News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th September 2022


×
Home About Us Advertise With s Contact Us

5ಜಿ ಸೇವೆ ಶೀಘ್ರವೇ ಕಾರ್ಯಾರಂಭ: ನಿರ್ಮಲಾ ಸೀತಾರಾಮನ್

ಬೆಂಗಳೂರು: ದೇಶದಲ್ಲಿ 5ಜಿ ಸೇವೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ತಿಳಿಸಿದರು.

ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ವತಿಯಿಂದ ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‍ನಲ್ಲಿ “ವಿಶ್ವಗುರು ಭಾರತ” 100ನೇ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಪಕ್ಷದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯ. ಕರ್ನಾಟಕ ಬಿಜೆಪಿ ಆರ್ಥಿಕ ಪ್ರಕೋಷ್ಠದ ಈ ಸಾಧನೆ ಶ್ಲಾಘನಾರ್ಹ ಎಂದು ತಿಳಿಸಿದ ಅವರು, ಇದು ಅನುಕರಣಾರ್ಹ ಎಂದು ಮೆಚ್ಚುಗೆ ಸೂಚಿಸಿದರು. 100ನೇ ಸಂಚಿಕೆ ಹಿನ್ನೆಲೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.

2014ರಿಂದ ಇಂದಿನ ನಡುವಿನ ಅವಧಿಯಲ್ಲಿ ಕೇಂದ್ರ ಸರಕಾರದ ಸಾಧನೆಗಳನ್ನು ವಿವರಿಸಿದ ಅವರು, ಹಿಂದಿನ ಆಡಳಿತಗಳು 20 ಅಂಶಗಳ ಕಾರ್ಯಕ್ರಮ, ಗರೀಬಿ ಹಠಾವೋ ಮಾತುಗಳನ್ನಷ್ಟೇ ಆಡಿದವು. ಆದರೆ, ಅರ್ಹ ಫಲಾನುಭವಿಗಳ ವಿಚಾರದಲ್ಲಿ ನಿಗದಿತ ಗುರಿ ತಲುಪಲು ವಿಫಲವಾದವು. ಕುಡಿಯುವ ನೀರು, ಬಡವರಿಗೆ ಮನೆ ನೀಡುವ ವಿಚಾರ ಸೇರಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳನ್ನು ತಲುಪಿಸಿದ ಸಂತಸ ನಮ್ಮ ಸರಕಾರದ್ದು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಅರ್ಹ ಫಲಾನುಭವಿಗಳನ್ನು ತಲುಪಿದ್ದೇವೆ. ಪ್ರತಿ ನಾಗರಿಕರಿಗೆ ಮೂಲಸೌಕರ್ಯ ಕೊಡಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.

ಪ್ರತಿ ನಾಗರಿಕರು ಕನಿಷ್ಠ ಮೂಲಸೌಕರ್ಯಕ್ಕೆ ಅರ್ಹರಿದ್ದು ಅದನ್ನು ಕೊಡಲಾಗುತ್ತಿದೆ. ಬಳಿಕ ಅವರ ಸಶಕ್ತೀಕರಣದತ್ತ ಕೇಂದ್ರದ ಬಿಜೆಪಿ ಸರಕಾರ ಶ್ರಮಿಸುತ್ತಿದೆ. ತಂತ್ರಜ್ಞಾನ ಆಧರಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಒಂದು ದೇಶ- ಒಂದೇ ಪಡಿತರ ಚೀಟಿ ಯೋಜನೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಪಿಎಂ ಜನಧನ್ ಯೋಜನೆ ಮೂಲಕ ಎಲ್ಲರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಲಾಯಿತು. ಆರ್ಥಿಕ ಒಳಗೊಳ್ಳುವಿಕೆಗೆ ಇದು ಪೂರಕವೆನಿಸಿತು. ಇದರಿಂದ ಅರ್ಹರಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಸಾಧ್ಯವಾಯಿತು. ಆಧಾರ್ ಜೋಡಿಸಲು ಸಾಧ್ಯವಾಯಿತು. ಪಿಎಂ ಮುದ್ರಾ ಜಾರಿಗೊಳಿಸಲಾಯಿತು. ಮಹಿಳಾ ಸಶಕ್ತೀಕರಣವೂ ಇದರಿಂದ ಸಾಧ್ಯವಾಗಿದೆ ಎಂದರು. ‘ಮೋದಿ @ 20’ ಪುಸ್ತಕವನ್ನೂ ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು.

