ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್|
ಷೋಡಶೇ ಕೃತವಾನ್ ಭಾಷ್ಯಂ ಸ್ವಾತ್ರಿಂಶೇ ಮುನಿರಭ್ಯಗಾತ್||
ಶ್ರೀ ಶಂಕರಾಚಾರ್ಯರು ಎಂಟು ವರ್ಷದವರಿದ್ದಾಗಲೇ ನಾಲ್ಕೂ ವೇದಗಳನ್ನು ಕಲಿತಿದ್ದರು, ಹನ್ನೆರಡನೆಯ ವಯಸ್ಸಿನಲ್ಲಿ ಸರ್ವಶಾಸ್ತ್ರಗಳನ್ನು ಅರಿತಿದ್ದರು, ಹದಿನಾರನೇ ವಯಸ್ಸಿಗೆ ಭಾಷ್ಯವನ್ನು ಬರೆದು ಮೂವತ್ತನೇ ವಯಸ್ಸಿಗಾಗಲೇ ಇಹಲೋಕಯಾತ್ರೆ ಪೂರೈಸಿದರು, ಅಂತಹ ಮಹಾನ್ ತತ್ವಜ್ಞಾನಿ ಶ್ರೀ ಶಂಕರರು.
ಶಂಕರರ ಅವತಾರ ಅದು ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಅವತರಿಸಿದ್ದು, ಭಾರತದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿ ಧರ್ಮ ಪ್ರಚಾರವನ್ನು ಪ್ರಾರಂಭಿಸಿದರು ಶಂಕರರು.
ಕೇವಲ 32 ವರ್ಷಗಳಲ್ಲಿ ಅಸಾಧ್ಯವಾದುದನ್ನು ಸಾಧಿಸಿದ ಕೀರ್ತಿ ಶಂಕರರದು, ಸನಾತನ ಧರ್ಮಕ್ಕೋಸ್ಕರ ದೇಶವನ್ನು ಕಾಲ್ನಡಿಗೆಯಲ್ಲೇ 2 ಬಾರಿ ಕ್ರಮಿಸಿದ್ದಲ್ಲದೇ ಸೌಂದರ್ಯ ಲಹರಿ, ಶಿವಾನಂದ ಲಹರಿ, ನಿರ್ವಾಣ ಶಾಲ್ಕಂ, ಮನೀಷ ಪಂಚಕಂ ಮುಂತಾದ 72 ಭಕ್ತಿ ಮತ್ತು ಧ್ಯಾನ ಗೀತೆಗಳನ್ನು ರಚಿಸಿದ್ದಾರೆ. ಅವರು ಬ್ರಹ್ಮ ಸೂತ್ರಗಳು, ಭಗವದ್ಗೀತೆ ಮತ್ತು 12 ಪ್ರಮುಖ ಉಪನಿಷತ್ತುಗಳು ಸೇರಿದಂತೆ ಪ್ರಮುಖ ಧರ್ಮಗ್ರಂಥಗಳಿಗೆ 18 ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅದ್ವೈತ ವೇದಾಂತ ತತ್ತ್ವಶಾಸ್ತ್ರದ ಮೂಲಭೂತ ವಿಷಯಗಳ ಬಗ್ಗೆ ಅವರು 23 ಪುಸ್ತಕಗಳನ್ನು ಬರೆದಿದ್ದಾರೆ.
