ದ್ವೀಪ ರಾಷ್ಟ್ರದ ಮಕ್ಕಳಿಗೆ ಪರೀಕ್ಷಾ ಸಮಯ, ಆದರೆ ಪರೀಕ್ಷೆ ಬರೆಯಲು ಉತ್ತರ ಪತ್ರಿಕೆಗಳಿಲ್ಲ! ಪರೀಕ್ಷಾ ಪತ್ರಿಕೆ ಅಭಾವದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಆಹಾರ ಸಾಮಾಗ್ರಿಗಳು, ದಿನಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಪೆಟ್ರೋಲ್, ಡಿಸೆಲ್ ಬೆಲೆಗಳು ಗಗನಕ್ಕೇರಿವೆ. ಶ್ರೀಲಂಕಾದಲ್ಲಿ ಪಡಿತರ ವ್ಯವಸ್ಥೆಯೂ ನೆಲಕ್ಕಚ್ಚಿದೆ. ಹಲವು ಅಂಗಡಿ ಮುಂಗಟ್ಟುಗಳ ಮುಂದೆ ಹಿರಿಯರ ಆದಿಯಾಗಿ ಎಲ್ಲರೂ ಸಾಲುಗಟ್ಟಿ ನಿಂತಿದ್ದಾರೆ. ಪೆಟ್ರೋಲ್ ಪಂಪುಗಳ ಎದುರು ಸಾಲುಗಟ್ಟಿ ನಿಂತಿರುವ ಜನರನ್ನು ನಿಯಂತ್ರಿಸಲು ಸೈನಿಕರನ್ನು ನಿಯೋಜಿಸಲಾಗಿದೆ. ದಿನಸಿ ವ್ಯಾಪಾರಿಗಳ ಹೊರತು ಉಳಿದೆಲ್ಲ ವ್ಯಾಪಾರಿಗಳು ಅಕ್ಷರಶಃ ನಲುಗಿದ್ದಾರೆ. ಮಕ್ಕಳ ಪೋಷಣೆಗೆ ಅತಿ ಅವಶ್ಯವಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಎರಡು ವರ್ಷಗಳ ಹಿಂದೆ ಭರವಸೆಯ ಬೆಳಕು ಎನಿಸಿಕೊಂಡಿದ್ದ ರಾಜಪಕ್ಸೆಯರ ಆಡಳಿತ ಶ್ರೀಲಂಕಾದ ಆರ್ಥಿಕತೆಯನ್ನು ಅಕ್ಷರಶಃ ಹಾಳು ಮಾಡಿದೆ. ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು ರಾಜಪಕ್ಸೆಯರ ಲಂಕಾ ಮತ್ತು ಚೈನಾ ಕೇಂದ್ರಿತ ಆರ್ಥಿಕ ನೀತಿ!
ರಾಜಕೀಯವಾಗಿ ಕೌಟುಂಬಿಕ ವಂಶ ರಾಜಕಾರಣದ ಭಾಗವಾಗಿಯೂ ಶ್ರೀಲಂಕಾದ ವರ್ತಮಾನವನ್ನು ಅವಲೋಕಿಸಬಹುದಾಗಿದ್ದು, ರಾಜಪಕ್ಸೆ ಕುಟುಂಬದ ಆರು ಮಂದಿ ವಿವಿಧ ಮಂತ್ರಿಗಿರಿಯನ್ನು ಅಲಂಕರಿಸಿದ್ದಾರೆ. ಗೋಟಬಯಾ ರಾಷ್ಟ್ರಾಧ್ಯಕ್ಷರಾಗಿದ್ದರೆ, ಮಹಿಂದಾ ಪ್ರಧಾನಿ, ಪುತ್ರ ನಮಲ್ ಕ್ರೀಡಾ ಸಚಿವ, ದೊಡ್ಡಣ್ಣ ಬಸಿಲ್ ಫೈನಾನ್ಸ್ ಮಿನಿಸ್ಟ್ರು. ಇನ್ನೋರ್ವ ಪುತ್ರ ಪ್ರಧಾನಿಯ ಮುಖ್ಯ ಸಲಹೆಗಾರ. ವರ್ಷಗಳ ಹಿಂದೆ ಇದೇ ರಾಜಪಕ್ಸೆ ಆಡಳಿತ ಚೀನಾಕ್ಕೆ ಹಂಬನ್ತೋಟ ಬಂದರನ್ನು 99 ವರ್ಷಗಳ ತನಕ ಲೀಸ್ ಗೆ ಬಿಟ್ಟು ಕೊಟ್ಟಿತ್ತು. ಮಾತ್ರವಲ್ಲ ಶ್ರೀಲಂಕಾದ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಚೀನಾ ಬೃಹತ್ ಹೂಡಿಕೆ ಮಾಡಿದೆ. ಅಂದು ಮಾಡಿರುವ ಹೂಡಿಕೆ ಹಣಕ್ಕೆ ಬೇಡಿಕೆ ಇಟ್ಟಿರುವ ಚೀನಾ, ತಾನು ಕಳಿಸಿದ ನಿರುಪಯೋಗಿ ಸಾವಯವ ಗೊಬ್ಬರದ ವಾಪಾಸಾತಿಯಲ್ಲೂ ಯಾವುದೇ ಚೌಕಾಸಿ ಮಾಡಿಲ್ಲ. ತಾನು ಕಳುಹಿಸಿದ್ದ ಗೊಬ್ಬರದ ಸಂಪೂರ್ಣ ಹಣವನ್ನು ತನಗೆ ನೀಡಬೇಕೆಂದು ಪಟ್ಟು ಹಿಡಿದದ್ದು ಮಾತ್ರವಲ್ಲ ಆ ಹಣವನ್ನು ಪಡೆದಾಗಿದೆ. ಈ ಮಧ್ಯೆ ಶ್ರೀಲಂಕಾದ ಆಡಳಿತ ವ್ಯವಸ್ಥೆ, ಆರ್ಥಿಕ ನೀತಿ ಸರಿಯಾದ ದಿಕ್ಕಿನಲ್ಲಿ ಸಾಗದೆ ಇರುವುದು ಅಲ್ಲಿನ ಪ್ರಸ್ತುತ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕ ಪರಿಣಾಮ ನೆಲಕ್ಕಚ್ಚಿದ ಪ್ರವಾಸೋದ್ಯಮ, ಚಹಾ ಮತ್ತು ಜವಳಿಯ ರಫ್ತಿಗೆ ಬಿದ್ದ ಹೊಡೆತ, ಅಂತಾರಾಷ್ಟ್ರೀಯ ವ್ಯಾಪಾರದ ಕುಸಿತದ ಜೊತೆ ಜೊತೆಯಲ್ಲಿ ಗೋಟಬಯಾ ರಾಜಪಕ್ಸೆ ಕಂಡ ಸಾವಯವ ಕೃಷಿ ಉತ್ಪಾದಕತೆಯ ಕನಸು ಮತ್ತು ಆ ನಿಟ್ಟಿನಲ್ಲಿ ಕೈಗೊಂಡ ಕೆಲ ತಪ್ಪು ನಿರ್ಧಾರಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಮತ್ತೂ ಬಿಗಡಾಯಿಸುವಂತೆ ಮಾಡಿತು. ಈ ನಿರ್ಧಾರದಿಂದಲೇ ಶ್ರೀಲಂಕಾ ಚೀನಾದಿಂದ ಹಲವು ಹಡಗುಗಳಲ್ಲಿ ಸಾವಯವ ಗೊಬ್ಬರವನ್ನು ತರಿಸಿತು, ಬಂದರುಗಳಲ್ಲಿ ಲಂಗರು ಹಾಕಿದ್ದ ಈ ಹಡಗುಗಳಲ್ಲಿನ ಗೊಬ್ಬರದಲ್ಲಿ ಕೀಟಬಾಧೆಯಿದೆ, ಇದು ಲಂಕಾದ ಜೀವವೈವಿಧ್ಯಕ್ಕೆ ಅಪಾಯ ಎಂಬ ಪ್ರಯೋಗಶಾಲೆಯ ವೈಜ್ಞಾನಿಕ ಕಾರಣ, ಅದನ್ನು ಪುನಃ ಚೀನಾಕ್ಕೆ ಕಳುಹಿಸಲಾಗಿತ್ತು. ಆದರೆ ಗೊಬ್ಬರದ ಪೂರ್ಣ ಮೊತ್ತವನ್ನು ಚೀನಾಕ್ಕೆ ಪಾವತಿಸಬೇಕಾಗಿ ಬಂತು. ಗೋಟಬಯಾರ ಅವೈಜ್ಞಾನಿಕ, ಏಕಾಏಕಿ ನಿರ್ಧಾರದಿಂದ ಹೈರಾಣಾದ ಭತ್ತ ಕೃಷಿಕರಿಗೆ ಮತ್ತೊಂದೆಡೆ ಕೀಟನಾಶಿನಿ, ರಸಗೊಬ್ಬರ ಸಿಗದೆ ಬೆಳೆಯೂ ಕೈ ಕೊಟ್ಟಿತು. ಕಳೆದ ಒಂದು ತಿಂಗಳಲ್ಲಿ ಶ್ರೀಲಂಕಾದ ಈರ್ವರು ಸಚಿವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಬಸಿಲ್ ರಾಜಪಕ್ಸೆ ಕಳೆದ ವಾರ ಪ್ರಧಾನಿ ಮೋದಿ ಭೇಟಿ ಮಾಡಿದ್ದು, ಭಾರತದ ಸಹಾಯವನ್ನು ಯಾಚಿಸಿದ್ದಾರೆ. ಶ್ರೀಲಂಕಾದ ಪ್ರಸ್ತುತ ಆರ್ಥಿಕ ಅಧಪತನದಿಂದ ಹೈರಾಣಾದ ಜನಸಾಮಾನ್ಯರು ಸರಕಾರದ ವಿರುದ್ಧ ವಿವಿದೆಡೆ ಪ್ರತಿಭಟನೆಗಳಿದಿದ್ದಾರೆ. ಭಾರತ ಈಗಾಗಲೇ 2.4 ಬಿಲಿಯನ್ ಡಾಲರ್ ಸಹಾಯವನ್ನು ಶ್ರೀಲಂಕಾಕ್ಕೆ ನೀಡಿದೆ.
ಲಂಕೆಯಲ್ಲಿ ಹಣದುಬ್ಬರ ಹೆಚ್ಚಿದೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ, ವಿದೇಶಿ ವಿನಿಮಯ ಬರಿದಾಗಿದೆ, ಐಎಂಎಫ್ ಮೂಲಕ ಆರ್ಥಿಕ ಪುನಶ್ಚೇತನದ ದಾರಿಯೂ ಮುಚ್ಚಿದೆ. ಭತ್ತದ ಕಣಜ ಎಂಬತ್ತಿದ್ದ ಲಂಕಾದಲ್ಲಿ ಭತ್ತದ ಫಸಲು 25% ದಷ್ಟು ಕುಂಟಿತವಾಗಿದೆ. ಈ ಕಾರಣದಿಂದ ಅಕ್ಕಿಯ ಬೆಲೆಯೂ ಗಗನಕ್ಕೇರಿದೆ. ಅಡುಗೆ ಅನಿಲದ ಬೆಲೆ 4000 ಲಂಕನ್ ರೂ. ಗೇರಿದೆ. ಕೃಷಿಕರ ವರಮಾನ 33% ಇಳಿದಿದೆ. ಈ ಮಧ್ಯೆ ತಾನು ಮಾಡಿದ ತಪ್ಪನ್ನು ಸರಿಪಡಿಸುವ ಭರದಲ್ಲಿ 10 ಲಕ್ಷ ಭತ್ತ ಕೃಷಿಕರಿಗೆ ತಲಾ 4000 ಲಂಕನ್ ರೂ.