ಸರ್ವಪಲ್ಲಿ ರಾಧಾಕೃಷ್ಣರವರು ನಮ್ಮ ದೇಶದ ಎರಡನೇ ರಾಷ್ಟ್ರಪತಿಗಳಾಗಿದ್ದವರು. ಅದಕ್ಕೂ ಮೊದಲು ನಮ್ಮ ದೇಶದ ಉಪರಾಷ್ಟ್ರಪತಿಗಳಾಗಿ, ರಷ್ಯಾ ದೇಶದ ರಾಯಭಾರಿಯಾಗಿ ನಾಡಿಗೆ ಸೇವೆ ಸಲ್ಲಿಸಿ ಶ್ರೇಷ್ಠ ಮುತ್ಸದ್ದಿ ಎನಿಸಿಕೊಂಡವರು.
1888 ರ ಸೆಪ್ಟೆಂಬರ್ 5 ರಂದು ವೀರಸಾಮಯ್ಯ ಮತ್ತು ಸೀತಮ್ಮ ದಂಪತಿಗಳ ಎರಡನೆಯ ಮಗನಾಗಿ ರಾಧಾಕೃಷ್ಣನ್ ಜನಿಸಿದರು. ಇವರ ಮೂಲ ಸ್ಥಳ ನೆಲ್ಲೂರು ಜಿಲ್ಲೆಯ ಸರ್ವಪಲ್ಲಿ ಗ್ರಾಮ. ಸರ್ವಪಲ್ಲಿ ಎಂಬುದು ಇವರ ಮನೆತನದ ಹೆಸರು.
ಸ್ವತಃ ಬಡತನದಲ್ಲಿ ಬೆಳೆದು, ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಮೇಲೇರಿಬಂದವರು. ಅನಿವಾರ್ಯವಾಗಿ ತತ್ವ ಶಾಸ್ತ್ರವನ್ನು ಓದಿನ ವಿಷಯವಾಗಿ ಆರಿಸಿಕೊಂಡರೂ, ರುಚಿಹೀನವಾಗಿದ್ದ ಅದರಲ್ಲೇ ಅಪಾರ ಆಸಕ್ತಿ, ಪ್ರೀತಿಗಳನ್ನು ಬೆಳೆಸಿಕೊಂಡು ರುಚಿತಳೆದವರು. ಅಷ್ಟೇ ಅಲ್ಲ ಆ ವಿಷಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಅಧ್ಯಾಪಕ ವೃತ್ತಿಯನ್ನು ಇಷ್ಟಪಟ್ಟು ಆರಿಸಿಕೊಂಡರು. ಅಧ್ಯಯನ- ಅಧ್ಯಾಪನವನ್ನು ತಮ್ಮ ಬದುಕಿನ ಉಸಿರಾಗಿ ಮಾಡಿಕೊಂಡರು. ಮೈಸೂರು, ಹೈದರಾಬಾದ್, ಕಲ್ಕತ್ತಾ, ಆಕ್ಸ್ ಫರ್ಡ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ತತ್ವಶಾಸ್ತ್ರವನ್ನು ಬೋಧಿಸಿ, ವಿದ್ಯಾರ್ಥಿಗಳಿಂದ, ಸಹೋದ್ಯೋಗಿಗಳಿಂದ ಅಪಾರ ಮೆಚ್ಚುಗೆ ಗಳಿಸಿದರು. ಪಾಶ್ಚಾತ್ಯ, ಪೌರ್ವಾತ್ಯ ತತ್ವಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ತುಲನಾತ್ಮಕವಾಗಿ ವಿದ್ವತ್ ಪೂರ್ಣ ಗ್ರಂಥಗಳನ್ನು ರಚಿಸಿದರು.