ಚತುರಾಮ್ನಾಯ ಪೀಠದ ಮೂಲಕ ಸನಾತನ ಧರ್ಮದ ಪುನರುತ್ಥಾನ :
ಭಾರತದಲ್ಲಿ ಸನಾತನ ಧರ್ಮ ಪರಂಪರೆಗೆ, ಅದ್ವೈತ ಸಿದ್ಧಾಂತಕ್ಕೆ ಎಂದಿಗೂ ಚ್ಯುತಿ ಬರಬಾರದು; ಇದು ಗಂಗಾಪ್ರವಾಹದಂತೆ ಅವಿಚ್ಛಿನ್ನವಾಗಿ ನಡೆದು ಬರಬೇಕೆಂಬ ಉದ್ದೇಶದಿಂದ ಶ್ರೀಶಂಕರರು ಭಾರತ ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪನೆ ಮಾಡಿದರು. ಜನರಿಗೆ ಆಯಾ ಕಾಲದಲ್ಲಿ ಸನಾತನ ಧರ್ಮವನ್ನು ಬೋಧಿಸಿ ಧಾರ್ಮಿಕರನ್ನಾಗಿಸುವುದು ಈ ಪೀಠದ ಅಧಿಪತಿಗಳ ಕರ್ತವ್ಯವೆಂದು ಅವರು ತಿಳಿಸಿದರು. ಪ್ರತಿಯೊಂದು ಪೀಠಕ್ಕೂ ಒಂದೊಂದು ವೇದವನ್ನು ಹಾಗೂ ಆ ವೇದದಲ್ಲಿ ಉಕ್ತವಾದ ಮಹಾವಾಕ್ಯವನ್ನು ವಿಧಿಸಿದ್ದರಿಂದ ಈ ಪೀಠಗಳಿಗೆ ಆಮ್ನಾಯಪೀಠಗಳೆಂದು ಹೆಸರು.
ಶ್ರೀಶಂಕರರು ದಕ್ಷಿಣಾಮ್ನಾಯ ಶ್ರೀಶಾರದಾಪೀಠವನ್ನು ಕರ್ನಾಟಕದ ಶೃಂಗೇರಿಯಲ್ಲೂ, ಪೂರ್ವಾಮ್ನಾಯ ಗೋವರ್ಧನಪೀಠವನ್ನು ಒರಿಸ್ಸಾದ ಪುರಿಯಲ್ಲೂ, ಪಶ್ಚಿಮಾಮ್ನಾಯ ಕಾಳಿಕಾಪೀಠವನ್ನು ಗುಜರಾತ್ನ ದ್ವಾರಕೆಯಲ್ಲೂ, ಉತ್ತರಾಮ್ನಾಯ ಜ್ಯೋತಿಷ್ಪೀಠವನ್ನು ಉತ್ತರಾಂಚಲದ ಬದರಿಯಲ್ಲೂ ಸ್ಥಾಪಿಸಿದರು. ಈ ಪೀಠಗಳಿಗೆ ಕ್ರಮವಾಗಿ ಸುರೇಶ್ವರಾಚಾರ್ಯ, ಹಸ್ತಾಮಲಕಾಚಾರ್ಯ, ಪದ್ಮಪಾದಾಚಾರ್ಯ, ತೋಟಕಾಚಾರ್ಯರನ್ನು ಅಧಿಪತಿಗಳನ್ನಾಗಿ ನೇಮಿಸಿದರು. ಈ ಪೀಠಗಳಲ್ಲಿ ಪೂರ್ವ, ಪಶ್ಚಿಮ ಪೀಠಗಳನ್ನು ಸಮುದ್ರತೀರದಲ್ಲೂ, ಉತ್ತರ ದಕ್ಷಿಣ ಪೀಠಗಳನ್ನು ಪರ್ವತಪ್ರದೇಶದಲ್ಲೂ ಸ್ಥಾಪಿಸಿರುವುದು ಒಂದು ವಿಶಿಷ್ಟವಾದ ವಿಷಯವಾಗಿದೆ.
ರಾಷ್ಟ್ರದ ಏಕೀಕರಣಕ್ಕೆ ಶಂಕರಾಚಾರ್ಯರ ಕೊಡುಗೆ
ಶಂಕರಾಚಾರ್ಯರು ಕೇವಲ ಕಾಲ್ನಡಿಗೆಯಿಂದ ಭಾರತಾದ್ಯಂತ ಸಂಚರಿಸಿ, ಆಧ್ಯಾತ್ಮಿಕ ತತ್ತ್ವವನ್ನು ಪ್ರಚಾರಮಾಡಿ, ಪರಸ್ಪರ ವಿರೋಧವೆನಿಸಿದ ಭಿನ್ನ ಮತಗಳ ಹೊಂದಾಣಿಕೆಯನ್ನು ತೋರಿಸಿ, ಮತದ ಹೆಸರಿನಲ್ಲಿ ನಡೆದಿದ್ದ ಅನಪೇಕ್ಷಿತ ದುಷ್ಟಾಚಾರಗಳನ್ನು ನಿರ್ಮೂಲನೆ ಮಾಡಿ, ಅಂಧ ಆಚಾರಗಳನ್ನು ವಿರೋಧಿಸಿ, ನೈಜ ಆಧ್ಯಾತ್ಮಿಕ ಜ್ಞಾನಕ್ಕೆ ದಾರಿ ಮಾಡಿ ಕೊಟ್ಟರು. ಅವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವು ಇಂದಿಗೂ ಭಾರತದ ಪ್ರಭಾವಶಾಲಿ ಸಿದ್ಧಾಂತವಾಗಿದೆ. ಅಷ್ಟೇ ಅಲ್ಲ, ಇಂದು ವಿಶ್ವದಾದ್ಯಂತ ಬಹಳಷ್ಟು ಜನರು ಈ ಸಿದ್ಧಾಂತದಿಂದ ಪ್ರಭಾವಿತರಾಗಿದ್ದಾರೆ.
ಒಂಬತ್ತನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಶಾರದಾ ಪೀಠ ಎಂಬುದೊಂದಿತ್ತು ಅದನ್ನು ಸರ್ವಜ್ಞ ಪೀಠ ಎಂದೂ ಕರೆಯಲಾಗುತ್ತಿತ್ತು. ಆಗಿನ ಕಾಲಕ್ಕೇ ಮಹಾನ್ ಘಟಾನುಘಟಿ ಪಂಡಿತರು ಎನಿಸಿಕೊಂಡಿದ್ದವರೆಲ್ಲರೂ ಅಲ್ಲಿ ಆಶ್ರಯ ಪಡೆದಿದ್ದರು. ಈ ಸರ್ವಜ್ಞ ಪೀಠಕ್ಕೆ ಅಧಿಪತಿಯಾಗ ಬೇಕು ಎಂದೆಣಿಸುವವರು ಮೊದಲು ಅಲ್ಲಿದ್ದ ಈ ಎಲ್ಲಾ ಪಂಡಿತರೊಂದಿಗೆ ವಾದ ಮಾಡಿ ಅವರನ್ನು ಸೋಲಿಸಿದಲ್ಲಿ ಮಾತ್ರವೇ ಆ ಪೀಠವನ್ನು ಏರುವ ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದರು. ಅಂತಹ ಸರ್ವಜ್ಞ ಪೀಠಕ್ಕೆ ನಾಲ್ಕೂ ದಿಕ್ಕುಗಳಿಗೆ ನಾಲ್ಕು ಬಾಗಿಲಿದ್ದು ದಕ್ಷಿಣ ಭಾರತದಿಂದ ಅದುವರೆವಿಗೂ ಯಾವ ಶ್ರೇಷ್ಠ ಪಂಡಿತರೂ ಬಾರದೇ ಇದ್ದುದ್ದರಿಂದ ದಕ್ಷಿಣದ ಬಾಗಿಲು ತೆರೆದೇ ಇರಲಿಲ್ಲವಂತೆ. ಶಂಕರಾಚಾರ್ಯರು ದಕ್ಷಿಣದ ಬಾಗಿಲನ್ನು ತೆರೆಸಿ ಅದರ ಮೂಲಕವೇ ಪ್ರವೇಶ ಮಾಡಿ, ಎಲ್ಲರನ್ನೂ ವಾದದಲ್ಲಿ ಮಣಿಸಿ ಶಾರಾದಾ ದೇವಿಯ ನಂತರ ಸರ್ವಜ್ಞ ಪೀಠವನ್ನು ಏರಿದರು.
ಹೀಗೆ ಕಾಲಟಿಯಿಂದ ಪ್ರಾರಂಭವಾಗಿ ಕಾಶ್ಮೀರದ ವರೆಗೆ ಶ್ರೀ ಶಂಕರರು ಸನಾತನ ಧರ್ಮವನ್ನು ಎತ್ತಿ ಹಿಡಿಯುವ ಅನನ್ಯ ಕೆಲಸವನ್ನು ಶ್ರೀ ಶಂಕರರು ಮಾಡಿದರು.
✍️ ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.