News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ ನೇರವೇರಿಸುವ ಗುರಿ: ಕರ್ನಾಟಕ ಬಿಜೆಪಿ

ಬೆಂಗಳೂರು: ಸ್ವಾತಂತ್ರ್ಯದ ಅಮೃತೋತ್ಸವ ವರ್ಷದ ಹಿನ್ನೆಲೆಯಲ್ಲಿ ಆಗಸ್ಟ್ 13ರ ಸೂರ್ಯೋದಯದಿಂದ 15ರ ಸೂರ್ಯಾಸ್ತದವರೆಗೆ ರಾಜ್ಯದ ಕನಿಷ್ಠ 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವ ಗುರಿಯನ್ನು ಕರ್ನಾಟಕ ಬಿಜೆಪಿ ಹೊಂದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 224 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ತಲಾ 35,000 ಮನೆಗಳ ಮೇಲೆ ಅಂದರೆ 75 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಲಿದೆ ಎಂದು ತಿಳಿಸಿದರು.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದಲ್ಲಿ 20 ಕೋಟಿಗಿಂತ ಹೆಚ್ಚು ಮನೆಗಳಲ್ಲಿ ಧ್ವಜಾರೋಹಣ ಮಾಡಲು ಕರೆ ಕೊಟ್ಟಿದ್ದಾರೆ. 75ನೇ ಸ್ವಾತಂತ್ರ್ಯದ ಹಬ್ಬವನ್ನು ಸಂಭ್ರಮದಿಂದ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ರಾಷ್ಟ್ರೀಯ ಹಬ್ಬವಾಗಿ ಬೃಹತ್ ಪ್ರಮಾಣದಲ್ಲಿ ಆಚರಿಸಲು ಪ್ರಧಾನಿಯವರು ಕರೆ ಕೊಟ್ಟಿದ್ದಾರೆ ಎಂದರು.

ನಮ್ಮ 58 ಸಾವಿರ ಬೂತ್‍ಗಳು, 311 ಮಂಡಲಗಳು, 2500 ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್‍ಗಳಲ್ಲಿ ಸಭೆಗಳನ್ನು ಏರ್ಪಡಿಸಲಾಗುತ್ತಿದೆ. ಪೂರ್ವ ತಯಾರಿ ನಡೆದಿದೆ. ಪೂರ್ವ ಯೋಜನೆ, ಪೂರ್ಣ ಯೋಜನೆ ಯಶಸ್ವಿ ಕಾರ್ಯ ಯೋಜನೆ ಎಂಬ ಪರಿವಾರದ ಮಾತಿನಂತೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.

ಆಗಸ್ಟ್ 4, 5, 6 ಈ ಮೂರು ದಿನಗಳಲ್ಲಿ ರಾಜ್ಯದ 58 ಸಾವಿರಕ್ಕೂ ಮಿಕ್ಕಿ ಬೂತ್‍ಗಳಲ್ಲಿ ಪಕ್ಷದ ಬೂತ್ ಸಮಿತಿಗಳ ಸಭೆ, ಹಾಗೆಯೇ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಹಾಗೂ ಜಿಲ್ಲಾ ಮಟ್ಟಗಳಲ್ಲಿ ವಿವಿಧ ಮೋರ್ಚಾ-ಪ್ರಕೋಷ್ಠಗಳು, ಪಕ್ಷದ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಪೂರ್ವ ತಯಾರಿಯನ್ನು ಮಾಡಲಾಗುವುದು ಎಂದು ವಿವರಿಸಿದರು.

ಧ್ವಜದ ಜೊತೆ ಕೋಲನ್ನು ಹೊಂದಿಸಿಕೊಳ್ಳುವುದು, ಧ್ವಜವನ್ನು ಸರಿಯಾಗಿ ಹಾರಿಸಲು ತರಬೇತಿಯನ್ನು ಪ್ರತಿ ಮಂಡಲದಲ್ಲಿ ಏರ್ಪಡಿಸಲು ಸೂಚಿಸಲಾಗಿದೆ. ಧ್ವಜ ಗೌರವವನ್ನು ಕಾಪಾಡಲು ಎಲ್ಲ ಮಂಡಲಗಳಲ್ಲಿ ಧ್ವಜದ ಶ್ರೇಷ್ಠತೆ ಕುರಿತು ಕಾರ್ಯಕರ್ತರಿಗೆ ತಿಳಿಸಲಾಗುತ್ತಿದೆ ಎಂದರು.