ಪಿಎಂ ಸ್ವನಿಧಿ ಮೂಲಕ ಬೀದಿಬದಿ ವ್ಯಾಪಾರಿಗಳು ಬಡ್ಡಿರಹಿತ ಹಣ ಪಡೆದು ವ್ಯವಹಾರ ಮಾಡಲು ಸಾಧ್ಯವಾಗಿದೆ. ಸ್ಟಾರ್ಟಪ್ ಮೂಲಕ ಬೆಂಗಳೂರು ಮಹತ್ವದ ಸಾಧನೆ ಮಾಡಿದೆ. ದೇಶದೆಲ್ಲೆಡೆ ಉದ್ಯಮಶೀಲತೆಗೆ ಇದು ನೆರವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಪಿಎಂ ಆವಾಸ್ ಯೋಜನೆ ಅತ್ಯಂತ ಜನಪ್ರಿಯವಾದುದು. ಆದರೆ, ಕೆಲ ರಾಜ್ಯಗಳಲ್ಲಿ ಇದನ್ನು ಬೇರೆ ಹೆಸರಿನೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದ ಅವರು, ಸ್ವಚ್ಛತಾ ಯೋಜನೆ, ಎಂಎಸ್‍ಎಂಇಗಳಿಗೆ ಹಣಕಾಸು ನೆರವು ನೀಡಲಾಗಿದೆ. ಹಾಗೆಂದು ಮೂಲ ಅವಶ್ಯಕತೆಗಳೆನಿಸಿದ ರಸ್ತೆ, ವಿಮಾನನಿಲ್ದಾಣಗಳನ್ನು ನಮ್ಮ ಸರಕಾರ ಮರೆತಿಲ್ಲ. ಉಡಾಣ್ ಯೋಜನೆ ಜಾರಿಯಿಂದ 65 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಜನರನ್ನು ಸಶಕ್ತೀಕರಣಗೊಳಿಸಬೇಕು ಎಂಬ ಚಿಂತನೆಯೊಂದಿಗೆ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೂ ಕಡಿಮೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪ್ರಗತಿಗೆ ಆದ್ಯತೆ ಕೊಡಲಾಗಿದೆ ಎಂದು ವಿವರಿಸಿದರು.

ರಾಜಕೀಯ ಲಾಭ ದೂರವಿಟ್ಟು ಅಭಿವೃದ್ಧಿಗೆ ನೇರ ಅನುದಾನ ಕೊಡಲಾಗಿದೆ. ದೇಶದ ಪ್ರತಿ ಪಂಚಾಯತ್ ಮಟ್ಟಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕ ತಲುಪಿದ್ದು, ಇದು ಶಿಕ್ಷಣ, ಆರೋಗ್ಯ ಸುಧಾರಣೆಗೆ ನೆರವಾಗುತ್ತಿದೆ. ದೇಶದಲ್ಲಿ 5ಜಿ ಸೇವೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಹರಾಜು ಈಗಾಗಲೇ ಮುಗಿದಿದೆ ಎಂದರಲ್ಲದೆ, ಅಮೃತ ಕಾಲದತ್ತ ನಾವು ಮುನ್ನಡೆಯುತ್ತಿದ್ದೇವೆ ಎಂದು ವಿವರಿಸಿದರು.

8 ಕೋಟಿ ಅರ್ಹ ಬಡಜನರಿಗೆ ಉಚಿತ LPG ಸಿಲಿಂಡರ್ ಸಂಪರ್ಕ ಕೊಡಲಾಗಿದೆ. ಇನ್ನೂ ಒಂದು ಕೋಟಿ ಜನರಿಗೆ ಆ ಸೌಲಭ್ಯ ಸಿಗಲಿದೆ. ಭವಿಷ್ಯದ 25 ವರ್ಷಗಳ ಸವಾಲನ್ನು ಎದುರಿಸಲು ಭಾರತ ಸಿದ್ಧಗೊಂಡಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಸಾಧಾರಣ ಸಾಧನೆ ಮಾಡಿದೆ ಎಂದು ವಿಶ್ಲೇಷಿಸಿದರು.

ಸಾರ್ವಜನಿಕ ರಂಗದ ಬ್ಯಾಂಕ್‍ಗಳು ಇದೀಗ ಅತ್ಯುತ್ತಮ ಸ್ಥಿತಿಗೆ ತಲುಪಿವೆ; ಲಾಭ ಮಾಡುತ್ತಿವೆ. ಬ್ಯಾಂಕ್ ಹಣ ಲೂಟಿ ಮಾಡಿದವರ ಆಸ್ತಿಯನ್ನು ಹರಾಜು ಹಾಕಿ ಹಣ ಪಡೆದು ಬ್ಯಾಂಕ್‍ಗಳಿಗೆ ಕೊಡಲಾಗುತ್ತಿದೆ. ಲೂಟಿ ಮಾಡಿದವರನ್ನು ಹಾಗೇ ಬಿಡುವ ಪ್ರವೃತ್ತಿಗೆ ವಿದಾಯ ಹೇಳಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ವಾಹನಗಳನ್ನು ಮಾರುಕಟ್ಟೆಗೆ ತರಲಾಗಿದೆ. ಪೆಟ್ರೋಲ್ ಅವಲಂಬನೆ ಕಡಿಮೆ ಮಾಡುವತ್ತ ಇದೊಂದು ಮಹತ್ವದ ಕ್ರಮವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಯೋಜನೆ ಯಶ ಪಡೆದಿದೆ. ‘ಅಂತ್ಯೋದಯ’ ಚಿಂತನೆಗೆ ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಅವಧಿಯಲ್ಲಿ ಆದ್ಯತೆ ಕೊಡಲಾಗಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ಕರ್ನಾಟಕ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ವಿಶ್ರಾಂತ ಹಣಕಾಸು ಸಲಹೆಗಾರ ಪ್ರೊ|| ಕೆ.ವಿ. ರಾಜು, ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್‍ವಾಲ್, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಸಮೀರ್ ಕಾಗಲ್ಕರ್ ಮತ್ತು ಸಹ ಸಂಚಾಲಕ ಕ್ಯಾಪ್ಟನ್ ಕರಣ್ ಜವಾಜಿ ಅವರು ಭಾಗವಹಿಸಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top