ಬಣ್ಣ ಒಂದೇ ಆಗಿರಬಹುದು. ಆದರೆ ಬಣ್ಣದ ಹಿನ್ನೆಲೆ ನಾನಾ ತೆರನಾದದ್ದು. ಜಗತ್ತಿನಲ್ಲಿ ಒಂದೇ ಬಣ್ಣದ ನಾನಾ ಬಗೆಯ ದ್ರವ್ಯಗಳು ಇರಬಹುದು. ಆದರೆ ಅದು ಒಂದೇ ಬಣ್ಣವಲ್ಲ. ಆದಕಾರಣ ಜಗತ್ತಿನಲ್ಲಿ ಒಂದೇ ಬಣ್ಣದ ಅನೇಕ ವಸ್ತುಗಳಿದ್ದರೆ, ಆ ಬಣ್ಣದ ಪ್ರಭೇದಗಳು ಅಷ್ಟು ಬಗೆಯದಾಗಿದೆ ಎಂದು ಅರ್ಥ. ಬಣ್ಣಕ್ಕೆ ಕಾರಣವಾದ ರಾಸಾಯನಿಕ ದ್ರವ್ಯಗಳು ಬಗೆಬಗೆಯಾಗಿ ಇರುತ್ತವೆ. ಅರಸಿನ ಇದಕ್ಕೊಂದು ಉತ್ತಮ ಉದಾಹರಣೆ. ಇದರ ಹಳದಿ ಬಣ್ಣಕ್ಕೆ ಕಾರಣ ಕರ್ಕ್ಯೂಮಿನ್ ಎಂಬ ರಾಸಾಯನಿಕ. ಅಂದರೆ ಬೇರೆ ವಸ್ತುಗಳಲ್ಲಿ ಕಾಣುವ ಹಳದಿ ಬಣ್ಣ ಅರಸಿನದ ಹಳದಿ ಬಣ್ಣಕ್ಕಿಂತ ಭಿನ್ನ ಎಂದಾಯಿತು ಅಲ್ಲವೇ? ಆಯುರ್ವೇದದಲ್ಲಿ ಇದನ್ನು ಹರಿದ್ರಾ ಎಂದು ಕರೆಯುವುದಕ್ಕೆ ಕಾರಣ ಕೂಡ ಇದುವೆ. ಇದರ ಕಂದ ಹಳದಿ ಬಣ್ಣದ್ದು ಎಂಬ ಕಾರಣಕ್ಕೆ.
” ಹರಿಂ ಪೀತವರ್ಣಂ ದ್ರಾತಿ ಗಚ್ಛತಿ ಇತಿ ಹರಿದ್ರಾ”.
Curcuma longa ಇದರ ಸಸ್ಯಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಟರ್ಮರಿಕ್.
🔷 ಇದು ಉಷ್ಣ ಗುಣವುಳ್ಳದ್ದು,; ಎಂದ ತಕ್ಷಣ ಸೇವಿಸಬಾರದು ಎಂಬ ನಿಷೇಧ ಅರ್ಥವಲ್ಲ. ಕಪ ದೋಷವನ್ನು ವಾತ ದೋಷವನ್ನು ಈ ಗುಣದ ಕಾರಣದಿಂದ ನಿವಾರಿಸುವುದಕ್ಕೆ ಶಕ್ತವಾಗಿದೆ ಎಂದು ತಿಳಿಯಬೇಕು.
🔷 ರಕ್ತ ಶೋಧಕ, ಚರ್ಮದ ತೊಂದರೆಗಳ ನಿವಾರಕ, ಬಾವು- ಉರಿಯೂತಗಳನ್ನು ಕಡಿಮೆ ಮಾಡುವಂಥದ್ದು (antiinflammatory), ಅಗ್ನಿ ದೀಪನವಾದುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಗ್ರಾಹಿ ಗುಣವುಳ್ಳದ್ದರಿಂದ ಅತಿಸಾರ ಭೇದಿಗಳಲ್ಲಿ ಪರಿಣಾಮಕಾರಿ.
🔷 ಆಯುರ್ವೇದದ ದೃಷ್ಟಿಕೋನದಿಂದ ತ್ರಿದೋಷಗಳ ಮೇಲಿನ ಪ್ರಭಾವವನ್ನು ಹೇಳುವುದಾದರೆ ಕಫನಾಶಕ, ವಾತ ನಾಶಕ.
🔷 ವ್ರಣಗಳನ್ನು( ulcer) ಗುಣಪಡಿಸುವ ವಿಶಿಷ್ಟ ಗುಣ. ವಿಷ ನಾಶಕ.
🔷 ಬಗೆ ಬಗೆಯ ಆಹಾರ ಖಾದ್ಯಗಳಲ್ಲಿ ಸಾಂಬಾರ ಪದಾರ್ಥವಾಗಿ ಬಳಸುವಾಗ, ಔಷಧವು ದೇಹದೊಳಕ್ಕೆ ಸೇರಿ, ದೇಹಸಿರಿಯನ್ನು ಹೆಚ್ಚಿಸುತ್ತದೆ.