75 ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ತ್ರಿವರ್ಣ ಧ್ವಜ ಯಾತ್ರೆ ನೆರವೇರಲಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. 175 ಕಡೆಗಳಲ್ಲಿ ಸೈಕಲ್ ಜಾಥಾ / ಬೈಕ್ ಜಾಥಾವನ್ನು ಯುವ ಮೋರ್ಚಾ ವತಿಯಿಂದ ನಡೆಸಲಾಗುವುದು. ರೈತ ಮೋರ್ಚಾ ವತಿಯಿಂದ 75 ಕಡೆಗಳಲ್ಲಿ ಅಲಂಕೃತ ಎತ್ತಿನ ಬಂಡಿಯಲ್ಲಿ ತ್ರಿವರ್ಣ ಧ್ವಜಯಾತ್ರೆಯು ನಡೆಯಲಿದೆ. ಮಹಿಳಾ ಮೋರ್ಚಾ ನೇತೃತ್ವದಲ್ಲಿ 175 ಕಡೆಗಳಲ್ಲಿ ಕಿತ್ತೂರ ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಮತ್ತಿತರರ ಭಾವಚಿತ್ರದೊಂದಿಗೆ ತ್ರಿವರ್ಣ ಧ್ವಜದ ಮಹಿಳಾ ಜಾಥಾ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ವಿಶೇಷವಾಗಿ ಬೆಳಗಾವಿ, ಚಿತ್ರದುರ್ಗ, ವಿದುರಾಶ್ವತ್ಥ, ಮಂಗಳೂರು, ಕಲಬುರ್ಗಿಯ ಸುರಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮವನ್ನು ಸಂಭ್ರಮದಿಂದ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುವುದು. ಅಲ್ಲಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ತಮಟೆ ಮತ್ತಿತರ ವಾದ್ಯಗಳ ನಾದದೊಂದಿಗೆ ಬೃಹತ್ ತ್ರಿವರ್ಣಧ್ವಜ ಯಾತ್ರೆ ನಡೆಸಲಿದ್ದೇವೆ ಎಂದು ವಿವರ ನೀಡಿದರು. ಈ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಗಳ ಮನೆಗಳನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದರು.

ಖಾದಿ, ಕಾಟನ್, ಸ್ವದೇಶಿ ಉಡುಪುಗಳನ್ನು ಧರಿಸಿ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದು ಸ್ವದೇಶಿ ಚಳವಳಿ, ಆರ್ಥಿಕತೆಗೆ ಬಲ ತುಂಬಲಿದೆ ಎಂದು ನುಡಿದರು.

ಆಗಸ್ಟ್ 10, 11, 12ರಂದು ಪಥ ಸಂಚಲನ, ಪ್ರಭಾತ್ ಪೇರಿ, ಮ್ಯಾರಥಾನ್, ವಾಕಥಾನ್, ಸೈಕ್ಲೋಥಾನ್, ಭಾರತ್ ಮಾತಾ ಪೂಜನಾ ನಡೆಯಲಿದೆ. ನಗರ ಹಾಗೂ ಹಳ್ಳಿಗಳಲ್ಲಿನ ಸರ್ಕಲ್‍ಗಳ ಅಲಂಕಾರ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ, ಪುತ್ಥಳಿಗಳ ಸ್ವಚ್ಛತೆ ಹಾಗೂ ಮಾಲಾರ್ಪಣೆ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಸರಕಾರ “ಅಮೃತ ಭಾರತಿಗೆ ಕನ್ನಡದಾರತಿ” ಅಡಿಯಲ್ಲಿ ಬಿಡುಗಡೆಗೊಳಿಸಿದ ಸ್ವಾತಂತ್ರ್ಯದ ಹೋರಾಟ ಕುರಿತ 75 ಪುಸ್ತಕಗಳನ್ನು ಶಿಕ್ಷಣ ಸಂಸ್ಥೆಗಳು, ಜನರಿಗೆ ತಲುಪಿಸಲು ಯೋಜಿಸಲಾಗಿದೆ. ಪುಸ್ತಕ ಬಿಡುಗಡೆ ಶ್ಲಾಘನೀಯ ಯೋಜನೆ ಎಂದು ಮೆಚ್ಚುಗೆ ಸೂಚಿಸಿದರು.

ಇಂದಿನಿಂದ ಯುವಕ ಸಂಘಗಳು, ಮಹಿಳಾ ಮಂಡಳಿಗಳು ಹಾಗೂ ಸ್ವಸಹಾಯ ಗುಂಪುಗಳು, ಶಿಕ್ಷಣ ಸಂಸ್ಥೆಗಳು (ಶಾಲಾ-ಕಾಲೇಜುಗಳು), ಗಣಪತಿ ಉತ್ಸವ ಸಮಿತಿಗಳು, ಧಾರ್ಮಿಕ ಸಮಿತಿಗಳು, ಕಾರ್ಮಿಕ ಸಂಘ ಸಂಸ್ಥೆಗಳು, ಬಡಾವಣೆ ನಿವಾಸಿ ಸಂಘಗಳು, ಅಪಾರ್ಟ್‍ಮೆಂಟ್, ಫ್ಲಾಟ್ ಸಂಘಗಳನ್ನು ಸಂಪರ್ಕಿಸಿ ಧ್ವಜಾರೋಹಣ ನೆರವೇರಿಸಲು ಮನವಿ ಮಾಡಲಾಗುವುದು. ಇದು ಗಿನ್ನಿಸ್ ದಾಖಲೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ 25 ವರ್ಷಗಳಲ್ಲಿ ನಮ್ಮ ದೇಶದ ಮುನ್ನಡೆಯುವಿಕೆ ಹಾಗೂ ಪ್ರಪಂಚದಲ್ಲಿ ಭಾರತ ಮೊದಲು ಎಂಬ ಸ್ಥಾನ ಪಡೆಯುವ ಕುರಿತಂತೆ ತಿಳಿಸಲಾಗುವುದು ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top