ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬೀಜ ಬಿತ್ತಿದ್ದ ಕೃಷ್ಣೆಯ ನಾಡಿನ ಕಬೀರ ಇಬ್ರಾಹಿಂ ಸುತಾರ ಇನ್ನು ನೆನಪು ಮಾತ್ರ. ಆದರೆ ತಮ್ಮ ವಚನ, ಭಜನೆ ಮತ್ತು ಸಂವಾದಗಳ ಮೂಲಕ ಅವರು ಪಸರಿಸಿದ್ದ ಭಾವೈಕ್ಯತೆಯ ಕಂಪು ಸದಾ ಹಸಿರಾಗಿರಲಿದೆ ಮತ್ತು ಜನಸಾಮಾನ್ಯರಿಗೆ ಧರ್ಮದ ಕಠಿಣ ಅಂಶಗಳನ್ನು ಸರಳವಾಗಿ ತಿಳಿಯಪಡಿಸಿದ ಅವರ ತತ್ವಪದಗಳು ಸದಾ ಅನುರಣಿಸಲಿದೆ. ದೇವರು, ಧರ್ಮ, ಆರಾಧನೆಯ ವಿಧಾನ ಬೇರೆ ಬೇರೆಯಾದರು ಸತ್ಯ ಒಂದೇ ಎಂಬ ಅವರ ಸಂದೇಶ ನಮ್ಮ ನೆಲದಲ್ಲಿ ಭಾವೈಕ್ಯತೆಯನ್ನು ಜೀವಂತವಾಗಿಡಲಿದೆ.
ಬಾಗಲಕೋಟೆಯ ಮಹಾಲಿಂಗಪುರದ ನಬಿ ಸಾಹೇಬ್ ಹಾಗೂ ಅಮೀನಾಬಿ ದಂಪತಿಯ ಪುತ್ರ ಇಬ್ರಾಹಿಂ ಸುತಾರ ಅವರು ಜನಿಸಿದ್ದು 1940ರ ಮೇ 10ರಂದು. ಬಡತನದ ಕಾರಣದಿಂದ ಮೂರನೇ ತರಗತಿಗಿಂತ ಹೆಚ್ಚು ಕಲಿಯುವುದು ಅವರಿಗೆ ಸಾಧ್ಯವಾಗಿರಲಿಲ್ಲ. ನೇಕಾರಿಕೆಯನ್ನು ವೃತ್ತಿಯಾಗಿ ಮಾಡಿಕೊಂಡು ಅದರಲ್ಲಿ ಬದುಕು ಕಟ್ಟಿಕೊಂಡರು. ಬಾಲ್ಯದಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಮಾಜು, ಕುರಾನ್ ಅಧ್ಯಯನ ಮಾಡಿದರು. ಆಗಲೇ ಅವರಲ್ಲಿ ಬೇರೆ ಧರ್ಮಗಳ ಸಾರ ಅರಿಯುವ ಇಂಗಿತ ಮೊಳಕೆಯೊಡೆಯಿತು. ಈ ಸಂದರ್ಭದಲ್ಲಿ ಅವರ ಊರಿನ ಭಜನಾ ಸಂಘ ಅವರ ಇಂಗಿತಕ್ಕೆ ಇಂಬು ನೀಡಿತು. ಇಲ್ಲಿಂದಲೇ ಅವರ ತತ್ವಪದ, ವಚನ ಕಲಿಕೆ ಆರಂಭವಾಯಿತು. ಉಪನಿಷತ್ತಿನ ಸಾರವನ್ನು ಕೂಡ ಅವರು ಅರಿತುಕೊಂಡರು. ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿವರ್ಷ ಒಂದು ತಿಂಗಳುಗಳ ಕಾಲ ನಡೆಯುತ್ತಿದ್ದ ಪ್ರವಚನಗಳನ್ನು ಅವರು ಕೇಳುತ್ತಿದ್ದರು. ಇದು ಅವರಲ್ಲಿ ಧಾರ್ಮಿಕ ಚಿಂತನೆಗಳು ತಿಳುವಳಿಕೆ ವಿಸ್ತಾರಗೊಳ್ಳಲು ನೆರವಾಯಿತು.
ತತ್ವಪದಗಳ ಅರಿವು, ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಅಧ್ಯಯನ ನನ್ನಲ್ಲಿನ ಧಾರ್ಮಿಕ ಅರಿವನ್ನು ವಿಸ್ತಾರಗೊಳಿಸಿತು ಎಂದು ಸುತಾರ ಅವರೇ ಹೇಳಿಕೊಳ್ಳುತ್ತಿದ್ದರು.
1970ರಲ್ಲಿ ಅವರು ಸಮಾನ ಮನಸ್ಕರೊಂದಿಗೆ ಸೇರಿಕೊಂಡು ‘ಭಾವೈಕ್ಯದ ಜನಪದ ಸಂಗೀತ ಮೇಳ’ ಆರಂಭಿಸಿದರು. ಇದರ ಮುಖೇನ ಭಜನೆ, ತತ್ವ ಪದಗಳನ್ನು ಹಾಡುತ್ತಾ ಜನಸಾಮಾನ್ಯರಿಗೆ ಧರ್ಮದ ಸಾರವನ್ನು ಮನವರಿಕೆ ಮಾಡಿಕೊಡುವ ಕಾರ್ಯದಲ್ಲಿ ತೊಡಗಿಕೊಂಡರು.
ಧರ್ಮ ಧರ್ಮಗಳ ನಡುವೆ ದ್ವೇಷ ಭಾವ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸುತಾರ ಅವರ ಭಾವೈಕ್ಯತೆಯ ಸಂದೇಶಗಳು ಸಾಮರಸ್ಯ ಮೂಡಿಸುವ ಜೀವಸೆಲೆಯಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕಾರ್ಯಗಳಿಗಾಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. 2018ರ ಎಪ್ರಿಲ್ 2ರಂದು ಕೇಂದ್ರ ಸರಕಾರವು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.