ಕಾಶ್ಮೀರದಲ್ಲಿ 1948 ರ ಸುಮಾರಿಗೆ ಚಾಲ್ತಿಗೆ ಬಂದಿದ್ದ 370 ವಿಧಿಯನ್ನು ಖಂಡತುಂಡವಾಗಿ ವಿರೋಧಿಸಿ, ಇಂತಹ ಸಾಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಬೇಕು, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕು ಎಂದು ಕರೆಕೊಟ್ಟವರು ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ. ಇಂದು ಅವರ ಜನ್ಮದಿನ.
1953 ರ ಮೇ 8 ರಂದು “ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್, ನಹಿ ಚಲೇಗಾ, ನಹೀ ಚಲೇಗಾ” ಎಂದು ಕರೆ ಕೊಟ್ಟಿದ್ದ ಡಾ. ಮುಖರ್ಜಿ, ನಂತರ ನೇರವಾಗಿ ಕಾಶ್ಮೀರಕ್ಕೆ ತೆರಳಿದ್ದರು. ಕಾಶ್ಮೀರದ ಸಂಪೂರ್ಣ ವಿಲೀನವನ್ನು ಬಯಸಿದ್ದ ಮಹಾಚೇತನ ಶ್ಯಾಮಪ್ರಸಾದರು ತಮ್ಮ ಗುರಿಯನ್ನು ಹೊತ್ತು ಅಲ್ಲಿಯೇ ಕೊನೆಯುಸಿರೆಳೆದಿದ್ದರು.
ಪ್ರತ್ಯೇಕತೆಗೆ ಕುಮ್ಮಕ್ಕು ನೀಡುವಂತಿದ್ದ ಕಾನೂನು, 370 ವಿಧಿಯ ರದ್ದತಿಯಾಗಿ ಮೂರು ವರ್ಷ ಸಮೀಪಿಸುತ್ತಿದೆ. 2019 ರ ಆ.5 ರಂದು ನರೇಂದ್ರ ಮೋದಿ ನೇತೃತ್ವದ ಸರಕಾರ ಈ ವಿಧಿಯನ್ನು ರದ್ದುಗೊಳಿಸಿ, ಕಾಶ್ಮೀರಕ್ಕೆ ಹೊಸ ದಿಶೆಯನ್ನು ನೀಡಿತು. ಈ ಕಾನೂನಿನ ರದ್ದತಿಯ ಬಗ್ಗೆ 50 ರ ದಶಕದಲ್ಲೇ ಧ್ವನಿಯೆತ್ತಿದ್ದ ಶ್ಯಾಮಪ್ರಸಾದರ ಕನಸು ಮೂರು ವರ್ಷಗಳ ಹಿಂದೆಯಷ್ಟೇ ನನಸಾಯಿತು.
ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರ ಸಾಕಷ್ಟು ಬದಲಾಗಿದೆ, ಬದಲಾಗುತ್ತಿದೆ. ಪಾಕಿಸ್ಥಾನದ ಕುಮ್ಮಕ್ಕಿನಿಂದ ಬೆಳೆದ ಉಗ್ರವಾದದ ಚಹರೆ ಸ್ವಲ್ಪ ಮಟ್ಟಿಗೆ ಇದ್ದರೂ ಅದನ್ನು ಭಾರತೀಯ ಸೇನೆ ಸಮರ್ಥವಾಗಿ ಎದುರಿಸುತ್ತಿದೆ. ಉಗ್ರವಾದದ ಪೋಷಕರಾಗಿದ್ದ ಹಲವು ಮಂದಿಯನ್ನು ಈಗಾಗಲೇ ಜೈಲಿಗಟ್ಟಲಾಗಿದೆ. ಪ್ರತ್ಯೇಕತೆಯ ಧ್ವನಿಯೆತ್ತಿದ್ದ ಕೆಲವರು ಇಂದು ಮಹಾತ್ಮಗಾಂಧಿಯ ಗುಣಗಾನ ಮಾಡುವಷ್ಟು ಬದಲಾಗಿದ್ದಾರೆ! ಕಾಶ್ಮೀರದಲ್ಲಿ ರಾಷ್ಟ್ರೀಯತೆಯ ಅಭಿವೃದ್ಧಿಪರ ದೃಷ್ಠಿಕೋನ ಡಾ. ಶ್ಯಾಮಪ್ರಸಾದ ಮುಖರ್ಜಿ ಕಂಡಿದ್ದ ಕಾಶ್ಮೀರದ ಕನಸನ್ನು ನನಸಾಗಿಸುತ್ತಿದೆ ಮಾತ್ರವಲ್ಲ ಪೂರ್ಣತೆಯತ್ತ ಕೊಂಡೊಯ್ಯುತ್ತಿದೆ.