ಇಂಥ ಶ್ರೇಷ್ಠ ಶಿಕ್ಷಕನ ಜನ್ಮದಿನ ಸೆಪ್ಟೆಂಬರ್ 5 ನ್ನು ಅವರಿಚ್ಛೆಯಂತೆ ಹಲವು ದಶಕಗಳಿಂದ ಪ್ರತಿ ವರ್ಷವೂ ಶಿಕ್ಷಕ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗಂತೂ ಇದೊಂದು ಸಾಂಪ್ರದಾಯಿಕ ಉತ್ಸವವಾಗಿ ಮಾರ್ಪಟ್ಟಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೆಚ್ಚಿನ ಶಿಕ್ಷಕರಿಗೆ ಹೂ ನೀಡುವುದು, ಶಾಲಾ ಸಮಾರಂಭದಲ್ಲಿ ರಾಧಾಕೃಷ್ಣನ್ ರವರ ಬಗ್ಗೆ ಹೇಳಿದ್ದೇ ಹೇಳುವುದು, ಸರ್ಕಾರವು ಅರ್ಜಿ ಗುಜರಾಯಿಸಿಕೊಂಡ ಶಿಕ್ಷಕರಲ್ಲಿ ಸಾಧ್ಯವಾದಷ್ಟು ತಮಗೆ ಬೇಕಾದ ಶಿಕ್ಷಕರಿಗೆ ರಾಜ್ಯ, ರಾಷ್ಟ್ರಪ್ರಶಸ್ತಿ ನೀಡುವುದು (ಇವರಲ್ಲಿ ಪ್ರಶಸ್ತಿಗೆ ಕೀರ್ತಿ ತರುವವರೂ ಕೆಲವರು ಇರುತ್ತಾರೆ) ಎಲ್ಲಾ ಯಾಂತ್ರಿಕ ಪ್ರಕ್ರಿಯೆ ಕಬ್ಬಿನ ರಸ ಹಿಂಡಿದ ಸಿಪ್ಪೆಯಂತೆ.
ನಿಜಕ್ಕೂ ಶಿಕ್ಷಕ ದಿನಾಚರಣೆ, ಶಿಕ್ಷಕರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನ. ವರ್ಷಾಂತ್ಯದಲ್ಲಿ ವ್ಯಾಪಾರಿಯು ಲಾಭ ನಷ್ಟಗಳನ್ನು ತೂಗಿ ನೋಡುವಂತೆ ನಾವೂ ಸಹ ಶಿಕ್ಷಕ ದಿನಾಚರಣೆಯಂದು ನಮ್ಮ ವಾರ್ಷಿಕ ಸಫಲತೆ ವಿಫಲತೆಗಳನ್ನು ಲೆಕ್ಕಾಚಾರ ಮಾಡಬೇಕಲ್ಲವೇ?
ಶಿಕ್ಷಕರಲ್ಲಿ ವೃತ್ತಿಯನ್ನು ಪ್ರೀತಿಸಿ, ಬಯಸಿಬಂದವರು ಕೆಲವರಿದ್ದರೆ ಆಕಸ್ಮಿಕವಾಗಿ ಬಂದವರೇ ಅಧಿಕ. ಒಂದೆರಡು ವರ್ಷಗಳ ನಂತರ ಉತ್ತಮ ನೌಕರಿ ಸಿಕ್ಕಿತೆಂದು ಬಿಟ್ಟು ಹೋಗುವವರು ಎಷ್ಟೋ ಜನ ಉಳಿದವರು, ತಮ್ಮ ಹಣೆಬರಹವನ್ನು ಹಳಿಯುತ್ತಾ, ನೀರಿನಲ್ಲಿ ಮುಳುಗಿದ ನಂತರ ಚಳಿಯೇನು ? ಮಳೆಯೇನು? ಎಂದು ಸಾವರಿಸಿ ಕೊಂಡು ಹೋಗುವವರು! ಆದರೆ ರಾಧಾಕೃಷ್ಣನ್ರವರಂತೆ ಆಕಸ್ಮಿಕವಾಗಿ ಇಷ್ಟವಿಲ್ಲದ ವಿಷಯ ತೆಗೆದುಕೊಂಡರೂ ಅದನ್ನೇ ಆರಾಧಿಸುವವರು ನಾವಾಗಬೇಕಲ್ಲವೇ?
