ಶಾಲಾ ಪಠ್ಯಪುಸ್ತಕಗಳ ಪರೀಶೀಲನೆ ಪೂರ್ಣಗೊಂಡು ಪರಿಷ್ಕೃತ ಪಠ್ಯಪುಸ್ತಕಗಳು ಪ್ರಕಟವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೊಮ್ಮೆ ಪಠ್ಯಪುಸ್ತಕಗಳನ್ನು ಕೇಂದ್ರವಾಗಿರಿಸಿಕೊಂಡ ಚರ್ಚೆಯೊಂದು ಆರಂಭವಾಗಿದೆ. ಆದರೆ ಸತ್ಯದ ತಳಹದಿಯ ಮೇಲೆ ಆರಂಭವಾಗಬೇಕಾಗಿದ್ದ ಚರ್ಚೆಯು, ಕೇವಲ ಕಲ್ಪಿತ ಸಂಗತಿಯೊಂದನ್ನು ಮುಂದಿಟ್ಟುಕೊಂಡು ಆರಂಭವಾಗಿದೆ. ಹೀಗಾಗಿ ಈ ಚರ್ಚೆಯು ಪೊಳ್ಳುವಾದಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುವ ಒಂದು ಹುನ್ನಾರದಂತೆ ಕಾಣುತ್ತಿದೆಯೇ ಹೊರತು ಶೈಕ್ಷಣಿಕ ಕಾಳಜಿಯಿಂದ ಕೂಡಿದೆ ಎಂದೇನೋ ಕಾಣುತ್ತಿಲ್ಲ. ಕೆಲವು ರಾಜಕಾರಣಿಗಳು ಮತ್ತು ತಮ್ಮನ್ನು ತಾವು ಬುದ್ಧಿಜೀವಿಗಳು, ಸಾಕ್ಷಿಪ್ರಜ್ಞೆಗಳೆಂದುಕೊಂಡವರು ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಾಗಬಾರದು ಎಂದು ಹೇಳುತ್ತಿರುವ ಮಾತುಗಳನ್ನು ಸೂಕ್ಷ್ಮವಾಗಿ ನೋಡಿದರೆ, ಅವರ ಮಾತುಗಳು ಅವರಿಗೇ ತಿರುಗು ಬಾಣವಾಗುವಂತಿದೆ. ಯಾಕೆಂದರೆ, ಸ್ವಾತಂತ್ರ್ಯಾನಂತರದ ಏಳು ದಶಕಗಳಷ್ಟು ಕಾಲವೂ ಈ ದೇಶದಲ್ಲಿ ಪಠ್ಯಪುಸ್ತಕಗಳನ್ನು ರಚಿಸಿ, ಅದನ್ನು ಪರಿಷ್ಕರಿಸಿ, ಅನುಷ್ಠಾನಗೊಳಿಸಿದವರೇ ಪಠ್ಯಪುಸ್ತಕಗಳ ಉದ್ದೇಶ, ಅವುಗಳಿಗಿರಬಹುದಾದ ಪಾವಿತ್ರ್ಯತೆ, ಮಹತ್ವವನ್ನೆಲ್ಲಾ ಗೌಣವಾಗಿಸಿ ಅದನ್ನೊಂದು ಕಳಪೆ ಕರಪತ್ರವಾಗಿಸಿದ್ದರು. ತಮ್ಮ ಐಡಿಯಾಲಜಿ, ಅಜೆಂಡಾಗಳಿಗೆ ಬೇಕಾದಂತೆ ಇತಿಹಾಸವನ್ನೇ ತಿರುಚಿ, ಜನರನ್ನೇ ಒಡೆದವರು ಇಂದು ಪಠ್ಯಪುಸ್ತಕಗಳು