ಕಾಶ್ಮೀರದಲ್ಲಿಂದು ಹೊಸ ಅವಕಾಶಗಳು ಸೃಷ್ಠಿಯಾಗಿವೆ, ಹೂಡಿಕೆ, ವ್ಯಾಪಾರ, ಉದ್ಯೋಗ, ಸಂಪರ್ಕದ ಜೊತೆಜೊತೆಯಲ್ಲಿ ಪ್ರವಾಸೋದ್ಯಮದಂತಹ ಕ್ಷೇತ್ರ ಸ್ಥಳೀಯರಿಗೆ ವಿಶೇಷ ಆರ್ಥಿಕ ಅವಕಾಶವನ್ನು ಕಲ್ಪಿಸುತ್ತಿದೆ. ಹಿಂದೂ ತೀರ್ಥಾಟನಾ ಕ್ಷೇತ್ರಗಳಾದ ಅಮರನಾಥ, ವೈಷ್ಣೋದೇವಿಗೆ ತೆರಳುವ ಯಾತ್ರಿಕರ, ಭಕ್ತಾದಿಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಪ್ರದೇಶಗಳನ್ನು ವಿಭಜಿಸಿದ ಪರಿಣಾಮ ಆರ್ಥಿಕ ಪ್ರಗತಿ ಜೊತೆಯಲ್ಲಿ ಆಡಳಿತಾತ್ಮಕ ಸೇವಾ ಕಾರ್ಯಗಳು ಸುಲಲಿತವಾಗಿವೆ. ಪಾಕ್ ಪ್ರೇರಿತ ಉಗ್ರವಾದಕ್ಕೆ ಕಡಿವಾಣ ಬಿದ್ದಿದೆ. ಅಳಿದುಳಿದ ಉಗ್ರವಾದಿಗಳಿಗೆ ಭಾರತೀಯ ಸೇನೆ ತಕ್ಕ ಶಾಸ್ತಿ ಮಾಡುತ್ತಿದೆ. ಈ ತನಕ ರಸ್ತೆಗಿಳಿದು ಸೇನೆ ಮತ್ತು ಪೋಲಿಸರತ್ತ ಕಲ್ಲು ತೂರುತ್ತಿದ್ದ ಮಂದಿಗೆ ಪಾಸ್ಪೋರ್ಟ್ ಸವಲತ್ತುಗಳನ್ನು ನೀಡಲಾಗುತ್ತಿಲ್ಲ ಮಾತ್ರವಲ್ಲ ಇಂತಹವರ ಚಲನವಲನಗಳ ಮೇಲೆ ಕಾನೂನು ದೃಷ್ಠಿ ನೆಟ್ಟಿದೆ. ಇಂದು ಕಾಶ್ಮೀರಿಯೇತರರೂ ಕಾಶ್ಮೀರದಲ್ಲಿ ಭೂಮಿಯ ಹಕ್ಕನ್ನು ಹೊಂದಬಹುದಾಗಿದೆ. ಇಂದು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜವಿಲ್ಲ, ವಿವಿಧ ಆಡಳಿತ ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜವೇ ರಾರಾಜಿಸುತ್ತಿದೆ. ಇಲ್ಲಿ ಪ್ರತ್ಯೇಕವೆಂಬ ಸಂವಿಧಾನ ಮಾನ್ಯತೆಯಿಲ್ಲ. ಅಲ್ಲಿ ಎಲ್ಲವೂ ಭಾರತೀಯವೇ. ಇತರೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿದ್ದಂತೆ ಜಮ್ಮು ಕಾಶ್ಮೀರವೂ ಅಭಿವೃದ್ಧಿಯತ್ತ ದೃಷ್ಠಿ ನೆಟ್ಟಿದೆ ಮಾತ್ರವಲ್ಲ ಬೆಳೆಯುತ್ತಿದೆ.
