ಪೊಪತ್ರೋ ರಾವ್ ದೊಡ್ಡ ರಾಜಕಾರಣಿಯಲ್ಲ, ಸಮಾಜ ಉದ್ಧಾರಕ ಎಂದು ಹೆಸರು ಪಡೆಯುವ ಆಸೆಯೂ ಅವರಿಗಿಲ್ಲ, ಅವರು ಒಂದು ಸಣ್ಣ ಹಳ್ಳಿಯ ಸರ್ಪಂಚ್ ಅಷ್ಟೇ. ಆದರೆ ಇವರು ಮಾಡಿದ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಟ್ಟುಕೊಳ್ಳಬೇಕು.
ಮಹಾರಾಷ್ಟ್ರದ ಅಹ್ಮದ್ನಗರ್ ಜಿಲ್ಲೆಯ ಹಿವಾರೆ ಬಝಾರ್ ಗ್ರಾಮದ ಸರ್ಪಂಚ್ ಆಗಿರುವ ಇವರು, ಯಾರ ಸಹಾಯವನ್ನೂ ಪಡೆಯದೆ ಬರ ಪೀಡಿತ ಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿ ನಿಜವಾದ ಸೇವೆ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇಂದು ಹಿವಾರೆ ಗ್ರಾಮದಲ್ಲಿ ಬೇಕಾದಷ್ಟು ನೀರಿದೆ, ವಿದ್ಯುತ್ ಇದೆ, ಶಿಕ್ಷಣ ಮತ್ತು ಆರೋಗ್ಯದಲ್ಲೂ ಸಾಕಷ್ಟು ಮುಂದುವರೆದಿದೆ. ಸ್ವಆಡಳಿತ ಮತ್ತು ಸ್ವಾವಲಂಭಿ ಪದಕ್ಕೆ ಪರ್ಯಾಯವಾಗಿ ಈ ಹಳ್ಳಿ ನಿಲ್ಲುತ್ತದೆ. ಈ ಮಟ್ಟಕ್ಕೆ ಅದು ಬೆಳೆಯಲು ಕಾರಣಿಕರ್ತರಾದವರು ಪೊಪತ್ರೊ. ಅವರ ಪರಿಶ್ರಮದ ಫಲವಾಗಿ ಇಂದು ಅದು ಮಾದರಿ ಗ್ರಾಮವಾಗಿದೆ.
1972ರಲ್ಲಿ ಪದವಿ ಪಡೆದ ಪೊಪತ್ರೊ ಯಾವುದೇ ಉದ್ಯೋಗಕ್ಕೆ ಸೇರದೆ, ನೇರವಾಗಿ ಹಳ್ಳಿಗೆ ಬಂದು ಅಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಹಳ್ಳಿಯಲ್ಲಿ ಹೆಚ್ಚು ವಿದ್ಯಾವಂತರಾಗಿರುವ ಇವರು ಹಳ್ಳಿಗರ ನಿರೀಕ್ಷೆಯಂತೆಯೇ ಗ್ರಾಮವನ್ನು ಅಭಿವೃದ್ಧಿಗೊಳಿಸಿದರು, ಗ್ರಾಮಸ್ಥರ ಜೀವನವನ್ನು ಸುಧಾರಿಸಿದರು. ಒಬ್ಬ ಅತ್ಯುತ್ತಮ ಸರ್ಪಂಚ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲ ಹಂತವಾಗಿ ನಾಲ್ಕನೇ ತರಗತಿಯವರೆಗೆ ಇದ್ದ ಶಾಲೆಯನ್ನು 1೦ನೇ ತರಗತಿಗೆ ಏರಿಸಿದರು, ಇದರಿಂದ ಹಳ್ಳಿ ಮಕ್ಕಳ ಶಿಕ್ಷಣ ಸುಗಮವಾಯಿತು. ಬಳಿಕ ನೀರಾವರಿ ಯೋಜನೆ ಕೈಗೊಂಡ ಇವರು, ಅಂತರ್ಜಲವನ್ನು ಬರಿದಾಗಿಸುವ ಬೋರ್ವೆಲ್, ಟ್ಯೂಬ್ವೆಲ್ಗಳನ್ನು ನಿಷೇಧಿಸಿದರು. ಅಲ್ಲದೇ ತೆರೆದ ಬಾವಿಗಳನ್ನು ಬಳಸುವಂತೆ ಕರೆ ನೀಡಿದರು. ಅಷ್ಟೇ ಅಲ್ಲದೇ 4೦ ಸಾವಿರ ಕಾಲುವೆಗಳನ್ನು ನಿರ್ಮಿಸಿದರು, ಇದರಿಂದ ಅಂತರ್ಜಲವನ್ನು ಉಳಿಸಲು ಸಾಧ್ಯವಾಯಿತು. ಕಡಿಮೆ ನೀರಿನಿಂದ ಬೆಳೆಸುವ ಬೂದಿ ಬೆಳೆಗಳನ್ನು ಪರಿಚಯಿಸಿದರು, ಅರಣ್ಯನಾಶವನ್ನು ನಿಷೇಧಿಸಿದರು. ಕಳೆದ ದಶಕದಿಂದ 1೦ ಲಕ್ಷ ಮರಗಳನ್ನು ನೆಟ್ಟರು. 1995ರಲ್ಲಿ ಆದರ್ಶ್ ಗಾಂವ್ ಯೋಜನೆ ಆರಂಭವಾದಾಗ ಈ ಹಳ್ಳಿಯನ್ನು ಮಾದರಿ ಹಳ್ಳಿಯನ್ನಾಗಿ ಪರಿವರ್ತಿಸಲು ದತ್ತು ಪಡೆದುಕೊಳ್ಳಲಾಯಿತು.
ಇಂದು ಹಿವಾರೆ ಅತ್ಯಂತ ಸಮೃದ್ಧ ಹಳ್ಳಿ, ಇದಕ್ಕೆ ಕೇಂದ್ರದ ಯೋಜನೆಗಳು ಕಾರಣವಲ್ಲ, ಬದಲಾಗಿ ಆ ಹಳ್ಳಿಯ ಸಂಸತ್ತು ಮತ್ತು ಅಲ್ಲಿನ ಸರ್ಪಂಚ್. ಇಲ್ಲಿ ಕುಟುಂಬ ಯೋಜನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ, ಏಡ್ಸ್ ತಡೆಗಟ್ಟುವಿಕೆಯ ಅರಿವು ಮೂಡಿಸಲಾಗಿದೆ. ಲಿಂಗಾನುಪಾತ ಮಹಿಳೆಯರ ಪರವಾಗಿ ಇರುವ ದೇಶದ ಕೆಲವೇ ಕೆಲವು ಹಳ್ಳಿಗಳಲ್ಲಿ ಈ ಹಳ್ಳಿಯೂ ಒಂದು.
ಪಂಚಾಯತ್ ಚುನಾವಣೆಗೆ ನಿಂತ ಬಳಿಕ ಹಳ್ಳಿಯ ಅಭಿವೃದ್ಧಿಯನ್ನು ಮರೆಯುವವರೆ ಹೆಚ್ಚು, ಅದೇ ಕಾರಣಕ್ಕೆ ಭಾರತದ ಬಹುತೇಕ ಹಳ್ಳಿಗಳು ಇಂದಿಗೂ ಕುಗ್ರಾಮವಾಗಿಯೇ ಉಳಿದಿವೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಪೊಪತ್ರೋ ರಾವ್ ಕಾರ್ಯ ನಿರ್ವಹಿಸಿದ್ದಾರೆ. ದೇಶಕ್ಕೊಂದು ಮಾದರಿ, ಸಮೃದ್ಧ ಹಳ್ಳಿಯನ್ನು ನಿರ್ಮಿಸಿದ್ದಾರೆ. ಅವರ ಈ ಕಾರ್ಯಕ್ಕೆ ಹ್ಯಾಟ್ಸಾಫ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.