ಪುತ್ತೂರು ತೆಂಕಿಲಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ವೃತಿಕಾ ವಿಜ್ಞಾನ ಸಂಘದ ವತಿಯಿಂದ’ ಹಸಿರು – ಶಾಲಾ’ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಮಕ್ಕಳು ತಮ್ಮ ಹುಟ್ಟು ಹಬ್ಬದಂದು ತರಗತಿ ಗ್ರಂಥಾಲಯಕ್ಕೆ ಒಂದು ಪುಸ್ತಕ ನೀಡುವ ಪರಿಪಾಠವಿತ್ತು. ಈ ಶೈಕ್ಷಣಿಕ ವರ್ಷ ಮಗು ತನ್ನ ಹುಟ್ಟು ಹಬ್ಬದಂದು ಶಾಲಾ ವೃತಿಕಾ ವಿಜ್ಞಾನ ಸಂಘಕ್ಕೆ ಒಂದು ಗಿಡ ನೀಡಿ ಹಸಿರು ಶಾಲೆ ಯೋಜನೆಗೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ. ಅದರಂತೆ ಕೆಲವು ಪೋಷಕರು ಹೂವು , ತರಕಾರಿ , ಅಡಿಕೆ, ಬಾಳೇ ಸಸಿಗಳನ್ನು ಶಾಲೆಗೆ ನೀಡುತ್ತಾ ಬಂದಿದ್ದಾರೆ. ಇಲ್ಲಿಂದಲೇ ಶಾಲಾ ಕೈತೋಟ ರಚನಾ ಕಾರ್ಯ ಮುಂದುವರೆದು ಇಂದು ಆಕರ್ಷಕವಾಗಿ ಕಾಣುತ್ತಿದೆ.
ಇಂದು ನಡೆದ ಪೋಷಕರ ಸಭೆಯ ಸಂದರ್ಭದಲ್ಲಿ ಮಕ್ಕಳು ಹಾಗೂ ಶಿಕ್ಷಕರು ನೆಟ್ಟು ಬೆಳೆಸಿದ ಒಂದಷ್ಟು ಗಿಡಗಳ ಪ್ರದರ್ಶನ ಮತ್ತು ಮಾರಾಟವನ್ನು ಕೂಡ ಏರ್ಪಡಿಸಲಾಗಿತ್ತು. ಇದರಿಂದ ಮಕ್ಕಳ ಆಸಕ್ತಿ, ಶ್ರಮ, ನಿರಂತರ ತೊಡಗಿಕೊಳ್ಳುವಿಕೆಯನ್ನು ಕಂಡು ಪೋಷಕರು ಖುಷಿಪಟ್ಟರು. ಗಿಡಗಳನ್ನು ಖರೀದಿಸಿ ಹಸಿರನ್ನು ಪಸರಿಸಲು ಸಹಕರಿಸುತ್ತಿರುವ ಪೋಷಕರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದದವರು ಕೃತಜ್ಞತೆಯನ್ನು ಕೂಡ ಸಲ್ಲಿಸಿದ್ದಾರೆ.
ಮೂರು ವರ್ಷದ ಹಿಂದೆಯೇ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮೊದಲು ಆರಂಭಿಸಿದ್ದೆ ಬಾಳೆಯ ತೋಟ. ಶಾಲಾ ಶಿಕ್ಷಕರಾದ ವಿಶ್ವನಾಥ ಇವರ ನೇತೃತ್ವದಲ್ಲಿ ಸುಮಾರು 20 ಕ್ಕಿಂತಲೂ ಹೆಚ್ಚಿನ ಬಗೆಯ ಬಾಳೇ ಗಿಡಗಳನ್ನು ನೆಟ್ಟು, ಬೆಳೆದ ಹಣ್ಣುಗಳನ್ನು ಮಕ್ಕಳಿಗೆ ಹಂಚಲಾಗುತ್ತದೆ. ಮುಂದುವರಿದ ಭಾಗವಾಗಿ ಇದೀಗ ಅಡಿಕೆ ತೋಟ, ಬಾಳೇ ತೋಟ, ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ಬೆಳೆಸ ಬೇಕೆಂಬುದು ಶಿಕ್ಷಕ ವೃಂದದ ಆಶಯ. ಇಲ್ಲಿ ಮುಖ್ಯವಾಗಿ ಪೋಷಕರ ಸಹಕಾರ ಹಾಗೂ ಸಹಭಾಗಿತ್ವ ಕೂಡ ದೊರೆಯುತ್ತಿದೆ.
ಶಾಲಾ ಆವರಣದ ಪ್ರವೇಶಿಸುತ್ತಿದ್ದಂತೆ ಪರಿಸರಕ್ಕೆ ಸಂಬಂಧಿಸಿದ ಭಿತ್ತಿ ಪತ್ರ, ಬರಹಗಳು, ತರಕಾರಿ, ಹಣ್ಣು, ಹೂವುಗಳ ಗಿಡಗಳು ನೋಡುವ ಕುತೂಹಲವನ್ನು ಹೆಚ್ಚಿಸಿದೆ. ಹಸಿರು ಶಾಲಾ ಯೋಜನೆಯ ಭಾಗವಾಗಿ ಈ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿತ್ತು. ಶಾಲಾ ಶಿಕ್ಷಕರು ಹಾಗೂ ಮಕ್ಕಳ ಶ್ರಮದಿಂದ ಶಾಲೆಯಲ್ಲಿ ತರಕಾರಿ ಬೆಳೆದ ಹಣ್ಣು, ಹೂವಿನ ಗಿಡಗಳನ್ನು ಶಾಲೆ ಪ್ರದರ್ಶನ ಹಾಗೂ ಮಾರಾಟ ಮಾಡಿದ ಬಗೆ ನೋಡಿ ನಿಜಕ್ಕೂ ಆಶ್ಚರ್ಯ ಎನಿಸಿತು. ಹಸಿರು ಶಾಲಾ ಯೋಜನೆಯ ಮೂಲಕ ಮನೆಯೂ ಹಸಿರಾಗಿ ಬೆಳೆಯಲು ಸಂದೇಶ ನೀಡುತ್ತಿರುವ ಶಾಲಾ ಶ್ರಮಕ್ಕೆ ನಿಜಕ್ಕೂ ಅಭಿನಂದನೆ ಹೇಳಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.