಸ್ಟೆಲ್ ಖರೀದಿ ಹಗರಣ, ಪಡಿತರದಲ್ಲೂ ಹಗರಣ, ಅರ್ಜಿ ಹಾಕದ ವ್ಯಕ್ತಿಯನ್ನು ಶಿಕ್ಷಕರನ್ನಾಗಿ ನೇಮಕ ಮಾಡಿದ್ದು, ಪೊಲೀಸರ ನೇಮಕಾತಿಯಲ್ಲೂ ಹಗರಣಗಳು ಸಿದ್ದರಾಮಯ್ಯರ ಅಧಿಕಾರಾವಧಿಯಲ್ಲಿ ನಡೆದಿವೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿಯಂತಿದೆ. ಭ್ರಷ್ಟರ ಪಕ್ಷವಾದ ಕಾಂಗ್ರೆಸ್, ಸಜ್ಜನ, ಅತ್ಯುತ್ತಮ ಆಡಳಿತ ನೀಡುತ್ತಿರುವ ಬೊಮ್ಮಾಯಿಯವರ ಹೆಸರನ್ನು ಹಾಳು ಮಾಡಲು ವ್ಯರ್ಥ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷ ಒಡೆಯಿತು. ಗೋವಾದಲ್ಲೂ 8 ಶಾಸಕರು ಪಕ್ಷ ತೊರೆದರು. ರಾಜಸ್ಥಾನದಲ್ಲೂ ಕಾಂಗ್ರೆಸ್ ಒಳಜಗಳ ಮುಂದುವರಿದಿದೆ. ಕರ್ನಾಟಕದಲ್ಲೂ ಎರಡು ಮುಖಂಡರ ನಡುವೆ ಭಿನ್ನಮತ ಭುಗಿಲೇಳಲಿದೆ. ನೀವು ನೋಡುತ್ತಿರಿ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಒಂದೆಡೆ ನಡೆದಿದೆ. ಇನ್ನೊಂದೆಡೆ ‘ಕಾಂಗ್ರೆಸ್ ಚೋಡೋ’ ಮುಂದುವರಿದಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವಿನ ಜಗಳ ಮುಂದುವರಿಯಲಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಷಡ್ಯಂತ್ರದ, ಭ್ರಷ್ಟಾಚಾರದ ಪಕ್ಷ. ಫೋನ್ ಟ್ಯಾಪಿಂಗ್, ವಿಡಿಯೋ ಟೇಪ್ ಮಾಡುವುದು, ಇಲ್ಲಸಲ್ಲದ ಆರೋಪ ಮಾಡುವುದು ಈ ಪಕ್ಷದ ನಾಯಕರ ಸಣ್ಣತನವನ್ನು ತೋರಿಸುತ್ತದೆ. ವಿಚಾರಶೂನ್ಯವಾದ ಕಾಂಗ್ರೆಸ್ನವರು ಇಂಥ ಆರೋಪ ಮಾಡುತ್ತಾರೆ. ಹಗಲಿರುಳು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಬೊಮ್ಮಾಯಿಯವರ ವಿರುದ್ಧ ಇಂಥ ಆಧಾರರಹಿತ ಆರೋಪ ಮಾಡುವ ಕಾಂಗ್ರೆಸ್ಸಿಗರನ್ನು ಎಂದೂ ಕ್ಷಮಿಸುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್ಐ ಪ್ರಕರಣಗಳ ರದ್ದು ಕುರಿತಂತೆ ರಾಜ್ಯದ ಬಿಜೆಪಿ ಸರಕಾರ ಪುನರ್ ಪರಿಶೀಲಿಸಲಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ನಾಯಕರೇ ಇಲ್ಲದ, ದೂರದೃಷ್ಟಿರಹಿತ ಕಾಂಗ್ರೆಸ್ ಪಕ್ಷವು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆಯಿಂದ ನಾಮಾವಶೇಷ ಆಗಲಿದೆ ಎಂದು ನುಡಿದರು. ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್ ಅವರ ನಡುವೆ ತಳವಾರು ಕಾಳಗ ಮುಂದುವರಿಯುತ್ತಿದೆ ಎಂದ ಅವರು, ಆ ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆಡಳಿತ ವಿರೋಧಿ ಅಲೆ ಅಲ್ಲಿದೆ. ಮುಂದಿನ ವರ್ಷ ನಾವು ಅಲ್ಲಿ ಸರಕಾರ ರಚಿಸುತ್ತೇವೆ ಎಂದು ತಿಳಿಸಿದರು.
