ವ್ಯಾಲೈಂಟೆನ್ಸ್ ಡೇ ಯಾವತ್ತು ಎಂದು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರ ತನಕ ಯಾರನ್ನೇ ಕೇಳಿದರೂ ಒಂದು ಕ್ಷಣವೂ ಯೋಚಿಸದೆ ಸರಿಯಾದ ಉತ್ತರ ನೀಡುತ್ತಾರೆ, ಆದರೆ ಆಗಸ್ಟ್ 29ರಂದು ಏನು ವಿಶೇಷ ಎಂದು ಕೇಳಿದರೆ ಉತ್ತರ ಅಂದು ಭಾನುವಾರ, ಶನಿವಾರ ಎಂದಾಗಿರುತ್ತದೆ. ಈ ದಿನ ನಮ್ಮ ರಾಷ್ಟ್ರೀಯ ಕ್ರೀಡಾ ದಿನ ಎಂಬ ಅರಿವು, ನೆನಪು ಯಾರಿಗೂ ಇರುವುದಿಲ್ಲ.
ಪ್ರತಿ ವರ್ಷ ಆಗಸ್ಟ್ 29ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮಹಾನ್ ಹಾಕಿ ಪಟು ಮೇಜರ್ ಧ್ಯಾನ್ ಚಂದ್ ಅವರು ಜನಿಸಿದ ದಿನ ಇದು, ಅವರ ಸ್ಮರಣಾರ್ಥ ದೇಶದಲ್ಲಿ ಪ್ರತಿ ವರ್ಷ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.
ಈ ದಿನ ಕೇಂದ್ರ ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಸಾಧಕರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಇತರ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರನ್ನು ಸನ್ಮಾನಿಸುತ್ತದೆ. ಪ್ರತಿ ವರ್ಷ ಕ್ರೀಡಾ ದಿನದಂದು ಈ ಸಮಾರಂಭ ಏರ್ಪಡುತ್ತದೆ. ಆದರೆ ದುರಾದೃಷ್ಟ ಇದರ ಹಿಂದಿನ ಉದ್ದೇಶ ಯಾರಿಗೂ ತಿಳಿಯದೇ ಇರುವುದು.
ಭಾರತೀಯ ಹಾಕಿಯನ್ನು ಉತ್ತುಂಗಕ್ಕೆ ಏರಿಸಿದ್ದ ಮಹಾನ್ ಚೇತನ ಧ್ಯಾನ್ ಚಂದ್ ಅವರ ನೆನಪಲ್ಲಿ ನಮ್ಮ ಸರ್ಕಾರ ಇಷ್ಟಾದರು ಮಾಡುತ್ತಿದೆಯಲ್ಲಾ ಎಂಬುದೇ ಸಂತಸ. ಆದರೆ ಇದರಿಂದ ಮಾತ್ರ ದೇಶದಲ್ಲಿ ಕ್ರೀಡೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಕ್ರೀಡೆಯ ಮೇಲೆ ಆಸಕ್ತಿ ಬರುವಂತೆ ನೋಡಿಕೊಂಡು, ಕ್ರೀಡಾಳುಗಳಿಗೆ ಸದಾ ಉತ್ಸಾಹ, ಪ್ರೋತ್ಸಾಹಗಳನ್ನು ನೀಡುವ ಕಾರ್ಯವೂ ಆಗಬೇಕು. ಭಾರತದಲ್ಲಿ ಕ್ರೀಡೆಯನ್ನು ಬೆಳೆಸಲು ಶಾಲೆಗಳಿಗಿಂತ ಉತ್ತಮ ಸ್ಥಳ ಬೇರೊಂದಿಲ್ಲ.
ಕ್ರೀಡೆ ಎಂಬುದು ಕೇವಲ ತರಬೇತಿ ಮಾತ್ರವಲ್ಲ, ಅದನ್ನು ಸಂಸ್ಕೃತಿಯಾಗಿ ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕು. ಸಿಕ್ಕ ಸಿಕ್ಕ ದಿನಗಳನ್ನು ಕಾಲೇಜು ಕ್ಯಾಂಪಸ್ನಲ್ಲಿ ಆಯೋಜಿಸಲಾಗುತ್ತದೆ. ಆದರೆ ಕ್ರೀಡಾ ದಿನವನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ದಿನಾಚರಣೆಯನ್ನು ಕಡ್ಡಾಯಗೊಳಿಸುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.