ಬೆಂಗಳೂರು: ಮೈಸೂರು ಅರಮನೆಯಲ್ಲಿ ಆಯೋಜಿಸಲಾಗಿರುವ ಯೋಗ ಪ್ರದರ್ಶನದಲ್ಲಿ ಪ್ರಧಾನಮಂತ್ರಿಯವರೊಂದಿಗೆ 15,000 ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.
100 ದಿನಗಳ ಅಭಿಯಾನದ ಮೂಲಕ ಸೃಷ್ಟಿಸಲಾದ ಉತ್ಸಾಹ ಮತ್ತು ಸಂಭ್ರಮವು 2022 ರ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ದಾಖಲೆಯ ಭಾಗವಹಿಸುವಿಕೆಗೆ ಕಾರಣವಾಗುತ್ತದೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್
ಆಯುಷ್ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರವು 8 ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಐಡಿವೈ) 2022 ರ ಮುಖ್ಯ ಕಾರ್ಯಕ್ರಮವನ್ನು ಕರ್ನಾಟಕದ ಮೈಸೂರಿನ ಅರಮನೆಯಲ್ಲಿ ಆಚರಿಸಲು ಸಜ್ಜಾಗಿವೆ. ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯ ‘ಮಾನವೀಯತೆಗಾಗಿ ಯೋಗ’. 2022 ರ ಜೂನ್ 21 ರಂದು ಕರ್ನಾಟಕದ ಮೈಸೂರಿನಲ್ಲಿ 15,000 ಕ್ಕೂ ಹೆಚ್ಚು ಮಂದಿ ಪ್ರಧಾನ ಮಂತ್ರಿಯವರೊಂದಿಗೆ ಯೋಗ ಅಭ್ಯಾಸ ಮಾಡುತ್ತಾರೆ ಮತ್ತು ಭಾರತ ಮತ್ತು ವಿಶ್ವದಲ್ಲಿ ಆಯೋಜಿಸಲಾಗುತ್ತಿರುವ ವಿವಿಧ ಐಡಿವೈ 2022 ಕಾರ್ಯಕ್ರಮಗಳಲ್ಲಿ ಕೋಟ್ಯಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್. ಬೊಮ್ಮಾಯಿ, ಕೇಂದ್ರ ಆಯುಷ್, ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಮತ್ತು ಆಯುಷ್ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಮತ್ತು ಇತರ ಗಣ್ಯರು ಮೈಸೂರಿನ ಮುಖ್ಯ ಕಾರ್ಯಕ್ರಮದ ಯೋಗ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಐಡಿವೈ 2022 ರ ಸಿದ್ಧತೆ ಮತ್ತು ಮುಖ್ಯ ಕಾರ್ಯಕ್ರಮದ ಕುರಿತು, ಕೇಂದ್ರ ಆಯುಷ್, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಮಾಹಿತಿ ನೀಡಿ, “ಸಾಂಕ್ರಾಮಿಕ ರೋಗದ ಎರಡು ಪ್ರಕ್ಷುಬ್ಧ ವರ್ಷಗಳ ನಂತರ, ನಾವು ಈಗ ಅಂತಾರಾಷ್ಟ್ರೀಯ ಯೋಗ ದಿನವನ್ನು ಭೌತಿಕವಾಗಿ ಆಚರಿಸುತ್ತಿದ್ದೇವೆ. 100 ದಿನಗಳು, 100 ಸಂಸ್ಥೆಗಳು, 100 ನಗರಗಳ ಅಭಿಯಾನದ ಮೂಲಕ ಸೃಷ್ಟಿಸಲಾದ ಉತ್ಸಾಹ ಮತ್ತು ಸಂಭ್ರಮವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ದಾಖಲೆಯ ಭಾಗವಹಿಸುವಿಕೆಗೆ ಕಾರಣವಾಗುತ್ತದೆ. ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅನುಕರಣೀಯ ಮತ್ತು ನಿರಂತರ ಪ್ರಯತ್ನಗಳಿಂದಾಗಿ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಯೋಗ ವಿಜ್ಞಾನವು ಪ್ರಪಂಚದಾದ್ಯಂತ ಮನ್ನಣೆಯನ್ನು ಪಡೆದಿದೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು” ಎಂದರು.
ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನ 2022 ಹಲವು ಪ್ರಥಮಗಳನ್ನು ಹೊಂದಿದೆ. ‘ಗಾರ್ಡಿಯನ್ ರಿಂಗ್’, ಭಾರತದ 75 ಪ್ರಖ್ಯಾತ ಸ್ಥಳಗಳಲ್ಲಿ ಕೇಂದ್ರ ಸಂಪುಟ ಸಚಿವರಿಂದ ಯೋಗ ಪ್ರದರ್ಶನ ಮತ್ತು ಮೈಸೂರಿನ ಮೈಸೂರು ದಸರಾ ಮೈದಾನದಲ್ಲಿ ವಿಶೇಷ ಡಿಜಿಟಲ್ ಯೋಗ ಮತ್ತು ಸಾರ್ವಜನಿಕ ಪ್ರದರ್ಶನ ಇವುಗಳಲ್ಲಿ ಸೇರಿವೆ.
ಗಾರ್ಡಿಯನ್ ರಿಂಗ್ ಕಾರ್ಯಕ್ರಮದಲ್ಲಿ, ಜನರು ಸೂರ್ಯನ ಉದಯದೊಂದಿಗೆ 16 ವಿಭಿನ್ನ ಕಾಲಮಾನಗಳಲ್ಲಿ ಮಾಡುವ ಯೋಗ ಪ್ರದರ್ಶನವನ್ನು ನೇರ ಪ್ರಸಾರ ಮಾಡಲಾಗುತ್ತದೆ. ಇದು ಪೂರ್ವದಲ್ಲಿ ಫಿಜಿಯಿಂದ ಆರಂಭಗೊಂಡು ಪಶ್ಚಿಮದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೊನೆಗೊಳ್ಳುತ್ತದೆ. ಇದು ಡಿಡಿ ಇಂಡಿಯಾದಲ್ಲಿ ಬೆಳಿಗ್ಗೆ 3 ಗಂಟೆಯಿಂದ ರಾತ್ರಿ 10 ರವರೆಗೆ (ಭಾರತೀಯ ಕಾಲಮಾನ) ನೇರ ಪ್ರಸಾರವಾಗುತ್ತದೆ.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಯೋಗ ಪ್ರದರ್ಶನ ಮತ್ತು ಆಚರಣೆಗಳು ಭಾರತದಾದ್ಯಂತ 75 ಪ್ರಖ್ಯಾತ ತಾಣಗಳಲ್ಲಿ ನಡೆಯಲಿವೆ. 75 ಸ್ಥಳಗಳಲ್ಲಿ ಆಯೋಜಿಸಲಾಗಿರುವ ಯೋಗ ಪ್ರದರ್ಶನದಲ್ಲಿ ಭಾರತ ಸರ್ಕಾರದ ಸಂಪುಟ ಮತ್ತು ರಾಜ್ಯ ಸಚಿವರು ಭಾಗವಹಿಸುತ್ತಾರೆ.
ಡಿಜಿಟಲ್ ಯೋಗ ಪ್ರದರ್ಶನದಲ್ಲಿ ವರ್ಚುವಲ್ ರಿಯಾಲಿಟಿ (ವಿಆರ್) ಯಂತಹ ಇತ್ತೀಚಿನ ತಂತ್ರಜ್ಞಾನಗಳ ಮೂಲಕ ಯೋಗದ ಇತಿಹಾಸ ಮತ್ತು ವಿವೇಕವನ್ನು ಪ್ರದರ್ಶಿಸಲಾಗುತ್ತದೆ. ಸಾರ್ವಜನಿಕ ಪ್ರದರ್ಶನದಲ್ಲಿ ಯೋಗ ಸಂಸ್ಥೆಗಳು, ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ವ್ಯಾಪ್ತಿಯಲ್ಲಿರುವ ಆಯುಷ್ ಸಂಸ್ಥೆಗಳು 146 ಮಳಿಗೆಗಳನ್ನು ತೆರೆದಿವೆ.
2022 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಪಂಚದಾದ್ಯಂತ ಸುಮಾರು 25 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.