The Kashmir Files ಇದನ್ನು ಬರಿ ಸಿನೆಮಾ ಎಂದು ನೋಡಿದಾಗ ಕಣ್ಣಂಚಿನಲ್ಲಿ ನೀರಾಡದೆ ಇರದು, ಆದರೆ ಇದೊಂದು ಸತ್ಯ ಘಟನೆ ಎಂದು ತಿಳಿದು ನೋಡಿದಾಗ ಕೇವಲ ನೀರಲ್ಲ ರಕ್ತವೇ ಕುದ್ದು ಕಣ್ಣನ್ನು ಕೆಂಪಾಗಿಸುತ್ತದೆ. ಅಬ್ಬ ಅದೆಷ್ಟು ಕ್ರೌರ್ಯವನ್ನು ಎದುರಿಸಿದರು ಕಾಶ್ಮೀರೀ ಹಿಂದುಗಳು. ಅದೆಷ್ಟುನೋವುಂಡರು ಅವರು. ಅವರ ನೋವು ಮಾತ್ರ ಯಾರಿಗೂ ಕಾಣಲೇ ಇಲ್ಲ. ಅವರ ಕೂಗು ಯಾರಿಗೂ ಕೇಳಲೇ ಇಲ್ಲ. ನಮ್ಮ ಇತಿಹಾಸದ ಪುಟಗಳು ಅವರ ಕಥೆ ಹೇಳುವ ಮುನ್ನವೇ ಮುಗಿದು ಹೋದವು. ಆ ಕ್ರೌರ್ಯವನ್ನು ಕಂಡ ರಕ್ತಸಿಕ್ತ ಹಾಳೆಗಳು ಹರಿದು ಮೂಲೆ ಸೇರಿದ್ದವು.
ಆದರೆ ಇಂದು ಹರಿದ ಹಾಳೆಗಳನ್ನೆಲ್ಲ ಒಂದೆಡೆ ಜೋಡಿಸಿ The Kashmir Files ಎಂಬ ಅದ್ಭುತ, ರೋಮಾಂಚನಕಾರಿ ಮಾತ್ರವಲ್ಲದೆ ಸತ್ಯಕ್ಕೆ ಹಿಡಿದ ಕೈಗನ್ನಡಿಯಂತಿರುವ ಚಲನಚಿತ್ರವು ಚಿತ್ರಮಂದಿರವನ್ನೂ, ನಮ್ಮ ಮನಸ್ಸಿನ ಮಂದಿರವನ್ನೂ ತಲುಪಿದೆ.
ಕಾಶ್ಮೀರದ ನಾಣ್ಯವನ್ನು ತಿರುಹಿ ಹಾಕಿ ಆ ನಾಣ್ಯದ ಮತ್ತೊಂದು ಮುಖವನ್ನು ನಮ್ಮ ಮುಂದಿರಿಸಿದೆ. ಅದುವೇ ನಿಜವಾದ ಮುಖ ಎಂಬುದು ನಾವರಿಯಬೇಕಿದೆ.
ಶಾರದಾಮಾತೆಯ ನಾಡು, ಕಶ್ಯಪ ಋಷಿಯ ಬೀಡು, ಪಾಣಿನಿಯ ವ್ಯಾಕರಣ, ವಿಷ್ಣು ಶರ್ಮನ ಪಂಚತಂತ್ರ, ಎಲ್ಲದಕ್ಕೂ ಜನ್ಮಸ್ಥಾನವದು. ಆದರೆ ಇಂದು ತನ್ನ ಮಕ್ಕಳನ್ನು ಕಳೆದುಕೊಂಡು ಅನಾಥವಾಗಿದೆ. ಎಲ್ಲಿ ವೇದಮಂತ್ರಗಳು ಕೇಳುತ್ತಿದ್ದವೋ ಅಲ್ಲಿ ಗುಂಡಿನ ಸದ್ದೇ ಕೇಳುತ್ತಿದೆ. ತುಹಿನ(ಹಿಮ)ದ ಮಳೆ ಸುರಿಯುವ, ನಾಡಿನಲ್ಲಿ ರಕ್ತದ ಹೊಳೆ ಹರಿಯುತ್ತಿದೆ. ಸಹಸ್ರಾರು ಕಾಶ್ಮೀರೀ ಹಿಂದುಗಳ ಮಾರಣ ಹೋಮದ ದೃಶ್ಯಗಳಂತೂ ನಮ್ಮನ್ನೇ ಒಮ್ಮೆ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ.
ಅರಮನೆಯಂತಹ ಮನೆಯಲ್ಲಿ ವಾಸಿಸುತ್ತಿದ್ದವರು ದಿನಕಳೆಯುವುದರೊಳಗೆ ನಿರಾಶ್ರಿತರ ಶಿಬಿರ ಸೇರುವುದೆಂದರೆ ಆ ನೋವು ಒಮ್ಮೆ ಊಹಿಸಿ ನೋಡಿ. ಕಣ್ಣಮುಂದೆಯೇ ಹೆಂಡತಿ ಮತ್ತು ಮಕ್ಕಳ ಅತ್ಯಾಚಾರವಾಗುವುದು ಒಮ್ಮೆ ಊಹಿಸಿ ನೋಡಿ. ಗಂಡನ ನೆತ್ತರೊಳು ತೋಯ್ದ ಅಕ್ಕಿಯನ್ನು ಹೆಂಡತಿಗೆ ತಿನಿಸುವುದು ಎಂದರೆ ಕನಿಷ್ಠ ಯೋಚಿಸಲೂ ಕಷ್ಟ ಆಗುತ್ತಿದೆ ಅಲ್ಲವೇ!!! ಆದರೆ ಇದನ್ನೆಲ್ಲ ಅನುಭವಿಸಿದವರು ಅವರು. ಅವರ ಮೇಲಿನ ಚಲನಚಿತ್ರ ಮುಂದೆ ನಮ್ಮ ಮೇಲೂ ತೆಗೆಯುವ ಪರಿಸ್ಥಿತಿ ಬರುವ ಮುನ್ನ ಈ ಸಿನೆಮಾ ನೋಡಿ ಎಚ್ಚೆತ್ತುಕೊಳ್ಳಿ.
