ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವು ಕವಲುಗಳಿವೆ. ಅಸಹಕಾರ ಚಳವಳಿ ಅಂತಹ ಕವಲುಗಳಲ್ಲಿ ಒಂದು. 1930, ಮಾರ್ಚ್ 12, ಈ ದೇಶದ ಸ್ವಾತಂತ್ರ್ಯ ಚಳವಳಿಯ ದಿಕ್ಕು ಬದಲಿಸಿದ ಘಟನೆಯಾದ ದಂಡಿ ಸತ್ಯಾಗ್ರಹಕ್ಕೆ ನಾಂದಿ ಹಾಡಿದ ದಿನವದು. ಬ್ರಿಟಿಷರು ಭಾರತವನ್ನು ತಮ್ಮ ಕೈವಶ ಮಾಡಿಕೊಂಡು ಈ ದೇಶದ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ನಾಶಮಾಡುವ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿದ್ದರು. ಇಲ್ಲಿನ ಶಿಕ್ಷಣ, ಗ್ರಾಮಾಡಳಿತ, ತೆರಿಗೆ ಪದ್ಧತಿ, ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲವನ್ನೂ ಬೇರು ಸಹಿತ ನಾಶ ಮಾಡುವ ಪ್ರಯತ್ನಕ್ಕಿಳಿದಿದ್ದರು. ಇಂತಹ ಪ್ರಯತ್ನ ಇಲ್ಲಿನ ಅನೇಕ ಪ್ರಾಜ್ಞರನ್ನು ಕಂಗೆಡಿಸಿತ್ತು. ಒಂದು ಹಂತದಲ್ಲಿ ಗಾಂಧೀಜಿಯವರು “ The British administrations when they came to India, instead of taking hold things as they were, began to root them out. They scratched the soil and began to look at the root and left that, and the beautiful tree perished ” ಎಂದಿದ್ದರು. ಈ ಮಾತು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಬ್ರಿಟಿಷರು ಮಾಡಿದ ವಿನಾಶವನ್ನು ಕುರಿತಾಗಿದ್ದರೂ, ವಿಶಾಲಾರ್ಥದಲ್ಲಿ ಬ್ರಿಟಿಷರು ಭಾರತೀಯರ ಬದುಕನ್ನು ಹೀಗೆ ಕೆಡಹಿ ಹಾಕುವ ಸಂಚನ್ನು ರೂಪಿಸಿದ್ದರು ಎನ್ನುವುದು ಸತ್ಯ. ಬ್ರಿಟಿಷರ ಈ ಬಗೆಯ ದುರುಳತನವನ್ನು ಭಾರತೀಯರು ಅತ್ಯಂತ ಸಹಜವಾಗಿಯೇ ಪ್ರತಿಭಟಿಸಿದ್ದರು. ಬ್ರಿಟಿಷರು ಮಾಡಿದ ಕಾನೂನುಗಳನ್ನು ಭಂಗಮಾಡುವ ಮೂಲಕ ತಮ್ಮ ಪ್ರತಿರೋಧವನ್ನು ದಾಖಲಿಸಿದ್ದರು. ಇಂತಹ ಪ್ರತಿರೋಧಗಳ ಸಾಲಿಗೆ ಸೇರುವ ಬಹುಮುಖ್ಯ ಘಟನೆಯೇ ದಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ.
