ಒರ್ವ 80 ವರ್ಷ ಪ್ರಾಯದ ವ್ಯಕ್ತಿ ಏನು ಮಾಡಬಲ್ಲ? ವರ್ಷಗಳ ಹಿಂದೆ ವೃತ್ತಿ ಜೀವನಕ್ಕೆ ಕೊನೆ ಹಾಡಿದ ಇವರು ಹೆಚ್ಚೆಂದರೆ ತಮ್ಮ ಮನೆಯ ವರಾಂಡಾದಲ್ಲಿ ಚಹಾ ಸವೆಯುತ್ತ ದಿನಪತ್ರಿಕೆ ಓದುತ್ತಾ, ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿರುವರು ಎಂದುಕೊಂಡರೆ ತಪ್ಪಲ್ಲ. ಆದರೆ ಚೆನ್ನೈನ ಒಬ್ಬ ಸಾಮಾನ್ಯ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಈ ವ್ಯಕ್ತಿ ಸರ್ಕಾರದಿಂದ ಹಿಡಿದು ಪೊಲೀಸರು, ಅಧಿಕಾರಿಗಳನ್ನು ತಮ್ಮ ಕಾಲ ಬೆರಳುಗಳ ಮೇಲೆ ನಿಲ್ಲುವಂತೆ ಮಾಡಿದ್ದಾರೆ ಎಂದರೆ ಅಚ್ಚರಿ ಮೂಡುತ್ತದೆ.
ಯಾರಿಗೂ ಅಂಜದ ಓರ್ವ ಸಾಮಾಜಿಕ ಕಾರ್ಯಕರ್ತರಾದ ಅವರು ಕೆ.ಆರ್.’ಟ್ರಾಫಿಕ್’ ರಾಮಸ್ವಾಮಿ. ’ನಾನು ಚೆನ್ನೈಯನ್ನು ದೇಶದ ಅತ್ಯಂತ ವಾಸಯೋಗ್ಯ ಹಾಗೂ ಸುಂದರ ನಗರವನ್ನಾಗಿ ಕಾಣ ಬಯಸುತ್ತೇನೆ’ ಎಂದು ಭರವಸೆಯೊಂದಿಗೆ ಹೇಳುತ್ತಾರೆ ಈ 80 ವರ್ಷದ ರಾಮಸ್ವಾಮಿ. ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ವೃತ್ತಿ ಆರಂಭಿಸಿದ ಇವರು, ಈಗ ಚೆನ್ನೈಯ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲೊಬ್ಬರು.
ಎಪ್ರಿಲ್ 1, 1934ರಲ್ಲಿ ಜನಿಸಿದ ರಾಮಸ್ವಾಮಿ, ಅನೇಕ ಸವಾಲುಗಳನ್ನು ಎದುರಿಸಿ ನ್ಯಾಯಕ್ಕಾಗಿ ಹೋರಾಟ ಮುಂದುವರೆಸಿ ಒಬ್ಬ ನಾಯಕನಂತೆ ತೋರಿದರು. ಜಯಲಲಿತಾ ಅವರ ಹೆಸರಿಗೆ ಜೋಡಿಸಲಾಗಿದ್ದ ’ಅಮ್ಮ’ ಶಬ್ದವನ್ನು ತೆಗೆದು ಹಾಕುವಲ್ಲಿಂದ ಹಿಡಿದು ಸುಮಾರು 50ಕ್ಕೂ ಅಧಿಕ ಸಾಮಾಜಿಕ ಹಿತಾಸಕ್ತಿ ಮೊಕದ್ದಮೆ (PIL)ಗಳನ್ನು ದಾಖಲಿಸಿದ್ದಾರೆ. ರಾಮಸ್ವಾಮಿಯವರು ಯಾವತ್ತೂ ತಮ್ಮ ನಂಬಿಕೆಯಲ್ಲೇ ನೆಲೆಸಿದವರು. ವಧುವಿನ ಕುಟುಂಬದಿಂದ ವರದಕ್ಷಿಣೆ ಕೇಳಿದ್ದಕ್ಕಾಗಿ ತಮ್ಮ ತಂದೆಯ ಮನೆಯಿಂದಲೇ ಹೊರನಡೆದರು.
