ಜಮ್ಮುವಿನ ರಿಯಾಸಿಯ ಚೆನಾಬ್ ನದಿ ಮೇಲೆ ನಿರ್ಮಿಸಲ್ಪಟ್ಟಿರುವುದು ವಿಶ್ವದ ಅತಿ ಎತ್ತರದ ರೈಲ್ವೇ ಮೇಲ್ಸೇತುವೆ. ಕಾಶ್ಮೀರವನ್ನು ಸಂಪರ್ಕಿಸುವಲ್ಲಿ ಅತಿ ಪ್ರಧಾನ ಭೂಮಿಕೆ ವಹಿಸುವ ಈ ಸೇತುವೆ ಅತಿ ಕ್ಲಿಷ್ಟಕರ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿದೆ.
ಸರೋವರಗಳ ನಗರವಾಗಿರುವ ಶ್ರೀನಗರವು ಭೂಮಿಯ ಮೇಲಿರುವ ಸ್ವರ್ಗಕ್ಕೆ ಸಮಾನವಾದುದು. ಈ ಮನೋಹರ ನಗರಕ್ಕೆ ಈ ತನಕ ಟ್ರೈನ್ ಮೂಲಕ ಸಂಪರ್ಕ ಸಾಧ್ಯವಾಗಿರಲಿಲ್ಲ. ಭಾರತದ ಎತ್ತರದ, ದೇಶದ ಮುಕುಟಮಣಿಯಂತಿರುವ ಈ ಪ್ರದೇಶವು ಉಳಿದ ಭಾಗಗಳೊಂದಿಗೆ ಇಂದು ಜೋಡಿಸಲ್ಪಟ್ಟಿದೆ.
ಶ್ರೀನಗರವನ್ನು ದೇಶದೊಂದಿಗೆ ಜೋಡಿಸುವ ಕಾರ್ಯವು ಭಾರತೀಯ ರೈಲ್ವೇ ಮೂಲಕ ಯಶಸ್ವಿಯಾಗಿದೆ.
ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಎಂಬ ಬಿರುದಿಗೆ ಪ್ರಾಪ್ತವಾದ ಚೆನಾಬ್ ರೈಲ್ವೇ ಸೇತುವೆ ನಿರ್ಮಾಣದ ಪ್ರಧಾನ ಘಟ್ಟವಾದ ಗೋಲ್ಡನ್ ಜಾಯಿಂಟ್ ಎಂಬ ಮಹತ್ವದ ಜೋಡಣೆ ಮೂಲಕ ಈ ಸೇತುವೆಯು ಆ.13 ರಂದು ಕಾಶ್ಮೀರದ ಕೊಂಡಿಯಾಯಿತು. ಜಮ್ಮುವಿನ ರಿಯಾಸಿ ಜಿಲ್ಲೆಯ ಕೌರಿ ಎಂಬಲ್ಲಿದೆ ಜಗತ್ತಿನ ಅತಿ ಎತ್ತರದ ಚೆನಾಬ್ ಸೇತುವೆ.
292 ಕಿ.ಮೀ ಉದ್ದದ ಉಧಂಪುರ-ಶ್ರೀನಗರ- ಬಾರಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಪ್ರಧಾನ ಘಟ್ಟವಾಗಿದೆ ಚೆನಾಬ್ ಸೇತುವೆ. ಈ ಪ್ರದೇಶದಲ್ಲಿ ಹರಿಯುವ ಚೆನಾಬ್ ನದಿಯಿಂದ 359 ಮೀ. ಎತ್ತರದಲ್ಲಿದೆ ಸೇತುವೆ. 1450 ಕೋಟಿ. ರೂ ಸೇತುವೆ ನಿರ್ಮಾಣದ ಸರಾಸರಿ ವೆಚ್ಚ. ನಾವೀನ್ಯ ಮತ್ತು ಸವಿಶೇಷತೆಗಳಿಂದ ವಿನ್ಯಾಸಗೊಂಡ ಸೇತುವೆ ನಿರ್ಮಾಣವು ನದಿಯ ಎರಡು ದಡಗಳಿಂದ ಆರಂಭಗೊಂಡಿತ್ತು.
