ಭಾರತೀಯ ಭೂಸೇನೆಯಲ್ಲಿ ಕಾರ್ಯನಿರ್ವಹಿಸಿದ ಮೇಜರ್ ಸೋಮನಾಥ್ ಶರ್ಮಾ ಭಾರತದ ಅತ್ಯುನ್ನತ ಮಿಲಿಟರಿ ಪುರಸ್ಕಾರವಾದ ಪರಮ ವೀರ ಚಕ್ರ ಪುರಸ್ಕಾರ ಪಡೆದ ಮೊದಲಿಗರು.
ಸೋಮನಾಥ ಶರ್ಮಾ 31 ಜನವರಿ 1923 ರಂದು ಪಂಜಾಬ್ನ ಕಾಂಗ್ರಾದ ದಾದ್ನಲ್ಲಿ (ಇಂದಿನ ಹಿಮಾಚಲ ಪ್ರದೇಶ)ದಲ್ಲಿ ಜನಿಸಿದರು. ನೈನಿತಾಲ್ನ ಶೆರ್ವುಡ್ ಕಾಲೇಜಿನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ ಸ್ಯಾಂಡ್ಹರ್ಸ್ಟ್ ರಾಯಲ್ ಮಿಲಿಟರಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪಡೆದರು.
ಬಾಲ್ಯದಲ್ಲಿ ಕಲಿತ ಭಗವದ್ಗೀತೆಯು ಸೋಮನಾಥರ ಮೇಲೆ ಬಹಳ ಪ್ರಭಾವವನ್ನು ಬೀರಿತ್ತು. ಫೆಬ್ರವರಿ 22, 1942 ರಂದು, ರಾಯಲ್ ಮಿಲಿಟರಿ ಕಾಲೇಜಿನಿಂದ ಪದವಿ ಪಡೆದ ಅವರನ್ನು ಬ್ರಿಟಿಷ್ ಭಾರತೀಯ ಸೈನ್ಯದ 8 ನೇ ಬೆಟಾಲಿಯನ್, 19 ನೇ ಹೈದರಾಬಾದ್ ರೆಜಿಮೆಂಟ್ ನಲ್ಲಿ ನಿಯೋಜಿಸಲಾಗಿತ್ತು. ಎರಡನೇ ಮಹಾಯುದ್ಧದಲ್ಲಿ ಕರ್ನಲ್ ಕೆ ಎಸ್ ತಿಮ್ಮಯ್ಯ ಅವರ ನೇತೃತ್ವದಲ್ಲಿ ಸೇವೆ ಸಲ್ಲಿಸಿದ್ದ ಮೇಜರ್ ಶರ್ಮಾ ತಮ್ಮ ಚಿಕ್ಕಾಪ್ಪ ಕ್ಯಾಪ್ಟನ್. ಡಿ. ವಾಸುದೇವ ಅವರಿಂದ ಬಹಳ ಪ್ರಭಾವಿತರಾಗಿದ್ದರು.