ಗಳನ್ನು ನೀಡುವ ಬಗ್ಗೆ ಅಲ್ಲಿನ ಸರಕಾರ ಘೋಷಿಸಿದೆ. ಮಾತ್ರವಲ್ಲ ರೈತರಿಗೆ 200 ಮಿಲಿಯನ್ ಡಾಲರ್ ಸಬ್ಸಿಡಿ ನೀಡುವ ಬಗ್ಗೆಯೂ ಈ ಹಿಂದೆಯೇ ಘೋಷಿಸಲಾಗಿದೆ. ಆಹಾರದ ಸಾಮಾಗ್ರಿಗಳ ಬೆಲೆ ಹೆಚ್ಚಾಗಿ ಆಹಾರದುಬ್ಬರ 22% ಕ್ಕೆ ತಲುಪಿದೆ. ಗಾರ್ಮೆಂಟ್, ಟೀ ಎಸ್ಟೇಟುಗಳಲ್ಲಿನ ಕಾರ್ಮಿಕರಿಗೆ ಕೆಲಸವಿಲ್ಲದಾಗಿದೆ. ರಫ್ತು ಕುಸಿತ, ಪ್ರವಾಸೋದ್ಯಮದ ಕುಸಿತದ ಪರಿಣಾಮ ಶ್ರೀಲಂಕಾ ಚಾರಿತ್ರಿಕ ಆರ್ಥಿಕ ಅಧೋಗತಿಗೆ ತಲುಪಿದೆ. ಇವೆಲ್ಲವನ್ನು ಗಮನಿಸಿರುವ ಭಾರತ ಅತ್ಯವಶ್ಯ ಆಹಾರ ಸಾಮಾಗ್ರಿಗಳನ್ನು ರವಾನಿಸಿದೆ, ತ್ರಿಂಕಮಾಲಿಯ ಇಂಡಿಯನ್ ಆಯಿಲ್ ಡಿಪೋಗೆ ಸಾಕಷ್ಟು ಇಂಧನವನ್ನು ಪೂರೈಸಿದೆ. ರೈತರಿಗೆ ಅತಿ ಅಗತ್ಯವಾದ ನ್ಯಾನೋ ಯೂರಿಯಾ ಸಹಿತ ಕೆಲ ರಸಗೊಬ್ಬರಗಳನ್ನು ಕಳುಹಿಸಿದೆ. ಬೇಡಿಕೆಯ ಮೇರೆಗೆ ಪೊಟಾಶಿಯಂ ಕ್ಲೋರೈಡ್ ಕೂಡಾ ರವಾನೆಯಾಗಿದೆ. ಈ ಮಧ್ಯೆ ಆರ್ಥಿಕ ಅಧಃಪತನದ ಕಾರಣ ಜಾಫ್ನಾ ಭಾಗದ ಶ್ರೀಲಂಕನ್ ತಮಿಳರು ರಾಮೇಶ್ವರಂ ತಲುಪಿದ್ದಾರೆ.
ಒಟ್ಟಿನಲ್ಲಿ ಎಲ್.ಟಿ.ಟಿ.ಇ ಸದೆಬಡಿಯುವಲ್ಲಿ ದಿಟ್ಟತನ ತೋರಿದ್ದ ರಾಜಪಕ್ಸೆ ಆರ್ಥಿಕ ಸಂದಿಗ್ದತೆ ಮೆಟ್ಟಿನಿಲ್ಲುವಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದನ್ನು ಕಾದು ನೋಡಬೇಕು. ಯಾಕೆಂದರೆ ಕಾಲ ಮಿಂಚಿಲ್ಲ. ಭರವಸೆಯ ಬೆಳಕಾಗಿ ಮುಂಗಾರು ಅಂಚಿನಲ್ಲಿದೆ! ಹೀಗೆ ಹಲವು ಕಾರಣಗಳಿಂದ ಮುಂದೆ ರಾಜಪಕ್ಸೆಯರಿಗೆ ಚೀನಾ ಸನಿಹತೆಗಿಂತ ಭಾರತದ ಆಪ್ತತೆ ಒಳಿತು ಎನಿಸಲೂಬಹುದು! ಶ್ರೀಲಂಕಾ ಸದ್ಯದ ಆರ್ಥಿಕ ದುಸ್ಥಿತಿಗೆ ಹೇಗೆ ಆರ್ಥಿಕ ನೀತಿಗಳು ಕಾರಣವಾಗಿದೆಯೋ ಅದೇ ರೀತಿ ಜಾಗತಿಕ ಸ್ಥಿತಿಗತಿಗಳು ಅಲ್ಲಿನ ಅರ್ಥವ್ಯವಸ್ಥೆಯ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ದುಷ್ಪರಿಣಾಮವನ್ನು ಬೀರಿವೆ. ದ್ವೀಪರಾಷ್ಟ್ರದಲ್ಲಿ ನಡೆದ ಈಸ್ಟರ್ ಬಾಂಬ್ ದಾಳಿಯ ನಂತರ ಲಂಕಾದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಆ ನಂತರ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ವರ್ಷದ ಎಲ್ಲಾ ದಿನಗಳಕ್ಕೂ ಕಿಕ್ಕಿರಿದು ತುಂಬಿಕೊಳ್ಳುತ್ತಿದ್ದ ಸಿರಿಗಿರಿಯಾದಂತಹ ಪ್ರವಾಸಿತಾಣ ಪ್ರವಾಸಿಗರಲಿಲ್ಲದೆ ಭಣಗುಟ್ಟುತ್ತಿತ್ತು. ಲಂಕಾದ ಪ್ರಸಿದ್ಧ ಸಮುದ್ರ ಕಿನಾರೆಗಳು, ತಾಣಗಳು, ಐತಿಹಾಸಿಕ ಬೌದ್ಧ ವಿಹಾರಗಳು ಬಿಕೋ ಎನ್ನುತ್ತಿದ್ದವು. ಈಸ್ಟರ್ ಬಾಂಬಿಂಗ್ ಆಂತರಿಕ ಕಾನೂನು ವ್ಯವಸ್ಥೆಯನ್ನು ಮತ್ತಷ್ಟೂ ಗಟ್ಟಿಗೊಳಿಸಲು ಕಾರಣವಾದರೂ, ಪ್ರವಾಸಿ ಆರ್ಥಿಕತೆಯಲ್ಲಿ ಲಂಕಾ ಸೋತಿತು. ಈಸ್ಟರ್ ಬಾಂಬಿಂಗ್ ನಂತರ ಲಂಕಾದಲ್ಲಿ ಬುರ್ಕಾ ನಿಷೇಧವಾದದ್ದು ದೊಡ್ಡ ಸುದ್ದಿಯಾಯಿತು! ಆ ನಂತರದಲ್ಲಿ ಜಗತ್ತಿನ ವಿವಿದೆಡೆ ಹಬ್ಬಿದ ಕೊರೊನಾ ಸಾಂಕ್ರಾಮಿಕವೂ ಸ್ಥಳೀಯ ಆರ್ಥಿಕತೆಯಲ್ಲಿ ತೊಂದರೆ ಉಂಟು ಮಾಡುವ ಜೊತೆಜೊತೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯನ್ನು ಮತ್ತಷ್ಟೂ ಕ್ಷೀಣಿಸುವಂತೆ ಮಾಡಿಬಿಟ್ಟಿತು. ಪ್ರವಾಸೋದ್ಯಮ ಕ್ಷೇತ್ರದ ಮೇಲಿನ ಅಡ್ಡ ಪರಿಣಾಮ, ಟೀ ಉತ್ಪಾದನೆ ಮತ್ತು ರಫ್ತಿನಲ್ಲೂ ಆದ ವ್ಯತ್ಯಯವೂ ಪ್ರಸ್ತುತ ಲಂಕಾದ ಆರ್ಥಿಕ ಅಧಃಪತನಕ್ಕೆ ಪ್ರಮುಖ ಕಾರಣವಾಗಿದೆ. ಹಲವು ಭರವಸೆಗಳನ್ನು ನೀಡಿ ಆಡಳಿತಕ್ಕೇರಿದ ರಾಜಪಕ್ಸೆಯರ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ ಟ್ಯಾಕ್ಸ್ ಕಟ್ ಮಾಡಿ ಜನರ ಮೊಗದಲ್ಲಿ ನಗುವನ್ನು ನೋಡ ಬಯಸಿತು. ಯಾವುದೇ ಆರ್ಥಿಕ ಸಲಹೆಗಾರರ ಅನುಮತಿ ಯಾ ದೂರದರ್ಶಿ ನಡೆ ಇಲ್ಲದೆ ಮಾಡಿದ ಈ ಕಾರ್ಯದಿಂದ ದೇಶದ ಖಜಾನೆ/ಬೊಕ್ಕಸಕ್ಕೂ 30% ದಷ್ಟು ನಷ್ಟವಾಯಿತು. ಕೊರೊನಾ ಸಾಂಕ್ರಾಮಿಕ, ಕುಗ್ಗಿದ ಪ್ರವಾಸೋದ್ಯಮ ಕ್ಷೇತ್ರ, ನೆಲಕ್ಕಚ್ಚಿದ ಉದ್ಯಮ, ತಳಹಿಡಿದ ಉತ್ಪನ್ನಗಳ ರಫ್ತುವಿನಿಂದ ಸರಕಾರ ಕಂಗಾಲಾಯಿತು. ಇಂದು ಲಂಕಾದ ರಫ್ತು 12 ಬಿಲಿಯನ್ ಡಾಲರ್ ಗಿಳಿದರೆ, ಆಮದು ಮಾಡಿಕೊಳ್ಳಬೇಕಾದ ಅಗತ್ಯ ವಸ್ತುಗಳ ಸರಾಸರಿ ಮೌಲ್ಯ 22 ಬಿಲಿಯನ್ ಡಾಲರ್ ಗೆ ಏರಿದೆ. ಇಲ್ಲಿ 10 ಬಿಲಿಯನ್ ಡಾಲರ್ ಅಂತರವಿದೆ. ಈ ವ್ಯತ್ಯಾಸವೇ ಲಂಕಾದ ಆರ್ಥಿಕ ದುಸ್ಥಿತಿಗೆ ಕಾರಣ.
ಈ ಮಧ್ಯೆ ಮಹಿಂದಾ ರಾಜಪಕ್ಸೆ ನೆಚ್ಚಿದ್ದ ಚೀನಾ ನೀತಿ ಲಂಕಾದ ಗಾಯಕ್ಕೆ ಬರೆ ಎಳೆದಿದೆ. ಲಂಕಾದ ಆರ್ಥಿಕ ಆಘಾತದ ಮಧ್ಯೆ ಚೀನಾ ತಾನು ಹೂಡಿಕೆ ಮಾಡಿರುವ ಹಣವನ್ನು ನೀಡಿ, ತಾನು ನೀಡಿರುವ ಸಾಲವನ್ನು ಮರುಪಾವತಿಸಿ ಎಂದು ದುಂಬಾಲು ಬಿದ್ದಿದೆ. ಹಂಬನ್ತೋಟ ಬಂದರು ಕಾಮಗಾರಿ ಎಗ್ಗಿಲ್ಲದೆ ಸಾಗಿ, ಮಿನಿ ಚೈನೀಸ್ ಕಾಲನಿಯಾಗಿದ್ದು ಸ್ಥಳೀಯರು ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ನಿರ್ಮಾಣಗೊಂಡ ಬೃಹತ್ ಕೈಗಾರಿಕಾ ಸಂಕೀರ್ಣಕ್ಕೂ ಚೀನಾ ಹೂಡಿಕೆ ಇದೆ. ಬೃಹತ್ ವ್ಯಾಪಾರಿ ಲಕ್ಷ್ಯವನ್ನು ಹೊತ್ತಿರುವ ಚೀನಾ ಹಿಂದೂ ಮಹಾಸಾಗರದ ಮೂಲಕ ಐರೋಪ್ಯ ರಾಷ್ಟ್ರಗಳನ್ನು ಸಂಪರ್ಕವೀಯುವ ಸಿಲ್ಕ್ ರೂಟ್ ಯೋಜನೆಯ ಭಾಗವಾಗಿಯೂ ಚೀನಾದ ನಡೆಯನ್ನು ವಿಶ್ಲೇಷಿಸಬಹುದಾಗಿದೆ. ಸಂಕಷ್ಟದ ಮಧ್ಯೆ ಸಹಾಯಕ್ಕೆ ಯಾಚಿಸಿದರೆ ಬೆನ್ನು ತೋರಿದ ಚೀನಾದ ನಡೆ, ಚೀನಾದ ಆರ್ಥಿಕ ದಬ್ಬಾಳಿಕೆ ಲಂಕಾಕ್ಕೆ ನಿಧಾನವಾಗಿ ಅರ್ಥವಾಗತೊಡಗಿದೆ. ಈ ಕಾರಣಕ್ಕೆ ಭಾರತಕ್ಕೆ ಆಗಮಿಸಿದ ಲಂಕಾದ ಈರ್ವರು ಸಚಿವರು ಸಂಕಷ್ಟದ ಮಧ್ಯೆ ನಿಟ್ಟಿಸಿರು ಬಿಟ್ಟಿದ್ದಾರೆ. ಶತಮಾನಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಹತ್ತಿರವಿರುವ ಭಾರತವೇ ತನ್ನ ನಿಜವಾದ ಸನ್ಮಿತ್ರ ಎಂಬುದು ಲಂಕಾಕ್ಕೆ ನಿಧಾನವಾಗಿ ಮನವರಿಕೆಯಾಗಿದೆ. ಭಾರತ-ಶ್ರೀಲಂಕಾದ ಮಧ್ಯೆಯೂ ಹಲವು ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಕೆಲ ತಿಂಗಳ ಹಿಂದೆ ಬುದ್ಧ ಸರ್ಕ್ಯೂಟ್ ಭಾಗವಾಗಿ ನಿರ್ಮಾಣಗೊಂಡ ಕುಶಿನರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ಲಂಕಾದ ಸಚಿವ ನಮಲ್ ರಾಜಪಕ್ಸ ಸಹಿತ ಬೌದ್ಧ ಭಿಕ್ಷುಗಳ ಗಣ ಭಾರತಕ್ಕೆ ಆಗಮಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಆಮಂತ್ರಿತ ಎಲ್ಲಾ ಬಿಕ್ಕುಗಳಿಗೆ ಸ್ವತಃ ಸತ್ಕರಿಸಿ ಗೌರವಿಸಿದ್ದರು. ಲಂಕಾದ ಪ್ರಸ್ತುತ ಆರ್ಥಿಕ ದುಸ್ಥಿತಿಯನ್ನು ಕಂಡು ಭಾರತ ಈಗಾಗಲೇ ನೆರವಿನ ಹಸ್ತ ಚಾಚಿದೆ. ಈ ಮಿತ್ರತ್ವ ಎರಡೂ ರಾಷ್ಟ್ರಗಳ ಸದೃಢ ಸ್ನೇಹಪರ ಬಾಂಧವ್ಯಕ್ಕೆ ಸಾಕ್ಷಿಯಾಗಲಿ, ಚೀನಾ ಮುಕ್ತ ಲಂಕೆಯ ಭವಿಷ್ಯ ಹಸನಾಗಲಿ ಎಂದು ಆಶಿಸೋಣ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.