ಐಫೆಲ್ ಟವರಿಗಿಂತ 35 ಮೀ ಎತ್ತರ,ಕುತುಬ್ ಮಿನಾರ್ ಗಿಂತ 287 ಮೀ. ಎತ್ತರವಿದೆ ಈ ಸೇತುವೆ. ಈ ತನಕ ವಿಶ್ವದ ಅತಿ ಎತ್ತರದ ಸೇತುವೆ ಚೀನಾದಲ್ಲಿದೆ ಎಂಬ ಹೆಗ್ಗಳಿಕೆಯಿತ್ತು. ಬೆಯ್ ಪಾನ್ ಜಿಯಾಂಗ್ ಪ್ರಾಂತ್ಯದಲ್ಲಿರುವ ಸೇತುವೆಯು 275 ಮೀ. ಎತ್ತರದಲ್ಲಿದೆ. ಈ ಸೇತುವೆಗಿಂತ 84 ಮೀ. ಎತ್ತರದಲ್ಲಿದೆ ಭಾರತದ ನಾವೀನ್ಯತೆಗೆ ಸಾಕ್ಷಿಯಾದ ಚೆನಾಬ್ ರೈಲ್ವೆ ಸೇತುವೆ.
1315 ಮೀ ಉದ್ದವಿರುವ ಸೇತುವೆ ನಿರ್ಮಾಣಕ್ಕೆ 30,350 ಮೆಟ್ರಿಕ್ ಟನ್ ಉಕ್ಕನ್ನು ಬಳಸಲಾಗಿದೆ. ಈ ಸೇತುವೆಯ ಆರ್ಚ್ ಕಮಾನಿಗೆ 10,620 ಮೆಟ್ರಿಕ್ ಟನ್ ಕಬ್ಬಿಣವನ್ನು ಬಳಸಲಾಗಿದೆ. 10 ಡಿಗ್ರಿ ಸಸ್ಪೆಂಷನ್ ಮತ್ತು 40 ಡಿಗ್ರಿ ತನಕದ ಉಷ್ಣತೆಯನ್ನು ತಡೆಯುವ ತಾಕತ್ತನ್ನು ಹೊಂದಿದೆ ಸೇತುವೆ. ಗಂಟೆಗೆ ಸರಾಸರಿ 100 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲುಗಳು ಈ ಸೇತುವೆ ಮೂಲಕ ಸರಾಗವಾಗಿ ಹಾದುಹೋಗಬಹುದಾಗಿದೆ. 120 ವರ್ಷ ಈ ಸೇತುವೆಯ ಆಯಸ್ಸು. 2004 ರಲ್ಲಿ ಸೇತುವೆ ನಿರ್ಮಾಣದ ಕಾಮಗಾರಿ ಆರಂಭವಾಗಿತ್ತು.
ಸುವರ್ಣ ನಿಮಿಷ- ಸೇತುವೆಯ ಎರಡು ಕಡೆಯಲ್ಲಿ ನಿರ್ಮಾಣವಾಗಿದ್ದ ಕಮಾನುಗಳನ್ನು ಸಂಯೋಜಿಸುವ ಕಾರ್ಯವನ್ನು ಗೋಲ್ಡನ್ ಜೊಯಿಂಟ್ ಎಂದು ಕರೆಯಲಾಗಿದೆ. ಅತಿ ಮುಖ್ಯವಾದ ಈ ರೈಲ್ವೇ ಸಂಯೋಜನೆಯ ರಸಗಳಿಗೆಯು ಕಾಶ್ಮೀರವನ್ನು ಅಕ್ಷರಶಃ ಭಾರತದೊಂದಿಗೆ ಜೋಡಿಸಿತು. 1947 ರ ನಂತರ ಭಾರತೀಯ ರೈಲ್ವೇ ಕೈಗೆತ್ತಿಕೊಂಡ ಅತಿ ಪ್ರಧಾನವಾದ ಮತ್ತು ಅಷ್ಟೇ ಕ್ಲಿಷ್ಟಕರವಾದ ರೈಲ್ವೆ ಯೋಜನೆ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್. ಬೃಹತ್ತಾದ ಯೋಜನೆ ಮತ್ತು ಅತಿ ಕಾಠಿಣ್ಯತೆಯ ಭೂಭಾಗ ಇದರ ಸಂಕೀರ್ಣತೆಯನ್ನು ವಿವರಿಸುತ್ತದೆ.