ದೇಶದ ಏಕತೆ ಮತ್ತು ಅಖಂಡತೆಗಾಗಿ ಸಂಕಲ್ಪ, ರಾಜ್ಯದ ಗೌರವಕ್ಕೆ ಬದ್ಧತೆಯ ಸಂಕಲ್ಪವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಕೇಂದ್ರದ ಮೋದಿಜಿ ಮತ್ತು ರಾಜ್ಯದ ಬೊಮ್ಮಾಯಿಯವರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಡಬಲ್ ಎಂಜಿನ್ ಸರಕಾರಗಳನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪವೂ ನಡೆಯಲಿದೆ ಎಂದು ತಮ್ಮ ಕಲ್ಯಾಣ ಕರ್ನಾಟಕದ ಪ್ರವಾಸದ ಉದ್ದೇಶದ ಸಂಬಂಧದ ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ ಕುರಿತಂತೆ ಬೊಮ್ಮಾಯಿಯವರು ಸಕಾಲದಲ್ಲಿ ಸಮರ್ಪಕ ನಿರ್ಣಯ ಮಾಡಲಿದ್ದಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ದೇಶಾದ್ಯಂತ ಗಲಭೆ, ದಂಗೆ ಕಾರ್ಯದಲ್ಲಿ ಪಿಎಫ್ಐ ನಿರತವಾಗಿತ್ತು. ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿತ್ತು. ಆತಂಕವಾದಿ ಘಟನೆಗಳಲ್ಲೂ ಅದು ಒಳಗೊಂಡಿತ್ತು. ದೇಶವನ್ನು ಅಸ್ಥಿರಗೊಳಿಸಲು ವಿದೇಶದಿಂದ ಹಣ ಪಡೆಯುತ್ತಿದ್ದ ಈ ಸಂಸ್ಥೆಯನ್ನು ನಿಷೇಧಿಸಿದ್ದು, ಅತ್ಯಂತ ಉತ್ತಮ ನಿರ್ಧಾರ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ರಾಜಸ್ಥಾನದಲ್ಲೂ ಹಲವು ಜಿಲ್ಲೆಗಳಲ್ಲಿ ನಡೆದ ದಂಗೆ, ಗಲಭೆಗಳಲ್ಲಿ ಪಿಎಫ್ಐ ಒಳಗೊಂಡಿತ್ತು. ಕರೋಲಿ, ಜೋಧಪುರ, ಉದಯಪುರ ಜಿಲ್ಲೆಗಳಲ್ಲಿ ಈ ಗಲಭೆಗಳು, ಹಿಂದೂಗಳ ಹತ್ಯೆಗಳು ಆಗಿದ್ದವು ಎಂದ ಅವರು, ಕರ್ನಾಟಕದಲ್ಲೂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಯೋಜಿತ ರೀತಿಯಲ್ಲಿ ಹಿಂದೂಗಳ ಹತ್ಯೆಗಳು ಆಗಿದ್ದವು. ದೇಶವನ್ನು ಅಖಂಡವಾಗಿಡಲು ಪಿಎಫ್ಐ ನಿಷೇಧ ಅನಿವಾರ್ಯವಾಗಿತ್ತು ಎಂದರು.
ರಾಜಸ್ಥಾನ, ಹೈದರಾಬಾದ್, ಕರ್ನಾಟಕದ ವಿವಿಧೆಡೆ ನಡೆದ ಹಿಂದೂಗಳ ಹತ್ಯೆಯಲ್ಲಿ ಪಿಎಫ್ಐ ಕೈವಾಡ ಮತ್ತು ಷಡ್ಯಂತ್ರ ಇದೆ ಎಂಬುದು ಪತ್ತೆಯಾಗಿತ್ತು. ಹಲವು ರಾಜ್ಯಗಳಲ್ಲಿ ಇಂಥ ಹಿಂಸಾಚಾರ ನಡೆದ ಕಾರಣ ಎನ್ಐಎ ಈ ದಾಳಿ ನಡೆಸಿದೆ ಎಂದು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.