ಅಪ್ರತಿಮ ರಾಜಕಾರಣಿ, ಕಾನೂನು, ಶಿಕ್ಷಣ ತಜ್ಞರಾಗಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕೇಂದ್ರ ಸರಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದರು. ಪ್ರಧಾನಿ ನೆಹರೂರವರ ಕಾಶ್ಮೀರಿ ನೀತಿ, ಲಿಖಾಯತ್-ನೆಹರೂ ಸಂಧಾನದ ವಿರುದ್ಧ ಪ್ರತಿಭಟಿಸಿದ ಮುಖರ್ಜಿ ನಂತರ ನೆಹರೂ ಸಂಪುಟದ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು. ಕಾಶ್ಮೀರವು ಸಂಪೂರ್ಣವಾಗಿ ಭಾರತದಲ್ಲಿ ವಿಲೀನವಾಗಬೇಕು. ವಿಶೇಷ ವಿಧಿಯ ಮೂಲಕ ಕಾಶ್ಮೀರದಲ್ಲಿ ಪ್ರತ್ಯೇಕವಾದವನ್ನು ಬೆಳೆಸಲು ಸಮ್ಮತಿಸಬಾರದು ಎಂಬುದು ಅವರ ಪ್ರಭಲ ಮತ್ತು ಸ್ಪಷ್ಟ ನಿಲುವಾಗಿತ್ತು. ಆ ಕಾಲದಲ್ಲಿ ಕಾಶ್ಮೀರದ ಆಡಳಿತ ಚುಕ್ಕಾಣಿ ಹಿಡಿದಾತನನ್ನೂ ಕೂಡಾ ಪ್ರಧಾನಿ ಎಂದೇ ಸಂಬೋಧಿಸಲಾಗುತ್ತಿತ್ತು!
1943-47 ರಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷಗಿರಿ ವಹಿಸಿದ್ದ ಮುಖರ್ಜಿ, ಬಂಗಾಳದಲ್ಲಿ ಹಿಂದೂಗಳ ಒಗ್ಗೂಡಿಸುವಲ್ಲಿಯೂ ಶ್ರಮವಹಿಸಿದ್ದರು. ಪೂರ್ವ ಬಂಗಾಳದಲ್ಲಿ ಕೋಮು ಆಧಾರದಲ್ಲಿ ಹಿಂಸಾತ್ಮಕ ಕೃತ್ಯಗಳು ನಿರಂತರ ನಡೆದಾಗ ಹಿಂದೂ ಬಾಂಧವರ ರಕ್ಷಣೆಯ ಬಗ್ಗೆ ಶಾಸನಸಭೆಯಲ್ಲಿ ದನಿ ಎತ್ತಿದರು. ಡಾ.ಮುಖರ್ಜಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದ ಸಂದರ್ಭ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ವಿ.ವಿ ಗೆ ಆಗಮಿಸಿ ಸಂಭೋಧಿಸಿದ್ದರು, ಮಾತ್ರವಲ್ಲ ಮುಖರ್ಜಿಯವರ ಸಾಮಾಜಿಕ ಕಾರ್ಯಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು.