ನಮ್ಮ ತಲೆಮಾರಿನ ಅನೇಕರು ಗಾಂಧಿಯ ಉಪ್ಪಿನ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತೇ? ಎಂದು ಕೇಳಬಹುದು. ಉಪ್ಪಿನ ಸತ್ಯಾಗ್ರಹ ದಿಂದ ಸ್ವಾತಂತ್ರ್ಯ ಬಂದಿತೇ ಅಥವಾ ಇಲ್ಲವೇ ಎನ್ನುವುದಕ್ಕಿಂತಲೂ ಮುಖ್ಯವಾದುದು, ಗಾಂಧಿ ಭಾರತೀಯರು ಕಳೆದುಕೊಳ್ಳುತ್ತಿದ್ದ ಸ್ವಾತಂತ್ರ್ಯದ ಕುರಿತು ಜಾಗೃತಿಯನ್ನು ಮೂಡಿಸುವಲ್ಲಿ ಸಫಲರಾದರು. ಉಪ್ಪು ಎಲ್ಲಾ ಮಾನವರ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಬ್ರಿಟಿಷ್ ಕಾನೂನು ಭಾರತೀಯರ ಉಪ್ಪು ತಯಾರಿಕೆ ಮತ್ತು ಮಾರಾಟದ ಮೇಲೆ ನಿರ್ಬಂಧವನ್ನು ವಿಧಿಸಿತು. ಉಪ್ಪಿನ ಮೇಲೆ ತೆರಿಗೆಯನ್ನು ವಿಧಿಸಿ, ಬ್ರಿಟಿಷರ ಅನುಮತಿ ಇಲ್ಲದೆ ಉಪ್ಪಿನ ತಯಾರಿಕೆ ಮತ್ತು ಮಾರಾಟವನ್ನು ಅಪರಾಧವನ್ನಾಗಿ ಮಾಡಿತು. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ವಿಷಯವಾಗಿ ಕಾಣಬಹುದು. ಆದರೆ ಈ ನಿರ್ಬಂಧ ಉಪ್ಪು ತಯಾರಿಕೆಯಲ್ಲಿ ಬ್ರಿಟಿಷ್ ಏಕಸ್ವಾಮ್ಯವನ್ನು ಹುಟ್ಟುಹಾಕುವುದಕ್ಕೆ ಕಾರಣವಾಗುವಂತೆ ಮಾಡಿತು. ಗಾಂಧಿ ಈ ನಿರ್ಬಂಧವನ್ನು ಧಿಕ್ಕರಿಸಿದರು. ತನ್ನ ಅನುಯಾಯಿಗಳ ಜತೆಗೂಡಿ ಸಬರಮತಿ ಆಶ್ರಮದಿಂದ ದಂಡಿಯವರೆಗೆ ಯಾತ್ರೆ ನಡೆಸಿ ಬ್ರಿಟಿಷ್ ನಿರ್ಬಂಧವನ್ನು ಮೀರಿ ಉಪ್ಪು ತಯಾರಿಸುವ ಮೂಲಕ ಕೊನೆಗೊಂಡಿತು. ಈ ಸತ್ಯಾಗ್ರಹವನ್ನು ಅನುಸರಿಸಿ ದೇಶಾದ್ಯಂತ ಉಪ್ಪು ತಯಾರಿಸುವ ಮೂಲಕ ಬ್ರಿಟಿಷ್ ಕಾನೂನನ್ನು ಉಲ್ಲಂಘಿಸಲಾಯಿತು. ಹೀಗೆ ಕಾನೂನು ಉಲ್ಲಂಘಿಸುವುದಕ್ಕೂ ಸ್ವಾತಂತ್ರ್ಯ ಹೋರಾಟಕ್ಕೂ ಏನಾದರೂ ಸಂಬಂಧವಿದೆಯೇ? ಅಥವಾ ಈ ಮಾದರಿಯನ್ನು ಇದೇ ಮೊದಲ ಬಾರಿಗೆ ಗಾಂಧಿಜಿಯವರು ಕಂಡುಹಿಡಿದರೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಬಹುದು.
ಭಾರತೀಯ ಇತಿಹಾಸವನ್ನು ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸಿದರೆ ಭಾರತೀಯ ಪರಂಪರೆಯಲ್ಲೇ ಇಂತಹದ್ದೊಂದು ಅಸಹಕಾರದ ಮಾದರಿ ಇದೆ ಎನ್ನುವುದು ಅರಿವಾಗುತ್ತದೆ. ಗಾಂಧಿ ಈ ಪರಂಪರೆಗೆ ಮರಳಿ ಜೀವ ತುಂಬುವ ಕೆಲಸವನ್ನು ಮಾಡಿದರು ಎನ್ನಬಹುದು. ಆಳುವವರಿಂದ ಅನ್ಯಾಯವಾದಾಗ ಆಳುವವರು ಮಾಡಿದ ನಿಯಮಗಳನ್ನು ಧಿಕ್ಕರಿಸುವುದೇ ಪ್ರತಿಭಟನೆ. ಇಂತಹ ಅನೇಕ ಘಟನೆಗಳನ್ನು ಬ್ರಿಟಿಷರೇ ದಾಖಲಿಸಿದ್ದಾರೆ. ಈ ಹಿನ್ನೆಲೆಯನ್ನು ಅರ್ಥಮಾಡಿಕೊಂಡರೆ ದಂಡಿ ಸತ್ಯಾಗ್ರಹದ ಮಹತ್ವ ಅರಿವಾಗುತ್ತದೆ. ಇದು ಅರ್ಥವಾದರೆ ಚರಕದಿಂದ ಸ್ವಾತಂತ್ರ್ಯ ಬಂತಾ? ಅಹಿಂಸೆಯಿಂದ ಸ್ವಾತಂತ್ರ್ಯ ಬಂತಾ? ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬಂತೇ ಎನ್ನುವ ಪ್ರಶ್ನೆಗಳನ್ನು ಕೇಳುವುದಿಲ್ಲ. ಸ್ವಾತಂತ್ರ್ಯ ಹೋರಾಟ ಗಾಂಧಿಗೆ ಸ್ವದೇಶಿ ಜಾಗರಣೆಯ ಕ್ರಿಯೆ. ಸ್ವರಾಜ್ಯವನ್ನು ಕಟ್ಟುವುದರ ಮೆಟ್ಟಿಲುಗಳು. ಬ್ರಿಟಿಷರಿಂದ ಭಾರತೀಯರ ‘ಸ್ವ’ ನಾಶವಾಗುತ್ತಿದ್ದ ಕಾಲಕ್ಕೆ ‘ಸ್ವ’ದ ಜಾಗೃತಿಯನ್ನು ಮೂಡಿಸಿದರು. ಚರಕ, ಉಪ್ಪು, ಸತ್ಯಾಗ್ರಹಗಳೆಲ್ಲವೂ ಈ ಜಾಗೃತಿಯ ಸಾಧನಗಳಾದವು. ಬ್ರಿಟಿಷರು ಗಾಂಧಿಯ ಈ ಹೋರಾಟಕ್ಕೆ ಹೆದರಿದರೋ ಗೊತ್ತಿಲ್ಲ, ಆದರೆ ಭಾರತೀಯರು ಜಾಗೃತರಾದರು. ಬ್ರಿಟಿಷರನ್ನು ಹೊರಗಟ್ಟುವಲ್ಲಿ ಈ ಜಾಗೃತಿಯೇ ಬಹು ಮುಖ್ಯವಾದುದು.
