ಇತ್ತೀಚೆಗೆ ಲೋಕಸಭೆಯಲ್ಲಿ, ಭಾರತೀಯ ಸೈನ್ಯದಲ್ಲಿರುವ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸಂಖ್ಯೆಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬಿಡುಗಡೆ ಮಾಡಿದ ವಿಷಯ ಹಲವು ಬಗೆಯ ಜಿಜ್ಞಾಸೆಗಳಿಗೆ ಕಾರಣವಾಗಿದೆ. ಜಿಜ್ಞಾಸೆಯಿರುವುದು ಸಚಿವರು ಬಿಡುಗಡೆ ಮಾಡಿದ ವಿವರಗಳ ಬಗ್ಗೆ ಅಲ್ಲ. ಆದರೆ ಸೈನ್ಯದಲ್ಲಿ ಒಟ್ಟು ಮಹಿಳೆಯರ ಸಂಖ್ಯೆ ಕಳೆದ 88 ವರ್ಷಗಳ ಅವಧಿಯಲ್ಲಿ ಗಮನಾರ್ಹ ರೀತಿಯಲ್ಲಿ ಏಕೆ ಏರಿಕೆಯಾಗಿಲ್ಲ ಹಾಗೂ ಅವರನ್ನು ಸೂಕ್ತ ರೀತಿಯಲ್ಲಿ ಏಕೆ ಬಳಸಿಕೊಳ್ಳಲಾಗಿಲ್ಲ ಎನ್ನುವುದು ಜಿಜ್ಞಾಸೆ.
ಹೌದು, ಭಾರತದ ಸೈನ್ಯದಲ್ಲೀಗ (ಭೂಸೈನ್ಯ, ವಾಯುದಳ, ನಾವಿಕ ಪಡೆ ಸೇರಿದಂತೆ) ಒಟ್ಟು 8350 ಮಹಿಳಾ ಸೈನ್ಯಾಧಿಕಾರಿಗಳಿದ್ದಾರೆ. ಗಡಿ ಭದ್ರತಾಪಡೆ (ಬಿಎಸ್ಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಕರಾವಳಿ ಗಾರ್ಡ್ ಸೇರಿದಂತೆ ಅರೆಸೈನಿಕ ಪಡೆಯ ಅಧಿಕಾರೇತರ ಸಿಬ್ಬಂದಿ ಹಾಗೂ ಮಹಿಳಾ ಅಧಿಕಾರಿಗಳ ಒಟ್ಟು ಸಂಖ್ಯೆ 25 ಸಹಸ್ರಕ್ಕೂ ಹೆಚ್ಚು ಎಂಬುದು ಕೇಂದ್ರ ಸರ್ಕಾರ ನೀಡಿರುವ ಮಾಹಿತಿ. ವಾಯುದಳದ ಒಟ್ಟು 11,643 ಅಧಿಕಾರಿಗಳಲ್ಲಿ ಮಹಿಳಾ ಅಧಿಕಾರಿಗಳು 1328, ಭೂಸೈನ್ಯದ ಒಟ್ಟು 40,236 ಅಧಿಕಾರಿಗಳಲ್ಲಿ ಮಹಿಳೆಯರು 1436, ನಾವಿಕ ಪಡೆಯ ಒಟ್ಟು 7501 ಅಧಿಕಾರಿಗಳಲ್ಲಿ ಮಹಿಳೆಯರು 413.