ನಿಷ್ಪಕ್ಷಪಾತಿಯಾಗಿರಬೇಕು ಎನ್ನುವ ಬಗ್ಗೆ ಮಾತನಾಡುತ್ತಿದ್ದಾರೆ ! ಇನ್ನೊಂದೆಡೆ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಗಳಾಗಬೇಕು ಎಂಬ ಕನಸಿನೊಂದಿಗೆ ಆರಂಭಿಸುವ ಯಾವುದೇ ಕೆಲಸಗಳನ್ನು ತಡೆಯುವ ಹೋರಾಟವನ್ನೇ ಆರಂಭಿಸುತ್ತಿದ್ದಾರೆ.
ಭಾರತ ಹಲವು ಶತಮಾನಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಟ್ಟ ಕಾರಣದಿಂದ ಇಲ್ಲಿನ ಭೌತಿಕ ಸಂಪತ್ತು ಮಾತ್ರ ಲೂಟಿಯಾಗಿರಲಿಲ್ಲ, ಜತೆಗೆ ನಮ್ಮ ಬುದ್ಧಿಯೂ ಗುಲಾಮಿತನಕ್ಕೆ ಒಳಪಟ್ಟಿತು. ಮೊಘಲರು ಮತ್ತು ಬ್ರಿಟಿಷರು ವ್ಯವಸ್ಥಿತವಾಗಿಯೇ ನಮ್ಮ ಚಿಂತನೆಗೆ ಪೊರೆ ಕವಿಯುವಂತೆ ಮಾಡಿದರು. ಅವರು ಕೆಡವಿದ್ದು ಕೇವಲ ಕಟ್ಟಡಗಳನ್ನಲ್ಲ, ಅಪಹರಿಸಿದ್ದು ಕೇವಲ ಸಂಪತ್ತನ್ನಲ್ಲ.ಇಲ್ಲಿನ ಜನರ ಸಂಸ್ಕೃತಿ, ಪರಂಪರೆ, ನಂಬಿಕೆ, ಆಚರಣೆಗಳೆಲ್ಲವನ್ನೂ ಭ್ರಷ್ಟಗೊಳಿಸಿದರು.
ಸ್ವಾತಂತ್ರ್ಯ ಸಂಪಾದಿಸಿದಾಗ ನಮ್ಮ ಮುಂದಿದ್ದ ಬಹುದೊಡ್ಡ ಜವಾಬ್ದಾರಿ ಎಂದರೆ ನಮ್ಮ ಬುದ್ಧಿಗೆ ಕವಿದಿದ್ದ ಪರಕೀಯತೆಯ ಪೊರೆಯನ್ನು ಕಳಚಿ ಮತ್ತೆ ನಮ್ಮದೇ ಬುದ್ಧಿಯಿಂದ , ನಮ್ಮದೇ ಕಣ್ಣುಗಳಿಂದ ಈ ಲೋಕವನ್ನು ನೋಡುವುದಕ್ಕೆ ಸಾಧ್ಯವಾಗುವಂತೆ ಮಾಡಬೇಕಾಗಿತ್ತು. ಆದರೆ ಅಧಿಕಾರ ಹಿಡಿದವರಲ್ಲಿ ಅನೇಕರು ಸ್ವತಃ ಬುದ್ಧಿಗೆ ಪೊರೆ ಬಂದವರೇ ಆಗಿದ್ದರು. ಇದರ ಪರಿಣಾಮ ಇಡೀ ದೇಶವನ್ನು ಅವರುಗಳು ಮತ್ತೊಮ್ಮೆ ಬೌದ್ಧಿಕ ಗುಲಾಮಗಿರಿಯ ಕೂಪಕ್ಕೆ ತಳ್ಳಿದರು. ಯಾವ ಚಿಂತನೆಗಳಿಂದ ಹೊರಬಂದು ಈ ನೆಲದ ಸತ್ವವುಳ್ಳ ವಿಚಾರಗಳೊಂದಿಗೆ ನಾವು ಮುನ್ನುಗ್ಗಬೇಕಾಗಿತ್ತೋ ಅದಕ್ಕೆ ತಡೆಯೊಡ್ಡಿದ್ದೇ ಈ ಮಾನಸಿಕ ಗುಲಾಮಗಿರಿಗೆ ಒಳಗಾಗಿದ್ದ ನಾಯಕರು ! ಸ್ವಂತಿಕೆಯ ಶೋಧವೇ ಏಕೈಕ ಮಿಷನ್ ಆಗಬೇಕಾಗಿದ್ದ ಕಾಲದಲ್ಲೇ, ಸ್ವಂತಿಕೆಯ ಶೋಧದ ಎಲ್ಲಾ ಪ್ರಯತ್ನಗಳಲ್ಲಿ ಬ್ರಿಟಿಷರಿಗಿಂತ ಹೆಚ್ಚು ಅಪಾಯವನ್ನು ಕಂಡರು. ಶಿಕ್ಷಣ ರಂಗವೂ ಸೇರಿದಂತೆ ಯಾವೆಲ್ಲ ಕ್ಷೇತ್ರಗಳು ಪುನರುಜ್ಜೀವನಗೊಂಡು ಭಾರತೀಯತೆಯ ಬೆಳಕಿನಲ್ಲಿ ದೇಶದ ಜನಮಾನಸವನ್ನು ಬೆಳಗಬೇಕಾಗಿತ್ತೋ ಅದಕ್ಕೆ ಬೆಳಗಲುಬೇಕಾದ ಎಣ್ಣೆಯನ್ನೇ ಎರೆಯಲಿಲ್ಲ ಮಾತ್ರವಲ್ಲ, ಉದ್ದೇಶಪೂರ್ವಕವಾಗಿಯೇ ಅಂತಹ ದೀಪಗಳನ್ನು ನಂದಿಸಲಾಯಿತು. ಹೀಗೆ ಬಲವಂತದಿಂದ ನಂದಿಸಲ್ಪಟ್ಟ ದೀಪಗಳಲ್ಲಿ ಒಂದು ನಮ್ಮ ಶಾಲಾ ಪಠ್ಯಪುಸ್ತಕಗಳು. ಬ್ರಿಟಿಷರ ಕಾಲಕ್ಕೂ ಬ್ರಿಟಿಷರಿಂದ ಭೌತಿಕವಾಗಿ ಬಿಡುಗಡೆಗೊಂಡ ಕಾಲಕ್ಕೂ ನಮ್ಮ ಪಠ್ಯ ರಚನೆಯ ಮಾನಸಿಕತೆಯಲ್ಲಿ ವ್ಯತ್ಯಾಸವೇನೂ ಕಾಣಲಿಲ್ಲ. ಅದರ ಪರಿಣಾಮವನ್ನೆ ನಾವಿಂದು ಕಾಣುತ್ತಿದ್ದೇವೆ. ಇಂದಿಗೂ ಪಠ್ಯಪುಸ್ತಕಗಳಲ್ಲಿ ದೇಶ, ಸಂಸ್ಕೃತಿಯ ಬಗ್ಗೆ ಒಂದು ಸಣ್ಣ ಪಾಠದ ಸೇರ್ಪಡೆಯೂ ಕೆಲವರಿಗೆ ಸಹ್ಯವಾಗುವುದಿಲ್ಲ. ಯಾವುದಾದರೂ ರೂಪದಲ್ಲಿ ಒತ್ತಡವನ್ನು ಸೃಷ್ಠಿಸಿ ಅಂತಹ ಪಾಠಗಳನ್ನು ಹಿಂಪಡೆಯುವಂತೆ ಮಾಡುವ, ಇಲ್ಲವೇ ಅಂತಹ ಸರ್ಕಾರವನ್ನು ಫ್ಯಾಸಿಸ್ಟ್ ಎಂದೋ, ಪಠ್ಯ ರಚನೆ ಮಾಡಿದವರನ್ನು ಕೋಮುವಾದಿಗಳೆಂದೋ ಕರೆದು ಬೀದಿ ಜಗಳದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೆ. ಹೊಸದೊಂದು ವಿಚಾರವನ್ನು, ಪಠ್ಯವನ್ನು ಸಹಿಸಿಕೊಳ್ಳುವ ಗುಣವೇ ಇಲ್ಲದಿರುವ ಈ ಜನಗಳೇ ಬೇರೆಯವರಿಗೆ ಸಹಿಷ್ಣತೆಯ ಪಾಠ ಮಾಡುತ್ತಾರೆ.
ಸ್ವಾತಂತ್ರ್ಯಾನಂತರದ ಕಳೆದ ಏಳು ದಶಕಗಳ ಕಾಲವೂ ಭಾರತದ ಶೈಕ್ಷಣಿಕ ರಂಗ, ವೈಚಾರಿಕ ರಂಗದ ಮೇಲೆ ತಮ್ಮದೇ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡು ತಮಗಿಷ್ಟವಾದಂತೆ ತಮ್ಮ ಸಿದ್ಧಾಂತಗಳನ್ನೇ ಪಠ್ಯದ ಒಳಗೆ ಸೇರಿಸಿಕೊಂಡು ಬಂದವರು, ಸುಳ್ಳು ವಿಚಾರಗಳನ್ನು, ತಪ್ಪು ಮಾಹಿತಿಗಳನ್ನು ವಿದ್ಯಾರ್ಥಿಗಳ ತಲೆಯೊಳಗೆ ತುಂಬಿಸುತ್ತಾ ಬಂದವರು ಇಂದು ವಿಚಲಿತರಾಗುತ್ತಿದ್ದಾರೆ. ಇಲ್ಲಿ ಕೆಲವರು ಪಠ್ಯಪುಸ್ತಕಗಳನ್ನು ತಮ್ಮ ಸಿದ್ದಾಂತದ ಖಾಯಂ ರಂಗಸ್ಥಳವನ್ನಾಗಿಸಿಕೊಂಡಿದ್ದರು. ಪರಿಣಾಮವಾಗಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿ ಹೊರಬಂದ ಯುವ ಜನರಿಗೆ ಈ ದೇಶ , ಇಲ್ಲಿನ ಸಂಸ್ಖೃತಿ, ಪರಂಪರೆಯು ಅಭಿಮಾನದ ಸಂಗತಿಯಾಗಿ ಕಾಣುವುದಕ್ಕಿಂತ ಹೆಚ್ಚಾಗಿ ಅವೆಲ್ಲವೂ ಕಳಪೆಯಾಗಿ ಕಾಣಲು ಆರಂಭವಾಗುತ್ತಿತ್ತು. ಅದರಲ್ಲೂ ವಿಶ್ವವಿದ್ಯಾಲಯಗಳಿಗೆ ಹೋಗಿ ಸಾಹಿತ್ಯ/ಸಮಾಜವಿಜ್ಞಾನ/ಮಾನವಿಕಗಳಂತಹ ವಿಷಯಗಳಲ್ಲಿ ಕೈಯಲ್ಲೊಂದು ಪದವಿ ಪಡೆದು ಬಂದವರಿಗಂತೂ ಈ ಸೃಷ್ಟಿಯ ಸೌಂಧರ್ಯವನ್ನು ಸಹಜವಾಗಿ ನೋಡುವ ದೃಷ್ಟಿಯೇ ನಷ್ಟವಾಗಿರುತ್ತಿತ್ತು. ಇಲ್ಲಿರುವುದೆಲ್ಲವೂ ಕೆಡುಕಾಗಿ ಕಾಣುತ್ತಿತ್ತು. ಸೌಂಧರ್ಯದಲ್ಲೂ ವಿಕೃತಿಯನ್ನೇ ಹುಡುಕುವ ಪ್ರವೃತ್ತಿಯೇ ಬುದ್ದಿವಂತಿಕೆಯಾಗಿ ಮೆಚ್ಚುಗೆಗೆ ಒಳಗಾಗುತ್ತಿತ್ತು. ವಿಮರ್ಶೆಯ ಹೆಸರಲ್ಲಿ ಈ ನೆಲದ ಎಲ್ಲಾ ಶ್ರದ್ಧಾಬಿಂದುಗಳ ಕುರಿತಾಗಿಯೂ ಲಘುವಾಗಿ ಮಾತನಾಡುವುದನ್ನು ಪ್ರೋತ್ಸಾಹಿಸಲಾಯಿತು. ಹಾಗೆ ನೋಡಿದರೆ ವಿಮರ್ಶೆ, ವಿಶ್ಲೇಷಣೆ, ಖಂಡನೆಗೂ ಒಂದು ಶ್ರೇಷ್ಟ ವೈಚಾರಿಕ ಮಾದರಿಯನ್ನು ರೂಪಿಸಿದ ನೆಲ ನಮ್ಮದು. ಆದರೆ ವಿಮರ್ಶೆಯ ಹೆಸರಿನಲ್ಲಿ ಭಂಜನೆಯ ಪೃವೃತ್ತಿಯನ್ನೇ ಬೆಳೆಸಿದೆವು. ಇವೆಲ್ಲದರ ಮೂಲ ಎಲ್ಲಿದೆ ಎಂದು ನೋಡಿದರೆ ನಮ್ಮ ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿದೆ. ಆರೋಗ್ಯಕರವಾಗಿ ಬೆಳೆಯಬೇಕಾದ ಮನಸ್ಸುಗಳನ್ನು ಸಿದ್ಧಾಂತಗಳ ಹೆಸರಿನಲ್ಲಿ ಕೆಡಿಸಿದ ಪರಿಣಾಮವೇ ದೇಶದ ವಿರುದ್ಧ ಘೋಷಣೆ ಹಾಕುವುದು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವೈಭವೀಕರಿಸಲಾಗುತ್ತದೆ.
ಮಕ್ಕಳ ಮನಸ್ಸು ಪಠ್ಯಪುಸ್ತಕಗಳ ಮೂಲಕ ವಿಕಾಸವಾಗಬೇಕು, ಅದು ಸಹಜವಾಗಿ ಅರಳಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜವನ್ನು ನಾವು ಕಾಣುವುದಕ್ಕೆ ಸಾಧ್ಯ . ಆದರೆ ಹಾಲು ಉಣ್ಣಬೇಕಾದ ಶಿಶುವಿಗೆ ವಿಷವನ್ನೇ ಕುಡಿಸಿದಂತೆ ನಮ್ಮ ಪಠ್ಯ ಪುಸ್ತಕಗಳು ಮನಸ್ಸನ್ನು ಕೆಡಿಸಿ ವಿಕಾರಕ್ಕೆ ಒಳಗಾಗುವಂತೆ ಮಾಡಿದರೆ ಸರಿ ಪಡಿಸುವ ಜವಾಬ್ದಾರಿ ಯಾರದ್ದು? ಪಠ್ಯ ಪುಸ್ತಕಗಳು ಕಾಲಕಾಲಕ್ಕೆ ಹೊಸದಾಗಬೇಕು, ನವೀಕರಣ, ಪರಿಷ್ಕಾರಕ್ಕೆ ಒಳಗಾಗಬೇಕು. ಬದಲಾವಣೆಗಳು ಕಾಣಬೇಕಾಗುವುದು ಬೆಳವಣಿಗೆ ಸಹಜ ಲಕ್ಷಣ. ಆದರೆ ಕಳೆದ ಎರಡು ಮೂರು ದಶಕಗಳಲ್ಲಿ ನಮ್ಮ ಶಾಲೆ ಕಾಲೇಜುಗಳಲ್ಲಿ ಓದಿ ಬಂದವರು ಮತ್ತೆ ಮತ್ತೆ ಸೀಮಿತ ಸಂಖ್ಯೆಯ ಪುನರಾವರ್ತಿತ ಗದ್ಯ, ಪದ್ಯ, ಕವಿಗಳನ್ನು ಓದುತ್ತಿದ್ದಾರೆಯೇ ವಿನಃ ಹೊಸ ಹೊಸ ಸಂಗತಿಗಳು ನಮ್ಮ ವಿದ್ಯಾರ್ಥಿಗಳಿಗೆ ಸಿಗುತ್ತಲೇ ಇಲ್ಲ, ಕಾರಣವೆಂದರೆ ಮತ್ತೆ ಅದೇ ಸಿದ್ಧಾಂತ , ಅಜೆಂಡಾಗಳಿಗೆ ಪೂರಕವಾಗಿಯೇ ಪಠ್ಯ ಪುಸ್ತಕ ರಚನಾ ಸಮಿತಿಗಳನ್ನು ರಚಿಸುತ್ತಾ ಬಂದಿರುವುದನ್ನು ನೋಡಬಹುದು. ಸ್ವತಂತ್ರ ಚಿಂತಕರನ್ನು ಅಕ್ಷರಶಃ ಕಟ್ಟಿಹಾಕಲಾಗುತ್ತಿತ್ತು. ಅಂದರೆ ಇಲ್ಲಿ ಹೊಸತನಕ್ಕೆ ಪ್ರವೇಶವೇ ಇಲ್ಲ. ಹೊಸ ವಿಚಾರಕ್ಕೆ ಪ್ರವೆಶವೇ ಇಲ್ಲ. ಈ ಹಿಂದೆ ಜಿ.ಎಸ್.ಮುಡಂಬಡಿತ್ತಾಯರ ನೇತೃತ್ವದಲ್ಲಿ ಸಾಕಷ್ಟು ಪರಿಣಾಮಕಾರಿಯಾಗುವಂತೆ ರಚಿಸಲಾಗಿದ್ದ ಪಠ್ಯಪುಸ್ತಕವನ್ನು ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಂಪೂರ್ಣವಾಗಿ ಅಳಿಸಿಹಾಕಲಾಗಿತ್ತು. ಭಾರತ, ಭಾರತೀಯತೆ ಎನ್ನುವ ಚಿಂತನೆ ಮಾತ್ರವಲ್ಲ, ಶಬ್ಧದ ಬಗ್ಗೆಯೇ ಅಸಹನೆ ಇರುವ ಈ ಗುಂಪು ಪಠ್ಯಪುಸ್ತಕವನ್ನು ಮಕ್ಕಳ ಮೆದುಳಿಗೆ ವಿಷಪ್ರಾಶನಗೈಯುವ ಸಾಧನದಂತೆ ಬಳಸಿಕೊಂಡಿತ್ತು. ಹೊಸಪಠ್ಯದಲ್ಲಿ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಮಂಡಿಸಿದ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ವಿಚಾರವುಳ್ಳ ಪಠ್ಯಕ್ಕೆ ಇದೇ ಗುಂಪು ತೋರುತ್ತಿರುವ ಅಸಹನೆಯೇ ಅವರ ವಿಷ ಚಿಂತನೆಗೆ ಸಾಕ್ಷಿ. ಆರೆಸ್ಸೆಸ್ಸನ್ನು ವಿರೋಧಿಸುವ ಪೂರ್ವಾಗ್ರಹ ಪೀಡಿತ ಮನಸ್ಸುಗಳಿಗೆ ಪಠ್ಯ ಪುಸ್ತಕದಲ್ಲಿ ಹೆಡಗೇವಾರರ ಹೆಸರು ನೋಡಿದ್ದೇ ತಡ, ತಮ್ಮ ದ್ವೇಷದ ಮಾತುಗಳನ್ನು ಹರಿಯಬಿಟ್ಟರೇ ವಿನಃ ಅರ್ಯಾರೂ ಆ ಲೇಖನದಲ್ಲಿರುವ ಆಕ್ಷೇಪಾರ್ಹ ಸಂಗತಿ ಏನು? ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಗೆ ಅದರಿಂದ ಏನು ತೊಡಕಿದೆ ಎನ್ನುವ ಒಂದು ವಾಕ್ಯದ ವಿಮರ್ಶೆಯನ್ನೂ ವ್ಯಕ್ತಪಡಿಸಲಾಗಲಿಲ್ಲ. ಅಷ್ಟರ ಮಟ್ಟಿಗೆ ಅಸಹನೆಯನ್ನೇ ತುಂಬಿಕೊಂಡಿದ್ದಾರೆ. ಭಾಷೆಯ ಅಸ್ಮಿತೆ, ನಾಡಿನ ಅಸ್ಮಿತೆಯ ಗುರಾಣಿಯನ್ನು ಹಿಡಿಯುವ ಚಿಂತಕರಿಗೆ ಯಾವುದೇ ತರಗತಿಯಲ್ಲಿ, ಯಾವುದೇ ವಿಷಯದಲ್ಲಿ ಕೂಡ ಕಾರ್ಲ್ಮಾರ್ಕ್ಸ್, ಲೆನಿನ್ ವಿಚಾರಗಳನ್ನು ತುಂಬಿಸಿದಾಗ ಇದ್ಯಾವುದೂ ನೆನಪಾಗಿರಲಿಲ್ಲ. ಈ ದೇಶದ ಶಾಲಾ ಕಾಲೇಜು ಪಠ್ಯ ಪುಸ್ತಕಗಳಲ್ಲಿ ಬಹುಶಃ ಅತ್ಯಂತ ಹೆಚ್ಚು ಸೇರಿಕೊಂಡ ವಿಚಾರವಿದ್ದರೆ ಅದು ಕಾರ್ಲ್ ಮಾರ್ಕ್ಸ್ /ಮಾರ್ಕ್ಸ್ವಾದ ಇರಬಹುದು. ಇಷ್ಟಾಗಿಯೂ ಯಾರೊಬ್ಬರೂ ಇದನ್ನು ಅಸಹನೆಯಿಂದ ವಿರೋಧಿಸಲಿಲ್ಲ. ಇಂದಿಗೂ ಸಾಹಿತ್ಯ, ಚರಿತ್ರೆ, ಸಮಾಜಶಾಸ್ತ್ರ ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ಭಾಷಾ ವಿಜ್ಞಾನ, ಕಲೆ, ವಾಣಿಜ್ಯಶಾಸ್ತ್ರ ಹೀಗೆ ಯಾವುದೇ ವಿಷಯದ ಪಠ್ಯಕ್ರಮವನ್ನು ಪರಿಶೀಲಿಸಿದರೂ ಅಲ್ಲಿ ಮಾರ್ಕ್ಸ್ ವಿಚಾರ ಇದ್ದೇ ಇರುತ್ತದೆ. ಹಾಗೆಂದು ಈ ದೇಶದಲ್ಲಿ ಮಾರ್ಕ್ಸ್ವಾದವನ್ನು ಒಪ್ಪದವರೂ ಅದನ್ನು ವಿರೋಧಿಸಿರಲಿಲ್ಲ. ಬಹುಶಃ ಈ ಸಿದ್ಧಾಂತವೇ ಜನರ ನಡುವೆ ಅಸ್ತಿತ್ವ ಕಳೆದುಕೊಂಡು ಕೇವಲ ಪಠ್ಯಪುಸ್ತಕಗಳಲ್ಲಿ ಉಳಿಯುವ ಹಂತದಲ್ಲಿದೆ. ಆದರೆ ಒಂದೇ ಒಂದು ಪಠ್ಯದಲ್ಲಿ ಆರೆಸ್ಸೆಸ್ ಸ್ಥಾಪಕರ ಹೆಸರು ಪ್ರಸ್ತಾಪವಾದಾಗ ಸೋಕಾಲ್ಡ್ ಬೌದ್ಧಿಕ ಲೋಕ ಅಲ್ಲೋಲ ಕಲ್ಲೋಲವಾಗುತ್ತದೆ ಎಂದರೆ ಅವರೆಷ್ಟು ದುರ್ಬಲವಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಮೂಲಕ ಆರೆಸ್ಸೆಸ್ಸನ್ನು ವಿರೋಧಿಸುವುದನ್ನೇ ವೈಚಾರಿಕತೆ ಎಂದುಕೊಂಡವರ ಬಣ್ಣವೂ ಬಯಲಾಗಿದೆ. ಮಾತು ಮಾತಿಗೆ ವೈಚಾರಿಕತೆ, ಬಹುತ್ವ ಚಿಂತನೆ ಎಂದೆಲ್ಲಾ ಜಪಿಸುವ ಈ ಬಳಗಕ್ಕೆ ಈ ವೈಚಾರಿಕತೆಯಲ್ಲಿ, ಬಹುತ್ವದಲ್ಲಿ ಆರೆಸ್ಸೆಸ್ ವಿಚಾರವೂ ಸೇರಬಹುದೆನ್ನುವ ಮುಕ್ತವಾದ ಮನಸ್ಥಿತಿ ಇಲ್ಲವೆಂದಾದ ಮೇಲೆ ಅವರ ವಿಚಾರವಾದ ಎಷ್ಟು ಪೊಳ್ಳುತನದ್ದು ಎನ್ನುವುದು ಅರಿವಾಗುತ್ತದೆ.
ಪ್ರಸ್ತುತ ಪಠ್ಯಪುಸ್ತಕದ ಪರಿಷ್ಕರಣೆಯು ಹೊಸತನಕ್ಕೆ ನಾಂದಿ ಹಾಡಿದೆ. ಈ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ನಾಡಿನ ನೈಜ ವಿಚಾರಗಳನ್ನು, ಸ್ಫೂರ್ತಿಯುತವಾದ ಸಂಗತಿಗಳನ್ನು ನೀಡಲು ಒಂದು ಹೆಜ್ಜೆ ಮುಂದಿಟ್ಟಿದೆ. ಮುಂದಿನ ದಿನಗಳಲ್ಲಿ ಈ ಕ್ರಿಯೆಗೆ ಇನ್ನಷ್ಟು ವೇಗ ಸಿಗುವಂತಾಗಲಿ. ವಸಾಹತುಶಾಹಿ ಕಾಲಘಟ್ಟದ ಪಳೆಯುಳಿಕೆಯಂತಿರುವ ಗುಲಾಮಿತನವನ್ನು ನಿವಾರಿಸಿ, ನಮ್ಮ ನೆಲದ ಮಕ್ಕಳಿಗೆ ನಮ್ಮ ನೆಲದ ಸಂಗತಿಗಳನ್ನೆ ಪಠ್ಯ ರೂಪದಲ್ಲಿ ನೀಡುವ ದಿನಗಳು ಬೇಗ ಬರಲಿ. ಈ ಪಠ್ಯಗಳು ಭವಿಷ್ಯದ ಯುವಪೀಳಿಗೆಯ ಚಿಂತನೆಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಿ. ಪರಕೀಯ ಚಿಂತನೆಗಳಿಂದ ಜಡ್ಡುಗಟ್ಟಿದ ಭಾರತೀಯರ ಚಿತ್ತದ ಶುದ್ಧೀಕರಣಕ್ಕೆ ಪಠ್ಯಗಳ ಶುದ್ಧೀಕರಣವೇ ನಾಂದಿಯಾಗಲಿ.
✍️ ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.