ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ವಿಧಾನಪರಿಷತ್ತಿನ ಚುನಾವಣೆಯಲ್ಲೂ ಬಿಜೆಪಿಯ ಅತ್ಯಧಿಕ ಸದಸ್ಯರು ಆಯ್ಕೆ ಆಗುವಂತೆ ನೋಡಿಕೊಳ್ಳಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಇಂದು ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಪಕ್ಷ ಹೆಚ್ಚು ಸ್ಥಾನ ಗೆದ್ದು ಅಧಿಕಾರ ನಡೆಸುವಂತಾಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಬೇಕು. ಲೋಕಸಭಾ ಚುನಾವಣೆಯ ನಂತರ ಮತ್ತೊಮ್ಮೆ ಪ್ರಧಾನಮಂತ್ರಿಗಳಾಗಿ ನರೇಂದ್ರ ಮೋದಿ ಅವರನ್ನು ನಾವು ಕಾಣಬೇಕು ಎಂದು ಆಶಿಸಿದರು.
ದೇಶ- ರಾಜ್ಯದಲ್ಲಿ ಆಗಿರುವ ಬಿಜೆಪಿ ಸರಕಾರಗಳ ನೇತೃತ್ವದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಎಲ್ಲರೂ ಬಿಜೆಪಿ ಬೆಂಬಲಿಸುವ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಯೋಜನೆ, ರಸ್ತೆ ಸೌಕರ್ಯ ಸೇರಿ ಮೂಲಸೌಕರ್ಯಕ್ಕೆ ನಮ್ಮ ಸರಕಾರಗಳು ಆದ್ಯತೆ ನೀಡಿವೆ ಎಂದು ತಿಳಿಸಿದರು. ಕೇಂದ್ರದ ಕಾಂಗ್ರೆಸ್ ಸರಕಾರಗಳು 70 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನೂ ಮೀರುವಂತೆ ನರೇಂದ್ರ ಮೋದಿಯವರ ಸರಕಾರ ಕಳೆದ ಏಳು ವರ್ಷಗಳಲ್ಲಿ ಕೆಲಸ ಮಾಡಿದೆ ಎಂದು ವಿವರಿಸಿದರು. ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರದಲ್ಲಿ ನಿರತವಾದರೂ ನಮ್ಮ ಸರಕಾರ ಅದನ್ನು ನಿಯಂತ್ರಿಸುವಲ್ಲಿ ಮಹತ್ವದ ಕಾರ್ಯ ಮಾಡಿದೆ ಎಂದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಕಾಂಗ್ರೆಸ್ ಅವಧಿ ಮತ್ತು ಬಿಜೆಪಿ ಅವಧಿಯ ಸಾಧನೆಗಳನ್ನು ತುಲನೆ ಮಾಡುವಂತೆ ಮನವಿ ಮಾಡಿದರು. ಗ್ರಾಮ ಪಂಚಾಯಿತಿಗೆ ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ಕೊಟ್ಟ ಅನುದಾನ ಮತ್ತು ಈಗಿನ ಕೊಡುಗೆಯನ್ನು ಹೋಲಿಸಿ ನೋಡಿ ಎಂದು ತಿಳಿಸಿದರು. ಎಲ್ಲ ಹಳ್ಳಿಗಳಿಗೆ ವಿದ್ಯುತ್, ಮಹಿಳೆಯರ ಗೌರವ ಹೆಚ್ಚಿಸಲು ಶೌಚಾಲಯಗಳ ನಿರ್ಮಾಣ ಸೇರಿದಂತೆ ಎಲ್ಲ ಯೋಜನೆಗಳು ಭ್ರಷ್ಟಾಚಾರರಹಿತವಾಗಿ ಕಾರ್ಯಗತಗೊಳಿಸುತ್ತಿವೆ ಎಂದರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಗೆ ಬಿಜೆಪಿ ಎಲ್ಲ ಕೊಡುಗೆಗಳನ್ನು ನೀಡಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸಚಿವ ಸ್ಥಾನ, ವಿಧಾನ ಪರಿಷತ್ ಉಪ ಸಭಾಪತಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿ ಹಲವು ಪ್ರಮುಖ ಸ್ಥಾನಗಳನ್ನು ನೀಡಿದೆ. ಚಿಕ್ಕಮಗಳೂರು ಜಿಲ್ಲೆ ಬಿಜೆಪಿ ತಂಡ ಅತ್ಯಂತ ಬಲಿಷ್ಠವಾಗಿದೆ. ಇದೇ ರೀತಿಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.