ಮಹಿಳೆಯರು ಹೆಲಿಕಾಪ್ಟರ್ ಚಲಾಯಿಸುತ್ತಾರೆ. ವಿಮಾನ ಉಡಾಯಿಸುತ್ತಾರೆ. ಗಡಿ ಕಾವಲನ್ನೂ ಮಾಡುತ್ತಾರೆ. ಜೊತೆಗೆ ಸೈನ್ಯದ ವಿವಿಧ ವಿಭಾಗಗಳಲ್ಲಿ ವಕೀಲರಾಗಿ, ಎಂಜಿನಿಯರ್ ಆಗಿ, ಶಿಕ್ಷಕಿಯರಾಗಿ, ವೈದ್ಯರಾಗಿ, ದಾದಿಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ನೇರವಾಗಿ ರಣರಂಗಕ್ಕೆ ಇಳಿದು ಶಸ್ತ್ರ ಹಿಡಿದು ವೈರಿ ಪಡೆಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲ್ಲುವ ಕೆಲಸಕೆ ಮಹಿಳಾ ಸೈನ್ಯಾಧಿಕಾರಿಗಳನ್ನು ಅಥವಾ ಮಹಿಳಾ ಯೋಧರನ್ನು ಇನ್ನೂ ತೊಡಗಿಸಿಲ್ಲ. ಇದು ಈಗ ಸೈನ್ಯದಲ್ಲಿರುವ ಅನೇಕ ಮಹಿಳಾ ಅಧಿಕಾರಿಗಳಲ್ಲಿ ಜಿಜ್ಞಾಸೆಯನ್ನು ಹುಟ್ಟುಹಾಕಿದೆ. ಕೆನಡಾ, ಆಸ್ಟ್ರೇಲಿಯಾದಂತಹ ಯುರೋಪಿಯನ್ ದೇಶಗಳಲ್ಲಿ, ಇಸ್ರೇಲ್ನಲ್ಲಿ ಮಹಿಳೆಯರನ್ನು ನೇರವಾಗಿ ರಣಾಂಗಣದ ಕರ್ತವ್ಯಕ್ಕೆ ಕಳುಹಿಸಲಾಗುತ್ತಿದೆ. ಆದರೆ ಪಾಕಿಸ್ಥಾನ, ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಮಹಿಳೆಯರನ್ನು ರಣಾಂಗಣಕ್ಕೆ ಕಳುಹಿಸುತ್ತಿಲ್ಲ. ಪಾಕಿಸ್ಥಾನದ ಮಿಲಟರಿ ಪಡೆಯಲ್ಲಿ 4 ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದರೂ ಅವರೆಲ್ಲ ಕೇವಲ ಗುಮಾಸ್ತ ಹಾಗೂ ವೈದ್ಯಕೀಯ ಕೆಲಸಗಳಿಗಷ್ಟೇ ಸೀಮಿತ.
ಈ ವರ್ಷದ ಜನವರಿ 26 ರ ಗಣರಾಜ್ಯೋತ್ಸವದಂದು ನಡೆದ ಪೆರೇಡ್ನಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಅಮೆರಿಕದ ಅಧ್ಯಕ್ಷ ಬರಾಕ್ಒಬಾಮ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಮೊಟ್ಟಮೊದಲ ಗೌರವರಕ್ಷೆ ನೀಡಿದ ಕೀರ್ತಿಗೆ ಭಾಜನರಾದ ಮಹಿಳಾ ಸೈನ್ಯಾಧಿಕಾರಿ ಎಂದರೆ ವಿಂಗ್ಕಮ್ಯಾಂಡರ್ ಪೂಜಾ ಠಾಕೂರ್. ಅದೊಂದು ಐತಿಹಾಸಿಕ ಘಟನೆ. ಇದುವರೆಗೆ ಯಾವ ಮಹಿಳಾ ಸೈನ್ಯಾಧಿಕಾರಿಗೂ ಅಂತಹ ಅದೃಷ್ಟ ದೊರೆತಿರಲಿಲ್ಲ. 66 ನೇ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಮೊದಲ ಬಾರಿಗೆ ಭೂಸೈನ್ಯ, ವಾಯುದಳ ಹಾಗೂ ನಾವಿಕ ಪಡೆಯ ಪಥಸಂಚಲನದಲ್ಲಿ ಮಹಿಳಾ ಸೈನ್ಯಾಧಿಕಾರಿಗಳು ಪಾಲ್ಗೊಂಡು ಕಂಗೊಳಿಸಿದ್ದರು. ಅದಕ್ಕೇ ಪ್ರಧಾನಿ ಮೋದಿ ‘ನಾರೀಶಕ್ತಿಯ ಪ್ರದರ್ಶನ’ ಎಂದು ಬಣ್ಣಿಸಿದ್ದರು.