ಬಡ್ಗಾಮ್ ಕದನ
ಅಕ್ಟೋಬರ್ 27, 1947 ರಂದು ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ನಡೆಸಿದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯ ಒಂದು ತಂಡವನ್ನು ನಿಯೋಜಿಸಲಾಗಿತ್ತು. ಅಕ್ಟೋಬರ್ 31 ರಂದು ಕುಮಾನ್ ರೆಜಿಮೆಂಟ್ನ 4 ನೇ ಬೆಟಾಲಿಯನ್ ಡಿ ಕಂಪನಿಯನ್ನು ಶ್ರೀನಗರಕ್ಕೆ ಮಿಲಿಟರಿ ವಿಮಾನದ ಮೂಲಕ ಕಳಿಸಲಾಯಿತು ಮತ್ತು ಇದರ ನೇತೃತ್ವವನ್ನು ಮೇಜರ್ ಶರ್ಮಾ ಅವರು ವಹಿಸಿದ್ದರು. ನವೆಂಬರ್ 3ರಂದು ಮಧ್ಯಾಹ್ನ 2.30 ಗಂಟೆಯ ಸಮಯದಲ್ಲಿ ಮೇಜರ್ ಶರ್ಮಾ ನೇತೃತ್ವ ವಹಿಸಿದ್ದ ತಂಡದ ಮೇಲೆ ಬಡ್ಗಾಮ್ ನ ಸ್ಥಳೀಯ ಮನೆಗಳಿಂದ ಗುಂಡಿನ ದಾಳಿ ಆರಂಭವಾಯಿತು. ಶ್ರೀನಗರ ಮತ್ತು ವಿಮಾನ ನಿಲ್ದಾಣ ಎರಡನ್ನೂ ಕಳೆದುಕೊಂಡರೆ ಭಾರತೀಯ ಸೇನೆಯ ಸ್ಥಿತಿ ಅತ್ಯಂತ ದುರ್ಬಲವಾಗಬಹುದು ಎಂದು ಅರಿತ ಶರ್ಮಾ ತಮ್ಮ ತಂಡವನ್ನು ಧೈರ್ಯದಿಂದ ಹೋರಾಡಲು ಹುರಿದುಂಬಿಸುತ್ತಾರೆ.
ತನ್ನ ಸೈನಿಕರಿಗೆ ಮದ್ದುಗುಂಡುಗಳನ್ನು ವಿತರಿಸುವ, ಲಘು ಮೆಷಿನ್ ಗನ್ಗಳನ್ನು ನಿರ್ವಹಿಸುವ ಕೆಲಸವನ್ನು ಸ್ವತಃ ವಹಿಸಿಕೊಂಡ ಮೇಜರ್ ಶರ್ಮ ಒಳನುಸುಳುಕೋರರ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದಾಗ ಅವರ ಬಳಿಯಿದ್ದ ಮದ್ದುಗುಂಡುಗಳ ಸಂಗ್ರಹದ ಮೇಲೆ ಶೆಲ್ ಒಂದು ಸ್ಫೋಟಿಸಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡರು.
“ಶತ್ರುಗಳು ನಮ್ಮಿಂದ ಕೇವಲ 50 ಗಜಗಳಷ್ಟು ದೂರದಲ್ಲಿದ್ದಾರೆ. ನಾವು ಕಡಿಮೆ ಸಂಖ್ಯೆಯಲ್ಲಿದ್ದೇವೆ. ನಮ್ಮ ಸುತ್ತಲೂ ಬೆಂಕಿಯುರಿಯುತ್ತಿವೆ. ಆದರೂ ನಾವು ಒಂದಿಂಚೂ ಹಿಂದೆ ಸರಿಯುವುದಿಲ್ಲ. ನಮ್ಮ ಕೊನೆಯ ಸೈನಿಕ ಮತ್ತು ನಮ್ಮ ಕೊನೆಯ ಗುಂಡು ಇರುವವರೆಗೂ ಹೋರಾಡುತ್ತೇನೆ” ಎಂಬುದು ಅವರು ತಮ್ಮ ಪ್ರಧಾನ ಕಚೇರಿಗೆ ಕಳುಹಿಸಿದ ಕೊನೆಯ ಸಂದೇಶವಾಗಿತ್ತು.
ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಿಸುವಲ್ಲಿ 1947 ರ ನವೆಂಬರ್ 3 ರಂದು ಅವರು ಪ್ರದರ್ಶಿಸಿದ ಅಪ್ರತಿಮ ಸಾಹಸವನ್ನು ಗುರುತಿಸಿ ಸೋಮನಾಥ ಶರ್ಮಾ ಅವರಿಗೆ ಮರಣೋತ್ತರವಾಗಿ 21 ಜೂನ್ 1950 ರಂದು ಪರಮ ವೀರ ಚಕ್ರ ಪದಕವನ್ನು ನೀಡಿ ಗೌರವಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.