ಕಳೆದೆರಡು ವರ್ಷಗಳಿಂದ ಭಾರತದಲ್ಲಿ ಯಾವೊಬ್ಬ ರೈಲು ಪ್ರಯಾಣಿಕನೂ ರೈಲು ಅಪಘಾತದಿಂದಾಗಿ ಜೀವ ಕಳೆದುಕೊಂಡಿಲ್ಲ! ಕೆಲವು ವರ್ಷಗಳ ಹಿಂದೆ ರೈಲು ಹಳಿ ತಪ್ಪಿ ಹಲವು ಸಾವು, ಎರಡು ರೈಲುಗಳು ಎದುರುಬದುರಾಗಿ ಢಿಕ್ಕಿ ಹೊಡೆದು ಸಾವು, ಲೆವೆಲ್ ಕ್ರಾಸ್ ನಲ್ಲಿ ದಾಟುತ್ತಿದ್ದ ಬಸ್ಸಿಗೆ ಬಡಿದ ರೈಲು ಇಂತಹ ಸುದ್ದಿಗಳು ಭಾರತದಲ್ಲಿ ದಿನ ನಿತ್ಯ ಸರ್ವೇ ಸಾಮಾನ್ಯವಾಗಿದ್ದವು. ತನ್ನ ಅವಧಿಯಲ್ಲಿ ರೈಲು ಅಪಘಾತವಾದಾಗ ತನ್ನ ರೈಲ್ವೇ ಮಂತ್ರಿ ಪದವಿಗೆ ಅಂದಿನ ರೈಲ್ವೇ ಮಂತ್ರಿಗಳಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ರಾಜೀನಾಮೆಯನ್ನು ಕೊಟ್ಟ ಘಟನೆಯೂ ನಮ್ಮ ಚರಿತ್ರೆಯಲ್ಲಿದೆ. ಆದರೆ ಸತತವಾಗಿ ಕಳೆದ ಎರಡು ವರ್ಷಗಳಿಂದ ಭಾರತೀಯ ರೈಲ್ವೇ ಅಪಘಾತವಾದ ಒಂದೇ ಒಂದು ಸಮಾಚಾರವನ್ನು ನಾವು ಓದಿಲ್ಲ. ಇದು ಆಕಸ್ಮಿಕವಲ್ಲ. ಸರಕಾರದ, ರೈಲ್ವೇ ಇಲಾಖೆಯ ಯಶಸ್ವೀ ಕ್ರಮಗಳಿಂದ ಭಾರತದ ರೈಲ್ವೇಯು ಇಂದು ಹಿಂದೆಂದಿಗಿಂತಲೂ ಸುರಕ್ಷಿತವಾಗಿದೆ. 3479 ಕಾವಲುಗಾರರಿಲ್ಲದ ರೈಲ್ವೇ ಲೆವೆಲ್ ಕ್ರಾಸಿಂಗ್ ಗಳಿಗೆ ಕಾವಲು ಸಹಿತ ಗೇಟುಗಳನ್ನು ಅಳವಡಿಸಲಾಯಿತು ಹಾಗೂ ಅಂಡರ್ ಪಾಸ್ ಗಳನ್ನು ನಿರ್ಮಿಸಲಾಯಿತು, ನಕ್ಸಲ್ ಪೀಡಿತ ಪ್ರದೇಶಗಳ ರೈಲ್ವೇ ಹಳಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು, ರೈಲ್ವೇ ಸೂಚನಾ ವ್ಯವಸ್ಥೆಯನ್ನು ಆಧುನಿಕಗೊಳಿಸಲಾಯಿತು, ಅಪಘಾತ ತಡೆಯುವ ಸೆನ್ಸರ್ ಗಳನ್ನು ಅಳವಡಿಸಲಾಯಿತು, ರೈಲ್ವೇ ಸುರಕ್ಷತಾ ಸಿಬ್ಬಂದಿಗಳನ್ನು ಹೆಚ್ಚು ಸಕ್ಷಮಗೊಳಿಸಲಾಯಿತು ಇವುಗಳೆಲ್ಲದರ ಪರಿಣಾಮವಾಗಿ 2019 ರ ನಂತರ ಯಾವೊಬ್ಬ ಪ್ರಯಾಣಿಕನೂ ರೈಲ್ವೇ ಅಪಘಾತದಿಂದಾಗಿ ಜೀವ ಕಳೆದುಕೊಂಡಿಲ್ಲ. ಬದಲಾವಣೆಯನ್ನು ತರಬೇಕೆಂಬ ಬದ್ಧತೆಯಿದ್ದರೆ ಬದಲಾವಣೆ ತರಲು ಸಾಧ್ಯ ಎನ್ನುವುದಕ್ಕೆ ಭಾರತೀಯ ರೈಲ್ವೆಯೇ ಸಾಕ್ಷಿ.