ಆದರೆ ಕೇವಲ ಇದಷ್ಟೇ ಹೊಗಳಿಕೆ ಸಾಕೆ? ಕಳೆದ 88 ವರ್ಷಗಳಿಂದ ಮಹಿಳಾ ಅಧಿಕಾರಿಗಳು ಸೈನ್ಯದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 1927 ರಷ್ಟು ಹಿಂದೆಯೇ ಮಹಿಳೆಯರು ಸೈನ್ಯದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ್ದರು. 1943 ರಲ್ಲಿ ವೈದ್ಯಾಧಿಕಾರಿಗಳಾಗಿ ಮಹಿಳೆಯರು ನಮ್ಮ ಸೈನ್ಯದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ, 49 ವರ್ಷಗಳ ನಂತರ ಮಹಿಳೆಯರು ಸೈನ್ಯದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದು 1992 ರಲ್ಲಿ! ಮಹಿಳೆಯರ ಬಗ್ಗೆ ಏಕೆ ಈ ತಾರತಮ್ಯ ಎಂಬ ಜಿಜ್ಞಾಸೆ ಆಗಿನಿಂದಲೂ ಕಾಡುತ್ತಲೇ ಇದೆ. ಮಹಿಳಾಧಿಕಾರಿಗಳು ಸೈನ್ಯದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅವರನ್ನು ಕಾಯಂಗೊಳಿಸುವ ನಿರ್ಧಾರ ಈಗಲೂ ಮಾಡುತ್ತಿಲ್ಲ. ಅವರ ಸೇವಾವಧಿ ಏನಿದ್ದರೂ 10-14 ವರ್ಷಗಳ ತಾತ್ಕಾಲಿಕ ಸೇವೆಗಷ್ಟೇ ಸೀಮಿತ. ಸೈನ್ಯದ ಕಾನೂನು ಮತ್ತು ಶಿಕ್ಷಣ ಇಲಾಖೆಗಳಲ್ಲಿರುವ ಮಹಿಳಾಧಿಕಾರಿಗಳ ಸೇವೆಯನ್ನು ಮಾತ್ರ ಕಾಯಂಗೊಳಿಸಲಾಗಿದೆ. ನಾವಿಕ ಪಡೆ, ವಾಯುದಳದಲ್ಲಿರುವ ಈ ಇಲಾಖೆಗಳಲ್ಲೂ ಇದೇ ನಿಯಮ ಜಾರಿಗೊಳಿಸಲಾಗಿದೆ.
ಇದೀಗ ಸಶಸ್ತ್ರ ಪಡೆ ಮಹಿಳೆಯರಿಗೆ ಕಾಯಮಾತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹಾಗಾಗಿ ಮಹಿಳಾಧಿಕಾರಿಗಳಿಗೆ ಸೈನ್ಯದಲ್ಲಿ ಕಾಯಮಾತಿ ನೀಡಬೇಕೆಂಬ ವಿವಾದ ಇದೀಗ ಸುಪ್ರೀಂಕೋರ್ಟಿನ ಮೆಟ್ಟಿಲು ಹತ್ತಿದೆ. ಇಸ್ರೇಲ್ನಲ್ಲಿ ಕೂಡ 1995 ರ ನಂತರ ಸೈನ್ಯದಲ್ಲಿರುವ ಮಹಿಳಾಧಿಕಾರಿಗಳನ್ನು ಪ್ರತ್ಯಕ್ಷ ಯುದ್ಧರಂಗಕ್ಕೆ ಕಳಿಸುತ್ತಿಲ್ಲ. ಭಾರತೀಯ ಸೈನ್ಯದಲ್ಲಿರುವ ಒಟ್ಟು 5660 ಮಹಿಳಾಧಿಕಾರಿಗಳಲ್ಲಿ 4224 ಮಹಿಳಾಧಿಕಾರಿಗಳು ವೈದ್ಯಕೀಯ ಹಾಗೂ ನರ್ಸಿಂಗ್ ಸೇವೆಯಲ್ಲಿದ್ದಾರೆ. 