ಬೆಳ್ತಂಗಡಿ : ವ್ಯವಸ್ಥಿತ ಜೀವನ ನಿರ್ವಹಣೆಗೆ ಯೋಗ್ಯ ಶಿಕ್ಷಣ ಅಗತ್ಯ ಎಂದು ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ| ವಿನೋದ್ ಮಸ್ಕರೇನಸ್ ಹೇಳಿದರು. ಅವರು ಬುಧವಾರ ಲಾಯಿಲದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ಥಾನಿಕ ಬ್ರಾಹ್ಮಣ ಸಮಾಜ ಸಭಾಭವನದಲ್ಲಿ ದಯಾಳ್ಬಾಗ್ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಕ್ಕಳಿಗೆ ಕಲಿಕೆಗೆ ಅನೂಕೂಲವಾಗುವ ದೃಷ್ಟಿಯಿಂದ ಸೋಲಾರ್ ಲ್ಯಾಂಪ್ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ವಿದ್ಯುತ್ ಸಮಸ್ಯೆ ಇದೆ. ಪವರ್ಕಟ್ ಸಮಸ್ಯೆಯಿಂದಾಗಿ ಮಕ್ಕಳ ಓದುವಿಕೆ ತೊಂದರೆಯಾಗುತ್ತಿದೆ. ಹೀಗಾಗಿ ಸೌರ ದೀಪಗಳನ್ನು ನೀಡುವ ವ್ಯವಸ್ಥೆಯನ್ನು ವಿಮುಕ್ತಿ ಸಂಸ್ಥೆಯಿಂದ ಮಾಡುತ್ತಿದ್ದೇವೆ. ಸಂಸ್ಥೆಯ ವತಿಯಿಂದ ಪುಸ್ತಕಗಳ ವಿತರಣೆ, ಅತಿಥಿ ಶಿಕ್ಷಕರ ನಿಯೋಜನೆಯನ್ನು ಮಾಡಲಾಗಿದೆ. ಓದು ಕೇವಲ ಉದ್ಯೋಗಕ್ಕಾಗಿ ಸೀಮಿತವಾಗಿರಬಾರದು. ಜ್ಞಾನವಂತರಾಗಿ ಜೀವನ ನಿರ್ವಹಣೆಯನ್ನು ಮಾಡುವಷ್ಟು ಶಕ್ತಿವಂತರಾಗಬೇಕೆಂಬುದೇ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಲಾಯಿಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ವಿಮುಕ್ತಿ ಸಂಸ್ಥೆ ಜಾತಿ, ಮತ, ರಾಜಕೀಯ ರಹಿತವಾಗಿ ತರೆಮರೆಯಲ್ಲಿ ಸಾಮಾಜಿಕ ಕೆಲಸವನ್ನು ಮಾಡುತ್ತಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಮಕ್ಕಳು ಸೌಲಭ್ಯವನ್ನು ಪಡೆದು ಶಿಕ್ಷಣವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದರು.ತಾಲೂಕು ಸಿಡಿಪಿಓ ಪುಟ್ಟ ಸ್ವಾಮಿ, ಬಿಆರ್ಪಿ ಸುಭಾಶ್ ಜಾಧವ್, ಉಜಿರೆಯ ಉದ್ಯಮಿ ಅರುಣ್ಕುಮಾರ್ ಉಪಸ್ಥಿತರಿದ್ದರು. ಸುಮಾರು 300 ವಿದ್ಯಾರ್ಥಿಗಳಿಗೆ ರೂ. 6.5 ಲಕ್ಷ ಮೌಲ್ಯದ ಸೌರದೀಪಗಳನ್ನು ವಿತರಿಸಲಾಯಿತು.
ಜೆಸಿಂತಾ ಸ್ವಾಗತಿಸಿದರು. ವಿಮುಕ್ತಿ ಸಹನಿರ್ದೇಶಕ ಅಮರ್ ಲೋಬೋ ಪ್ರಸ್ತಾವಿಸಿದರು. ಸೋಲಾರ್ ಸಂಸ್ಥೆಯ ಮದನ್ ಸೋಲಾರ್ ಲ್ಯಾಂಪ್ ಬಗ್ಗೆ ವಿವರಣೆ ನೀಡಿದರು. ಶೋಭಾ ವಂದಿಸಿದರು. ಅಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.