1897 ರಲ್ಲೇ ಭಾರತದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದರೂ, 1905 ರಲ್ಲೇ ಏಶ್ಯಾದ ಮೊದಲ ವಿದ್ಯುತ್ ಬೀದಿ ದೀಪ ಬೆಂಗಳೂರಿನಲ್ಲಿ ಉರಿದರೂ ದೇಶದ 100% ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲು ಸರಕಾರಗಳಿಗೆ ಸಾಧ್ಯವಾಗಿರಲಿಲ್ಲ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಂತೆ ನಂತರದ 1000 ದಿವಸಗಳಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ 18452 ಗ್ರಾಮಗಳನ್ನು ಗುರುತಿಸಿ ಅವುಗಳಿಗೆ ವಿದ್ಯುತ್ ಸಂಪರ್ಕವನ್ನು ಮಾಡಲಾಯಿತು. ಪರ್ವತ, ಬೆಟ್ಟ, ಕಣಿವೆ, ದೂರ ದೂರದ ಕಾಡು ಪ್ರದೇಶಗಳಲ್ಲಿರುವ ಕುಗ್ರಾಮಗಳಿಗೂ ವಿದ್ಯುತ್ ತಂತಿಗಳನ್ನು ಎಳೆಯಲಾಯಿತು. ವಿದ್ಯುತ್ ಕಂಬಗಳನ್ನು ವಾಹನದಲ್ಲಿ ಕೊಂಡು ಹೋಗಲು ಸಾಧ್ಯವಾಗದಂತಹ ಪ್ರದೇಶಗಳಿಗೆ ಹೆಲಿಕಾಫ್ಟರ್ ಮೂಲಕ ಹಾಗೂ ತಲೆಹೊರೆಯಲ್ಲೂ ಕಂಬಗಳನ್ನು ಒಯ್ದು, ನೆಟ್ಟು ತಂತಿಯನ್ನು ಎಳೆಯಲಾಯಿತು. ಮಾರ್ಚ್ 2018 ರ ಒಳಗಡೆ ದೇಶದ 100% ಹಳ್ಳಿಗಳು ವಿದ್ಯುತ್ ಸಂಪರ್ಕವನ್ನು ಪಡೆದವು. 2016 ರಲ್ಲಿ ದೇಶದ 84.53% ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು. ದೇಶದ ಪ್ರತೀ ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವ ಉದ್ದೇಶದ ಯೋಜನೆ ಪ್ರಧಾನ ಮಂತ್ರಿ ಸರಲ್ ಬಿಜಲೀ ಹರ್ ಘರ್ ಯೋಜನಾ(ಸೌಭಾಗ್ಯ) ಎಂಬ ಯೋಜನೆಯನ್ನು ರೂಪಿಸಿ ಅಕ್ಟೊಬರ್ 2017 ರಂದು ಜಾರಿಗೆ ತರಲಾಯಿತು. ಈ ಯೋಜನೆಗೆ ಸರಕಾರವು 16325 ಕೋಟಿ ರುಪಾಯಿಗಳನ್ನು ಮೀಸಲಿಟ್ಟು ದೇಶದ ಎಲ್ಲಾ ವಿದ್ಯುತ್ ವಂಚಿತ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕೊಡುವ ಮಹತ್ತರ ಕೆಲಸವನ್ನು ಮಾಡಿತು. ಇದರ ಪರಿಣಾಮವಾಗಿ ಸೌಭಾಗ್ಯ ಯೋಜನೆಯಡಿಯಲ್ಲಿ ಇದುವರೆಗೆ 2.82 ಕೋಟಿ ಬಡವರ ಮನೆಗಳು ಉಚಿತ ವಿದ್ಯುತ್ ಸಂಪರ್ಕವನ್ನು ಪಡೆದು ದೇಶದ 100% ಮನೆಗಳು ವಿದ್ಯುತ್ ಸಂಪರ್ಕವನ್ನು ಪಡೆದಂತಾಯಿತು.
