ಗುವಾಹಟಿ: ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ಅಸ್ಸಾಂ ರಾಜ್ಯದಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ( AFSPA) ಶೀಘ್ರದಲ್ಲೇ ಹಿಂತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರೆಸಿಡೆನ್ಸ್ ಕಲರ್ ಅನ್ನು ಅಸ್ಸಾಂ ಪೊಲೀಸರಿಗೆ ಪ್ರದಾನಿಸಿ ಮಾತನಾಡಿದ ಅವರು, ಅಸ್ಸಾಂನಲ್ಲಿ AFSPA ಅಡಿಯಲ್ಲಿನ ಪ್ರದೇಶಗಳನ್ನು ಕಡಿಮೆ ಮಾಡಲಾಗಿದೆ. ರಾಜ್ಯದ ಎಲ್ಲಾ ಪ್ರದೇಶಗಳಿಂದ AFSPA ಅನ್ನು ತೆಗೆದುಹಾಕುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
“1990 ರ ದಶಕದಲ್ಲಿ ಅಸ್ಸಾಂನಲ್ಲಿ AFSPA ಅನ್ನು ಜಾರಿಗೊಳಿಸಲಾಯಿತು, ಅದನ್ನು 7 ಬಾರಿ ವಿಸ್ತರಿಸಲಾಯಿತು. 8 ವರ್ಷಗಳ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ನಂತರ, ರಾಜ್ಯದ 23 ಜಿಲ್ಲೆಗಳನ್ನು AFSPA ಮುಕ್ತಗೊಳಿಸಲಾಯಿತು ಮತ್ತು ಅದನ್ನು ಶೇಕಡಾ 60 ಕ್ಕಿಂತ ಹೆಚ್ಚು ಪ್ರದೇಶದಿಂದ ತೆಗೆದುಹಾಕಲಾಗಿದೆ” ಎಂದಿದ್ದಾರೆ.
ಈಶಾನ್ಯದ ಉಗ್ರಗಾಮಿ ಗುಂಪುಗಳು ಸರ್ಕಾರದೊಂದಿಗೆ ಒಂದರ ಹಿಂದೆ ಒಂದರಂತೆ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿವೆ, ದಾರಿ ತಪ್ಪಿದ್ದ ಯುವಕರು ಮುಖ್ಯವಾಹಿನಿಗೆ ಬರುತ್ತಿದ್ದಾರೆ ಮತ್ತು 7 ದಶಕಗಳ ಹಳೆಯ ಸಮಸ್ಯೆಗಳನ್ನು ಪರಿಹರಿಸಲು ನೆರೆಯ ರಾಜ್ಯಗಳೊಂದಿಗೆ ಸಂವಾದಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಅಸ್ಸಾಂ ಪೊಲೀಸರು ಸಾಂವಿಧಾನಿಕ ಸುವ್ಯವಸ್ಥೆಯನ್ನು ಕಾಪಾಡಲು ಉಗ್ರವಾದದ ಸಮಸ್ಯೆಯ ವಿರುದ್ಧ ದೃಢವಾಗು ನಿಂತರು. ಅವರು ಬಂದೂಕುಗಳನ್ನು ಬಂದೂಕುಗಳಿಂದಲೇ ಎದುರಿಸಿದರು ಮತ್ತು ಯುವಕರನ್ನು ಮುಖ್ಯವಾಹಿನಿಗೆ ತಂದರು. ಕೇಂದ್ರ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪ್ರಯತ್ನದಿಂದಾಗಿ, ಹೆಚ್ಚಿನ ಉಗ್ರಗಾಮಿ ಸಂಘಟನೆಗಳು ಶಾಂತಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂದು ಅವರು ಹೇಳಿದರು.
ಶರಣಾಗತಿ ಮತ್ತು ಮುಖ್ಯವಾಹಿನಿಗೆ ಮರಳಿದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನರ್ವಸತಿ ನೀಡುತ್ತಿವೆ ಎಂದರು.
“ಅಸ್ಸಾಂ ಪೊಲೀಸರಿಗೆ ಭವ್ಯ ಇತಿಹಾಸವಿದೆ ಮತ್ತು ದಂಗೆ, ಗಡಿ ಸಮಸ್ಯೆಗಳು, ಶಸ್ತ್ರಾಸ್ತ್ರ, ಮಾದಕವಸ್ತು ಮತ್ತು ದನಗಳ ಕಳ್ಳಸಾಗಣೆಗಳನ್ನು, ಘೇಂಡಾಮೃಗ ಬೇಟೆ ಮತ್ತು ವಾಮಾಚಾರದಂತಹ ಸಾಮಾಜಿಕ ಸಮಸ್ಯೆಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದೇಶದ ಅಗ್ರಗಣ್ಯ ಪೊಲೀಸ್ ಪಡೆಗಳಲ್ಲಿ ಒಂದಾಗಿ ಹೊರಹೊಮ್ಮಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.