ಗೋಲ್ಡನ್ ಜಾಯಿಂಟ್ ಸಂಯೋಜಿಸುವ ಮೂಲಕ ಸೇತುವೆಯ 98% ಕೆಲಸಗಳು ಪೂರ್ಣಗೊಂಡವು. 266 ಮೀ. ವೇಗದಲ್ಲಿ ಬೀಸುವ ಗಾಳಿ ಮತ್ತು ಗ್ರೆನೆಡ್ ದಾಳಿಯನ್ನು ತಡೆಯುವ ಶಕ್ತಿ ಈ ಸೇತುವೆಗಿದೆ. 1300 ಕಾರ್ಮಿಕರು, 300 ಎಂಜಿನಿಯರ್ ಗಳು ಈ ಸೇತುವೆ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಉತ್ತರ ರೈಲ್ವೇ ವಿಭಾಗಕ್ಕೆ ಈ ಯೋಜನೆಯ ಪ್ರಧಾನ ಜವಾಬ್ದಾರಿಯಿತ್ತು. ಕೊಂಕಣ ರೈಲ್ವೇ, ಊರಕೋಣ್ ಎಂಬ ಕಂಪೆನಿಗಳು ಸೇತುವೆ ನಿರ್ಮಾಣದ ವಿವಿಧ ಸ್ತರಗಳಲ್ಲಿ ತಮ್ಮ ಕೊಡುಗೆಯನ್ನು ನೀಡಿವೆ. ಅಫ್ ಕೋನ್ಸ್ ಇಂಡಿಯಾ ಪ್ರೈವೇಟ್ ಲಿ. ಎಂಬ ಕಂಪೆನಿಯು ಚೆನಾಬ್ ರೈಲ್ವೇ ಸೇತುವೆಯ ನಿರ್ಮಾಣವನ್ನು ಮಾಡಿದೆ. ಡೆನ್ಮಾರ್ಕ್, ಫಿನ್ಲೆಂಡ್, ಜರ್ಮನಿಯ ಪ್ರಧಾನ ಕಂಪೆನಿಗಳಿಂದ ಸೇತುವೆ ನಿರ್ಮಾಣದ ಸಲಹೆಗಳನ್ನು ಪಡೆಯಲಾಗಿತ್ತು. ಸೇತುವೆಯ ಸುರಕ್ಷತೆಗಾಗಿ ಬಾಹ್ಯಾಕಾಶ ಉಪಗ್ರಹಗಳ ಸಹಾಯವನ್ನು ಪಡೆಯಲಾಗಿದೆ. ಸೈಕಲ್ ಹಾದಿ, ಕಾಲ್ನಡೆ ಹಾದಿಯು ಈ ಸೇತುವೆಯಲ್ಲಿ ಮಾಡಲಾಗುತ್ತಿದೆ.
ಕಾಶ್ಮೀರದ ಹೆಬ್ಬಾಗಿಲು -ಚೆನಾಬ್
ಸೇತುವೆಯ ಆಧಾರಸ್ತಂಭದ ಪೂರ್ವಭಾವಿಯಾಗಿ 8 ಲಕ್ಷ ಕ್ಯೂಬಿಕ್ ಮೀ. ಭೂಮಿಯನ್ನು ಅಗೆಯಲಾಗಿದೆ. ಉಧಂಪುರ, ಶ್ರೀನಗರ-ಬಾರಾಮುಲ್ಲಾ ರೈಲ್ವೇ ಯೋಜನೆಯ ಭಾಗವಾಗಿ ವಿವಿದೆಡೆ ಕಿರು ಸೇತುವೆ, ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗಿದೆ. 25 ಕಿ.ಮೀ ದೂರದ ಉಧಂಪುರ-ಕತ್ರಾ ರೈಲ್ವೇಯು ಇದೇ ಯೋಜನೆಯ ಭಾಗವಾಗಿದ್ದು 2014 ರಲ್ಲಿ ಪೂರ್ಣಗೊಂಡಿತ್ತು. ಇದು ಮಾತಾ ವೈಷ್ಣೋದೇವಿ ದೇಗುಲಕ್ಕೆ ಸಂಪರ್ಕಿಸುತ್ತದೆ. ಎರಡನೇ ಹಂತವಾದ ಕತ್ರಾ- ಖಾಸಿಗಂಜ್ 148 ಕಿ.