ಶಿಕ್ಷಕರನ್ನು ಶಿಲ್ಪಿಗಳಿಗೆ ಹೋಲಿಸುತ್ತಾರೆ. ಶಿಲ್ಪಿ ನಿರ್ಜೀವ ಕಲ್ಲನ್ನು ಕಡೆದು ಮೂರ್ತಿಯನ್ನು ನಿರ್ಮಿಸಿದರೆ ಶಿಕ್ಷಕ ಜೀವಂತ ವ್ಯಕ್ತಿಯ ಓರೆಕೋರೆಗಳನ್ನು ತೆಗೆದು ವ್ಯಕ್ತಿತ್ವಶಾಲಿಯನ್ನು ರೂಪಿಸುತ್ತಾನೆ. ಶಿಲ್ಪಿಗೆ ಪ್ರತಿಕಲ್ಲೂ ಪೂಜ್ಯ. ಅದರಲ್ಲಿ ಏನನ್ನು ಕಡೆದು ನಿಲ್ಲಿಸಬೇಕೆಂಬ ಸ್ಪಷ್ಟ ಚಿತ್ರಣ ಅವನ ಮನಸ್ಸಿನಲ್ಲಿ ಮೂಡಿಬರುತ್ತದೆ. ಗಣೇಶನನ್ನು ಕಡೆಯಬೇಕೆಂದರೆ ಗಣೇಶನೇ, ಈಶ್ವರನಲ್ಲ. ಆದರೆ ನಮ್ಮಲ್ಲಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಈ ಭಾವ ಮೂಡಬೇಕಲ್ಲವೇ? ಹತ್ತಾರು ದಶಕಗಳ ಹಿಂದೆ ಓರ್ವ ಸುಬ್ರಮಣ್ಯ ಐಯ್ಯರ್ ಕಡೆದು ನಿಲ್ಲಿಸಿದ ಈ ನಾಡಿನ ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂರಿಂದಾಗಿ ಅಯ್ಯರ್ ಚಿರಂಜೀವಿಯಾಗಿ ಹೋದರು. ನಮ್ಮ ಆಯ-ವ್ಯಯದ ಲೆಕ್ಕಾಚಾರದಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಕಲಾಂರಂತೆ ಅವರ ಕೀರ್ತಿಗೆ, ಅವರ ಯಶಸ್ಸಿಗೆ, ನಮ್ಮನ್ನು ಭಾಜನರನ್ನಾಗಿ ಮಾಡುತ್ತಾರೆ?
ನಮ್ಮ ವೃತ್ತಿ ಜೀವನದಲ್ಲಿ ನಾವೆಷ್ಟು ಅಧ್ಯಯನ ಶೀಲರಾಗಿದ್ದೇವೆ? ಅಧ್ಯಯನ ಮತ್ತು ಅಧ್ಯಾಪನ, ಓರ್ವಶಿಕ್ಷಕನ ಜೀವನದ ಅವಿಭಾಜ್ಯ ಅಂಗವಾಗಬೇಕಲ್ಲವೇ?
ತರಗತಿಯಲ್ಲಿ ನಾವು ಬೋಧಿಸುವ ಮುಕ್ಕಾಲು ಗಂಟೆ ಒಂದು ಗಂಟೆ ಕೇವಲ ಪಠ್ಯ ವಿಷಯಕ್ಕೆ ಮಾತ್ರ ಸೀಮಿತವೇ? ಅಥವಾ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ನಾವು ಗಮನ ನೀಡುತ್ತಿದ್ದೇವೆಯೇ?
ಸ್ವಾಮಿ ವಿವೇಕಾನಂದರು ಶಿಕ್ಷಣವೆಂದರೆ, ’ನಿಮ್ಮ ಮೆದುಳಿನಲ್ಲಿ ತುಂಬಿಕೊಂಡಿರುವ ಮಾಹಿತಿಯ ಮೊತ್ತವಲ್ಲ… ನಮಗೆ ಬೇಕಾದ್ದು ಜೀವನ ನಿರ್ಮಾಣ, ಮನುಷ್ಯ ನಿರ್ಮಾಣ, ಚಾರಿತ್ರ್ಯ ನಿರ್ಮಾಣ ಇವುಗಳ ಮೂಲಕ ಉದಾತ್ತ ಭಾವನೆಗಳನ್ನು ಕರಗತಮಾಡಿಕೊಳ್ಳಬೇಕು’ ಎಂದಿದ್ದಾರೆ. ಆದ್ದರಿಂದ ಕೇವಲ ಪಠ್ಯಪುಸ್ತಕದ ವಿಷಯಗಳನ್ನು ನಾವು ವಿದ್ಯಾರ್ಥಿಗಳ ತಲೆಯಲ್ಲಿ ತುರುಕಿದರೆ ಅದರಿಂದ ಮಾನವ ನಿರ್ಮಿತ, ವ್ಯಕ್ತಿತ್ವ ವಿಕಸನ ಸಾಧ್ಯವೇ ಎಂಬುದನ್ನು ಯೋಚಿಸಬೇಕಲ್ಲವೇ?
ಅನೇಕ ಶಿಕ್ಷಕರಿಗೆ, ನಮಗೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲೇ ಸಮಯವಿಲ್ಲ, ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಹಾಗೂ ಇಲಾಖೆಯ ಒತ್ತಡದಿಂದಾಗಿ ಶೇಕಡಾವಾರು ಫಲಿತಾಂಶವನ್ನು ಹೆಚ್ಚಿಸಲೇಬೇಕು, ಹೀಗಾಗಿ ವ್ಯಕ್ತಿತ್ವ ವಿಕಸನ ಮಾಡುವುದು ಹೇಗೆ? ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡಬಹುದು. ಆದರೆ ಈ ವೃತ್ತಿಯನ್ನು ನಮ್ಮ ಪ್ರವೃತ್ತಿಯಾಗಿ ಸ್ವೀಕರಿಸಿದವರಿಗೆ ಈ ಪ್ರಶ್ನೆ ಕಾಡದು. ಅವರ ಮುಂದೆ ತಾವೇನು ಮಾಡಬೇಕೆಂಬ ಸ್ಪಷ್ಟ ಚಿತ್ರಣವಿದೆ. ಓರ್ವ ತಾಯಿ ತನ್ನ ಮಗುವನ್ನು ಹೊತ್ತು ಬೆಟ್ಟ ಹತ್ತುತ್ತಾಳೆ ಆದರೆ ಅದರಷ್ಟೇ ತೂಕದ ಕಲ್ಲು ಗುಂಡನ್ನು ಹೊತ್ತು ಬೆಟ್ಟಹತ್ತಳು. ಹೀಗೆ ನಮ್ಮ ನಮ್ಮ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವೇ ನಮ್ಮ ಗುರಿಯಾದಾಗ ಯಾವ ಕೆಲಸವೂ ನಮಗೆ ಹೊರೆಯಾಗದು. ನಮ್ಮಲ್ಲಿ ಇದು ನನ್ನದು ಎಂಬ ಭಾವ ಬಲಿಯಬೇಕಷ್ಟೆ.
ಇನ್ನು ವ್ಯಕ್ತಿತ್ವ ವಿಕಸನ ಮಾಡುವುದು ಹೇಗೆ? ಎಂಥ ವಿದ್ಯಾರ್ಥಿಗಳನ್ನು ರೂಪಿಸಬೇಕು? ಇದಕ್ಕೇನಾದರೂ ಸಿಲೆಬಸ್ ಇದೆಯೇ? ಇಲ್ಲ. ನಮ್ಮ ಶಿಕ್ಷಣ ಇಲಾಖೆ ಇದಕ್ಕೆ ಸಿಲೆಬಸ್ ರೂಪಿಸಿಲ್ಲ. ಅದಕ್ಕೆ ಅದರ ಅಗತ್ಯವೂ ಕಾಣದು. ಹೀಗಾಗಿ ನಮ್ಮ ಸಿಲೆಬಸ್ ಅನ್ನು ನಾವೇ ರೂಪಿಸಿಕೊಳ್ಳಬೇಕು.
ನಾನು ಒಮ್ಮೆ ಅಮೆರಿಕಾಗೆ ಹೋದಾಗ ಅಲ್ಲಿನ ಖಾಸಗಿ ಹಾಗೂ ಸರ್ಕಾರೀ ಶಾಲೆಗಳಿಗೆ ಭೇಟಿ ನೀಡಿ ಅಧ್ಯಾಪಕರೊಂದಿಗೆ ಚರ್ಚಿಸಿದ್ದೆ. ಅಲ್ಲಿನ ಮಕ್ಕಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಮಕ್ಕಳು ನೀವ್ಯಾರೆಂದು ಪ್ರಶ್ನಿಸಿದರೆ ಹೆಮ್ಮಯಿಂದ ಕೆನಡಿಯನ್, ಅಮೆರಿಕನ್ ಎಂದು ಹೇಳಿಕೊಳ್ಳುತ್ತಾರೆ. ಅಮೆರಿಕೆಯಲ್ಲಂತೂ ತಮ್ಮನ್ನು ಪರಿಚಯಿಸಿಕೊಳ್ಳುವಾಗ ಆಫ್ರಿಕನ್-ಅಮೆರಿಕನ್, ಚೈನೀ ಅಮೆರಿಕನ್, ಏಷ್ಯ ಅಮೆರಿಕನ್ ಎಂದು ತಮ್ಮ ಮೂಲವನ್ನು ಹೇಳುತ್ತಾರೆ. ಅದೇ ನಮ್ಮ ಮಕ್ಕಳು ಹೆಮ್ಮೆಯಿಂದ ನಾನು ಭಾರತೀಯ, ಹಿಂದೂಸ್ಥಾನಿ ಎಂದು ಹೇಳುವರೇ? ಇದನ್ನು ಕಲಿಸುವುದು ನಮ್ಮ ಕರ್ತವ್ಯವಲ್ಲವೇ?
