News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

“ಆರೋಗ್ಯ ರಕ್ಷಣಾ ಕಾನೂನು” ಪುಸ್ತಕ- ಆರೋಗ್ಯ ಸಾಕ್ಷರತೆಗಿದೊಂದು ಕೈಪಿಡಿ

ಅಜ್ಞಾನವೆಂಬುದು ಒಂದು ವರವೆನ್ನುತ್ತಾರೆ, ಆದರೆ ಆರೋಗ್ಯ ರಕ್ಷಣೆ ಕುರಿತಾಗಿ ಮಾತ್ರ ಅದೊಂದು ಶಾಪವೇ ಸರಿ. ಪರಿವರ್ತನೆ ಜಗದ ನಿಯಮ. ಧನಾತ್ಮಕವಲ್ಲದ ಪರಿವರ್ತನೆ ನಮ್ಮ ಜೀವನದ ನಡೆಯಾದರೆ ಕೊನೆಗೆ ಅದು ಅರಗಿಸಿಕೊಳ್ಳಲಾಗದ ತುತ್ತಾಗಿ ಕಾಡಬಹುದೆಂಬುದೂ ಅಷ್ಟೇ ಸತ್ಯ. ಪರಿವರ್ತನೆಯಾದ ಅತಿಯಾದ ಆಧುನಿಕತೆ, ಜೀವನಶೈಲಿ ನಮ್ಮ ಜೀವನದ ಅತ್ಯಮೂಲ್ಯ ಆಸ್ತಿಯಾದ ಆರೋಗ್ಯವನ್ನು ಕೆಡವಬಲ್ಲದು.

ಇವೆಲ್ಲಾ ವಾಸ್ತವವಾದರೂ ಆರೋಗ್ಯರಕ್ಷಣೆಯ ದೃಷ್ಟಿಯಲ್ಲಿ ಅತಿದೊಡ್ಡ ವೈರಿ ನಮ್ಮ ನಿರ್ಲಕ್ಷ್ಯ ಮತ್ತು ಅಜ್ಞಾನ. ಭಾರತದಂತಹ ದೇಶದಲ್ಲಿ ಆರೋಗ್ಯರಕ್ಷಣೆಯ ಅರಿವಿನ ಪಾತ್ರ ಬಹಳ ಪ್ರಾಮುಖ್ಯವೆನಿಸುತ್ತದೆ. ಆರೋಗ್ಯ ಸಾಕ್ಷರತೆ ಕುರಿತಾಗಿ ಪ್ರಕಟವಾದ ಅನೇಕ ಸಂಶೋಧನಾ ಲೇಖನಗಳು ಗಾಬರಿ ಹುಟ್ಟಿಸುತ್ತವೆ. ಆ ಗಾಬರಿಯನ್ನು ಹೋಗಲಾಡಿಸಲು ಮತ್ತು ವೈದ್ಯಕೀಯ/ ಆರೋಗ್ಯ ಕ್ಷೇತ್ರದ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು “ಆರೋಗ್ಯರಕ್ಷಣಾ ಕಾನೂನು” ಪುಸ್ತಕದ ಮೂಲಕ ಡಾ. ನವೀನ್‌ ಕುಮಾರ್‌ ಕೂಡಮರ ಅವರು ಮಾಡಿದ್ದಾರೆ.

ಆರೋಗ್ಯಕ್ಷೇತ್ರದ ಕಾನೂನು ಎಂದ ತಕ್ಷಣ ಇದು ವೈದ್ಯಕೀಯ ವೃತ್ತಿಪರರಿಗೆ ಮಾತ್ರ ಸೀಮಿತವೆಂದುಕೊಳ್ಳುತ್ತೇವೆ. ಓರ್ವ ರೋಗಿಗೆ ತಮ್ಮ ಹಕ್ಕುಗಳು ಏನೇನಿವೆ ಎಂಬುದನ್ನು ಅರಿಯುವುದೂ ಅಷ್ಟೇ ಅಗತ್ಯವೆನ್ನುವುದನ್ನು ಡಾ. ನವೀನ್‌ ರವರು ವಿವಿಧ ವಿಭಾಗಗಳಾದ ವೈದ್ಯಕೀಯ ನಿರ್ಲಕ್ಷ್ಯ. ಬಾಡಿಗೆ ತಾಯ್ತನದ ಕಾಯ್ದೆ, ಗರ್ಭಪಾತ ಕಾಯ್ದೆ ಹಾಗೂ ಇನ್ನಿತರೆ ಪ್ರಮುಖ ವಿಚಾರಗಳನ್ನು ಅನೇಕ ಉದಾಹರಣೆ, ಪ್ರಕರಣಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.