“ Passive resistance ” ಇಲ್ಲಿನ ಬದುಕಿನ ಭಾಗವೇ ಆಗಿತ್ತು. ಗಾಂಧಿ ಪ್ರಕಟಪಡಿಸಿದ ಅಸಹಕಾರದ ಮೂಲ ಇಲ್ಲಿನ ಪರಂಪರೆಯ ಸಹಜ ಅಭಿವ್ಯಕ್ತಿ ಎನ್ನುವ ಕುರಿತು ಸಂಶೋಧಕರಾದ ಶ್ರೀ ಧರ್ಮಪಾಲ್ ಒಂದು ಮಹತ್ವದ ಅಧ್ಯಯನಯನ್ನೇ ಮಾಡಿದ್ದರು. ಅವರು ದಾಖಲೆಗಳ ಮೂಲಕ ತೋರಿಸುವಂತೆ, ಸರ್ಕಾರಗಳು ಜನವಿರೋಧಿಯಾದ ಕಾಯಿದೆಗಳನ್ನು ರೂಪಿಸಿ ತೀರ್ಮಾನಗಳನ್ನು ತೆಗೆದುಕೊಂಡಾಗ ಭಾರತೀಯರ ಹೋರಾಟದ ಸಹಜವಾದ ಅಸ್ತ್ರವೇ ಅಸಹಕಾರವಾಗಿತ್ತು. ಆಳುವವರು ಮತ್ತು ಆಳಿಸಿಕೊಳ್ಳುವವರು ಸಮಾನ ಮೌಲ್ಯದ ಮೇಲೆ ನಿಂತಿದ್ದಾಗ ಈ ಅಸಹಕಾರ ಫಲಕಾರಿಯಾಗಿರುತ್ತಿತ್ತು. ಬ್ರಿಟಿಷರ ಎದುರು ಈ ಅಸಹಕಾರ ಪೂರ್ಣವಾಗಿ ಯಶಸ್ವಿಯಾಗಿಲ್ಲವೆಂದರೆ ಅದಕ್ಕೆ ಈ ಸಮಾನ ಮೌಲ್ಯ ಭಂಗವಾದುದೇ ಕಾರಣ. ಬ್ರಿಟಿಷರಿಗೆ ಈ ಹೋರಾಟ ಬಂಡಾಯವಾಗಿ, ದ್ರೋಹವಾಗಿ ಕಾಣಿಸಿಲಾರಂಭಿಸಿತು.
1810ರ ಸುಮಾರಿಗೆ ಅಂದರೆ ಗಾಂಧಿಜಿಯವರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರವೇಶಿಸುವ ಒಂದು ಶತಮಾನದ ಪೂರ್ವದಲ್ಲೇ ಬ್ರಿಟಿಷರು ರೂಪಿಸಿದ ಜನವಿರೋಧಿ ತೆರಿಗೆ ನೀತಿಯ ವಿರುದ್ಧ ಜನ ಯಶಸ್ವಿಯಾದ ಅಸಹಕಾರ ಆಂದೋಲನವನ್ನು ರೂಪಿಸಿದ್ದರು. 1810ರಲ್ಲಿ ಬಂಗಾಳದ ಗವರ್ನರ್ ತಮ್ಮ ರಾಜ್ಯದ ಎಲ್ಲಾ ಕಟ್ಟಡಗಳ ಮೇಲೆ ತೆರಿಗೆಯನ್ನು ವಿಧಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದರು. ಇದರ ಮೂಲಕ ಬಂಗಾಳದಲ್ಲಿ ಅತೀದೊಡ್ಡ ಪ್ರಮಾಣದಲ್ಲಿ ತೆರಿಗೆಯನ್ನು ಸಂಗ್ರಹಿಸುವ ಉದ್ದೇಶವಿತ್ತು. ಆದರೆ ಇದರಿಂದ ತೊಂದರೆಗೆ ಒಳಗಾದ ಜನರು ಅಂದರೆ ಕಟ್ಟಡಗಳ ಮಾಲಿಕರು, ಬಾಡಿಗೆದಾರರು ಪ್ರತಿಭಟಿಸುವ ತೀರ್ಮಾನವನ್ನು ಮಾಡುತ್ತಾರೆ. ಮೊದಲ ಪ್ರತಿಭಟನೆ ಬನಾರಸ್ನಿಂದ ಆರಂಭವಾಯಿತು. ಈ ತೆರಿಗೆಯ ವಿರುದ್ಧ ಬನಾರಸ್ನ ಜನರು ನ್ಯಾಯಾಲಯಕ್ಕೆ ಅಪೀಲು ದಾಖಲು ಮಾಡುತ್ತಾರೆ. ಬನಾರಸ್ನ ಜನರು ತಮ್ಮ ಕಟ್ಟಡಗಳ ಮೇಲೆ ವಿಧಿಸಿದ ಅನ್ಯಾಯದ ತೆರಿಗೆಯ ವಿರುದ್ಧ ಸಂಘಟಿತರಾಗಿ ಹೋರಾಡುತ್ತಾರೆ. ಧರಣಿಯನ್ನು ಮುಂದುವರಿಸುತ್ತಾರೆ. ಬಹುಮುಖ್ಯವಾದ ಸಂಗತಿ ಎಂದರೆ ಬನಾರಸ್ನ ಜನ ತಮ್ಮ ಸಾಮಾಜಿಕ, ಆರ್ಥಿಕ ಅಂತಸ್ತುಗಳನ್ನು, ಜಾತಿಯನ್ನು, ವೃತ್ತಿಯನ್ನು ಮರೆತು ಯಾವುದೇ ಭೇದ ತೋರದೆ ಒಂದಾಗುತ್ತಾರೆ. ತಮ್ಮ ಸಂಘಟಿತವಾದ ಶಕ್ತಿಯನ್ನು ಪ್ರದರ್ಶಿಸುತ್ತಾರೆ. ಯಾರೂ ಕೂಡ ಯಾವುದೇ ಶಸ್ತçವನ್ನು ಹಿಡಿಯದೆ, ಸರ್ಕಾರದ ಕಾರ್ಯಚಟುವಟಿಕೆಗೆ ಅಸಹಕಾರವನ್ನು ತೋರುವ ಮೂಲಕವೇ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದು ಬ್ರಿಟೀಷ್ ಅಧಿಕಾರಿಗಳ ಪಾಲಿಗೆ ಅಚ್ಚರಿಯ ಮತ್ತು ಸವಾಲಿನ ಸಂಗತಿಯಾಗಿತ್ತು. ನಗರದ ಎಲ್ಲಾ ಮೂಲೆಗಳಿಂದಲೂ ಜನರು ತಮ್ಮ ತಮ್ಮ ಕೆಲಸಗಳನ್ನು ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಅಸಹಕಾರದ ಪ್ರತಿಭಟನೆಯ ಧ್ವನಿಯು ಮುಂದೆ ಪಾಟ್ನ , ಮುರ್ಶಿದಬಾದ್ ಮೊದಲಾದ ನಗರಗಳಲ್ಲಿ ಕಟ್ಟಡಗಳ, ಮನೆಗಳ ಮೇಲಿನ ತೆರಿಗೆಯನ್ನು ವಿರೋಧಿಸಿ ನಿಶಸ್ತçರಾಗಿಯೇ ಧರಣಿ ನಡೆಸಿದ ವಿವರಗಳನ್ನು ಬ್ರಿಟೀಷರೇ ದಾಖಲಿಸಿದ್ದಾರೆ. ಈ ಅಸಹಕಾರ ಚಳುವಳಿಯಲ್ಲಿ ಜನರ ಸಹಭಾಗಿತ್ವದ ರೀತಿಯನ್ನು ಕಂಡು ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಗ್ರಹವಾಗಬಹುದಾದ ತೆರಿಗೆಯ ಹಣಕ್ಕಿಂತ ಜನರ ಅಸಹನೆ, ವಿರೋಧವೇ ಹೆಚ್ಚಾಗುತ್ತದೆ ಎಂದು ವರದಿಯನ್ನು ಬರೆದಾಗ ಬೋರ್ಡ್ ಆಫ್ ರೆವೆನ್ಯೂ ತಾನು ಪ್ರಕಟಿಸಿದ ಹೊಸ ತೆರಿಗೆಯ ಪ್ರಸ್ತಾಪವನ್ನು ಹಿಂಪಡೆಯುತ್ತದೆ.( ಉಲ್ಲೇಖ : Civil Disobedience in the Indian Tradition – Shri Dharampal)
