“ಆಹಾರಂ ಮಹಾಭೈಷಜ್ಯಮ್” ಎಂಬುದು ಆಯುರ್ವೇದದ ಮೂಲಮಂತ್ರ. ನಿತ್ಯೋಪಯೋಗಿ ಆಹಾರವೇ ಔಷಧ ಎಂದೆನ್ನಲಾದ ಆಯುರ್ವೇದ ತತ್ವ ನಮ್ಮ ಪೂರ್ವಜರ ಮನೆ ಮನಗಳಲ್ಲಿ ಹಾಸುಹೊಕ್ಕಾಗಿತ್ತು. ಇಂದು ಈ ವಿಚಾರವಾಗಿ ಅದೇನೆ ಅಂದರೂ ಮೂಢಾಚರಣೆ, ಅಂಧ ವಿಶ್ವಾಸ ಎನ್ನುತ್ತಾರೆ ಇಲ್ಲವೇ ನಾಲಿಗೆ ಮತ್ತು ಮನಸ್ಸಿನ ಹಿಡಿತ ತಪ್ಪಿಸುವ ಅದೆಷ್ಟೋ ತಿಂಡಿ ತಿನಿಸುಗಳು ತಿಂದ ಮನುಷ್ಯ ಶರೀರವೆಂಬುದು ಲೌಕಿಕ ಸುಖಕ್ಕಾಗಿ, ಸಾಯುವ ಮೊದಲು ಎಲ್ಲವನ್ನೂ ಅನುಭವಿಸು ಎನ್ನುತ್ತಾನೆ. ಇಂದಿನ ಯಾಂತ್ರಿಕ ಜೀವನದಲ್ಲಿ ನಿತ್ಯವೂ ಹಿತಮಿತವಾದ ಆಹಾರದ ಸೇವನೆ ಕ್ಲಿಷ್ಟಕರವಾದ ವಿಷಯವೇ ಸರಿ. ಹಾಗೆಂದು ಸಾಧ್ಯವಾದಾಗ ಸರಿಯಾದ ಆಹಾರ ಕ್ರಮವನ್ನು ರೂಢಿಸಿಕೊಂಡಲ್ಲಿ ಅದೆಷ್ಟೋ ವ್ಯಾಧಿಗಳಿಂದ ದೂರವಿರಬಹುದು.
ಇಂದು ಬಹಳಷ್ಟು ಮಂದಿ ರೋಗದೊಂದಿಗೇ ಜೀವನ ನಡೆಸುತ್ತಿರುವುದು ವಿಪರ್ಯಾಸ. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಈಗಿನ ಆಹಾರ- ವಿಹಾರ ಎಂದಾಕ್ಷಣ ಹಲವರು ವಿಧವಿಧವಾಗಿ ಪ್ರಶ್ನಿಸಿ ಕೊನೆಗೆ ತಮ್ಮ ಜಿಹ್ವೇಂದ್ರಿಯಕ್ಕೆ ಬೇಕಾದಂತೆ ವರ್ತಿಸುತ್ತಾರೆಯೇ ವಿನಃ ಆರೋಗ್ಯದತ್ತ ಚಿತ್ತ ವಿರಳ. ಕೆಲವರಿಗೆ ಹೀಗೂ ಸಂಶಯ ಮೂಡುವುದುಂಟು. ಹೇಗೆಂದರೆ ಒಬ್ಬ ವ್ಯಕ್ತಿ ಬಹಳ ಕಟ್ಟುನಿಟ್ಟಾಗಿ ಆಹಾರಕ್ರಮವನ್ನು ಆಚರಿಸಿದರೂ ಆತ ಭಾರೀ ಆರೋಗ್ಯವಂತನೇನಲ್ಲ. ಅದಕ್ಕಿಂತ ನಾನು ಅಷ್ಟರ ಮಟ್ಟಿಗೆ ಆಹಾರ ಪದ್ಧತಿಯನ್ನು ಅನುಸರಿಸದಿದ್ದರೂ ತಾನು ಆತನಿಗಿಂತ ಬಹಳಷ್ಟು ಆರೋಗ್ಯವಾಗಿದ್ದೇನಲ್ಲಾ ಎನ್ನುತ್ತಾರೆ. ವಿತಂಡವಾದ ಮಾಡದೆ ಒಳ್ಳೆಯ ವಿಚಾರಗಳನ್ನು ಸ್ವೀಕರಿಸುವ ಮನೋಭಾವವಿದ್ದರೆ, ಇಂತಹ ವಿಷಯಗಳನ್ನು ಅರ್ಥೈಸುವುದು ಕಷ್ಟವೇನಲ್ಲ.
ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಶರೀರದ ಕಣಕಣಗಳಲ್ಲಿಯೂ ಅನುವಂಶೀಯವಾಗಿ ಹಲವಾರು ತತ್ವಗಳು, ಜನಿಸುವಾಗಲೇ ವ್ಯಕ್ತಿಯ ದೇಹ, ಆರೋಗ್ಯ, ಅನಾರೋಗ್ಯ ಇತ್ಯಾದಿಗಳನ್ನು ಬೀಜ ರೂಪದಲ್ಲಿ ನಿರ್ಧರಿಸಿರುತ್ತವೆ. ತಂದೆ, ತಾಯಿ ಅವರ ಪೂರ್ವಜರ ಆಹಾರ- ವಿಹಾರ- ವಿಚಾರಗಳು ಮುಂದಿನ ಪೀಳಿಗೆಯ ಮೇಲೆ ಪರಿಣಾಮನ್ನುಂಟು ಮಾಡುತ್ತದೆ. ಅದೇ ಕಾರಣದಿಂದ ಒಂದೇ ತೆರನಾದ ಆಹಾರ ಪದ್ಧತಿಯನ್ನು ಅನುಸರಿಸಿದರೂ ಬೇರೆ ಬೇರೆ ದೇಹ ಪ್ರಕೃತಿಯಿಂದಾಗಿ ಕೆಲವರು ಬಲಿಷ್ಠರಾಗಿಯೂ ಇನ್ನು ಕೆಲವರು ಬಲಹೀನರಾಗಿಯೂ ಕಂಡುಬರಬಹುದು.
ನಿತ್ಯೋಪಯೋಗಿ ಆಹಾರ, ಅದರ ಸೇವನಾ ಕ್ರಮ, ಸೂಕ್ತ ಸಮಯ, ಹಿತ ಅಹಿತ ದ್ರವ್ಯ, ವಿರುದ್ಧ ಆಹಾರ ಇತ್ಯಾದಿ ಬಹಳಷ್ಟು ಜ್ಞಾನ ಆಯುರ್ವೇದದಲ್ಲಿ ಅಡಕವಾಗಿದೆ ಮತ್ತದು ಸಾರ್ವಕಾಲಿಕ ಸತ್ಯ. ಚರಕ ಸಂಹಿತೆಯಲ್ಲಿ ನಿತ್ಯವೂ ಸೇವಿಸಲು ಯೋಗ್ಯವಾದ ಆಹಾರ ಎಂದು
” ಷಷ್ಠಿಕಾಂಶಾಲಿ ಮುದ್ಗಾಂಶ್ಚ ಸೈಂಧವಾಮಲಕೇ ಯವಾನ್ |
ಆಂತರಿಕ್ಷಂ ಪಯಃ ಸರ್ಪಿಃ ಜಾಂಗಲಂ ಮಧು ಚಾಭ್ಯಸೇತ್ ||”
ಷಷ್ಠಿಕಶಾಲಿ, ಹೆಸರುಕಾಳು, ಸೈಂಧುಪ್ಪು, ನೆಲ್ಲಿಕಾಯಿ, ಬಾರ್ಲಿ, ಮಳೆನೀರು (ಶುದ್ಧಜಲ), ಗೋವಿನ ಹಾಲು, ಗೋವಿನ ತುಪ್ಪ, ಜಾಂಗಲ ಮಾಂಸ ಮತ್ತು ಜೇನನ್ನು ಹೇಳಲಾಗಿದೆ. ಋತುಕಾಲ, ದೇಶ, ದೇಹ ಪ್ರಕೃತಿ, ವಯಸ್ಸು, ದೇಹದ ಬಲ ಇತ್ಯಾದಿ ಅಂಶಗಳು ಆಹಾರ ಸೇವನೆಯಲ್ಲಿ ಬಹುಮುಖ್ಯ ಪಾತ್ರವನ್ನುವಹಿಸಿದೆ. ಜೊತೆಗೆ ಅಲ್ಪ ಅಥವಾ ಅತಿಯಾದ ಆಹಾರ ಸೇವನೆ, ಹಸಿವಿಲ್ಲದೆ ಇದ್ದರೂ ಆಗಾಗ ತಿಂಡಿ ತಿನಿಸುಗಳನ್ನು ತಿನ್ನುವುದು, ಏನಾದರೊಂದು ಜಗಿಯುತ್ತಲೇ ಇರುವುದು, ವಿರುದ್ಧ ಆಹಾರದ ಸೇವನೆ ಹೀಗೆ ಹಲವು ಅನಾರೋಗ್ಯಕರ ಕ್ರಮಗಳು ಬೇರೆ ಬೇರೆ ರೀತಿಯ ರೋಗಗಳನ್ನುಂಟು ಮಾಡುತ್ತವೆ. ಕಣ್ಮನ ಸೆಳೆಯುವ, ಮನ ತಣಿಸುವ ಹಲವು ಬಗೆಯ ಚಿತ್ರ ವಿಚಿತ್ರ ತಿಂಡಿ ತಿನಿಸುಗಳ ರಸ ಪಾಕವಾಂತೂ ಇಂದು ಮನುಷ್ಯನ ಜಿಹ್ವೇಂದ್ರಿಯಕ್ಕೆ ಯಾವುದೇ ಲಂಗು ಲಗಾಮಿಲ್ಲದಂತೆ ಮಾಡಿದೆ.
ವೇದವೆಂಬುದು ಭೂತ – ವರ್ತಮಾನ – ಭವಿಷ್ಯತ್ನಲ್ಲೂ ನಿತ್ಯ ಸತ್ಯ. ಸಂಸ್ಕೃತ ಭಾಷೆಯ ಜ್ಞಾನವಿಲ್ಲದೇ, ಅದರಲ್ಲಿರುವ ವೈಜ್ಞಾನಿಕತೆಯ ಅರಿವಿಲ್ಲದೇ, ಅಂತಃ ಚಕ್ಷುವನ್ನು ಸಂಪೂರ್ಣವಾಗಿ ಮರೆತು ಕೇವಲ ಬಾಹ್ಯವಾಗಿ ಕಾಣುವ ವಿಷಯಗಳೇ ನಂಬಲರ್ಹ ಎಂದು ವಾದಿಸುವ ಮನುಷ್ಯನಿಗೆ ಆಯುರ್ವೇದದಲ್ಲಿನ ವಿಚಾರಗಳು ಅಷ್ಟಾಗಿ ರುಚಿಸದು. ಹಾಲಿನಲ್ಲಿ ಲೀನವಾದ ಸಕ್ಕರೆಯ ಅಸ್ಥಿತ್ವ ರುಚಿ ನೋಡಿದಾಗ ತಿಳಿಯುವುದೇ ಹೊರತು ಬರಿಗಣ್ಣಿಗಲ್ಲ. ಅದೇ ರೀತಿ ರೋಗಿಯು ಆರೋಗ್ಯಕ್ಕಾಗಿ, ನಿರೋಗಿಯು ಆರೋಗ್ಯದ ರಕ್ಷಣೆಗಾಗಿ ಸ್ವಾಸ್ಥ್ಯಕರ ಆಹಾರ- ವಿಹಾರಗಳನ್ನು ಶ್ರದ್ಧೆಯಿಂದ ಆಚರಿಸಿ ಅನುಭವಿಸಬೇಕೇ ವಿನಃ ವೃಥಾ ನಿಷ್ಪ್ರಯೋಜಕ ವಿಚಾರ ಎಂದು ಕಡೆಗಣಿಸಿದರೆ ನಷ್ಟ ನಮ್ಮ ಶರೀರಕ್ಕೆ ಎಂಬ ಅರಿವಿನಿಂದ ಮುನ್ನಡೆಯೋಣ.
✍️ ಡಾ. ವಿದ್ಯಾಲಕ್ಷ್ಮೀ ಆಶೀಷ್ ಬಡೆಕ್ಕಿಲ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.