ಈ ಪುಸ್ತಕದಲ್ಲಿ ಒಂದೊಂದು ವಿಭಾಗವನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ನಿರೂಪಿಸಲಾಗಿದ್ದರೂ, ಇದರಲ್ಲಿ ಉಲ್ಲೇಖಿಸಲಾಗಿರುವ ವಿಚಾರಗಳು ಸಾಮಾನ್ಯರಿಗೂ, ವೈದ್ಯಕೀಯ ವೃತ್ತಿಪರರಿಗೂ, ವೈದ್ಯಕೀಯ ಸಂಬಂಧಿತ ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಎಂಬುದು ಗಮನಿಸಬಹುದಾದ ಪ್ರಮುಖ ಅಂಶ.

ವೈದ್ಯಕೀಯ ನಿರ್ಲಕ್ಷ್ಯ: ನಾವೇನು ಮಾಡಬಹುದು?

ಯಾವುದೇ ಪ್ರಕರಣವು ವೈದ್ಯಕೀಯ ನಿರ್ಲಕ್ಷ್ಯವೆಂಬುದಾಗಿ ಪರಿಗಣಿಸಬೇಕಾದರೆ ಮೂರು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. 1. ಕಾನೂನಾತ್ಮಕವಾಗಿ ವೈದ್ಯನಿಗೆ ಆರೈಕೆಯ ಕರ್ತವ್ಯವಿದ್ದಿರಬೇಕು. 2. ಕರ್ತವ್ಯ ಉಲ್ಲಂಘನೆಯಾಗಿರಬೇಕು. ೩.ಕರ್ತವ್ಯ ಉಲ್ಲಂಘನೆ ಸಾಬೀತಾಗಬೇಕಿದ್ದರೆ ರೋಗಿಗೆ ದೈಹಿಕ ಹಾನಿ/ ಆರ್ಥಿಕ ಹಾನಿ/ ಮಾನಸಿಕ ಹಾನಿ ಉಂಟಾಗಿರಬೇಕು. ಇವಿಷ್ಟು ಸಾಬೀತಪಡಿಸಲು ಯಶಸ್ವಿಯಾದರೆ, ಅಂತಹ ಪ್ರಕರಣವನ್ನು ಭಾರತೀಯ ಕಾನೂನು ʼವೈದ್ಯಕೀಯ ನಿರ್ಲಕ್ಷ್ಯʼ ಎಂಬುದಾಗಿ ಪರಿಗಣಿಸುತ್ತದೆಂದು ಡಾ. ಜಯೇಶ್‌ ದುಬೆ ಹಾಗೂ ಸರೋಜ್‌ ಛೇದಾ ಪ್ರಕರಣವನ್ನು ಉದಾಹರಿಸುತ್ತಾ ಲೇಖಕರು ವಿವರಿಸಿದ್ದಾರೆ.

1971 ರ ತನಕ ಗರ್ಭಪಾತವೆನ್ನುವುದು ಭಾರತದಲ್ಲಿ ನಿಷಿದ್ಧವಾಗಿತ್ತು. ತದನಂತರ ಗರ್ಭಪಾತ ಮಾಡಿಸಬೇಕಾದರೆ ಪಾಲಿಸಬೇಕಾದ ಕಾನೂನು, ಯಾವ ಸಂದರ್ಭದಲ್ಲಿ ಗರ್ಭಪಾತಕ್ಕೆ ಸಮ್ಮತಿಸಬಹುದೆಂಬ ವಿಚಾರವನ್ನೂ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ದಯಾಮರಣವೆನ್ನುವುದು ಕೂಡ ಇತ್ತೀಚೆಗಿನ ವರ್ಷದ ತನಕ ಕಾನೂನು ಬಾಹಿರವಾಗಿತ್ತು. ೨೦೧೮ರ ಮಾರ್ಚಿನಲ್ಲಿ ಅರುಣ್‌ ಶಾನಭೋಗ್‌ ಪ್ರಕರಣದ ಮೂಲಕ ನ್ಯಾಯಾಲಯ ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿತ್ತು. ಓರ್ವ ವ್ಯಕ್ತಿಯ ಜೀವನಾಧಾರ ವ್ಯವಸ್ಥೆಯನ್ನು ವೈದ್ಯರು ಹಾಗೂ ಆಸ್ಪತ್ರೆ ಹಿಂಪಡೆದುಕೊಳ್ಳಬಹುದಾದ ಸಂದರ್ಭವನ್ನೂ ನಾವು ಅರಿಯಬಹುದಾಗಿದೆ.

