ನಾಳೆಯ ದಿನ ನನ್ನ ದೇಶದಲ್ಲಿ ಗಾಂಧಿಯ ಹತ್ಯೆಗಾಗಿ ದುಃಖಿಸುವ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲದಿದ್ದರೂ ಪರವಾಗಿಲ್ಲ, ಅವರನ್ನು ಹತ್ಯೆಗೈದ ಗೋಡ್ಸೆಯನ್ನು ಸಮರ್ಥಿಸುವ, ಆರಾಧಿಸುವ, ಗುಡಿಕಟ್ಟುವ ಮೂಲಕ ಕೊಲೆಗಾರನನ್ನು ಹುತಾತ್ಮನನ್ನಾಗಿಸಲು ಪ್ರಯತ್ನಿಸುವ ವ್ಯಕ್ತಿಗಳು ಇಲ್ಲದಿದ್ದರೆ ಸಾಕು, ಈ ದೇಶದಲ್ಲಿ ಗಾಂಧಿ ಯಾವತ್ತೂ ಬದುಕಿರುತ್ತಾರೆ. ನಮ್ಮ ಕಾಲದಲ್ಲಿ ಗಾಂಧಿ ಬಗೆಗೆ ಮಾತನಾಡುವುದು, ಬರೆಯುವುದು ಹೆಚ್ಚೇನೂ ಆಕರ್ಷಕವಾದ ಸಂಗತಿಯಾಗಿಲ್ಲ. ರಾಜಕಾರಣಿಗಳಿಗೂ ಗಾಂಧಿ ಕುರಿತ ಮಾತುಗಳು ಕನಿಷ್ಠ ಮತವನ್ನೂ ತಂದುಕೊಡಲಾರದು. ಇನ್ನೊಂದೆಡೆ ಇಂಥಹ ಸನ್ನಿವೇಶದಲ್ಲಿ ಯುವಜನರು ಗಾಂಧಿಯನ್ನು ಸಂಶಯದಿಂದ ನೋಡುವುದೇ ಸಹಜವಾಗಿ ಬಿಟ್ಟಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಗಾಂಧಿ ನಮ್ಮ ದೇಶಕ್ಕೆ ದ್ರೋಹ ಬಗೆದವರೆನೋ ಎಂಬ ಭಾವನೆಯೇ ಬಲವಾಗುತ್ತಿದೆ. ಈ ಭಾವನೆಯ ಭಾಗವಾಗಿಯೇ ಕೆಲವು ಕ್ಷುಲ್ಲಕ ಮನಸ್ಸಿನ ವ್ಯಕ್ತಿಗಳಿಗೆ ಗಾಂಧಿಯನ್ನು ಹತ್ಯೆಗೈದ ಗೋಡ್ಸೆ ಹುತಾತ್ಮನಾಗಿ ಕಾಣಲಾರಂಭಿಸಿದ್ದು ಕಾಲದ ದುರಂತವೆನ್ನಬೇಕು. ಹಾಗಾದರೆ ಗಾಂಧಿಯ ಸಾವು ಈ ದೇಶದ ಸಮಸ್ಯೆಗಳನ್ನು ಬಗೆಹರಿಸಿತೇ? ಗಾಂಧಿ ಹತ್ಯೆಯನ್ನು ಸಮರ್ಥಿಸುವ ಮನಸ್ಥಿತಿ ಯಾಕಿಂದು ಬೆಳೆಯುತ್ತಿದೆ? ಈ ಕುರಿತು ನಾವು ಗಂಭೀರವಾಗಿ ಚಿಂತನೆಯನ್ನು ನಡೆಸಬೇಕಾಗಿದೆ.