ಗೃಹರಕ್ಷಕ ಸಿಬ್ಬಂದಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಚೆನ್ನೈನ ಅತ್ಯಂತ ವಾಹನ ದಟ್ಟಣೆ ಪ್ರದೇಶವಾದ ಪೆರ್ರಿ ಕಾರ್ನರ್ನಲ್ಲಿ ಟ್ರಾಫಿಕ್ ನಿರ್ವಹಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿ ಮುನ್ನಡೆದವರು. ಅವರ ಪ್ರಯತ್ನ ಹಾಗೂ ಸಮರ್ಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು, ಒಂದು ಗುರುತಿನ ಚೀಟಿ ನೀಡುವ ಮೂಲಕ ಟ್ರಾಫಿಕ್ ರಾಮಸ್ವಾಮಿ ಎಂಬ ಹೆಸರು ಪಡೆದರು.
ಅವರ ಈ ಸಾರ್ವಜನಿಕ ಸೇವೆಗೆ ಕುಟುಂಬಸ್ಥರಿಂದ ’ಮೂರ್ಖ’ ಎನಿಸಿಕೊಂಡರು. ಕುಟುಂಬದ ವಿರೋಧಗಳ ನಡುವೆ ಬದುಕು ಕಷ್ಟಕರವೆನಿಸಿದರೂ ಬದುಕಿ ತೋರಿಸಿದರು. ಈ ಸಂದಂರ್ಭದಲ್ಲಿ ಆಹಾರ, ವಸತಿಯನ್ನು ಕಲ್ಪಿಸುತ್ತಿದ್ದ ಅವರ ಸ್ನೇಹಿತರನ್ನು ರಾಮಸ್ವಾಮಿ ಇಂದಿಗೂ ನೆನೆಸಿಕೊಳ್ಳುತ್ತಾರೆ. ’ರಾಜಾಜಿ’ಯವರ ಸಚಿವ ಸಂಪುಟದಲ್ಲಿ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವುದರ ಜೊತೆಗೆ ಅವರ ಸಾಮಾಜಿಕ ತಿಳುವಳಿಕೆ ಹೆಚ್ಚಾದಂತೆ ಅವರ ಸ್ವಂತ ಕಾರ್ಯಗಳೂ ಬೆಳೆಯಿತು.
ಅಪರಾಧಿಯೊಬ್ಬನ ಪರವಾಗಿ ನಿಂತು ಆಣೆ ಮಾಡಿದಲ್ಲಿ ಅಂತಹ ಪಕ್ಷದ ಕಾರ್ಯಕರ್ತರು ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಅಸ್ಪಷ್ಟ ಮೊಕದ್ದಮೆ ದಾಖಲಿಸಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ ಅವರಿಗೆ 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತ್ತು. ಬಸ್ಸು ಹಾಗೂ ಬಸ್ಸು ನಿಲ್ದಾಣಗಳಲ್ಲಿ ಜಯಲಲಿತಾ ಅವರ ಭಾವಚಿತ್ರಗಳನ್ನು ತೆಗೆದು ಹಾಕುವಂತೆ ಅವರು ಪಿಐಎಲ್ ದಾಖಲಿಸಿದ್ದರು.
ಯಾಂತ್ರೀಕೃತ ಮೀನು ಬಂಡಿ (ತಟ್ಟು ವಂಡಿ)ಗಳು ಮರದ ಹಲಗೆಗಳಿಂದ ಆವೃತಗೊಂಡಿದ್ದು, ಯಾರಿಗಾದರೂ ಬಡಿದಲ್ಲಿ ಗಂಭೀರ ಗಾಯಗೊಳಿಸುತ್ತವೆ ಎಂದು ಇವರು ವಾದಿಸಿದ್ದರು. ಇವುಗಳ ಮೇಲೆ 2002ರಲ್ಲಿ ನಿರ್ಬಂಧ ಹೇರಿದ್ದರ ಪರಿಣಾಮ ಮೀನು ಮಾರಾಟಗಾರರು ರಾಮಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಅವರ ಆಸ್ತಿ-ಪಾಸ್ತಿ ನಾಶಗೊಳಿಸಿದರು. ಅಲ್ಲದೇ ಜೀವ ಬೆದರಿಕೆಯೊಡ್ಡಿದ್ದರು. ಆದರೆ ಇಂದು ಆ ಮೀನುಗಾರರು ರಾಮಸ್ವಾಮಿಯವರ ಪ್ರಯತ್ನಗಳನ್ನು ಗುರುತಿಸಿ, ಅವರ ಆ ನಿರ್ಬಂಧದ ಅಗತ್ಯತೆಯನ್ನು ಬೆಂಬಲಿಸಿದ್ದಾರೆ.