ಈ ಸಿನೆಮಾ ಸಂಪೂರ್ಣ ಭಾರತವನ್ನು ಒಂದುಗೂಡಿಸಿದೆ. ಕಾಶ್ಮೀರೀ ಹಿಂದುಗಳ ನೈಜ ಘಟನೆಯನ್ನು ಕಣ್ಣಮುಂದಿರಿಸಿ, ಕಣ್ಣನ್ನು ತೇವಗೊಳಿಸಿದೆ. ಜಗತ್ತಿನ ಎದುರು ನಗ್ನ ಸತ್ಯವನ್ನು ಹಾಗೆಯೇ ತೆರೆದಿಟ್ಟಿದೆ. ನೋವಿನಿಂದ ನರಳಿ ಅಳಿದಿದ್ದ ದನಿಗಳಿಗೆ, ಇಂದೊಂದು ಪ್ರತಿಧ್ವನಿ ಸಿಕ್ಕಿದೆ.
ಆ ನೋವು ಅನುಭವಿಸಿ ನೋಡುವುದು ಸಾಧ್ಯವಿಲ್ಲ, ಆದರೆ ನೋಡಿ ಅನುಭವಿಸಬೇಕಷ್ಟೇ. ಅದಕ್ಕೊಂದೇ ಸಾಧನ ಈ ಚಲನಚಿತ್ರ. ಬನ್ನಿ ಆ ನೋವಿಗೆ ದನಿ ನಾವಾಗುವ. ಬನ್ನಿ ಕಣ್ಣೀರನ್ನು ಒರೆಸುವ ಕೈ ನಾವಾಗುವ. ಬನ್ನಿ ಜಿಹಾದ್ನ ವಿರುದ್ಧ ಹೋರಾಡುವ ಯೋಧರಾಗುವ.
ಎಲ್ಲೋ ಕಾಶ್ಮೀರದಲ್ಲಾದದ್ದು ಮತ್ತೆಲ್ಲೂ ಆಗದೆಂಬ ಹುಂಬು ಧೈರ್ಯ ಬೇಡ. ಅಲ್ಲೇನಾಯಿತೆಂಬುದನ್ನು ತಿಳಿಸುವ ಸಾಹಸವನ್ನು ವಿವೇಕ್ ಅಗ್ನಿಹೋತ್ರಿ ಮಾಡಿದ್ದಾರೆ. ಅಲ್ಲೇನಾಯಿತೆಂಬುದನ್ನು ತಿಳಿದುಕೊಳ್ಳುವ ಮನಸ್ಸು ನಾವು ಮಾಡಬೇಕಷ್ಟೆ.
ಪ್ರತೀ ಹಿಂದುವೂ ನೋಡಿ ಕಲಿಯಬೇಕಾದ ಸಿನೆಮಾ ಇದು. ಹಿಂದೂ ಗಂಡಸರಿಲ್ಲದೇ, ಹಿಂದೂ ಹೆಣ್ಣುಮಕ್ಕಳನ್ನಿಟ್ಟುಕೊಂಡು ಕಾಶ್ಮೀರ ಸ್ವತಂತ್ರವಾಗುತ್ತದೆ ಎಂಬ ಘೋಷಣೆಗಳು ಮಸೀದಿಯಿಂದ ಬಂದಿತೆಂದಾಗಲೂ ಸೆಕ್ಯುಲರ್ ಎಂಬ ವಿಚಾರವನ್ನು ಮಂಡಿಸುವವರು ಈ ಚಲನಚಿತ್ರ ನೋಡಿ ಕಲಿಯಲೇಬೇಕಾದದ್ದು ಬಹಳಷ್ಟಿದೆ.
ಯಾವ ಪಠ್ಯಪುಸ್ತಕದಲ್ಲೂ ಈ ಇತಿಹಾಸ ಕಾಣಸಿಗದು. ಯಾವ ಪ್ರೊಫೆಸರ್ ಕೂಡಾ ಇದನ್ನು ಹೇಳುವ ಧೈರ್ಯ ಮಾಡರು. ಆದರೆ ನಮಗೆ ಸ್ವಂತ ಬುದ್ಧಿಯೆಂದಿರುವಾಗ ಅದನ್ನು ಸ್ವಾಧ್ಯಾಯಕ್ಕೆ ಉಪಯೋಗಿಸುವ. ಕಾಶ್ಮೀರಿ ಹಿಂದುಗಳಿಗೆ ಪುನಃ ಮನೆ ಸಿಗುವಂತೆ ಮಾಡುವಲ್ಲಿ ಶ್ರಮಿಸುವ. ಅದಕ್ಕೂ ಮುನ್ನ ಈ ಚಲನಚಿತ್ರವನ್ನು ನೋಡಿ ಗೆಲ್ಲಿಸುವ.
✍️ ಉವಾಚಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.