ಶ್ಯಾಮಪ್ರಸಾದ ಮುಖರ್ಜಿ ದೂರದೃಷ್ಠಿಯುಳ್ಳ ನಾಯಕ ಮಾತ್ರವಲ್ಲದೆ ಸಂಘಟನಾ ಚತುರರು ಆಗಿದ್ದರು. ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ಬಂಗಾಳ ಸಹಿತ ದೇಶದ ಹಲವೆಡೆಯಿದ್ದ ಹಲವು ಪ್ರಮುಖ ನಾಯಕರ ಒಡನಾಟ ಹೊಂದಿದ್ದ ಮುಖರ್ಜಿ ಮೇಲೆ ವೀರ ಸಾವರ್ಕರ್ ಅವರ ಪ್ರಭಾವವೂ ಇತ್ತು. 1939 ರಲ್ಲಿ ಅಂಡಮಾನಿನ ಕಾಲಪಾನಿ ಜೈಲುವಾಸದ ನಂತರ ಬಂಗಾಳಕ್ಕೆ ತಲುಪಿದ ಸಾವರ್ಕರರನ್ನು ಮುಖರ್ಜಿ ಭೇಟಿಯಾಗುತ್ತಾರೆ. ಈ ಭೇಟಿ ಮತ್ತು ಸ್ನೇಹದ ಕಾರಣ ಹಿಂದೂ ಮಹಾಸಭಾವನ್ನು ಸೇರುತ್ತಾರೆ ಮುಖರ್ಜಿ. ಇದನ್ನು ಅರಿತ ಮಹಾತ್ಮ ಗಾಂಧಿ, ಮದನ್ ಮೋಹನ್ ಮಾಳವೀಯ ಬಳಿಕ ಬಂಗಾಳದ ಜನತೆಗೆ ಓರ್ವ ಸಮರ್ಥ ನಾಯಕ ದೊರೆತಂತಾಗಿದೆ ಎನ್ನುತ್ತಾರೆ. ಬಂಗಾಳದಲ್ಲಿ ಆಡಳಿತದಲ್ಲಿದ್ದ ಮುಸ್ಲಿಂ ಲೀಗ್ ಸರಕಾರ ಪ್ರಾಂತ್ಯವನ್ನು ಸಂಪೂರ್ಣ ಇಸ್ಲಾಮೀಕರಣ ಮಾಡುವ ನಿಟ್ಟಿನಲ್ಲಿಯೇ ತನ್ನ ನೀತಿಗಳನ್ನು ರೂಪಿಸುತ್ತಿದ್ದಾಗ, ಬಂಗಾಳದ ಸದನದಲ್ಲಿ ಹಿಂದೂಗಳ ಪರವಾಗಿ ಧ್ವನಿಯೆತ್ತಿದವರು ಶ್ಯಾಮಪ್ರಸಾದರು.
ಪೂರ್ವ ಬಂಗಾಳದಲ್ಲಿ ನಡೆದ ವಿಘಟನೆ ಕಾಶ್ಮೀರದಲ್ಲಾಗಬಾರದು. ಅದರ ಪೂರ್ಣ ರಕ್ಷಣೆಗೆ ಭಾರತ ಕಟಿಬದ್ಧವಾಗಿರಬೇಕು ಎಂಬುದು ಅವರ ದೃಢ ನಿಲುವಾಗಿತ್ತು. ಪೂರ್ವ ಬಂಗಾಳದಲ್ಲಿ ಅಂದು ನಡೆದಿದ್ದ ಜನಾಂಗೀಯ ಕೋಮು ದ್ವೇಷಕ್ಕೆ ಹಲವು ಹಿಂದೂಗಳು ಬಲಿಯಾಗಿದ್ದರು. ಮುಸ್ಲಿಂ ಲೀಗ್ ಪಕ್ಷ ಮುಸಲ್ಮಾನರನ್ನು ಪ್ರತ್ಯೇಕತೆಯತ್ತ ಮುಖ ಮಾಡಿಸಿಯಾಗಿತ್ತು ಮಾತ್ರವಲ್ಲ ಮತ್ತಷ್ಟೂ ಭೂಭಾಗವನ್ನು ತಮ್ಮದೆಂದು ಪ್ರತಿಪಾದಿಸುವ ಮಟ್ಟಕ್ಕೆ ಬೆಳೆಯುತ್ತಿರುವಾಗ ಶೇಷ ಬಂಗಾಳದ ರಕ್ಷಕನಾಗಿ ಕಾಣುವವರು ಡಾ. ಶ್ಯಾಮ ಪ್ರಸಾದ ಮುಖರ್ಜಿ.
ರಾಜಕೀಯ ದೂರದೃಷ್ಠಿ, ವರ್ತಮಾನದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸೂಕ್ಷ್ಮ ದೃಷ್ಠಿ ಹೊಂದಿದ್ದ ಡಾ. ಮುಖರ್ಜಿಯವರ ಕಾಶ್ಮೀರದ ಕನಸು ನನಸಾಗುತ್ತಿದೆ. 370 ನೇ ವಿಧಿ ರದ್ದತಿಯ ಮೂಲಕ ಕಾಶ್ಮೀರ ಇತರೆ ರಾಜ್ಯಗಳಂತೆ ಭಾರತೀಯ ಗಣತಂತ್ರದ ಸಂಪೂರ್ಣ ಭಾಗವಾಗಿದೆ, ಸಮಾನ ಅವಕಾಶ, ಅಭಿವೃದ್ಧಿ ದೃಷ್ಠಿಕೋನವನ್ನು ನೆಟ್ಟಿದೆ. 2021-22 ರ ಸಾಲಿನಲ್ಲಿ ಒಟ್ಟು 40,000 ದಷ್ಟು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಉಗ್ರವಾದದ ಕರಿನೆರಳಿನಿಂದ ಕಾಶ್ಮೀರ ಹೊರಬಂದಿದೆ. ಪೋಲಿಸರ ಪ್ರಾಣಾರ್ಪಣೆ, ಸಾವಿನ ಪ್ರಕರಣಗಳು 33% ಕಡಿಮೆಯಾಗಿದೆ. ನಿರುದ್ಯೋಗ ಸಮಸ್ಯೆ ಇಲ್ಲವಾಗುತ್ತಿದೆ. ಸಿಎಂಐಇ ಅಂಕಿಅಂಶಗಳ ಪ್ರಕಾರ ನಿರುದ್ಯೋಗ ಸಮಸ್ಯೆ 13.2 ದಷ್ಟು ಕಡಿಮೆಯಾಗಿದೆ. ಒಟ್ಟು 11000 ಯುವಕರು ಸರಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಪ್ರವಾಸೋದ್ಯಮ ಬದಲಾಗಿದೆ, ಪ್ರವಾಸಿ ಸೌಕರ್ಯಗಳನ್ನು ಕಲ್ಪಿಸಿದ್ದರ ಫಲವಾಗಿ, ಕಾಶ್ಮೀರಿಗರ ಒಳಗೊಳ್ಳುವಿಕೆಯ ಕಾರಣ ವಾರ್ಷಿಕ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ದಾಲ್ ಸರೋವರ, ಗುಲ್ಮಾರ್ಗ್, ಲಡಾಕ್, ಸ್ಪಿಟಿ ಕಣಿವೆ ಸಹಿತ ಅಲ್ಲಿನ ಪವಿತ್ರ ಕ್ಷೇತ್ರಗಳಿಗೆ ತೆರಳುವ ಯಾತ್ರಿಕರ ಸಂಖ್ಯೆಯೂ ದ್ವಿಗುಣವಾಗಿದೆ. ಪಿಒಕೆ ಸಮೀಪವಿರುವ ಶಾರದಾಪೀಠದ ಮರುನಿರ್ಮಾಣ ಕಾರ್ಯವೂ ಜರುಗುತ್ತಿದೆ.
ಹೀಗೆ ಹತ್ತು ಹಲವು ರೀತಿಯಲ್ಲಿ ಕಾಶ್ಮೀರವು ಬದಲಾಗುತ್ತಿದೆ, ಏಕೀಕೃತವಾಗಿದೆ, ಅವಕಾಶಗಳತ್ತ ದೃಷ್ಟಿ ನೆಟ್ಟಿದೆ. ವಿದ್ಯೆ, ವಿತ್ತ, ವಿಚಾರಧಾರೆಯ ಸನ್ಮಿಶ್ರಣವಾಗಿದ್ದ ಮುಖರ್ಜಿಯವರ ಕಾಶ್ಮೀರದ ಕನಸು, ಭಾರತದ ಸಾಂಸ್ಕೃತಿಕ, ರಾಜಕೀಯ ಅಖಂಡತೆಯ ಕನಸು ನನಸಾಗುತ್ತಿದೆ. ಭಾರತೀಯ ಜನತಾ ಪಕ್ಷದ ಮೂಲ ಭಾರತೀಯ ಜನಸಂಘದ ಸ್ಥಾಪಕ, ರಾಷ್ಟ್ರೀಯತೆಯ ಹರಿಕಾರ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರ ಸಾಧನಾಪಥವನ್ನು ಸ್ಮರಿಸೋಣ. ಅವರ ದೂರದೃಷ್ಟಿ, ಯಶೋಗಾಥೆ ಎಲ್ಲರಿಗೂ ಸ್ಫೂರ್ತಿಯಾಗಲಿ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.