ಪಾಲ್ತಾಡಿ : ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಸಮಸ್ಯೆಗಳು ಈಗಲೂ ಉಳಿದುಕೊಂಡಿದೆ ಎಂಬುದಕ್ಕೆ ಸವಣೂರು ಗ್ರಾ.ಪಂ.ನ ಪಾಲ್ತಾಡಿ ಗ್ರಾಮದ ಅಂಗಡಿಹಿತ್ಲು ಎಂಬಲ್ಲಿರುವ ಅಡಿಕೆಪಾಲವೇ ಜೀವಂತ ದೃಷ್ಠಾಂತ.
ಗ್ರಾಮೀಣ ಭಾಗದಲ್ಲಿ ಜನತೆ ಮೂಲ ಸೌಕರ್ಯಕ್ಕಾಗಿ ಸ್ಥಳಿಯಾಡಳಿತಕ್ಕೆ,ಜನಪ್ರತಿನಿಧಿಗಳಿಗೆ ತಮ್ಮ ನಿತ್ಯದ ಚಟುವಟಿಕೆಗಳಿಗಾಗಿ ತಾವೇ ಮಾಡಿಕೊಂಡ ವ್ಯವಸ್ಥೆಯೇ ಈ ಅಡಿಕೆ ಪಾಲ. ಇದು ಗ್ರಾಮೀಣ ಭಾಗದಲ್ಲಿ ಅಡ್ಡವಾಗಿ ಹರಿಯುವ ತೋಡು,ಹಳ್ಳಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ.
ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ 2 ನೇ ವಾರ್ಡ್ನಲ್ಲಿ ಗ್ರಾಮ ಪಂಚಾಯತ್ ದಾಖಲೆಗಳ ಪ್ರಕಾರ ನಡುಕೂಟೇಲು ,ಗಾಣದಕೊಟ್ಯ ,ಅಂಗಡಿಹಿತ್ಲು ನಲ್ಲಿ ಅಡಿಕೆ ಪಾಲ ಬಳಸಿ ಸಂಪರ್ಕ ಸಾಧಿಸುತ್ತಿದ್ದ ಕುರಿತು ಕಾಣುತ್ತಿದೆ.ಇದರಲ್ಲಿ ನಡುಕೂಟೇಲಿ ಬಳಿ ಇದ್ದ ಅಡಿಕೆ ಪಾಲದ ಬದಲಿಗೆ ಕಾಲು ಸಂಕ ನಿರ್ಮಾಣವಾಗಿದ್ದು ಈಗ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ,ಗಾಣದಕೊಟ್ಯದಲ್ಲಿ ಕಾಲು ಸಂಕ ನಿರ್ಮಾಣವಾಗಿದೆ.ಆದರೆ ಅಂಗಡಿಹಿತ್ಲುನಲ್ಲಿರುವ ಅಡಿಕೆ ಪಾಲ ಈಗಲೂ ಅದೇ ಸ್ಥಿತಿಯಲ್ಲಿದ್ದೂ ಇದಕ್ಕೆ ಮುಕ್ತಿ ಸಿಕ್ಕಿಲ್ಲ.
ನೀರಿನ ಮಟ್ಟ ಹೆಚ್ಚಳವಾದರೆ ಅಡಿಕೆ ಪಾಲ ನೀರುಪಾಲಾಗಿ ಸಂಪರ್ಕ ಕಡಿತಗೊಂಡು ದ್ವೀಪದಂತಾಗುತ್ತದೆ.ಜತೆಗೆ ಮಳೆಗಾಲದಲ್ಲಿ ಹಾವಸೆ ಹಿಡಿದು ಜಾರುವುದರಿಂದ ಮಕ್ಕಳ ಪಾಲಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಲಿದೆ. ಇಲ್ಲಿನ ಅಡಿಕೆ ಪಾಲದ ಬದಲಿಗೆ ಕಾಲು ಸಂಕ ನಿರ್ಮಾಣವಾದರೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಿರ್ಭಯವಾಗಿ ಸಾಗಬಹುದು. ಈ ಕಾರಣದಿಂದ ಇಲ್ಲಿ ಕಾಲು ಸಂಕ ನಿರ್ಮಾಣಮಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕಾಗಿದೆ.
”ಇಲ್ಲಿ ಕಳೆದ ಮೂವತ್ತು ವರ್ಷಗಳಿಂದ ನಾವು ಈ ಅಡಿಕೆಪಾಲದ ಮೂಲಕವೇ ನಾವು ಸಾಗುತ್ತಿದ್ದೇವೆ.ಮಳೆಗಾಲದಲ್ಲಿ ತೋಡಿನಲ್ಲಿ ಮಳೆ ನೀರು ಹರಿಯುತ್ತಿದ್ದರೆ,ಬೇಸಿಗೆ ಕಾಲದಲ್ಲಿ ಈ ತೋಡಿಗೆ ನಿರ್ಮಿಸಿದ ಕಿಂಡಿ ಅಣೆಕಟ್ಟಿನಿಂದ ನೀರು ಶೇಖರಣೆಯಾಗುತ್ತಿರುವ ಕಾರಣ ಇಲ್ಲಿ ನೀರು ಇರುತ್ತದೆ.ಇಲ್ಲಿ ಕಾಲು ಸಂಕ ನಿರ್ಮಿಸುವಂತೆ ಸವಣೂರು ಗ್ರಾ.ಪಂ.ಗೆ ಮನವಿ ನೀಡಿದ್ದೇವೆ”-ಶಶಿಧರ್ ನಾಯ್ಕ ,ಸ್ಥಳೀಯ ನಿವಾಸಿ
‘ಪಾಲ್ತಾಡಿಯ ಅಂಗಡಿಹಿತ್ಲು ಎಂಬಲ್ಲಿ ಕಾಲುಸಂಕ ನಿರ್ಮಿಸುವ ಕುರಿತಂತೆ ಈಗಾಗಲೇ ಗ್ರಾ.ಪಂ.ಗೆ ಮನವಿ ಬಂದಿದ್ದು ಈ ಕುರಿತು ತಾ.ಪಂ.ಉಪಾಧ್ಯಕ್ಷರ ನೇತೃತ್ವದಲ್ಲಿ ಗ್ರಾ. ಪಂ.ನ ನ್ಯಾಯಸಮಿತಿಯಿಂದ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು-ಬಿ.ಕೆ.ಇಂದಿರಾ ಕಲ್ಲೂರಾಯ.ಅಧ್ಯಕ್ಷರು,ಸವಣೂರು ಗ್ರಾ.ಪಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.