1436 ಮಂದಿ ಮಹಿಳೆಯರು ಇನ್ನಿತರ ಇಲಾಖೆಗಳಲ್ಲಿದ್ದಾರೆ. ನಾವಿಕ ಪಡೆಯಲ್ಲಿರುವ 819 ಮಹಿಳಾಧಿಕಾರಿಗಳಲ್ಲಿ 406 ಮಂದಿ ವೈದ್ಯಕೀಯ, ನರ್ಸಿಂಗ್ ಸೇವೆ ಹಾಗೂ 413 ಮಂದಿ ಇತರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಭಾರತೀಯ ವಾಯುದಳದಲ್ಲಿರುವ 1871 ಮಹಿಳಾಧಿಕಾರಗಳ ಪೈಕಿ 543 ಮಂದಿ ವೈದ್ಯಕೀಯ, ನರ್ಸಿಂಗ್ ಸೇವೆಯಲ್ಲಿ ತೊಡಗಿಕೊಂಡಿದ್ದರೆ, ಉಳಿದ 1328 ಮಂದಿ ಇತರ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಿಆರ್ಪಿಎಫ್ ಪಡೆಯಲ್ಲಿರುವ ಮಹಿಳಾ ಸಿಬ್ಬಂದಿಗೆ ಮಾತ್ರ ಇಂತಹ ನಿರ್ಬಂಧಗಳಿಲ್ಲ. ಆಕೆ ಚಳವಳಿ, ಪ್ರತಿಭಟನೆ, ಗಡಿ ಕಾವಲು, ಅಂತಾರಾಷ್ಟ್ರೀಯ ಯುದ್ಧದ ಸಂದರ್ಭದಲ್ಲಿನ ಕರ್ತವ್ಯ ಇತ್ಯಾದಿ ಎಲ್ಲ ಬಗೆಯ ನಿರ್ವಹಣಾ ಕೆಲಸಗಳಿಗೂ ಹೋಗಬೇಕಾಗುತ್ತದೆ. ಭಾರತೀಯ ಮಹಿಳಾ ಸೈನ್ಯ ಘಟಕ ವಿಶ್ವಸಂಸ್ಥೆಯ ಶಾಂತಿಪಾಲನಾ ಮಿಷನ್ನಲ್ಲೂ ಭಾಗವಹಿಸಬೇಕಾಗುತ್ತದೆ. ಪ್ರಸ್ತುತ 125 ಪೊಲೀಸ್ ಸಿಬ್ಬಂದಿ ಹೊಂದಿರುವ ಭಾರತೀಯ ಮಹಿಳಾ ಸೈನಿಕ ಪಡೆಯನ್ನು ಸುದೂರದ ಲೈಬಿರಿಯಾದಲ್ಲಿ ಶಾಂತಿ ಪಾಲನೆಗಾಗಿ ನೇಮಿಸಲಾಗಿದೆ.
ಮಹಿಳೆಯರೆಂದರೆ ಅಡುಗೆ ಮನೆಗೇ ಸೀಮಿತರಾಗಿರಬೇಕೆಂಬ ಕಾಲ ಇದಲ್ಲ. ಹಿಂದೆ ಕೂಡ ಹಾಗೇನಿರಲಿಲ್ಲ. ತೊಟ್ಟಿಲು ತೂಗುವ ಕೈ ಶಸ್ತ್ರ ಹಿಡಿಯುವುದಕ್ಕೂ ಹೆದರುವುದಿಲ್ಲ ಎಂದು ಝಾನ್ಸಿರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ಕಿತ್ತೂರು ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಉಳ್ಳಾಲದ ಅಬ್ಬಕ್ಕ ರಾಣಿ, ಚಿತ್ರದುರ್ಗದ ಒನಕೆ ಓಬವ್ವ ಮೊದಲಾದ ಧೀರ ಶೂರ ಭಾರತೀಯ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ದೇಶದ ಮೇಲೆ, ತಮ್ಮ ಸಾಮ್ರಾಜ್ಯದ ಮೇಲೆ ಮುತ್ತಿಗೆ ಹಾಕಿದ ವೈರಿಗಳ ರುಂಡವನ್ನು ಯಾವ ಪುರುಷ ರಾಜರಿಗೂ ಕಮ್ಮಿ ಇಲ್ಲದಂತೆ ಚೆಂಡಾಡಿದ್ದಾರೆ. ಮಹಿಳೆಯರು