ಇಂದಿನ ತಂತ್ರಜ್ಞಾನ ಯುಗದಲ್ಲಿ ಜನರು ಫೇಸ್ಬುಕ್, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲೇ ಕಾಲ ಕಳೆಯುತ್ತಿರುವುದು ಸಾಮಾನ್ಯವಾಗಿದೆ. ರಾತ್ರಿ 12 ಗಂಟೆಯಾದರೂ ಯುವ ಜನತೆ ಈ ತಾಣಗಳಲ್ಲಿ ಸಂವಾದ ನಡೆಸುತ್ತಲೇ ಇರುತ್ತಾರೆ. ಆದರೆ ಚೆನ್ನೈನ ಈ ಮೆಕ್ಯಾನಿಕ್ ಮುಂಜಾನೆ 4.30ಕ್ಕೆ ಎದ್ದು ಪಕ್ಷಿಗಳೊಂದಿಗೆ ಕಾಲಕಳೆಯುತ್ತಾರೆ.
ಶೇಖರ್ ಪ್ರತಿನಿತ್ಯ ತಮ್ಮ ಮನೆ ಬಾಗಿಲಿಗೆ ಬರುವ ಸುಮಾರು 2000ಕ್ಕೂ ಅಧಿಕ ಗಿಳಿಗಳಿಗೆ ಆಹಾರ ತಯಾರಿಸುವಲ್ಲಿ ನಿರತರಾಗಿದ್ದಾರೆ. ಕಳೆದ 10 ವರ್ಷಗಳಿಂದ ಒಂದು ದಿನವೂ ತಪ್ಪದೇ ಈ ಗಿಳಿಗಳಿಗೆ ಆಹಾರ ಹಾಕುತ್ತಿದ್ದಾರೆ. ತಮ್ಮ ಸ್ವಂತದ ಭೋಜನವನ್ನು ಸೇವಿಸಲು ಮರೆತರೂ ಈ ಗಿಳಿಗಳಿಗೆ ಆಹಾರ ಹಾಕುವುದನ್ನು ಅವರು ಎಂದೂ ಮರೆತಿಲ್ಲ. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಶೇಖರ್ ತಮ್ಮ ಸಂಬಳದ ಶೇ.40ರಷ್ಟು ಹಣವನ್ನು ಈ ಕಾರ್ಯಕ್ಕಾಗಿ ಬಳಸುತ್ತಿದ್ದಾರೆ.
ದಿನದಲ್ಲಿ ಕೆಲವು ಗಂಟೆಗಳ ಸಮಯವನ್ನು ಈ ಗಿಳಿಗಳಿಗೆ ಆಹಾರ ತಯಾರಿಸಿ ಉಪಚರಿಸುವುದರಲ್ಲೇ ಕಳೆಯುತ್ತಾರೆ. 10 ವರ್ಷಗಳ ಹಿಂದೆ ತಮ್ಮ ಮನೆ ಅಂಗಳದ ಒಂದು ಮೂಲೆಯಲ್ಲಿ ಧವಸ-ಧಾನ್ಯಗಳನ್ನು ಹಾಕುವಲ್ಲಿಂದ ಆರಂಭವಾದ ಈ ಕಾರ್ಯ ಇಂದು ದೊಡ್ಡ ಮಟ್ಟದಲ್ಲಿ ಮುಂದುವರೆದಿದೆ. ವಿವಿಧ ರೀತಿಯ ಹಕ್ಕಿಗಳು, ಅಳಿಲು, ಮತ್ತಿತರ ಜೀವಿಗಳು ಇವರ ಬಳಿ ಬಂದು ಆಹಾರ ಸೇವಿಸುತ್ತ ಆನಂದಿಸುತ್ತವೆ.
ಈ ಹಿಂದೆ ಚೆನ್ನೈಯಲ್ಲಿ ಸಂಭವಿಸಿದ್ದ ಭಯಾನಕ ಸುನಾಮಿ ಸಂದರ್ಭ ಎರಡು ಗಿಳಿಗಳು ಮನೆ ಕಾಂಪೌಂಡ್ ಗೋಡೆ ಮೇಲೆ ಕುಳಿತಿರುವುದನ್ನು ಶೇಖರ್ ಗಮನಿಸಿದ್ದರು. ಅಲ್ಲಿಂದ ಈವರೆಗೆ ಪ್ರತಿ ನಿತ್ಯ ಅಲ್ಲಿಗೆ ಆಗಮಿಸುವ ಈ ಗಿಳಿಗಳಿಗೆ ಅವರು ಆಹಾರ ಹಾಕುತ್ತಾರೆ. ಅವರ ಮನೆ ಹಕ್ಕಿಗಳಿಗೆ ಒಂದು ಸಾಮಾನ್ಯ ತಾಣವಾಗಿ ಪರಿವರ್ತನೆಗೊಂಡಿದೆ. ಇಂದು ಶೇಖರ್ ಅವರು ಸುಮಾರು 2000 ಗಿಳಿಗಳಿಗೆ ಆಹಾರ ಉಣಿಸುತ್ತಿದ್ದು, ಕೆಲವೊಮ್ಮೆ ಇವುಗಳ ಸಂಖ್ಯೆ 4000 ವರೆಗೂ ತಲುಪುತ್ತದೆ.
ಬೆಳಗ್ಗೆ 4.30ಕ್ಕೆ ಎದ್ದು ಹಕ್ಕಿಗಳಿಗೆ ಆಹಾರ ತಯಾರಿಸುವ ಶೇಖರ್ ಅವರ ಮನೆಗೆ ಬೆಳಗ್ಗೆ 6 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ಈ ಹಕ್ಕಿಗಳು ಭೇಟಿ ನೀಡುತ್ತವೆ. ಕ್ಯಾಮೆರಾ ಮೆಕ್ಯಾನಿಕ್ ಆಗಿರುವ ಶೇಖರ್ ಅವರು ಈ ಹಕ್ಕಿಗಳೊಂದಿಗೆ ಬೆರೆತಿರುವ ಸಂಬಂಧ ಮನಮೋಹಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.