ನಾಲ್ಕುವರೆ ವರ್ಷದ ನನ್ನ ಮೊಮ್ಮೊಗಳು ಅಮೆರಿಕೆಯಲ್ಲಿ ಶಾಲೆಗೆ ಹೋಗುತ್ತಾಳೆ. ಇತ್ತೀಚೆಗೆ ಫೋನ್ ಮಾಡಿ ನನಗೊಂದು ಪ್ರಶ್ನೆ ಕೇಳಿದಳು. Do you know whose picture is on the ‘cent’? ಅಲ್ಲಿನ ಚಿಕ್ಕ ನಾಣ್ಯ ಸೆಂಟ್ ನ ಮೇಲಿರುವ ಚಿತ್ರ ಯಾರದ್ದು? ನಾನು ಗೊತ್ತಿಲ್ಲವೆಂದಾಗ ಅದು ಅಲ್ಲಿನ ರಾಷ್ಟ್ರಾಧ್ಯಕ್ಷ ಅಬ್ರಾಹಾಂ ಲಿಂಕನ್ ಎಂದು ಹೇಳಿ, ಅವರು ಈಗಿಲ್ಲ ಎಂಬ ಮಾತನ್ನು ಸೇರಿಸಿದಳು. ನನಗೆ ಆಶ್ಚರ್ಯವಾಯಿತು. ನಮ್ಮ ಮಕ್ಕಳಿಗೆ ನಾವು ಕೇವಲ ಟ್ವಿಂಕಲ್ ಟ್ವಿಂಕಲ್ ಲಿಟ್ಲಸ್ಟಾರ್ ಎಂದು ಹೇಳಿಕೊಟ್ಟರೆ, ಅಲ್ಲಿ ಅದರೊಂದಿಗೆ ಅಲ್ಲಿನ ರಾಷ್ಟ್ರೀಯ ಮಹಾಪುರುಷರನ್ನು ಪರಿಚಯಿಸುತ್ತಾರೆ. ಅಮೆರಿಕೆಗೆ ಇರುವುದು 300 ವರ್ಷಗಳ ಇತಿಹಾಸ. ನಮಗಾದರೋ ಸಹಸ್ರಾರು. ನಮ್ಮಲ್ಲಿನ ಮಹಾಪುರುಷರು ಅಗಣಿತ. ಅಲ್ಲಿ ಮಹಾಪುರುಷರನ್ನು ಪುಟ್ಟ ಮಕ್ಕಳಿಗೆ ಪರಿಚಯಿಸುವ ಕೆಲಸವನ್ನು ಅಧ್ಯಾಪಕರು ಮಾಡಬಹುದಾದರೆ, ನಾವೇಕೆ ಮಾಡುವುದಿಲ್ಲ?
ವೈಯುಕ್ತಿಕ ಮೌಲ್ಯ, ಕುಟುಂಬ ಮೌಲ್ಯ, ಸಾಮಾಜಿಕ ಮೌಲ್ಯ, ರಾಷ್ಟ್ರೀಯ ಮೌಲ್ಯ ಹಾಗೂ ಆಧ್ಯಾತ್ಮಿಕ ಮೌಲ್ಯ ಈ ರೀತಿ ಜೀವನ ಮೌಲ್ಯಗಳನ್ನು ನಾವು ಪಾಠ ಮಾಡುತ್ತಲೇ ಕಲಿಸಬಹುದು. ಹೊಸ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಉದಾರ ಗುಣವನ್ನು ಯುವ ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಶಿಕ್ಷಣದ ಮುಖ್ಯ ಗುರಿಯಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.