ಅವರು ಚೆನ್ನೈ ನಗರಕ್ಕೆ ತಂದುಕೊಟ್ಟ ಮತ್ತೊಂದು ಬಹುಮುಖ್ಯ ಬದಲಾವಣೆ ಎಂದರೆ ಅನಧಿಕೃತ ಕಟ್ಟಡ ನಿರ್ಮಾಣಗಳ ವಿರುದ್ಧ ಹೋರಾಟ. ಜೊತೆಗೆ ಏಕಪಥ ರಸ್ತೆಗಳಿಂದಾಗಿ ಆಗುತ್ತಿದ್ದ ರಸ್ತೆ ಅಫಘಾತ ತಡೆಯುವ ಸಂಬಂಧ ದ್ವಿಪಥ ರಸ್ತೆಗಳ ನಿರ್ಮಾಣ ಯೋಜನೆ ರೂಪಿಸಿದರು.
ಚೆನ್ನೈನ ಕೆಥೆಡ್ರಾಲ್ ರೋಡ್ನಲ್ಲಿ ತಮಿಳುನಾಡಿನ ಇಬ್ಬರು ಅತಿದೊಡ್ಡ ರಾಜಕಾರಣಿಗಳ ಮನೆಯಿದ್ದು, ಈ ರಸ್ತೆಯ ಇಕ್ಕೆಲಗಳಲ್ಲಿ ಪಕ್ಷದ ಬ್ಯಾನರ್, ಪೋಸ್ಟರ್ಗಳನ್ನು ತಾವೇ ಕಿತ್ತೊಗೆದರು. ಜನವರಿ 2014ರಲ್ಲಿ ‘ಮಕ್ಕಳ್ ಪಥುಕಪ್ಪು ಕಝಂಗಮ್’ ಎಂಬ ಪಕ್ಷವನ್ನೂ ಕಟ್ಟಿದರು. ಸಾಮಾನ್ಯರ ನ್ಯಾಯಕ್ಕಾಗಿ ಹೋರಾಡುವ ಈ ಪಕ್ಷವನ್ನು ಸೇರಲು ಸರ್ವರಿಗೂ ಅವಕಾಶ ಕಲ್ಪಿಸಿದೆ.
ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುವ ಶಕ್ತಿ ಜನರಲ್ಲಿದೆ ಎಂಬುದು ರಾಮಸ್ವಾಮಿಯವರ ನಂಬಿಕೆ. ಜನರು ಅದನ್ನು ಬಳಸಬೇಕು. ಜನರು ಚುರುಕುಗೊಂಡು ಯಾವುದೇ ಭಯವಿಲ್ಲದೇ ಇಂತಹ ಅನ್ಯಾಯಗಳ ವಿರುದ್ಧ ಹೋರಾಡಬೇಕು ಎನ್ನುತ್ತಾರೆ ರಾಮಸ್ವಾಮಿ. ಇಂದಿಗೂ ಅವರು ಸಮಾಜದ ಎಲ್ಲಾ ಏರು-ಪೇರುಗಳನ್ನು ಎದುರಿಸಿ, ತಮ್ಮದೇ ನಿರ್ಧಾಗಳೊಂದಿಗೆ ಅನ್ಯಾಯದ ವಿರುದ್ಧ ಹೋರಾಡುತ್ತಲೇ ಇದ್ದಾರೆ. ತಮ್ಮ ವಿಶ್ವಾಸ, ಆತ್ಮಶಕ್ತಿಯೊಂದಿಗೆ ಒಂದು ಉತ್ತಮ ನಗರ, ಉತ್ತಮ ದೇಶ ನಿರ್ಮಾಣದಲ್ಲಿ ಅವರು ಸಕ್ರಿಯರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.