🔷 ನೆಗಡಿ ರೋಗದಲ್ಲಿ ಇದರ ಬಳಕೆ ವಿಶಿಷ್ಠ. ಆಯುರ್ವೇದದ ಹರಿದ್ರಾ ಖಂಡ ಎಂಬ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೂರ್ಣದಲ್ಲಿ ಇದುವೇ ಪ್ರಧಾನ.
🔷 ಪ್ರಮೇಹ ಬಾರದಂತೆ ತಡೆಗಟ್ಟುವುದರಲ್ಲಿ ಇದು ಮೊದಲಿಗ. ಬಂದ ಮಧುಮೇಹ ತೊಂದರೆ ಕೊಡದಂತೆ ರಕ್ಷಣೆ ನೀಡುವುದರಲ್ಲಿ ಇದು ಸಹಪ್ರಯಾಣಿಕ.
ಹೇಗೆ ಉಪಯೋಗಿಸಬೇಕು?
🔷 ಇದರ ಪುಡಿಯನ್ನು ಹಾಲಿನೊಂದಿಗೆ ಒಂದು ಚಮಚ ಸೇರಿಸಿ ನಿತ್ಯ ಸೇವಿಸಿದರೆ ಅನುಕೂಲ. ಸಕ್ಕರೆ ಕಾಯಿಲೆ ಇಲ್ಲದಿದ್ದರೆ ಸ್ವಲ್ಪ ಬೆಲ್ಲ ಬೇಕಾದರೆ ಸೇರಿಸಬಹುದು.
🔷 ಕೆಂಗಣ್ಣಿನ ಸಮಸ್ಯೆ ಇದ್ದಾಗ ಒಂದು ಭಾಗ ಅರಸಿನ ಪುಡಿಯನ್ನು 20 ಭಾಗದಷ್ಟು ನೀರಿನೊಂದಿಗೆ ಸೇರಿಸಿ, ಸ್ವಲ್ಪ ಕುದಿಸಿ, ಸೋಸಿ, ನಂತರ ಒಂದೆರಡು ಹನಿಗಳಷ್ಟು ಕಣ್ಣಿಗೆ ಮತ್ತೆ ಮತ್ತೆ ಹಾಕಿದಲ್ಲಿ ಪ್ರಯೋಜನವಾಗುತ್ತದೆ. ಕಣ್ಣು ನೋವು ಕಡಿಮೆಯಾಗುತ್ತದೆ.
🔷 ಅರಸಿನ ಪುಡಿಯನ್ನು ಗೋಮೂತ್ರದೊಂದಿಗೆ ಸೇವಿಸಿ, ಕಲಸಿ ಚರ್ಮಕ್ಕೆ ಹಚ್ಚಿದಲ್ಲಿ ಚರ್ಮದ ತುರಿಕೆ, ಗುಳ್ಳೆ, ಕಜ್ಜಿಗಳು ನಿವಾರಣೆಯಾಗುತ್ತವೆ.
🔷 ನೆಗಡಿಯ ಆರಂಭದ ಹಂತದಲ್ಲಿ ಇದರ ಪುಡಿಯನ್ನು ಬೆಂಕಿಯಲ್ಲಿ ಸಿಂಪಡಿಸಿ ಹೊಗೆಯನ್ನು ಮೂಗಿನ ಮೂಲಕ ಆಘ್ರಾಣಿಸಿದಲ್ಲಿ ಪ್ರಯೋಜನವಾಗುತ್ತದೆ.
🔷 ಅರಸಿನ ಪುಡಿಯನ್ನು ನೆಲ್ಲಿಕಾಯಿಯ ರಸದೊಂದಿಗೆ ಸೇವಿಸಿದಲ್ಲಿ ಮಧುಮೇಹದಲ್ಲಿ ಹೆಚ್ಚು ಪ್ರಯೋಜನವಾಗುತ್ತದೆ.
ಈ ಕಾರಣಕ್ಕೆ, ಸಕ್ಕರೆ ಕಾಯಿಲೆ ತಡೆಗಟ್ಟುವಲ್ಲಿ ಅರಸಿನಕ್ಕೆ ಅಗ್ರಸ್ಥಾನ. ಆಯುರ್ವೇದದ ಸಂಹಿತೆಗಳಲ್ಲಿ ” ಹರಿದ್ರಾ ಪ್ರಮೇಹ ಹರಾಣಾಂ ಶ್ರೇಷ್ಠಃ” ಎಂದಿರುವುದು.
ಆಹಾರ ಪದಾರ್ಥಗಳಲ್ಲಿ ಇದನ್ನು ಬಳಸುವುದರಿಂದ ಸಹಜವಾಗಿ ಇದು ನಮ್ಮ ಹೊಟ್ಟೆ ಸೇರುವುದು. ಬಿಸಿ ಮಾಡುವುದರಿಂದ ಅರಸಿನ ತನ್ನ ಔಷಧೀಯ ಗುಣವನ್ನು ಕಳೆದುಕೊಳ್ಳುವುದಿಲ್ಲ.
✍️ ಡಾ. ಆರ್.ಪಿ.ಬಂಗಾರಡ್ಕ. M. S. (Ayu)
ಆಯುರ್ವೇದ ತಜ್ಞ ವೈದ್ಯರು, ಪ್ರಸಾದಿನೀ ಆಯುರ್ನಿಕೇತನ, ಪುತ್ತೂರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.