ಬಹುಶಃ ನಮ್ಮ ಬದುಕಿನ ರೀತಿಯೇ ಗಾಂಧಿಯನ್ನು ಈ ಕಾಲಕ್ಕೆ ಅಪ್ರಸ್ತುತನನ್ನಾಗಿಸಿದೆ. ನಮಗೆಲ್ಲರಿಗೂ ಗಾಂಧಿ ಒಂದು ಕಳೆದು ಹೋದ ಯುಗದ ಅಚ್ಚರಿಯೇ ವಿನಃ ವಾಸ್ತವವಲ್ಲ. ಮಾತಿನ ಆದರ್ಶವಾಗಬಹುದೇ ಹೊರತು ಬದುಕೇ ಆಗಲಾರ. ಹೀಗಾಗಿ ಗಾಂಧಿಕ್ಲಾಸ್ ಎನ್ನುವುದು ಮೂರನೇ ದರ್ಜೆಗೆ ಒಂದು ಸಂವಾದಿ ಪದವಾಗಿ ಉಳಿದಿದೆ. ಹಾಗಾದರೆ ಗಾಂಧಿ ಭಾರತಕ್ಕೆ ಏನು ಅಲ್ಲವೇ? ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯ ಪಾತ್ರ ನಿಷ್ಪ್ರಯೋಜಕವೇ? ಅವರು ಸ್ವರಾಜ್ಯದ ಬಗ್ಗೆ ಕಂಡ ಕನಸು ಕಪಟವಾಗಿತ್ತೇ ? ಹುಟ್ಟು ಹಾಕಿದ ಸ್ವದೇಶಿ ಚಳವಳಿ ಪರಿಣಾಮಕಾರಿಯಾಗಿರಲಿಲ್ಲವೇ ? ಗ್ರಾಮ ಭಾರತದ ಕುರಿತಾದ ವಿಶ್ವಾಸ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿರಲಿಲ್ಲವೇ ? ರಾಮರಾಜ್ಯದ ಸಂಕಲ್ಪ ಬರಡಾಗಿತ್ತೇ ? ಇವೆಲ್ಲವೂ ನಿಷ್ಪ್ರಯೋಜಕ ಗಾಂಧಿಯ ಪ್ರಲಾಪಗಳೇ ? ನಾವು ಗಾಂಧಿಯ ಹೋರಾಟದ ಮಾದರಿಯನ್ನು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಆದರೆ ಅವರ ಪಾಲ್ಗೊಳ್ಳುವಿಕೆಯಿಂದ ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾರ್ವತ್ರಿಕತೆಯ ಆಯಾಮ ಪ್ರಾಪ್ತವಾಯಿತು. ಗಾಂಧಿಯ ಹೊರತಾಗಿ ಸ್ವಾತಂತ್ರ್ಯ ಹೋರಾಟ ನಡೆದಿಲ್ಲವೇ ? ಖಂಡಿತವಾಗಿಯೂ ನಡೆದಿದೆ. ಲಕ್ಷಾಂತರ ಜನ ದೇಶಾದ್ಯಂತ ತಮ್ಮದೇ ಮಾದರಿಯಲ್ಲಿ ಹೋರಾಟವನ್ನು ಮಾಡಿದ್ದಾರೆ. ಬಲಿದಾನವನ್ನು ಮಾಡಿದ್ದಾರೆ. ಬ್ರಿಟಿಷರ ಶಸ್ತ್ರ ಸಜ್ಜಿತ ಹೋರಾಟಕ್ಕೆ ಶಸ್ತ್ರದಿಂದಲೇ ಉತ್ತರ ಕೊಟ್ಟಿದ್ದಾರೆ. ಕರಿನೀರಿನ ಶಿಕ್ಷೆಯನುಭವಿಸಿದ್ದಾರೆ, ಗಲ್ಲಿಗೇರಿದ್ದಾರೆ. ಹೌದು. ಗಾಂಧಿಯ ಮಾರ್ಗ ಭಿನ್ನವಾಗಿತ್ತು. ಉಪವಾಸ, ಅಹಿಂಸಾ ಸತ್ಯಾಗ್ರಹ ಅವರ ದಾರಿಯಾಗಿತ್ತು. ಅವರು ಚರಕ ತಿರುಗಿಸಿದ್ದು ಸ್ವರಾಜ್ಯ ಸಂಪಾದನೆಗಾಗಿಯೇ. ಅವರ ಕನಸು ಬ್ರಿಟಿಷರನ್ನು ಭಾರತದಿಂದ ಹೊರಗೋಡಿಸುವುದಕ್ಕಿಂತಲೂ ದೊಡ್ಡದಾಗಿತ್ತು. ಅದು ಬ್ರಿಟಿಷ್ ಭಾರತವನ್ನು ಮರಳಿ ನಿಜವಾದ ಭಾರತವಾಗಿಸುವುದಾಗಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಗಾಂಧಿ ಎಲ್ಲಿದ್ದಾರೆ? ಕೇವಲ ರಸ್ತೆಗೆ, ಮೈದಾನಕ್ಕೆ, ಕಟ್ಟಡಗಳಿಗೆ ಹೆಸರಾಗಿದ್ದಾರೆ. ಅಕ್ಟೋಬರ್ ಮತ್ತು ಜನವರಿ ತಿಂಗಳ ನಾಟಕೀಯ ಸ್ಮರಣೆಗೆ ಸೀಮಿತರಾಗಿದ್ದಾರೆ. ಗಾಂಧಿ ಚಿಂತನೆಗಳು ಬದುಕಿನಿಂದ ಮಾಯವಾಗಿದೆ. ‘ನಮಗಿಂದು ಗಾಂಧಿ ಕನ್ನಡಕ ಸಿಕ್ಕಿದೆ, ಆದರೆ ದೃಷ್ಟಿ ಕಳೆದುಹೋಗಿದೆ’ ಎನ್ನುವ ಚಿಂತಕರ ಮಾತು ಸತ್ಯವಾಗಿದೆ. ಅವರ ವ್ಯಕ್ತಿತ್ವ ಎಷ್ಟು ಅಪರಿಚಿತವಾಗಿದೆ ಎಂದರೆ ‘ಇಂಥ ಒಬ್ಬ ವ್ಯಕ್ತಿ ಎಂದಾದರೂ ಈ ಭೂಮಿಯ ಮೇಲೆ ಸಜೀವವಾಗಿ ನಡೆದಾಡಿದನೇ ಎಂದು ಮುಂದಿನ ಪೀಳಿಗೆಗಳು ನಂಬದೇ ಹೋಗಬಹುದು’ ಎನ್ನುವ ಅಲ್ಬರ್ಟ್ ಐನ್ಸ್ಟಿನ್ ಮಾತುಗಳು ಅಕ್ಷರಶಃ ಸತ್ಯವಾಗುತ್ತಿದೆ.
ಗಾಂಧಿಯ ಬದುಕಿನ ವ್ಯಾಪ್ತಿ ಹಿರಿದು. ಸಮಾಜ ಸುಧಾರಕ, ಶಿಕ್ಷಣ ತಜ್ಞ, ದಾರ್ಶನಿಕ, ತತ್ವಜ್ಞಾನಿ, ಲೇಖಕ, ರಾಜಕಾರಣಿ, ಗ್ರಾಮಗಳಲ್ಲಿ ಭಾರತವನ್ನು ಕಂಡ ಗಾಂಧಿ ಹೇಗೆ ಅಪ್ರಸ್ತುತರಾಗಬಲ್ಲರು? ಅವರ ಹೋರಾಟದ ದಾರಿಯ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರ ಕನಸು ಹುಸಿಯಾಗಿರಲಿಲ್ಲ. ಗಾಂಧಿ ಬದುಕಿದ್ದ ಕಾಲಕ್ಕೇ ಎಲ್ಲಾ ರೀತಿಯ ಸ್ತುತಿ ನಿಂದೆಗಳಿಗೆ ಸಾಕ್ಷಿಯಾಗಿದ್ದರು. ಅವರನ್ನು ಕಣ್ಮುಚ್ಚಿ ಅನುಕರಿಸಬಲ್ಲ ಸಾವಿರಾರು ಅನುಯಾಯಿಗಳಿದ್ದಂತೆ, ಪ್ರತಿ ನಿಲುವನ್ನೂ ಪ್ರಶ್ನಿಸಿದ್ದ ಕಟು ವಿಮರ್ಶಕರೂ ಇದ್ದರು. ಗಾಂಧಿ ಇವೆಲ್ಲವನ್ನೂ ಮೀರಿ ಬೆಳೆದಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಈ ಕಾರಣಕ್ಕಾಗಿಯೇ ಇರಬೇಕು. ಇಂದಿಗೂ ಗಾಂಧಿ ಜಗತ್ತಿನ ಕಣ್ಣಿಗೆ ಅಚ್ಚರಿಯ ವ್ಯಕ್ತಿತ್ವ. ಅದೆಷ್ಟು ದೇಶಗಳಲ್ಲಿ ಗಾಂಧಿ ಪ್ರತಿಮೆಗಳು ತಲೆ ಎತ್ತಿ ನಿಂತಿಲ್ಲ? ಅದೆಷ್ಟು ಗಾಂಧಿ ಹೆಸರಿನ ಅಧ್ಯಯನ ಕೇಂದ್ರಗಳನ್ನು ತೆರೆದಿಲ್ಲ? ಯಾಕೆ ಪ್ರತಿ ವರ್ಷವೂ ಆ ಒಬ್ಬ ವ್ಯಕ್ತಿಯ ಬಗೆಗೆ ಹತ್ತಾರು ಪುಸ್ತಕಗಳು, ನೂರಾರು ಲೇಖನಗಳು ಪ್ರಕಟವಾಗುತ್ತಿದೆ? ಗಾಂಧಿ ಅಪ್ರಸ್ತುತನಲ್ಲವೆಂದಲ್ಲವೇ? ಹಾಗಿದ್ದರೂ ಯಾಕೆ ಗಾಂಧಿಗಿಂತ ಗೋಡ್ಸೆಯನ್ನು ಆರಾಧಿಸುವತ್ತ ಸಮಾಜ ಸಾಗುತ್ತಿದೆ? ಇದಕ್ಕೆ ಕಾರಣ ನಾವು ಬದುಕುತ್ತಿರುವ ನಾಗರಿಕತೆಗೆ ಗಾಂಧಿ ಕಾಲಬಾಹಿರವಾಗಿ ಕಾಣುತ್ತಾರೆ. ಮತನೀಡುವ ಮತದಾರರಿಗೂ, ಆಯ್ಕೆಯಾಗುವ ಜನಪ್ರತಿನಿಧಿಗಳಿಗೂ ಗಾಂಧಿ ಬೇಕಾಗಿಲ್ಲ. ಅವರ ಚಿಂತನೆಗಳು ಅನುಷ್ಠಾನಗೊಳ್ಳುವುದು ಬೇಕಾಗಲಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಕೆಲವು ರಾಜಕಾರಣಿಗಳಿಗೆ ತಮ್ಮ ಗಾಂಧಿ ವಾರಸುದಾರಿಕೆ ನೆನಪಾಗುತ್ತಿತ್ತೇ ವಿನಃ ಆಳುವಾಗ ಗಾಂಧಿತತ್ವ ನೆನಪಾಗಲಿಲ್ಲ.
