ಭಾರತದ ಚರಿತ್ರೆ ಎಂದರೆ ಅದು ಭಾರತದ ದಲಿತರ ಚರಿತ್ರೆಯೇ ಆಗಿದೆ. ಅಂದರೆ ಭಾರತದ ಚರಿತ್ರೆಯನ್ನು ದಲಿತರ ಚರಿತ್ರೆಯಿಂದ ಪ್ರತ್ಯೇಕಿಸಲಾಗದು.ಈ ಚರಿತ್ರೆಯು ಪರಸ್ಪರ ವಿರುದ್ಧವಲ್ಲ. ಭಾರತ ಏನನ್ನು ಸಾಧಿಸಿದೆಯೋ ಅದು ಭಾರತದ ದಲಿತರು ಸುರಿಸಿದ ಬೆವರಿನ ಫಲವೂ ಆಗಿದೆ. ಹೀಗಿದ್ದರೂ ಭಾರತದ ಸಾಧನೆಯ ಪುಟಗಳಿಗೆ ದಲಿತ ಗುರುತುಗಳಿಲ್ಲ. ಅಥವಾ ಅಂತಹ ಗುರುತುಗಳನ್ನು ಮರೆಗೆ ಸರಿಸಲಾಗಿದೆ. ಭಾರತವನ್ನು ರೂಪುಗೊಳಿಸಿದ ಮಹಾನ್ ವ್ಯಕ್ತಿಗಳಲ್ಲಿ ಅನೇಕರು ದಲಿತ ಸಮುದಾಯಕ್ಕೆ ಸೇರಿದವರು. ಅವರುಗಳಲ್ಲಿ ಕೆಲವರು ತಮ್ಮ ಬೌದ್ಧಿಕತೆಯ ಬಲದಿಂದ ಭಾರವನ್ನು ರೂಪಿಸಿದರೆ ಮತ್ತೆ ಕೆಲವರು ತಮ್ಮ ತೋಳಿನ ಬಲವನ್ನು ಪಣಕ್ಕಿಟ್ಟು ಪ್ರಾಣವನ್ನೇ ಬಸಿದು ಭಾರತವನ್ನು ಕಟ್ಟಿದರು. ಈ ಎಲ್ಲರ ತ್ಯಾಗ ಪರಿಶ್ರಮಗಳಿಲ್ಲದೇ ಹೋಗಿದ್ದರೆ ಇಂದಿನ ಭಾರತ ಖಂಡಿತವಾಗಿಯೂ ಇರುತ್ತಿರಲಿಲ್ಲ.ಆದರೆ ಇಂದಿಗೂ ನಾವು ದಲಿತ ಸಮಾಜದ ಬಗೆಗೆ ಕುಡಿಯುವ ನೀರಿನ ಮಡಿಕೆಯನ್ನು ಮುಟ್ಟಿದ ಕಾರಣಕ್ಕೆ ಸವರ್ಣಿಯ ಶಿಕ್ಷಕನೊಬ್ಬನಿಂದ ಶಾಲಾ ಬಾಲಕನೊಬ್ಬನನ್ನು ಹತ್ಯೆಗೈದ, ವಿವಾಹದ ಸಂಭ್ರಮದಲ್ಲಿ ಕುದುರೆ ಏರಿ ಮೆರವಣಿಗೆ ಹೊರಟ ದಲಿತ ಯುವಕನ ಹತ್ಯೆಗೈದ, ಪಂಚಾಯತ್ನಲ್ಲಿ ಮೀಸಲಾತಿಯ ಕಾರಣದಿಂದ ಅಧ್ಯಕ್ಷೆಯಾದ ದಲಿತ ಮಹಿಳೆಯು ಪಂಚಾಯತ್ ಕಚೇರಿಯ ಯಾವುದೋ ಮೂಲೆಯಲ್ಲಿ ನೆಲದ ಮೇಲೆ ಕುಳಿತ ಸುದ್ಧಿಗಳನ್ನು ಓದುತ್ತಿರುವುದು ದುರಂತ.
ಹೀಗಿರುವಾಗ ಸಮಾಜಕ್ಕಾಗಿ ಮಿಡಿದ ದಲಿತ ಕಥನಗಳನ್ನು ಪರಿಚಯಿಸುವುದು ನಮ್ಮ ಜವಾಬ್ದಾರಿಯೂ ಹೌದು. ಇಂತಹ ಪ್ರಯತ್ನವನ್ನು ಕಾಲಕಾಲಕ್ಕೆ ಅನೇಕರು ಮಾಡಿಕೊಂಡು ಬಂದಿದ್ದಾರೆ. ಶ್ರೀ ಸುದರ್ಶನ್ ರಾಮಭದ್ರನ್ ಮತ್ತು ಶ್ರೀ ಗುರುಪ್ರಕಾಶ್ ಪಾಸ್ವಾನ್ ಅವರ “ ಮೇಕರ್ಸ್ ಆಫ್ ಮಾಡರ್ನ್ ದಲಿತ್ ಹಿಸ್ಟರಿ” ಕೃತಿ ಹೊಸ ಸೇರ್ಪಡೆ ಎನ್ನಬಹುದು. ಪೆಂಗ್ವಿನ್ ಬುಕ್ಸ್ ಪ್ರಕಟಿಸಿದ ಈ ಕೃತಿಯು ದಮನಿತ ಮೂಲದ ಧ್ವನಿಗಳಾಗಿ ಬಂದು ಭಾರತದ ಇತಿಹಾಸ ನಿಮಾತೃಗಳಾಗಿ ಬದುಕಿದ ಮಹಾನ್ ವ್ಯಕ್ತಿಗಳ ಜೀವನ ಮತ್ತು ಸಾಧನೆಗಳ ಚಿತ್ರಣವಾಗಿದೆ. ಸಮಾಜದ ಸುಧಾರಣೆಯೂ ಸೇರಿದಂತೆ ಅನ್ಯಾನ್ಯ ಕ್ಷೇತ್ರಗಳಲ್ಲಿ ದುಡಿದ ಈ ಮಹನೀಯರ ಸಾಧನೆಯನ್ನು ಮರೆಯಲಾಗಿದೆ ಅಥವಾ ಮರೆಯಿಸಲಾಗಿದೆ.ಇವರಲ್ಲನೇಕರನ್ನು ನಮ್ಮ ಮುಖ್ಯ ಶ್ರೇಣಿಯ ಚರ್ಚೆಗಳಿಂದ ಬದಿಗೆ ಸರಿಸಲಾಗಿದೆ. ಭಾರತೀಯ ಸಮಾಜದ ಔನ್ನತ್ಯಕ್ಕಾಗಿಯೇ ದುಡಿದ ಮರೆಯ ಧ್ವನಿಗಳನ್ನು ಗುರುತಿಸುವ ಈ ಪ್ರಯತ್ನ ಸ್ತುತ್ಯರ್ಹವಾದುದು. ಆಧ್ಯಾತ್ಮ, ಸಾಹಿತ್ಯ,ರಾಜಕಾರಣ,ಸ್ವಾತಂತ್ರ್ಯ ಹೋರಾಟ,ಸಾಮಾಜಿಕ ಸುಧಾರಣೆಯೂ ಸೇರಿದಂತೆ ಸಮಾಜಕ್ಕೆ ಗಣನೀಯ ಸೇವೆಯನ್ನು ಒದಗಿಸಿದ ದಲಿತ ಐಕಾನ್ಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಸಂವಿಧಾನ ಅಸ್ಪೃಶ್ಯತೆಯನ್ನು ಅಪರಾಧ ಎಂದು ಘೋಷಿಸಿದೆ. ಜಾತಿ ತಾರತಮ್ಯ, ಅಸ್ಪೃಶ್ಯತೆಯನ್ನು ನಿವಾರಿಸಲು ಅಂಬೇಡ್ಕರ್, ಫುಲೆ ಮೊದಲಾದವರು ದುಡಿದರೂ ಸಮಾಜದಲ್ಲಿನ್ನೂ ಜೀವಂತವಾಗಿಯೇ ಉಳಿದಿದೆ. ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟವರಿಗೆ ಎಲ್ಲರಂತೆ ಮುಕ್ತವಾಗಿ ಮನೆಗಳ ಒಳಗೆ ಪ್ರವೇಶ ಕೊಡುವುದಿನ್ನೂ ಕನಸಿನ ಮಾತು, ಊರಿನ ಒಂದು ಪುಟ್ಟ ಕ್ಯಾಂಟೀನ್ನಲ್ಲಿ ಎಲ್ಲರೊಂದಿಗೆ ಅಥವಾ ಎಲ್ಲರಿಗೂ ನೀಡುವ ಚಹಾದ ಕಪ್ನಲ್ಲಿ ಚಹಾ ಸ್ವೀಕರಿಸಲಾಗದ,ಇಂದಿಗೂ ತರಗತಿ ಕೊಠಡಿಗಳ ಒಳಗೆ ದಲಿತೇತರ ಮಕ್ಕಳೊಂದಿಗೆ ಜೊತೆಗೆ ಕುಳಿತುಕೊಳ್ಳಲಾರದ, ಒಂದೇ ಬಾವಿಯ ನೀರನ್ನು ಹಂಚಿಕೊಂಡು ಕುಡಿಯಲಾಗದ, ದಲಿತ ಹೆಣ್ಣಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕೊನೆಯಿಲ್ಲದ ಸ್ಥಿತಿಯನ್ನು ನೋಡುತ್ತಿದ್ದೇವೆ. ದಿನದಿನವೂ ಜಾತಿಯನ್ನು ಆಧಾರವಾಗಿಟ್ಟುಕೊಂಡು ತಾರತಮ್ಯ ನಡೆಸುವ, ದೈಹಿಕವಾಗಿ, ಮಾನಸಿಕವಾಗಿ ದೌರ್ಜನ್ಯ ಎಸಗುವ ಘಟನೆಗಳ ನಡುವೆಯೂ, ಭಾರತವನ್ನು ರೂಪಿಸಿದ ಸಬಾಲ್ಟ್ರನ್ ಧ್ವನಿಗಳನ್ನು ನಾವು ಅರಿಯಬೇಕಾಗಿದೆ. ಈ ಅರಿವಿಗೆ ಈ ಕೃತಿ ಒಂದು ಅತ್ಯುತ್ತಮ ಮಾರ್ಗದರ್ಶಿಯಾಗಬಹುದಾಗಿದೆ.
ಸಂವಿಧಾನ , ಕಾನೂನು ಅಸ್ಪೃಶ್ಯತೆಯನ್ನು ನಿವಾರಿಸಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದು ಅದು ಕೇವಲ ದಲಿತ ವಿರೋಧಿ ಎಂದಲ್ಲ, ಅಥವಾ ಅದು ದಲಿತರಿಗೆ ಮಾಡುವ ಉಪಕಾರವೆಂದಲ್ಲ, ಅದು ಮನುಕುಲದ ವಿರುದ್ಧದ ನಡವಳಿಕೆ. ಹಾಗಾಗಿ ನಿವಾರಣೆ ಮನುಕುಲದ ಅವಶ್ಯಕತೆ. ನೂರು ವರ್ಷಗಳ ಹಿಂದೆಯೂ ಈ ದೇಶದಲ್ಲಿ ಇದೇ ಧ್ವನಿ ಮೊಳಗಿತ್ತು. ಆದರೆ ಅಂದು ಮೊಳಗಿದ ಆ ಧ್ವನಿ ಕ್ಷೀಣವಾಗಿತ್ತು. ಆದರೆ ಇಂದು ಕನಿಷ್ಠ ಅನ್ಯಾಯವನ್ನು ಗುರುತಿಸುವ ಮಟ್ಟಿಗೆ ಬೆಳೆದಿದೆ. ಎಷ್ಟೇ ಉನ್ನತ ಶಿಕ್ಷಣವನ್ನು ಪಡೆದಾಗಲೂ ದಲಿತ ಯುವಕ ಯುವತಿಯರು ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುವ ಸ್ಥಿತಿ ಇಂದಿಗೂ ಇದೆ. ಪದವಿ ಪಡೆದು ಉದ್ಯೋಗದ ಸಂದರ್ಶನಕ್ಕೆ ಹಾಜರಾದ ದಲಿತ ಯುವಕ ಯುವತಿಯರು ತಾರತಮ್ಯವನ್ನು ಅನುಭವಿಸಿದ್ದಾರೆ. ದಲಿತ ಯುವಕ ಯುವತಿಯರು ಸಾಮಾನ್ಯ ವರ್ಗದ ಯುವಕ ಯುವತಿಯರಷ್ಟೇ ಅರ್ಹ ವಿದ್ಯಾಭ್ಯಾಸ ಪಡೆದಿದ್ದರೂ ಸಂದರ್ಶನಕ್ಕೆ ಹಾಜರಾಗುವ ಅವಕಾಶ ಗಣನೀಯವಾಗಿ ಕಡಿಮೆ ಇರುವುದನ್ನು ಅನೇಕ ಸಂಶೋಧಕರು ಗುರುತಿಸಿದ್ದಾರೆ. ಹಳ್ಳಿಗಳಲ್ಲಿ ಇಂದಿಗೂ ದಲಿತರಿಗೆ ಸ್ವತಂತ್ರ ಬದುಕು ಎನ್ನುವುದು ಕೇವಲ ಕನಸಾಗಿದೆ. ಅವರ ಮೇಲೆ ಹಲವು ನಿರ್ಬಂಧಗಳಿವೆ, ನಿಷೇಧಗಳಿವೆ. ಉಡುವ ವಸ್ತ್ರ, ಉಣ್ಣುವ ಆಹಾರ, ಮಾಡುವ ಉದ್ಯೋಗ, ಆಚರಿಸುವ ಹಬ್ಬ ಹರಿದಿನಗಳು, ಭಾಗವಹಿಸಬಹುದಾದ ಸಂಭ್ರಮಾಚರಣೆಗಳ ವಿಷಯಕ್ಕೆ ಬಂದಾಗ ಅನೇಕ ಬಗೆಯ ನಿರ್ಬಂಧಗಳಿರುವುದು ಕಾಣುತ್ತದೆ. ಮದುವೆಯ ಮೆರವಣಿಗೆಯ ಭಾಗವಾಗಿ ಕುದುರೆ ಏರಿದ ದಲಿತ ಯುವಕನ ಹತ್ಯೆಯೂ ನಡೆಯುತ್ತದೆ, ಊರಿನ ಉನ್ನತ ಜಾತಿಯವರು ಸೂಚಿಸಿದ ಕೆಲಸವನ್ನು ಮಾಡಲಿಲ್ಲ ಎನ್ನುವ ಕಾರಣಕ್ಕಾಗಿ ಊರಿನಿಂದ ಬಹಿಷ್ಕಾರ ಹಾಕುವ ಪ್ರಸಂಗಗಳೂ ಕೊನೆಯಾಗಿಲ್ಲ.ದಲಿತ ಯುವಕನೊಬ್ಬ ಸವರ್ಣಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಬಯಸಿದರೆ ದಲಿತ ಕೇರಿಯ ಮನೆಗಳೇ ಬೆಂಕಿಗಾಹುತಿಯಾಗುತ್ತದೆ, ಯುವಕನ ಬಂಧುಗಳು ಬೀದಿಯ ಹೆಣವಾಗಬೇಕಾಗುತ್ತದೆ.
ಮಾನವ ಹಕ್ಕುಗಳ ಆಯೋಗದ ವರದಿಯ ಪ್ರಕಾರ ಪ್ರತಿ 18 ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯವಾಗುತ್ತದೆ, ಪ್ರತಿದಿನ ಸರಾಸರಿ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ, 8 ದಲಿತರ ಕೊಲೆ ಹಾಗೂ 8 ದಲಿತ ಮನೆಗಳನ್ನು ಸುಡಲಾಗುತ್ತಿದೆ ಎನ್ನುವ ಆತಂಕಕಾರಿ ಸಂಗತಿಗಳನ್ನು ವಿಶ್ಲೇಷಣೆ ನಡೆಸುವ ಈ ಕೃತಿಯು ಇದರ ಹಿಂದಿನ ಮನಸ್ಥಿತಿಯನ್ನು ವಿಮರ್ಶೆ ಮಾಡುತ್ತದೆ. ಗ್ರಾಮಗಳಲ್ಲಿ ಕುಡಿಯುವ ನೀರೂ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳು ದಲಿತರಿಗೆ ಸಿಗುತ್ತಿಲ್ಲ. ಪಂಚಾಯತ್ನಂತಹ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮೀಸಲಾತಿಯ ಕಾರಣದಿಂದ ಸದಸ್ಯರಾಗಿ, ಅಧ್ಯಕ್ಷರಾಗಿ ಆಯ್ಕೆಯಾದರೂ ಅಧಿಕಾರವನ್ನು ನಿರ್ವಹಿಸಲು ಪೂರಕ ವಾತಾವರಣ ಇಲ್ಲದಿರುವ, ಭೂಮಿಯ ಹಂಚಿಕೆಯ, ಮಾಲಕತ್ವದ ವಿಷಯಗಳು ಬಂದಾಗ ದಲಿತರು ವಂಚಿತರಾಗಿರುವ ಸೂಕ್ಷ ಸಂಗತಿಗಳನ್ನು ಲೇಖಕರು ಚರ್ಚೆಗೆ ಒಳಪಡಿಸಿದ್ದಾರೆ. ಬಹುತೇಕ ಕೃಷಿ ಭೂಮಿಯ ಒಡೆತನ ದಲಿತೇತರರ ಬಳಿಯೇ ಇದ್ದು ದಲಿತರು ಕೇವಲ ಕೃಷಿ ಕೂಲಿ ಕಾರ್ಮಿಕರಾಗಿಯೇ ದುಡಿಯುತ್ತಿದ್ದಾರೆ. ಇಂತಹ ತಾರತಮ್ಯದ ನಡುವೆ ದಲಿತ ಧ್ವನಿಗಳು ಕಾಲಕಾಲಕ್ಕೆ ಪ್ರಕಟವಾಗಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ತಮ್ಮ ಎಲ್ಲಾ ಸಂಕಟಗಳ ನಡುವೆಯೂ ಸಮಾಜವನ್ನು ಪ್ರಭಾವಿಸಿದ ಶ್ರೇಷ್ಠ ಐಕಾನ್ಗಳು ದಲಿತ ಸಮಾಜದ ನಡುವೆಯೇ ಮೂಡಿಬಂದಿದ್ದಾರೆ. ಅಂತಹ ವ್ತಕ್ತಿತ್ವಗಳ ಪರಿಚಯವೇ ಈ ಕೃತಿಯಾಗಿದೆ.
ಹುಟ್ಟುತ್ತಾ ಬಡತನ, ಅಸಮಾನತೆ, ಅನಕ್ಷರತೆಯನ್ನೆಲ್ಲಾ ಅನುಭವಿಸಿದರೂ, ಸಮಾಜದ ಕಣ್ಣಲ್ಲಿ ಪರಿಗಣನೆಗೆ ಅರ್ಹರಾದವರಲ್ಲದಿದ್ದರೂ, ಸ್ವಯಂ ಪರಿಶ್ರಮದಿಂದ ಎದುರಾದ ಅನ್ಯಾಯಗಳನ್ನೆಲ್ಲಾ ಮೆಟ್ಟಿನಿಂತ ಪರಿಣಾಮವಾಗಿ ಸಮಾಜಕ್ಕೆಲ್ಲಾ ಮಾದರಿಯಾದರು. ದಲಿತ ಸಮಾಜವೆಂದಲ್ಲ, ಸಮಸ್ತ ಸಮಾಜವೇ ಪ್ರೇರಣೆಯನ್ನು ಪಡೆಯಬಲ್ಲಂತಹ ಎತ್ತರವನ್ನು ಏರಿದರು. ಅಂತಹ ವ್ಯಕ್ತಿತ್ವಗಳನ್ನು ಉದಾಹರಣೆ ಸಹಿತವಾಗಿಯೇ ವಿವರಿಸಿದ್ದಾರೆ. ಅಯ್ಯನ್ ಕಾಳಿ ಎಂಬ ಕೇರಳದ ಅಸ್ಪೃಶ್ಯ ಯುವಕನ ಹೋರಾಟದ ಬದುಕು, ಬಾಬು ಜಗಜೀವನ್ರಾಮ್ ತನ್ನ ಶಾಲಾ ದಿನಗಳಲ್ಲಿಯೇ ಅಸ್ಪೃಶ್ಯರಿಗಾಗಿ ಇರಿಸಿದ್ದ ಪ್ರತ್ಯೇಕ ಕುಡಿಯುವ ನೀರಿನ ಮಡಕೆಯನ್ನು ಸಿಡಿದೆದ್ದು ಒಡೆದು ಹಾಕಿದ ಪ್ರತಿರೋಧದ ಕಥೆ, ದಾಕ್ಷಾಯಿಣೀ ವೆಲಾಯುಧನ್ ಎನ್ನುವ ದಲಿತ ಮಹಿಳೆಯೊಬ್ಬರು ಅಸೆಂಬ್ಲಿ ಪ್ರವೇಶಿಸಿ, ಕಾನೂನು ರೂಪಿಸಿದ ಸ್ಪೂರ್ತಿ, ತೆಲುಗು ಕವಿ ಗರ್ರಮ್ ಜಶುವಾ, ದಾರ್ಶನಿಕ ಗುರು ರವಿದಾಸ್, ಸಂತಕವಿ ಕಬೀರದಾಸ್, ಬಹುಜನ ನಾಯಕ ಕಾನ್ಶಿರಾಮ್, ಮಾಜಿ ರಾಷ್ಟ್ರಪತಿ ಕೆ. ಆರ್. ನಾರಾಯಣನ್, ತಮಿಳುನಾಡಿನ ಸಮಾಜ ಸುಧಾರಕ ನಂದನರ್, 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಹೋರಾಡಿದ ರಾಣಿ ಜಲ್ಕರಿಬಾಯಿ,ಕಾನೂನು ತಜ್ಞ ಜೋಗೆಂದ್ರನಾಥ್ ಮಂಡಲ್, ಆದಿಕವಿ ವಾಲ್ಮೀಕಿ, ವೇದಗಳಿಗೆ ವ್ಯವಸ್ಥಿತ ರೂಪು ರೂಪು ನೀಡಿದ ವೇದವ್ಯಾಸ, ಭಕ್ತಕವಿ ಸಂತ ಜನಾಬಾಯಿ, ಮಹಿಳಾ ಶಿಕ್ಷಣದ ಕನಸು ಬಿತ್ತಿದ ಜ್ಯೋತಿಭಾ ಫುಲೆ, ಕ್ರಾಂತಿಕಾರಿ ಉಧಮ್ ಸಿಂಗ್, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ದಲಿತ ಸಮುದಾಯಕ್ಕೆ ಸೇರಿದ ಮಹನೀಯರ ಸಾಧನೆ-ಹೋರಾಟದ ಪ್ರೇರಣಾದಾಯಿ ಕಥನಗಳು ಇಲ್ಲಿವೆ. ಆದರೆ ಅವರುಗಳ ಕಾರ್ಯ ಕೇವಲ ದಲಿತೋದ್ಧಾರಕ್ಕೆ ಸೀಮಿತವಲ್ಲ,ಅವರವರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದವರು .ಸಮಾಜ ಹುಟ್ಟಿದ ಜಾತಿಯನ್ನೇ ಗುರುತಾಗಿ ನೋಡುತ್ತಿದ್ದ, ಅದೊಂದೇ ಸಮ್ಮಾನದ ಸಾಧನವಾಗಿದ್ದಾಗ ತಮ್ಮ ಕ್ಷಮತೆ, ಕತೃತ್ವ ಶಕ್ತಿಯಿಂದ ಮೇಲೇರಿ ನಿಂತರು. ಇತಿಹಾಸವನ್ನೇ ರಚಿಸಿದರು. ಹೊಸ ಚರಿತ್ರೆಯ ನಿರ್ಮಾಪಕರಾದರು. ಇಂತಹ ಚಾರಿತ್ರಿಕ ವ್ಯಕ್ತಿಗಳ ಕಥನ ನಮ್ಮ ಕಾಲಕ್ಕೆ ಸ್ಫೂರ್ತಿಯಾಗಬಲ್ಲದು. ದಲಿತ ಸಂಕಥನ ಎಂದರೆ ಅದು ಸೋಲಿನ ಅಪಮಾನದ ಕಥನಗಳಲ್ಲ, ಅಲ್ಲಿ ಸ್ವಾಭಿಮಾನದ ಹೋರಾಟವಿದೆ. ಬೌದ್ಧಿಕ ಪ್ರಖರತೆ ಇದೆ. ಕ್ರಾಂತಿಯ ಧ್ವನಿಯಿದೆ. ಹೆಣ್ಣಿನ ಹೋರಾಟದ ಶಕ್ತಿ ಇದೆ. ಮಲೆತು ನಿಂತ ಸಮಾಜಕ್ಕೆ ಧೈರ್ಯದಿಂದ ಕೊಟ್ಟ ಉತ್ತರವಿದೆ. ಅವರು ಸೋಲಲಿಲ್ಲ. ಸಮಾಜವನ್ನು ಸೋಲಲು ಬಿಡಲಿಲ್ಲ. ಕತ್ತಲ ಬದುಕಿನ ನಡುವೆ ಬೆಳಕಿನ ಹಾಡು ಬರೆದರು. ಬೆಳಕಾದರು. ಅವರು ತೋರಿದ ದಾರಿಯಲ್ಲಿ ನಡೆಯೋಣವೇ?
✍️ಡಾ.ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.