ಮುಂಬಯಿ: ಪಾಲ್ಘರ್ನಲ್ಲಿ ಸಾಧುಗಳ ಮೇಲಿನ ದಾಳಿ ಮತ್ತು ಹತ್ಯೆಯ ಕ್ರೂರ ನೆನಪು ಇನ್ನೂ ಮಾಸಿಲ್ಲ. ಅದಾಗಲೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಲ್ವರು ಸಾಧುಗಳ ಮೇಲೆ ಮಕ್ಕಳ ಕಳ್ಳರೆಂದು ಶಂಕಿಸಿ ಹಲ್ಲೆ ಮಾಡಲಾಗಿದೆ.
ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ತಾವೇ ಸ್ವಯಂ ಪ್ರೇರಿತರಾಗಿ ಘಟನೆಯ ಬಗ್ಗೆ ತಿಳಿದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಉಮದಿ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಪಂಕಜ್ ಪವಾರ್ ಹೇಳಿದ್ದಾರೆ.
ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
“ಇದ್ದಕ್ಕಿದ್ದಂತೆ ಗದ್ದಲ ಉಲ್ಬಣಗೊಂಡಿತು ಮತ್ತು ಸ್ಥಳೀಯರು ಸಾಧುಗಳನ್ನು ಲಾಠಿಯಿಂದ ಹೊಡೆಯಲಾರಂಭಿಸಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಾಲ್ವರು ಸಾಧುಗಳು ಉತ್ತರ ಪ್ರದೇಶದ ಅಖಾಡಾಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಯಾವುದೇ ದೂರು ಸ್ವೀಕರಿಸಿಲ್ಲ, ಆದರೆ ವೈರಲ್ ವೀಡಿಯೊಗಳು ಮತ್ತು ಸತ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಸಾಂಗಲಿ ಎಸ್ಪಿ ದೀಕ್ಷಿತ್ ಗೆಡಂ ಹೇಳಿದ್ದಾರೆ.
“ಪಾಲ್ಘರ್ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಸಂತ್ರಸ್ತರಿಗೆ ಅನ್ಯಾಯ ಮಾಡಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಯಾವುದೇ ಸಾಧುವಿನ ವಿರುದ್ಧ ನಡೆಯುವ ಅನ್ಯಾಯವನ್ನು ಸಹಿಸುವುದಿಲ್ಲ” ಎಂದು ಬಿಜೆಪಿಯ ರಾಮ್ ಕದಮ್ ಹೇಳಿದ್ದಾರೆ.
ಘಟನೆ ಮಂಗಳವಾರ ಜಾಟ್ ತೆಹಸಿಲ್ನ ಲವಣ ಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶಕ್ಕೆ ಸೇರಿದ ನಾಲ್ವರು ಸಾಧುಗಳು ಕರ್ನಾಟಕದ ಬಿಜಾಪುರದಿಂದ ಮಹಾರಾಷ್ಟ್ರದ ಪಂಢರಪುರಕ್ಕೆ ಪ್ರಯಾಣಿಸುತ್ತಿದ್ದರು. ಸೋಮವಾರ ಗ್ರಾಮದ ಹೊರಗಿನ ದೇವಸ್ಥಾನದಲ್ಲಿ ನೆಲೆಸಿ ಮಂಗಳವಾರ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಸಾಧುಗಳು ಯುವಕನೊಬ್ಬನ ಬಳಿ ದಾರಿ ಕೇಳಿದ್ದಾರೆ, ನಂತರ ಮಕ್ಕಳನ್ನು ಅಪಹರಿಸುವ ಕ್ರಿಮಿನಲ್ ಗ್ಯಾಂಗ್ಗಳ ಸದಸ್ಯರು ಎಂದು ಭಾವಿಸಿದ ಗ್ರಾಮಸ್ಥರು ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.