News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚುನಾವಣೆ ಗೆಲುವಿನಲ್ಲಿ ದ್ರೌಪದಿ ಮುರ್ಮು ದಾಖಲೆ ಬರೆಯಲಿದ್ದಾರೆ: ಸಿ.ಟಿ.ರವಿ ವಿಶ್ವಾಸ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಎನ್‍ಡಿಎ ಬೆಂಬಲದೊಂದಿಗೆ ಸ್ಪರ್ಧಿಸಿರುವ ಗೌರವಾನ್ವಿತ ದ್ರೌಪದಿ ಮುರ್ಮು ಅವರು ದಾಖಲೆ ಮತಗಳಿಂದ ಗೆಲುವು ಪಡೆಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈಗಿನ ಎನ್‍ಡಿಎ ಮತ್ತು ಇತರ ಸಮರ್ಥನೆ ಮಾಡಿದ ಪಕ್ಷಗಳ ಬಲವನ್ನು ಗಮನಿಸಿದರೆ ಶೇ 70ಕ್ಕೂ ಹೆಚ್ಚು ಮತಗಳು ಸಿಗುವ ನಿರೀಕ್ಷೆ ಇದೆ. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಒಬ್ಬ ಆದಿವಾಸಿ ಮಹಿಳೆಗೆ ರಾಷ್ಟ್ರಪತಿಯಾಗುವ ಅವಕಾಶ ಲಭಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದರು.

ಆದಿವಾಸಿ ಮಹಿಳೆಯ ಅಭ್ಯರ್ಥಿತನವನ್ನು ಇತರ ಎಲ್ಲ ಪಕ್ಷಗಳು ಸ್ವಾಗತಿಸಿ ಬೆಂಬಲಿಸುವ ನಿರೀಕ್ಷೆ ನಮ್ಮದಾಗಿತ್ತು. ಆದರೆ, ಹಾಗಾಗದೆ ಇರುವುದು ದುರ್ದೈವದ ಸಂಗತಿ. ಕೆಲವು ರಾಜಕೀಯ ಪಕ್ಷಗಳು ಬಿಜೆಪಿಯನ್ನು ವಿರೋಧಿಸಬೇಕೆಂಬ ಭರದಲ್ಲಿ ರಾಷ್ಟ್ರವನ್ನು, ಆದಿವಾಸಿ ಮಹಿಳೆಯ ಉಮೇದ್ವಾರಿಕೆಯನ್ನು ವಿರೋಧಿಸಿ ಅವರ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯ ಮಾತನ್ನಾಡಿದರು. ಒಬ್ಬ ಆದಿವಾಸಿ ಮಹಿಳೆ ತಾನು ಕಲಿಯುವ ವಾತಾವರಣ ಇಲ್ಲದೆ ಇದ್ದಾಗ ಆಕೆ ಸುಶಿಕ್ಷಿತೆಯಾಗಿ ಕಲಿತು, ಸರಕಾರಿ ನೌಕರಿ, ಉಪನ್ಯಾಸಕಿ, ಕಾರ್ಪೊರೇಟರ್, ಶಾಸಕಿ, ಒಡಿಶಾ ಸರಕಾರದಲ್ಲಿ ಸಚಿವೆಯಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಜಾರ್ಖಂಡ್ ರಾಜ್ಯದ ರಾಜ್ಯಪಾಲೆಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ವಿವರಿಸಿದರು.

ಮುರ್ಮು ಅವರನ್ನು ರಬ್ಬರ್ ಸ್ಟಾಂಪ್ ಎಂದು ಮಾತನಾಡುವುದು ಆದಿವಾಸಿ ಜನಾಂಗದ ಬಗ್ಗೆ ಅವರಿಗೆ ಇರುವ ಅಸಡ್ಡೆಯ ಭಾವನೆಯನ್ನು ತೋರಿಸುತ್ತದೆ. ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ಹಾಗೆ ಕರೆದವರು ರಾಷ್ಟ್ರದ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇರುವ ಪಕ್ಷ. ನಮಗೆ ಮೊದಲನೇ ಬಾರಿ ರಾಷ್ಟ್ರಪತಿ ಆಯ್ಕೆ ಅವಕಾಶ ಸಿಕ್ಕಿದಾಗ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ನಾವು ಗೌರವಾನ್ವಿತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದೆವು. ಅವರು ಜನರ ಹೃದಯವನ್ನು ಗೆದ್ದ ರಾಷ್ಟ್ರಪತಿಯಾದರು. ಎರಡನೇ ಬಾರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದಲಿತ ವರ್ಗದ ಗೌರವಾನ್ವಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಅವರು ಕಳಂಕರಹಿತ ಆಡಳಿತ ಕೊಟ್ಟಿದ್ದಾರೆ. ಮೂರನೇ ಬಾರಿ ಅವಕಾಶ ಲಭಿಸಿದಾಗ ಆದಿವಾಸಿ ಮಹಿಳೆಗೆ ಅವಕಾಶ ಕೊಟ್ಟು ಹೊಸ ದಾಖಲೆ ಬರೆದಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದ ಮುಖವಾಡ ಹಾಕಿದ ರಾಜಕೀಯ ಪಕ್ಷಗಳು ಆದಿವಾಸಿ ಮಹಿಳೆಯ ಉಮೇದ್ವಾರಿಕೆಯನ್ನು ವಿರೋಧಿಸುವ ಮೂಲಕ ಹಾಗೂ ಅವರನ್ನು ರಬ್ಬರ್ ಸ್ಟಾಂಪ್ ಎಂದು ಅಪಮಾನಿಸಿದ್ದು, ಅವರ ಮುಖವಾಡ ಕಳಚಿಬಿದ್ದಿದೆ ಎಂದರಲ್ಲದೆ, ಸಿದ್ದರಾಮಯ್ಯನವರೇ ನಿಮ್ಮ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ನಾನು ಯಾವತ್ತೂ ದಲಿತರ ಪರ, ಹಿಂದುಳಿದವರ ಪರ, ಆದಿವಾಸಿಗಳ ಪರ, ಅಲ್ಪಸಂಖ್ಯಾತರ ಪರ ಎನ್ನುತ್ತಿದ್ದಿರಲ್ಲವೇ? ನಿಮಗೆ ಬದ್ಧತೆ ಇದ್ದರೆ ನೀವು ಆದಿವಾಸಿ ಮಹಿಳೆ ಮುರ್ಮು ಅವರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು. ನಿಮಗೆ ಬದ್ಧತೆ ಇಲ್ಲ. ನಿಮ್ಮದು ಕೇವಲ ಮುಖವಾಡ ಮಾತ್ರ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯರ ಮುಖವಾಡ ಕಳಚಿಬಿದ್ದಿದೆ. ನಾಟಕಕ್ಕೆ ನೀವು ದಲಿತರ ಪರ ಹಾಗೂ ಅಲ್ಪಸಂಖ್ಯಾತರ ಪರವಾಗಿ ಮಾತನಾಡುತ್ತೀರಿ. ನಿಮಗೆ ಬದ್ಧತೆ ಇಲ್ಲದೆ ಇರುವುದು ಈ ಉಮೇದ್ವಾರಿಕೆಯಿಂದ ವ್ಯಕ್ತವಾಗಿದೆ ಎಂದು ಟೀಕಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top