ಮನುಷ್ಯನ ಬದುಕಿನಲ್ಲಿ ಸ್ನಾನವೆಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶರೀರದಲ್ಲಿ ರಕ್ತ ಪರಿಚಲನೆಯನ್ನು ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೇವಲ ಶುಚಿತ್ವದ ದೃಷ್ಟಿಯಿಂದಷ್ಟೇ ಸ್ನಾನದ ಆಚರಣೆಯನ್ನು ಮಾಡುತ್ತಿರುವ ಮನುಷ್ಯನಿಗೆ ತನ್ನ ಆರೋಗ್ಯದ ಮೇಲೂ ಅದರ ಪರಿಣಾಮವಿದೆ ಎಂಬ ಅರಿವಿದ್ದಂತಿಲ್ಲ.
ಸ್ನಾನ ಯಾವಾಗ ಮಾಡಬೇಕು ಮತ್ತು ಮಾಡಬಾರದು?.. ಯಾವಾಗಲೂ “ಭುಕ್ತವತ್ಸು ಚ ಗರ್ಹಿತಮ್” ಆಹಾರ ಸೇವನೆಯ ನಂತರ ಸ್ನಾನ ಮಾಡುವುದು ಸರಿಯಲ್ಲ. ಮೊದಲೇ ಸ್ನಾನ ಮಾಡುವುದು ಉತ್ತಮ. ಸ್ನಾನವು ಶರೀರದ ರಕ್ತ ಪರಿಚಲನೆಯನ್ನು ವೃದ್ಧಿಸಿದಾಗ ಜಠರಾಗ್ನಿಯು ಉತ್ತೇಜನಗೊಂಡು ಜೀರ್ಣಕ್ರಿಯೆಯು ಸುಲಲಿತವಾಗುವುದು. ಅದೇ ಆಹಾರ ಸೇವನೆಯ ನಂತರ ಸ್ನಾನ ಮಾಡಿದಾಗ ಸ್ವಾಭಾವಿಕವಾಗಿ ಉಂಟಾಗುವ ರಕ್ತ ಪರಿಚಲನೆಯಲ್ಲಿ, ಸಣ್ಣಮಟ್ಟಿನ ಏರುಪೇರಿನಿಂದ ಜೀರ್ಣಕ್ರಿಯೆಯಲ್ಲೂ ವ್ಯತ್ಯಾಸ ಉಂಟಾಗಬಹುದು. ಈ ಉದ್ದೇಶದಿಂದ ಹೊಟ್ಟೆ ಖಾಲಿ ಇರುವಾಗಲೇ ಸ್ನಾನ ಮಾಡಿ, ನಂತರ ಆಹಾರದ ಸೇವನೆಯನ್ನು ನಮ್ಮ ಹಿರಿಯರು ರೂಢಿಸಿಕೊಂಡಿದ್ದರು. ಇದನ್ನು ಇಂದಿನ ಆಧುನಿಕ ಜಗತ್ತು ಹಲವು ಸಂಶೋಧನೆಗಳ ನಂತರ ಸ್ವೀಕಾರಾರ್ಹ ಎಂದು ಒಪ್ಪಿಕೊಂಡಿದೆ.
ನಮ್ಮ ಹಿರಿಯರು ಕೆಲವೊಂದು ಕಾಯಿಲೆಗಳು ಬಂದಾಗ ಸ್ನಾನ ಮಾಡಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಸಾಮಾನ್ಯವಾಗಿ ಇಂದಿಗೂ ಜ್ವರ ಬಂದಾಗ ಸ್ನಾನ ಮಾಡದೆ ಇರುವವರು ಬಹಳಷ್ಟು ಮಂದಿ ಇದ್ದಾರೆ. ಇದಲ್ಲದೇ ಆಹಾರ ಸೇವನೆಯಾದ ತಕ್ಷಣ, ಅಜೀರ್ಣ, ಹೊಟ್ಟೆಯುಬ್ಬರ, ಅತಿಸಾರ, ಕಣ್ಣು ಅಥವಾ ಕಿವಿ ಸಂಬಂಧಿತ ಕಾಯಿಲೆ ಇದ್ದಾಗಲೂ ಸ್ನಾನ ವರ್ಜ್ಯವೆನಿಸಿದೆ.
ಸ್ನಾನ ಮಾಡುವ ನೀರು ಹೇಗಿರಬೇಕು?
“ಉಷ್ಣಾಂಬುನಾ ಅಧಃ ಕಾಯಸ್ಯ ಪರಿಷೇಕೋ ಬಲಾವಹಃ, ತೇನೈವ ತು ಉತ್ತಮಾಂಗಸ್ಯ ಬಲಹೃತ್ ಕೇಶ ಚಕ್ಷುಷಾಮ್” ಸ್ನಾನ ಮಾಡುವಾಗ ಕುತ್ತಿಗೆಯ ಕೆಳಗಿನ ಭಾಗಕ್ಕೆ ಉಷ್ಣ ಜಲ, ಉತ್ತಮಾಂಗ ಅಥವಾ ಶಿರ ಸ್ನಾನಕ್ಕೆ ತಣ್ಣೀರು ಯಾ ಉಗುರು ಬೆಚ್ಚನೆಯ ನೀರನ್ನು ಉಪಯೋಗಿಸುವುದು ಉತ್ತಮ. ಅತಿ ಉಷ್ಣ ಅಥವಾ ಅತಿ ಶೀತಲ ಜಲದ ಪ್ರಯೋಗ ನಿಷಿದ್ಧ. ಅಧಃ ಕಾಯಕ್ಕೆ ಉಷ್ಣ ಜಲದಿಂದಾಗಿ ಶಕ್ತಿ ದೊರೆಯುವುದು. ಆದರೆ ಶಿರಸ್ನಾನಕ್ಕೆ ಬಿಸಿನೀರನ್ನು ಬಳಕೆ ಮಾಡಿದಲ್ಲಿ ಕ್ರಮೇಣ ಕೂದಲು ಮತ್ತು ಕಣ್ಣಿನ ಸಮಸ್ಯೆ ಉಂಟಾಗಬಹುದೆಂದು ಹೇಳಲಾಗಿದೆ.
ಸರಿಯಾದ ಕ್ರಮದಲ್ಲಿ ಸ್ನಾನ ಮಾಡುವುದರಿಂದ ಶರೀರಕ್ಕುಂಟಾಗುವ ಲಾಭಗಳಾವುವು? ಅಷ್ಟಾಂಗ ಹೃದಯದಲ್ಲಿ ಸ್ನಾನದ ಮಹತ್ವವನ್ನು ಹೀಗೆ ವರ್ಣಿಸಲಾಗಿದೆ.
” ದೀಪನಂ ವೃಷ್ಯಮಾಯುಷ್ಯಂ ಸ್ನಾನಮೂರ್ಜಾಬಲಪ್ರದಮ್ |
ಕಂಡೂ ಮಲ ಶ್ರಮ ಸ್ವೇದ ತಂದ್ರಾ ತೃಟ್ ದಾಹ ಪಾಪ್ಮಜಿತ್ ||”
ಸ್ನಾನ ಮಾಡುವುದರಿಂದ ಜಠರಾಗ್ನಿಯು ಉತ್ತೇಜನಗೊಳ್ಳುತ್ತದೆ. ಶರೀರದಲ್ಲಿನ ಬೆವರು, ಕೊಳೆ, ತುರಿಕೆ, ದುರ್ಗಂಧ ಇತ್ಯಾದಿ ಕಶ್ಮಲಗಳನ್ನು ಇಲ್ಲವಾಗಿಸಿ ಸುಖನಿದ್ರೆ ಮತ್ತು ಉತ್ತಮ ಬಲವನ್ನು ನೀಡುತ್ತದೆ. ಶಾರೀರಿಕ ಶುಚಿಯು ಮನಸ್ಸಿಗೂ ಹಿತವನ್ನುಂಟು ಮಾಡುವುದರಿಂದ ಹೃದಯದ ಕಾರ್ಯಕ್ಷಮತೆಯೂ ವೃದ್ಧಿಸುತ್ತದೆ.
ಸೊತ್ತಿಗಾಗೇ ದುಡಿಯುವ ಪುರುಸೊತ್ತಿಲ್ಲದ ಜೀವನದಲ್ಲಿ ಬಹುತೇಕರು ಬೆಳಿಗ್ಗೆ ತಿಂಡಿ ತಿಂದಾಕ್ಷಣ ಸ್ನಾನ ಮಾಡುವುದು ಸರ್ವೇ ಸಾಮಾನ್ಯ. ಆಹಾರ ಸೇವನೆಯಾದ ಕ್ಷಣದಿಂದ ನಿತ್ಯವೂ ಇದೊಂದು ಆಚರಣೆ ಇದ್ದರೂ ಸಾಕು, ಕ್ರಮೇಣ ಉದರಾಗ್ನಿ ಕ್ಷೀಣವಾಗಿ ನಂತರದ ದಿನಗಳಲ್ಲಿ ಬೇರೆ ಬೇರೆ ರೋಗಕ್ಕೆ ನಾಂದಿಯಾಗಬಹುದು. ಬಹುತೇಕರು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವರು. ಇಂತಹವರಲ್ಲಿ ವಿಶೇಷ ಔಷಧೋಪಚಾರಗಳೂ ತೃಪ್ತಿಕರ ಫಲಿತಾಂಶ ನೀಡುವಲ್ಲಿ ವಿಫಲವಾಗುವ ಸಾಧ್ಯತೆ ಇದೆ.
ಆಯುರ್ವೇದದಲ್ಲಿ ದಿನಚರಿಗೆ ಬಹಳಷ್ಟು ಮಹತ್ವವಿದೆ. ನಿತ್ಯವೂ ಆಚರಿಸಲೇಬೇಕಾದ ಆಚರಣೆಗಳಿಗೂ ಅದರದೇ ಆದ ಕ್ರಮ, ನಿಯಮ, ಸಮಯ, ಇತಿಮಿತಿಗಳಿವೆ. ನಮ್ಮ ಪೂರ್ವಜರು ಮಾಡಿದ ಅದೆಷ್ಟೋ ರೀತಿ ರಿವಾಜುಗಳು ಆರೋಗ್ಯದ ದೃಷ್ಟಿಯಿಂದ ಎಂಬುದನ್ನು ಅರಿತು ನಡೆದರೆ ನಮ್ಮ ಯಾಂತ್ರಿಕ ಜೀವನ ಶೈಲಿಯಿಂದ ಕಂಡುಬರುತ್ತಿರುವ ಹಲವು ವ್ಯಾಧಿಗಳಿಗೆ ವಿರಾಮವೀಯಬಹುದು.
✍️ಡಾ. ವಿದ್ಯಾಲಕ್ಷ್ಮೀ ಆಶೀಷ್ ಬಡೆಕ್ಕಿಲ
ayudrvlt@gmail.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.