ಭಾಗಲ್ಪುರ್ನಲ್ಲಿಯೇ ಸ್ಥಳೀಯ ಕಂದಾಯ ಅಧಿಕಾರಿ ತೆರಿಗೆಯ ಸಂಗ್ರಹಕ್ಕೆಂದು ತೆರಳಿದಾಗ ಜನರೆಲ್ಲಾ ತಮ್ಮ ತಮ್ಮ ಮನೆಗಳನ್ನೂ ಸೇರಿದಂತೆ ಎಲ್ಲಾ ಕಟ್ಟಡಗಳನ್ನು ಮುಚ್ಚಿಬಿಡುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ತೆರಿಗೆ ನೀತಿಯನ್ನು ಪ್ರತಿಭಟಿಸಿ ರಸ್ತೆಗೆ ಬರುತ್ತಾರೆ. ಇಷ್ಟೆಲ್ಲಾ ಜನರು ಪ್ರತಿಭಟನೆಗಾಗಿಯೇ ಸೇರಿದರೂ ಅಲ್ಲಿ ಯಾವುದೇ ರೂಪದಲ್ಲಿ ಹಿಂಸೆಯ ಘಟನಾವಳಿಗಳು ನಡೆಯುವುದಿಲ್ಲ. ಆದರೆ ಜನ ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದಾರೆ ಎನ್ನುವ ವರದಿಯನ್ನು ಅಲ್ಲಿನ ಮ್ಯಾಜಿಸ್ಟ್ರೇಟ್ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಅಸಹಕಾರ ಎನ್ನುವುದು ಯಾವ ಸ್ವರೂಪದಲ್ಲಿ ಬೆಳೆಯಿತೆಂದರೆ, ಸರ್ಕಾರದ ತೆರಿಗೆಯ ಪಾವತಿಗಾಗಿ ಜನರನ್ನು ಒತ್ತಾಯಿಸಿದಾಗ, ಅಲ್ಲಿನ ಜನರು ಸ್ವಯಂ ಆಗಿ ತಮ್ಮ ಮನೆಗಳನ್ನು, ಇತರ ಕಟ್ಟಡಗಳನ್ನು ಹಾಗೂ ಇಡೀ ನಗರವನ್ನೇ ತೊರೆದು ಹೊರಗೆ ಹೋಗುವುದಕ್ಕೆ ಸಿದ್ಧವಿದ್ದರು. ಜನರು ಪ್ರತಿಭಟನೆಯ ರೂಪದಲ್ಲಿ ತಮ್ಮ ಮಾಲಕತ್ವದ ಕಟ್ಟಡಗಳನ್ನು ಸರ್ಕಾರಕ್ಕೆ ನೀಡಲು ಸಿದ್ಧರಿದ್ದರೇ ವಿನಃ ಯಾರೂ ಕೂಡ ಸ್ವಯಂ ಪ್ರೇರಿತರಾಗಿ ತೆರಿಗೆಯನ್ನು ಪಾವತಿಸಲು ಮುಂದೆ ಬರಲಿಲ್ಲ. ಸರ್ಕಾರ ಬೇರೆ ಬೇರೆ ವಿಧಾನದಿಂದ ಎಷ್ಟೇ ತೀವ್ರವಾಗಿ ತೆರಿಗೆ ಪಾವತಿಯ ಅಗತ್ಯವನ್ನು ಮನವರಿಕೆ ಮಾಡಲು ಯತ್ನಿಸಿದ ಹೊರತಾಗಿಯೂ ಜನರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಜನರ ಈ ಬಗೆಯ ತೀವ್ರ ಅಸಹಕಾರವನ್ನು ಪ್ರತಿ ಹಂತದಲ್ಲೂ ಎದುರಿಸಿದ ಸರ್ಕಾರ ಜನರ ಬೇಡಿಕೆಗೆ ಶರಣಾಗಿ ತಾನು ಕಟ್ಟಡ ತೆರಿಗೆ ಪಾವತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಬೇಕಾಯಿತು. ಈ ಪ್ರತಿರೋಧ ಬ್ರಿಟೀಷರಿಗೆ ಆಶ್ಚರ್ಯದ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. “ಹೊಸ ತೆರಿಗೆಯನ್ನು ಹಿಂಪಡೆಯುವವರೆಗೂ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂಬುದೇ ಅವರ ಘೋಷಣೆಯಾಗಿತ್ತು. ಪರಿಣಾಮವಾಗಿ, ಈ ಬಗೆಯ ಪ್ರತಿಭಟನೆಯಿಂದ ಸರ್ಕಾರ ಅನಿವಾರ್ಯವಾಗಿ ತನ್ನ ನಿಲುವಿನಿಂದ ಹಿಂದೆ ಸರಿಯಬೇಕಾಯಿತು. ತಾನು ತಂದಿದ್ದ ತೆರಿಗೆಯ ನೂತನ ನಿಯಮವನ್ನು ಹಿಂದಕ್ಕೆ ಪಡೆದುಕೊಂಡಿತು. ತನ್ನ ನಿಲುವನ್ನು ಬದಲಿಸಿತು. ಇದನ್ನು ಮನಗಂಡೇ ಗಾಂಧಿ “ In India, the nation at large has generally used passive resistance in all departments of life. We cease to cooperate with our rulers when they displease us” ಎಂದಿದ್ದರು. ಅದನ್ನೇ ಗಾಂಧೀ ದೊಡ್ಡ ಪ್ರಮಾಣದಲ್ಲಿ ಬ್ರಿಟೀಷರ ವಿರುದ್ಧದ ಹೋರಾಟದ ಅಸ್ತ್ರವಾಗಿ ಬಳಸಿದರು. ಕಟ್ಟಡದ ಮೇಲಿನ ತೆರಿಗೆ, ಉಪ್ಪಿನ ತೆರಿಗೆ, ವಿದೇಶಿ ವಸ್ತುಗಳ ಬಹಿಷ್ಕಾರವೂ ಸೇರಿದಂತೆ ಬೇರೆ ಬೇರೆ ಬಗೆಯಿಂದ ರೂಪುಗೊಂಡ ಅಸಹಕಾರ ಆಂದೋಲನ ಮುಂದೆ ಬ್ರಿಟೀಷರನ್ನು ಭಾರತ ಬಿಟ್ಟು ತೊಲಗಿ ಎನ್ನುವ ಬೇಡಿಕೆಯವರೆಗೂ ಮುಂದುವರಿಯಿತು.
ದಂಡಿ ಸತ್ಯಾಗ್ರಹವನ್ನು ಈ ಹಿನ್ನೆಲೆಯಿಂದ ನೋಡಿದರೆ ಅದರ ಮಹತ್ವ ಅರ್ಥವಾಗುತ್ತದೆ. ಗಾಂಧಿಯ ಒಂದು ಹಿಡಿಯಷ್ಟು ಉಪ್ಪು ತಯಾರಿಸುವ ಕ್ರಿಯೆಗೆ ಬ್ರಿಟಿಷ್ ಸರ್ಕಾರ ಯಾಕೆ ಹೆದರಿತು ಎನ್ನುವುದು ಅರಿವಾಗುತ್ತದೆ. ಒಂದು ಹಿಡಿ ಉಪ್ಪು, ಚರಕದಿಂದ ತೆಗೆದ ನೂಲು, ವಿದೇಶಿ ವಸ್ತುಗಳ ಬಹಿಷ್ಕಾರ ಇದು ಭಾರತ ಮಾತ್ರ ತೋರಿಸಬಹುದಾದ ಪ್ರತಿರೋಧದ ಮಾದರಿ. ಇದನ್ನು ಗಾಂಧಿ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿದರು. ಬ್ರಿಟಿಷರು ಇದೇ ಕಾರಣಕ್ಕೆ ದೇಶ ಬಿಟ್ಟರು ಎಂದು ಹೇಳಲಾಗದಿದ್ದರೂ, ಈ ಹೋರಾಟ ಲಕ್ಷಾಂತರ ಜನರನ್ನು ಹೋರಾಟದ ಸಾಗರಕ್ಕೆ ದುಮುಕುವಂತೆ ಮಾಡಿತು ಎನ್ನುವುದನ್ನು ನಿರಾಕರಿಸಲಾಗದು.
✍️ ಡಾ. ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.