ಅಬಲೆಯರಲ್ಲ, ಸಮಯ ಬಂದರೆ ಅವರು ಪುರುಷರಷ್ಟೇ ಸಬಲರು, ಸಾಹಸಿಗಳು, ಅವರಷ್ಟೇ ಅಥವಾ ಅವರಿಗಿಂತಲೂ ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ. ಹಾಗಿರುವಾಗ ಸೈನ್ಯದಲ್ಲಿ ಈಗೇಕೆ ಅವರಿಗೆ ನೇರ ಯುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅವಕಾಶ ಕೊಡುತ್ತಿಲ್ಲ ಎಂಬುದು ಕೆಲವು ಮಹಿಳಾ ಸೈನ್ಯಾಧಿಕಾರಿಗಳ ಅಳಲು. ಈಗೇನೋ ೩೪೦ ಮಹಿಳಾಧಿಕಾರಿಗಳನ್ನು ಕಾಯಂಗೊಳಿಸಲಾಗಿದೆ. ಮಹಿಳಾ ಸೈನ್ಯಾಧಿಕಾರಿಗಳನ್ನು ಕಾಯಂಗೊಳಿಸದಿರಲು ಸೈನ್ಯದ ಪ್ರಮುಖರು ಕೊಡುವ ಕಾರಣಗಳು ಕೂಡ ಚರ್ಚಾರ್ಹವೇ. ಮಹಿಳಾಧಿಕಾರಿಗಳಿಗೆ ಅವರ ಕುಟುಂಬ ಸಲಹುವ, ಮಕ್ಕಳ ಲಾಲನೆ ಪಾಲನೆ ಮಾಡುವ ಪ್ರಮುಖ ಕರ್ತವ್ಯಗಳಿರುತ್ತವೆ. ಜೀವನಪೂರ್ತಿ ಕೈಯಲ್ಲಿ ಬಂದೂಕು ಹಿಡಿದು ಅಥವಾ ಮಿಲಿಟರಿಯ ಇನ್ನಿತರ ಸೇವೆಗಳಲ್ಲೇ ಅವರು ಕಾಲ ಕಳೆಯುವುದು ಸಾಧ್ಯವಿಲ್ಲ. ಮಹಿಳಾಧಿಕಾರಿಗಳು ಮದುವೆಯಾದ ಬಳಿಕ ಕೌಟುಂಬಿಕ ಬದುಕಿಗೆ ತೆರೆದುಕೊಳ್ಳಬೇಕಾದುದು ಅನಿವಾರ್ಯ. ಆಗ ಅನಿವಾರ್ಯವಾಗಿ ಮಿಲಿಟರಿ ಸೇವೆಯಿಂದ ಬಿಡುಗಡೆ ಪಡೆಯಬೇಕಾಗುತ್ತದೆ. ಹೀಗೆ ತಾತ್ಕಾಲಿಕವಾಗಿ ಸೇವೆಸಲ್ಲಿಸಲು ಬರುವ ಮಹಿಳೆಯರಿಗೆ ಬಂದೂಕು ಚಾಲನೆ, ಪ್ರತ್ಯಕ್ಷ ರಣಾಂಗಣದಲ್ಲಿ ಹೋರಾಡುವ ಬಗೆಯ ಕುರಿತು ತರಬೇತಿ ನೀಡಿದರೆ ಅದು ವ್ಯರ್ಥ ಕಸರತ್ತಾಗದೆ? ಎಂದು ಪ್ರಶ್ನಿಸುವ ಸೈನ್ಯದ ಪ್ರಮುಖರೂ ಇದ್ದಾರೆ. ಯುದ್ಧದ ಸಂದರ್ಭದಲ್ಲಿ ಟೆಂಟ್ಗಳಲ್ಲಿ ವಾಸ, ಕಾಡುಮೇಡುಗಳಲ್ಲಿ ಅಲೆದಾಟ ಮಹಿಳೆಯರಿಗೆ ಸಾಧ್ಯವೆ ಎನ್ನುವುದು ಇನ್ನೊಂದು ಪ್ರಶ್ನೆ. ಆದರೆ ಸೈನ್ಯದಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸಿದರೆ ಮುಂದೆ ನಮಗೆ ಸಿಗಬೇಕಾದ ಪಿಂಚಣಿ, ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತೇವೆ. ಈ ಸೌಭಾಗ್ಯಕ್ಕೆ ನಾವೇಕೆ ಮಿಲಿಟರಿ ಸೇರಬೇಕು ಎನ್ನುವ ಮಹಿಳೆಯರೂ ಇದ್ದಾರೆ.
ಸೈನ್ಯಕ್ಕೆ ಸೇರುವ ಸಂದರ್ಭದಲ್ಲಿ ನೀಡಲಾಗುವ ಪರೀಕ್ಷೆಯಲ್ಲೂ ಮಹಿಳೆಯರಿಗೆ ಕೆಲವು ವಿನಾಯಿತಿಗಳಿವೆ. ಪುರುಷ ಅಭ್ಯರ್ಥಿಗಳು 28 ನಿಮಿಷದಲ್ಲಿ 5 ಕಿ.ಮೀ. ದೂರ ಓಡಬೇಕು. ಆದರೆ ಮಹಿಳಾ ಅಭ್ಯರ್ಥಿಗಳು ಈ ದೂರವನ್ನು 40 ನಿಮಿಷದಲ್ಲಿ ಕ್ರಮಿಸಿದರೆ ಸಾಕು. ಅದೇ ರೀತಿ ಪುರುಷ ಅಭ್ಯರ್ಥಿಗಳು 9 ಅಡಿ ದೂರ ಬಂದೂಕು ಹಾಗೂ ಇನ್ನಿತರ ಅಗತ್ಯ ವಸ್ತುಗಳ ಭಾರ ಹೊತ್ತು ಜಿಗಿಯಬೇಕು. ಮಹಿಳೆಯರಾದರೋ ಕೇವಲ 5 ಅಡಿ ದೂರ ಹಾರಿದರೆ ಸಾಕು. ಸೈನ್ಯಕ್ಕೆ ಭರ್ತಿಯಾದ ಮೇಲೂ ಮಹಿಳೆಯರಿಗೆ ಇಂತಹ ಅನೇಕ ವಿನಾಯಿತಿಗಳನ್ನು ನೀಡಲಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಮಹಿಳಾ ಸೈನಿಕರು ಪುರುಷ ಸೈನಿಕರಿಗಿಂತ ಹೆಚ್ಚು ಬಲಶಾಲಿಗಳಂತೆ ವರ್ತಿಸಿದ ನಿದರ್ಶನಗಳಿವೆ. ಪುರುಷ ಸೈನ್ಯಾಧಿಕಾರಿಗಳಿಗಿಂತ ಹೆಚ್ಚು ಉತ್ಕೃಷ್ಟ ಕಠಿಣ ನಿರ್ಧಾರಗಳನ್ನು, ಉಪಕ್ರಮಗಳನ್ನು ಕೈಗೊಂಡ ಅಪವಾದದ ಉದಾಹರಣೆಗಳೂ ಇವೆ.
ಅದೇನೇ ಇರಲಿ, ಇಂದಿನ ಕಾಲಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಪುರುಷರಿಗೆ ಸರಿಸಾಟಿಯಾಗಿ ಮುಂದುವರೆಯುತ್ತಿರುವುದು ಹೊಸ ಬೆಳವಣಿಗೆ. ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ರಂತಹ ಬಾಹ್ಯಾಕಾಶ ಯಾನಿಗಳು ಹೊಸ ಇತಿಹಾಸ ಸೃಷ್ಟಿಸಬಹುದಾದರೆ, ಭಾರತೀಯ ಸೈನ್ಯದಲ್ಲಿ ಮಹಿಳಾಧಿಕಾರಿಗಳು ಸಾಹಸದ ಹೊಸ ಇತಿಹಾಸ ಏಕೆ ಬರೆಯಲಾರರು? ತೊಟ್ಟಿಲು ತೂಗುವ ಕೈ ಈಗಿನ ಆಧುನಿಕ ಕಾಲದಲ್ಲಿ ಗನ್ ಹಿಡಿದು ಶತ್ರುಗಳ ರುಂಡವನ್ನು ಏಕೆ ಚೆಂಡಾಡಲಾರದು? ಇದು ‘ನಾರೀಶಕ್ತಿ’ ಎಸೆದಿರುವ ಪ್ರಶ್ನೆಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.