ಬೆಂಗಳೂರು: ಉಕ್ರೇನ್ ನಲ್ಲಿ ಮೃತಪಟ್ಟಿರುವ ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ನವೀನ್ ಕುಟುಂಬಕ್ಕೆ ಎಲ್ಲ ಸಹಾಯ, ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಅವರು ಹಾಕಿಕೊಂಡಿರುವ ಬಟ್ಟೆಗಳನ್ನು ಹೋಲುವ ಕೆಲವು ಛಾಯಾಚಿತ್ರಗಳನ್ನು ಆತನ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಶೆಲ್ ದಾಳಿ ನಿಂತ ಮೇಲೆ ನವೀನ್ ಜೊತೆಗಿದ್ದವರು ತೆಗೆದ ಚಿತ್ರಗಳವು ಅವು. ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಮಾತನಾಡಿ ನವೀನ್ ಪಾರ್ಥಿವ ಶರೀರವನ್ನು ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು.
ಭಾರತ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ತೆರವು ಮಾಡಲು ತೀವ್ರ ಪ್ರಯತ್ನ ಮಾಡುತ್ತಿದೆ. ಸುಮಾರು 26 ವಿಮಾನಗಳು ಮುಂದಿನ 2-3 ದಿನಗಳಲ್ಲಿ ಕರೆತರುತ್ತಿದ್ದು, ಇಂಪೈಕಿ ಕನ್ನಡಿಗರನ್ನು ಕರೆತರಲು ಗರಿಷ್ಠ ಪ್ರಯತ್ನ ಮಾಡಲಾಗುವುದು. ಬೇರೆ ಬೇರೆ ನಗರಗಳಲ್ಲಿ ಇರುವವರನ್ನು ಬೇರೆ ಬೇರೆ ದಿಕ್ಕಿನಲ್ಲಿ ಬರಲು ತಿಳಿಸಲಾಗಿದೆ ಎಂದರು.
ಯುದ್ಧ ನಡೆಯುತ್ತಿರುವುದರಿಂದ ಸ್ವಲ್ಪ ಕಷ್ಟವಾಗಿದೆ. ಭಾರತ ಸರ್ಕಾರ ಉಕ್ರೇನ್ ಸರ್ಕಾರದೊಂದಿಗೆ ಮಾತನಾಡಿ ಸುರಕ್ಷಿತ ವಲಯಗಳಿಗೆ ಹೇಗೆ ಹೋಗಬೇಕೆನ್ನುವುದನ್ನು ಯೋಜಿಸಿ ಗುಂಪಿನಲ್ಲಿ ತೆರಳಲು ನಿರ್ದೇಶನ ನೀಡಿದೆ. ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ದಿಕ್ಕಿನತ್ತ ಬರಲು ಯೋಜಿಸಿದೆ. ಯುದ್ಧ ಭೂಮಿಯಿಂದ ಕನ್ನಡಿಗರನ್ನು ಹೊರತರುವ ಪ್ರಯತ್ನ ನಡೆದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.