ಮೀ ಉದ್ದದ ರೈಲ್ವೆ ಹಳಿ ನಿರ್ಮಾಣ ಮುಂಬರುವ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಕರ್ತಾದಿಂದ ಖಾಸಿಗಂಜ್ ಗೆ ಪೀರ್ ಪಂಜಾಲ್ ಶಿಖರ ಶ್ರೇಣಿಯ ಮೂಲಕ ಹಾದು ಹೋಗಲು ಯೋಜನೆ ಸಿದ್ಧಗೊಂಡಿದೆ. ಬಾನಿಹಾಲ್-ಖಾಸಿಗಂಜ್ ರೈಲ್ವೇ ಯೋಜನೆಯು 2013 ರಲ್ಲಿ ಆರಂಭಗೊಂಡಿತ್ತು. 118 ಕಿ.ಮೀ ದೂರದ ಬಾರಾಮುಲ್ಲಾ-ಖಾಸಿಗಂಜ್ ರೈಲ್ವೇ ಹಳಿ ನಿರ್ಮಾಣ ಕಾರ್ಯವು ಆರಂಭಗೊಂಡಿದೆ. ಚಳಿಗಾಲದಲ್ಲಿ ರಸ್ತೆ ಸಂಪರ್ಕ ಕಡಿತ ಉಂಟಾದಾಗ ಹೊಸ ರೈಲ್ವೇ ಸಂಪರ್ಕವು ಕಾಶ್ಮೀರವನ್ನು ಭಾರತದ ಇತರೆ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸಲು ಸಹಾಯಕವಾಗಬಲ್ಲದು. ಇದರೊಂದಿಗೆ ವ್ಯಾಪಾರ ವಹಿವಾಟಿಗೂ ರೈಲ್ವೆ ಸಹಾಯಕವಾಗಬಲ್ಲದು. ಪ್ರಧಾನ ಹಣ್ಣುಗಳಾದ ಸೇಬು ಮತ್ತು ಚೆರ್ರಿ ದೇಶದ ಇತರೆ ಭಾಗಗಳಿಗೆ ತಲುಪಿಸಲು ರೈಲ್ವೆ ಪ್ರಧಾನ ಭೂಮಿಕೆ ವಹಿಸಲಿದೆ.
ಜಮ್ಮು ಕಾಶ್ಮೀರದ ಪ್ರಥಮ ರೈಲ್ವೇ ಹಳಿ ನಿರ್ಮಾಣವಾದದ್ದು 1987 ರಲ್ಲಿ. ಅಂದು ಸಿಯಾಲಕೋಟ್ ನಿಂದ ಜಮ್ಮುವಿಗೆ ಬ್ರಿಟಿಷರು ರೈಲ್ವೇ ಹಳಿ ನಿರ್ಮಿಸಿದ್ದರು. 1947 ರಲ್ಲಿ ಭಾರತ-ಪಾಕಿಸ್ಥಾನ ವಿಭಜನೆಯ ನಂತರ ಸಿಯಾಲ್ ಕೋಟ್ ಪಾಕಿಸ್ಥಾನದ ಭಾಗವಾಯಿತು. 1975 ರ ತನಕ ಪಂಜಾಬಿನ ಪಠಾಣಕೋಟ್ ರೈಲ್ವೇ ನಿಲ್ದಾಣವು ಕಾಶ್ಮೀರದ ಸಮೀಪದ ರೈಲ್ವೇ ನಿಲ್ದಾಣ ಎಂಬಂತಿತ್ತು. 2005 ರಲ್ಲಿ ಜಮ್ಮು -ಉಧಂಪುರ ಸಂಪರ್ಕಿಸುವ ರೈಲ್ವೇ ಪಥವು ನಿರ್ಮಾಣ ಹೊಂದಿದೆ. ಭಾರತೀಯ ರೈಲ್ವೇ ಮೂಲಕ ನಿರ್ಮಾಣವಾದ ಹೊಸ ರೈಲ್ವೇ ಪಥಗಳು ಕಾಶ್ಮೀರದ ಏಳಿಗೆ ಮತ್ತು ಭಾರತದ ನವ ನಿರ್ಮಾಣಕ್ಕೆ, ಏಕತೆ ಜೊತೆಯಲ್ಲಿ ಅಭಿವೃದ್ಧಿ ಅಖಂಡತೆಗೆ ಸಾಕ್ಷಿಯಾಗಲಿ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.