ಗಾಂಧಿಯ ಅಸ್ಪಶ್ಯತಾ ನಿವಾರಣೆಯ ಕಲ್ಪನೆಯ ಬಗ್ಗೆ ಅಂಬೇಡ್ಕರ್ ಅವರಿಗೆ ಸಾಕಷ್ಟು ತಕರಾರುಗಳಿತ್ತು. ಅವರ ಹೋರಾಟದ ಮಾರ್ಗದ ಕುರಿತು ಸಾವರ್ಕರ್ ಅವರಿಗೆ ಭಿನ್ನಾಭಿಪ್ರಾಯಗಳಿತ್ತು. ಬ್ರಿಟಿಷರು ಸಂಕಟಕ್ಕೆ ಸಿಲುಕಿದ ಹೊತ್ತಿನಲ್ಲಿ ಭಾರತ ಸ್ವಾತಂತ್ರ್ಯವನ್ನು ಪಡೆಯಬೇಕೆನ್ನುವ ನೇತಾಜಿಯ ನಿಲುವಿನ ಜತೆಗೆ ಸಮ್ಮತಿ ಇರಲಿಲ್ಲ. ಹೀಗಿದ್ದರೂ ಪರಸ್ಪರರಲ್ಲಿ ಗೌರವ ಇತ್ತು. ಸ್ವತಂತ್ರ ಭಾರತದ ಸಂವಿಧಾನ ರಚನಾ ಸಭೆಗೆ ಗಾಂಧಿಯೇ ಅಂಬೇಡ್ಕರ್ ಹೆಸರನ್ನು ಸೂಚಿಸುತ್ತಾರೆ. ಸಾವರ್ಕರ್ ರತ್ನಗಿರಿಯಲ್ಲಿ ನಿರ್ಬಂಧಿತರಾಗಿದ್ದಾಗ ಅವರ ನಿವಾಸಕ್ಕೆ ತೆರಳಿ ಗಾಂಧಿ ಬೇಟಿಯಾಗುತ್ತಾರೆ. ಮಹಾತ್ಮ ಗಾಂಧಿಯೊಳಗಿನ ಮಹಾತ್ಮನನ್ನು ರಾಜಕಾರಣಿ ಗಾಂಧಿ ಹತ್ತಿಕ್ಕಿದ್ದರೆನ್ನುವುದು ಅಂಬೇಡ್ಕರ್ ಮಾತ್ರವಲ್ಲ, ನೇತಾಜಿಯವರ ಸಂದರ್ಭದಲ್ಲೂ ನಿಜವಾಯಿತು. ಹೀಗಿದ್ದರೂ ಗಾಂಧಿಯ ಹಿರಿಮೆ ಕಡಿಮೆಯಾಯಿತು ಎಂದು ಹೇಳಲಾಗದು. ಈ ಎಲ್ಲಾ ಭಿನ್ನಾಭಿಪ್ರಾಯಗಳೂ ಅವರ ವ್ಯಕ್ತಿತ್ವದ ಭಾಗಗಳೇ. ಆದರೆ ಗೋಡ್ಸೆಗೆ ಗಾಂಧಿಯ ವ್ಯಕ್ತಿತ್ವದ ಹಿರಿಮೆ ಅರ್ಥವಾಗುವಷ್ಟು ಪ್ರಬುದ್ಧತೆಯೂ ಇರಲಿಲ್ಲ. ಗೋಡ್ಸೆಯ ಸಮರ್ಥನೆಯೂ ಪ್ರಬುದ್ಧತೆಯಾಗಲಾರದು. ದೇಶಭಕ್ತಿಯೂ ಆಗಲಾರದು.
ನಮಗಿಂದು ಬೇಕಾಗಿರುವುದು ಜಗಳವಾಡಬಹುದಾದ ಗಾಂಧಿಯೇ. ಗಾಂಧಿಯ ಸಮೀಪವೇ ಕುಳಿತು ಅವರ ಕನಸಿನ ಒಂದಂಶವನ್ನೂ ಪಡೆಯದೇ ಹೋದ ನೆಹರೂ ಅವರನ್ನು ಒಳಗೊಂಡಂತೆ ಮುಂದಿನ ಸರ್ಕಾರಗಳು ಗಾಂಧಿಯನ್ನು ಪ್ರತಿಮೆಯಾಗಿಸಿತೇ ವಿನಃ ಆಚರಣೆಗೆ ತರಲಿಲ್ಲ. ತಂದಿದ್ದರೆ ನಮ್ಮ ಗ್ರಾಮ ಭಾರತ ಬೆಳಗುತ್ತಿತ್ತು. ಸ್ವದೇಶಿ ನಮ್ಮ ಆರ್ಥಿಕ ಚಿಂತನೆಯ ಕೇಂದ್ರಬಿಂದುವಾಗುತ್ತಿತ್ತು. ಬ್ರಿಟಿಷರು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಬೇರು ಸಹಿತ ನಾಶಮಾಡಿದರೆನ್ನುವ ಗಾಂಧಿಯ ಆಪಾದನೆಗೆ ಸ್ವತಂತ್ರ ಭಾರತವಾದರೂ ಉತ್ತರ ರೂಪದಲ್ಲಿ ತನ್ನನ್ನು ತಾನು ಕಂಡುಕೊಳ್ಳಲು ಪ್ರಯತ್ನಿಸುತ್ತಿತ್ತು. ಇಂದು ಇಡೀ ಭಾರತವನ್ನು ಕಾಡುತ್ತಿರುವ ಭೀಕರ ರೋಗಗಳಲ್ಲಿ ಕೆಲವಾದರೂ ನಿವಾರಣೆಯಾಗುತ್ತಿತ್ತು. ಕನಿಷ್ಠ ಅವರು ಹೇಳಿದ ಸಪ್ತ ಪಾತಕಗಳಿಂದ ಈ ದೇಶ ಮುಕ್ತವಾಗಿದ್ದರೆ ಭಾರತ ವಿಶ್ವಗುರುವಾಗುವ ದಿನಗಳಿಗೆ ಸಮೀಪದಲ್ಲಿರುತ್ತಿತ್ತು. ತತ್ವ ರಹಿತ ರಾಜಕಾರಣ ಸೃಷ್ಟಿಸಿದ ದುರಂತ ,ದುಡಿಮೆ ಇಲ್ಲದ ಸಂಪತ್ತುಗಳಿಸುವ ಮೋಹದಿಂದ ತುಳಿದಿರುವ ಕೆಟ್ಟ ಹಾದಿ, ಆತ್ಮ ಸಾಕ್ಷಿ ಇಲ್ಲದ ಸಂತೋಷಕ್ಕೆ ದಾಸರಾದ ಪರಿಣಾಮ , ಚಾರಿತ್ರ್ಯವಿಲ್ಲದ ಶಿಕ್ಷಣದ ಪರಿಣಾಮವಾದ ನೈತಿಕತೆಯ ಕುಸಿತ, ನೀತಿ ಇಲ್ಲದ ವ್ಯಾಪಾರವು ಹುಟ್ಟುಹಾಕಿದ ಮೋಹ, ಮಾನವೀಯತೆ ಇಲ್ಲದ ಜ್ಞಾನದ ಬಲಿಪಶುಗಳು ಹಾಗೂ ತ್ಯಾಗವಿಲ್ಲದ ಪೂಜೆಯ ದುರಂತಗಳನ್ನು ನಾವಿಂದು ಪ್ರತಿನಿತ್ಯವೂ ನೋಡುತ್ತಿದ್ದೇವೆ. ಕನಿಷ್ಠ ಗಾಂಧಿ ನಮ್ಮೊಳಗಿನ ಪ್ರಜ್ಞೆಯಾಗಿದ್ದಿದ್ದರೆ ನಮ್ಮ ಬದುಕು ಇನ್ನಷ್ಟು ಸಹ್ಯವಾಗಿರುತ್ತಿತ್ತು. ಆದರೆ ಗಾಂಧಿ ಗೋಡ್ಸೆಗಷ್ಟೇ ಬೇಡವಾದುದಲ್ಲ, ಗಾಂಧಿ ಆರಾಧಕರಿಗೂ ಬೇಡವಾದರು. ಯಾವ ಗಾಂಧಿಯು ಈ ದೇಶದ ಯಾವುದೋ ಹಳ್ಳಿಯ ಸಾಮಾನ್ಯ ತಾಯಿಯೊಬ್ಬಳು ತನ್ನ ಮೈಮೇಲಿನ ಒಡವೆಗಳನ್ನೆಲ್ಲಾ ಕಳಚಿ ಸ್ವಾತಂತ್ರ್ಯ ಹೋರಾಟಕ್ಕಾಗಿ ನೀಡಬಲ್ಲಷ್ಟು ನಂಬಿಕೆಗೆ ಅರ್ಹವಾಗಿದ್ದರೋ, ಯಾವ ಗಾಂಧಿಯ ಒಂದು ಕರೆಗೆ ಈ ದೇಶದ ಸಾವಿರಾರು ತರುಣ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ತೊರೆದು ದೇಶದ ಬಿಡುಗಡೆಗೆ ಸತ್ಯಾಗ್ರಹಿಗಳಾಗಲು ಮುನ್ನುಗ್ಗಿ ಬರುವಂತೆ ಮಾಡಿದ್ದರೋ, ಯಾವ ಗಾಂಧಿ ತನ್ನ ವಸ್ತçದಿಂದಲ್ಲ, ಕತೃತ್ವದಿಂದ ಈ ದೇಶದ ಮನಗೆದ್ದಿದ್ದರೋ ಅಂತಹ ಗಾಂಧಿಯನ್ನು ಒಬ್ಬ ಗೋಡ್ಸೆಯಷ್ಟೇ ಕೊಂದದ್ದಲ್ಲ. ಗಾಂಧಿತತ್ವವನ್ನು ಮೂಲೆಗಿಟ್ಟು ನಮ್ಮ ಮಾತಿನ ಚಪಲಕ್ಕೆ ಮಾತ್ರ ಸರಕಾಗಿಸಿ, ಹಾಗೆ ಬದುಕದ ಕಪಟತನವನ್ನು ತೋರಿದ ನಾವೇಲ್ಲರೂ ಪಾಲುದಾರರಲ್ಲವೇ? ನಮ್ಮ ದಾವಂತಕ್ಕೆ ಬಹುಶಃ ಗಾಂಧಿ ಸತ್ತು ಮಾತ್ರ ಅಪ್ರಸ್ತುತರಾದುದಲ್ಲ, ಅವರು ಬದುಕಿದ್ದರೂ ಅಪ್ರಸ್ತುತರಾಗುತ್ತಿದ್ದರೆನೋ?
ಜಗತ್ತನ್ನು ಅನ್ಯವಾಗಿಸದೆ ಸ್ವದೇಶಿಯನ್ನು, ಸ್ವರಾಜ್ಯನ್ನು ಪ್ರತಿಪಾದಿಸಲು ಅವರಿಗೆ ಸಾಧ್ಯವಾಯಿತು. ಗಾಂಧಿ ಭಾರತೀಯತೆಯ ಸಾರ್ವಕಾಲಿಕ ಶ್ರೇಷ್ಠ ಪ್ರತಿನಿಧಿಯಾಗಿಯೇ ಇರುತ್ತಾರೆ. ನಮ್ಮ ತಲೆಮಾರಿಗೆ ಗಾಂಧಿಯ ಮೂಲಕ ಭಾರತವನ್ನು ನೋಡಲು ಸಾಧ್ಯವಾಗಬೇಕು. ಹಳ್ಳಿಗಳೇ ಭಾರತದ ಆತ್ಮ ಎಂದ ಗಾಂಧಿಯ ಹೇಳಿಕೆ ಕೇವಲ ತೋರ್ಪಡಿಕೆಗಾಗಿ ಆಗಿರಲಿಲ್ಲ, ಈ ದೇಶದ ಹಳ್ಳಿಗಳ ಸೃಷ್ಟಿ ಸಾಮರ್ಥ್ಯವನ್ನು ಅರಿತುಕೊಂಡೇ ಹೇಳಿದ್ದರು. ಆದರೆ ನಾವು ಕಟ್ಟಿದ ನಾಗರಿಕತೆಯ ಪರಿಣಾಮ ಇಂದು ನಮ್ಮ ಹಳ್ಳಿಗಳು ವೃದ್ದಾಶ್ರಮಗಳಾಗಿದೆ ಎಂದರೆ ಅದಕ್ಕೆ ಕಾರಣ ನಾವು ಗಾಂಧಿಯನ್ನು ಅಪ್ರಸ್ತುತ ಎಂದು ಭಾವಿಸಿದ್ದು ಕೂಡ. ಗಾಂಧಿಯನ್ನು ನಾವು ನೋಡುವ ದೃಷ್ಟಿಯಲ್ಲೇ ಬಹುಶಃ ದೋಷವಿದೆ. ಅವರನ್ನು ಯಾವುದೋ ಕೆಲವು ನಿರ್ಧಿಷ್ಟ ಘಟನಾವಳಿಗಳಿಗೆ ಮಾತ್ರ ಸೀಮಿತಗೊಳಿಸಿ ವ್ಯಾಖ್ಯಾನಿಸಲಾಗುತ್ತಿದೆ. ಪರಿಣಾಮವಾಗಿ ಗಾಂಧಿಯು ನಮ್ಮ ತಲೆಮಾರಿಗೆ ಸೈತಾನನಾಗಿ ಕಾಣುವಂತಾಯಿತು. ಈ ಚಿತ್ರಣವನ್ನು ಬದಲಾಯಿಸುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಬಾಪುವಿನ ಹೆಜ್ಜೆಗುರುತುಗಳನ್ನು ಹುಡುಕುತ್ತಾ ನಾವಿಂದು ನಡೆಯಬೇಕಾಗಿದೆ. ಸ್ವದೇಶಿ ಚಳವಳಿಗೆ, ಗ್ರಾಮ ಭಾರತದ ಪುನರುಜ್ಜೀವನಕ್ಕೆ, ಗೋಸಂರಕ್ಷಣೆಗೆ, ಅಸ್ಪೃಶ್ಯತೆಯ ನಿವಾರಣೆಗೆ, ಮಹಿಳಾ ಗೌರವದ ಮರುಸ್ಥಾಪನೆಗೆ, ಶಿಕ್ಷಣದ ಭಾರತೀಕರಣಕ್ಕೆ, ರಾಜಕಾರಣದ ನೈತಿಕತೆಗೆ ಹಾಗೂ ಇವೆಲ್ಲದಕ್ಕೂ ಕಲಶಪ್ರಾಯವಾದ ರಾಮರಾಜ್ಯದ ಸ್ಥಾಪನೆಗೆ ಗಾಂಧಿ ಚಿಂತನೆಗಳು ಕೈದೀವಿಗೆಯಾಗಬಲ್ಲುದು. ಇವೆಲ್ಲವೂ ಗಾಂಧಿ ಕನಸಾಗಿತ್ತು. ಸ್ವಾತಂತ್ರö್ಯ ಹೋರಾಟವೆಂಬ ಸಂಕೀರ್ಣ ಸಂಕಟದ ಕಾಲದಲ್ಲೂ ಗಾಂಧಿ ಜಗತ್ತಿಗೆ ತೋರಿಸಿದ್ದು ಭಾರತದ ಶ್ರೀಮಂತಿಕೆಯನ್ನೇ. ಜಗತ್ತು ಭಾರತದಿಂದ ಪಡೆದ ಅನೇಕ ಅನರ್ಘ್ಯ ರತ್ನಗಳ ಸಾಲಿನಲ್ಲಿ ಗಾಂಧಿಯೂ ಒಬ್ಬರು. ಗಾಂಧಿಯನ್ನು ಮರೆತರೆ ಭಾರತ ಬಡವಾಗುತ್ತದೆ. ಯಾಕೆಂದರೆ ಗಾಂಧಿಯಂಥ ವ್ಯಕ್ತಿತ್ವವನ್ನು ಭಾರತ ಮಾತ್ರ ನೀಡಬಲ್ಲುದು ಎನ್ನುವುದು ಉತ್ಪ್ರೇಕ್ಷೆಯಾಗಲಾರದು. ಮಹಾತ್ಮನ ನಾಡಿನಲ್ಲಿ ನಡೆದಾಡುವ ನಮ್ಮೊಳಗೆ ಆ ಮಹಾನತೆಯ ಕಿಂಚಿತ್ತಾದರೂ ಜೀವಂತವಾಗಿ ಉಳಿದರೆ ಅದೇ ನಾವು ಸಲ್ಲಿಸಬಹುದಾದ ಅತಿ ದೊಡ್ಡ ಗೌರವ. ನಮ್ಮ ಬದುಕನ್ನು ಸತ್ವ ಪೂರ್ಣವಾಗಿಸಲು ಗಾಂಧಿಯನ್ನು ಸ್ಮರಿಸೋಣ.
✍️ ಡಾ.ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.