ಅದೇ ರೀತಿಯಾಗಿ ಅಂಗಾಂಗ ಬದಲಾವಣೆ, ಮರಣ ಸಂದರ್ಭದಲ್ಲಿ ರೋಗಿಯು ಏನಾದರೂ ಹೇಳಿಕೆ ನೀಡಬೇಕೆಂದಿದ್ದರೆ ಮಾಡಬೇಕಾದ ಪೂರ್ವತಯಾರಿ, ಮಾನಸಿಕ ಆರೋಗ್ಯ ಕಾಯ್ದೆ, ಚಿಕಿತ್ಸೆಗೆ ಒಳಪಡಿಸುವ ರೋಗಿಯ ಸಮ್ಮತಿಯ ಮಹತ್ವ, ಇತ್ಯಾದಿಗಳ ಕುರಿತಾಗಿ ಈ ಪುಸ್ತಕದಲ್ಲಿ ಆಯಾಯ ಕಾಯ್ದೆಗಳನ್ನು ಆಧಾರವಾಗಿಸಿಕೊಂಡು ಲೇಖಕರು ವಿವಿಧ ಪ್ರಕರಣಗಳ ಮೂಲಕ ವರ್ಣಿಸಿದ್ದು ಸಾಮಾನ್ಯ ಓದುಗರೂ ಅರ್ಥೈಸಿಕೊಳ್ಳಬಹುದಾಗಿದೆ.

ಓರ್ವ ವೃತ್ತಿಪರ ವೈದ್ಯನಾಗಿ ಪಾಲಿಸಬೇಕಾದ ಕರ್ತವ್ಯ, ಆತ ನೋಂದಾಯಿತ ವೈದ್ಯನಾಗಿದ್ದರೆ ಕಾನೂನು ನೀಡುವ ರಕ್ಷಣೆಯ ಕುರಿತಾಗಿಯೂ ಇಲ್ಲಿ ಚಿಂತಿಸಲಾಗಿದೆ. ಜಾಹಿರಾತಿನ ವಿಚಾರ ಬಂದಾಗ ವೈದ್ಯರು, ಔಷಧ ನಿರ್ಮಾಣ ಸಂಸ್ಥೆ, ಅಸ್ಪತ್ರೆ ಮೊದಲಾದವುಗಳು ಪಾಲಿಸಲೇಬೇಕಾದ ನಿಯಮಗಳು ಹಾಗೂ ಕಾನೂನುಬಾಹಿರವಾದವುಗಳನ್ನೂ ಕೂಡ ಇಲ್ಲಿ ನಿರೂಪಿಸಲಾಗಿದೆ.

ಹೀಗೆ, ಈ ಪುಸ್ತಕದಲ್ಲಿ ಆರೋಗ್ಯರಕ್ಷಣೆ ಕಾನೂನಿನ ಕುರಿತಾಗಿ ಹಲವು ಆಯಾಮಗಳನ್ನು ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದು ಪ್ರಾಯೋಗಿಕ ಒಳನೋಟಗಳನ್ನು ನೀಡಿವೆ ಎಂಬುದಂತೂ ವಾಸ್ತವ. ಸ್ವತಃ ವಕೀಲರೂ, ಪ್ರಾಧ್ಯಾಪಕರೂ, ಸಂಶೋಧಕರೂ ಆಗಿರುವ ಡಾ. ನವೀನ್ ಕುಮಾರ್ ಕೂಡಮರ Navin Kumar Koodamara ಅವರ ಬರಹದ ಶೈಲಿಯೂ ಮನಮುಟ್ಟುವಂತಿದೆ.

ಕೊನೆಯ ಮಾತು: ಈ ಪುಸ್ತಕದ ಶೀರ್ಷಿಕೆ (Healthcare Law: Essential for medical practice in India) “ಆರೋಗ್ಯರಕ್ಷಣೆಯ ಕಾನೂನು: ವೈದ್ಯಕೀಯ ವೃತ್ತಿಪರರಿಗೆ ಅತ್ಯಗತ್ಯ” ಎಂದಿದೆ. ನಾನೊಬ್ಬ ಸಾಮಾನ್ಯ ಓದುಗನಾಗಿ ಹೇಳುವುದಾದರೆ, ಈ ಪುಸ್ತಕ ಪ್ರತಿಯೊಬ್ಬರೂ ಓದಲೇಬೇಕಾದ, ಅರಿಯಬೇಕಾದ ಮತ್ತು ಪಾಲಿಸಬೇಕಾದ ವಿಚಾರಗಳನ್ನೊಳಗೊಂಡಿದೆ. ಮಹಾತ್ಮ ಗಾಂಧೀಜಿಯವರು ನುಡಿದಂತೆ, “ನಮ್ಮ ಬಹುದೊಡ್ಡ ಅಸ್ತಿಯೆಂದರೆ ಆರೋಗ್ಯವೇ ಹೊರತು ಚಿನ್ನವಾಗಲೀ, ಬೆಳ್ಳಿಯಾಗಲೀ ಅಲ್ಲ” ಎಂಬ ಆಶಯವನ್ನೂ, ಅರಿವನ್ನೂ ಈ ಪುಸ್ತಕ ಮೂಡಿಸುತ್ತದೆ.

 ✍️ ಜಯದೇವ ಹಿರಣ್ಯ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top