ಇತ್ತೀಚೆಗೆ ಭಾರತವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ(ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್) 46 ನೇ ಸ್ಥಾನಕ್ಕೆ ಏರಿದೆ. 2015 ರಲ್ಲಿ ಭಾರತವು ಗ್ಲೋಬಲ್ ಇನ್ನೋವೇಶನ್ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿತ್ತು. ಕಳೆದ 6 ವರ್ಷಗಳಲ್ಲಿ ಸೂಚ್ಯಂಕದಲ್ಲಿ ತನ್ನ ಸ್ಥಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುತ್ತಾ ಬಂದ ಭಾರತವು 35 ಸ್ಥಾನಗಳಷ್ಟು ಏರಿಕೆ ಕಂಡಿದೆ. ದೇಶದ ಜ್ಞಾನ ಬಂಡವಾಳ, ನವೋದ್ಯಮಗಳಿಗೆ ಪೂರಕವಾದ ವಾತಾವರಣ, ಸಂಶೋಧನೆಗೆ ಅವಕಾಶ ಮೊದಲಾದ ವಿಚಾರಗಳು ಆವಿಷ್ಕಾರ ಸೂಚ್ಯಂಕದ ಸ್ಥಾನವನ್ನು ನಿರ್ಧರಿಸುತ್ತವೆ. ಅತೀ ಹೆಚ್ಚು ಸಂಶೋಧನಾ ಪೇಟೆಂಟ್ ಗಳನ್ನು ಪಡೆದುಕೊಂಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವಿಂದು 22 ನೆಯ ಸ್ಥಾನದಲ್ಲಿದೆ. ದೇಶದಲ್ಲಿಂದು ಸುಮಾರು 53,000 ನವೋದ್ಯಮಗಳಿವೆ. ಇವುಗಳಲ್ಲಿ 65 ಸ್ಟಾರ್ಟ್ ಅಪ್ ಗಳು ತಮ್ಮ ಮೌಲ್ಯವನ್ನು ಒಂದು ಬಿಲಿಯನ್ ಡಾಲರ್ (ಶತಕೋಟಿ ಡಾಲರ್) ಗಳಿಗೆ ಏರಿಸಿಕೊಂಡು ಯುನಿಕಾರ್ನ್ ಸ್ಟಾರ್ಟ್ ಅಪ್ ಗಳೆಂಬ ಹಿರಿಮೆಗೆ ಪಾತ್ರವಾಗಿವೆ. ಭಾರತದ ನವೋದ್ಯಮಗಳು 90 ಶತಕೋಟಿ ಡಾಲರ್ (6,61,500 ಕೋಟಿ ರುಪಾಯಿ) ಗಳಷ್ಟು ವಿದೇಶೀ ಹೂಡಿಕೆಯನ್ನು ಗಳಿಸಿವೆ ಹಾಗೂ 300 ಶತಕೋಟಿ ಡಾಲರ್ (22,00,000 ಕೋಟಿ ರುಪಾಯಿ) ಗಳಷ್ಟು ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿವೆ. ದೇಶದಲ್ಲಿರುವ ಸ್ಟಾರ್ಟ್ ಅಪ್ ಗಳು ಸುಮಾರು 1 ಕೋಟಿಯಷ್ಟು ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ.
ಭಾರತವಿಂದು ವಿದೇಶೀ ಹೂಡಿಕೆದಾರರ ಆಕರ್ಷಣೆಯ ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿ ಸುಧಾರಿಸಿದ ವಿದ್ಯುತ್, ರಸ್ತೆ, ನೀರಾವರಿ ಮೊದಲಾದ ಮೂಲಭೂತ ಸೌಕರ್ಯಗಳು ಹಾಗೂ ಇಳಿಕೆಯಾದ ಭ್ರಷ್ಟಾಚಾರ ಮೊದಲಾದವುಗಳು ವಿದೇಶೀ ಹೂಡಿಕೆ ಸಂಸ್ಥೆಗಳನ್ನು ಆಕರ್ಷಿಸುತ್ತಿವೆ. ಭಾರತದಲ್ಲಿ ಸುಧಾರಿಸುತ್ತಿರುವ ವ್ಯವಸ್ಥೆಯ ಸೂಚಕವಾಗಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (ಉದ್ಯಮ ಸ್ನೇಹೀ ದೇಶಗಳು) ಪಟ್ಟಿಯಲ್ಲಿ ಭಾರತವು ಗಮನೀಯ ಸುಧಾರಣೆಯನ್ನು ಕಂಡಿದೆ. 2014 ರಲ್ಲಿ ಉದ್ಯಮ ಸ್ನೇಹೀ ದೇಶಗಳ ಪಟ್ಟಿಯಲ್ಲಿ 142 ನೇ ಸ್ಥಾನದಲ್ಲಿದ್ದ ಭಾರತವು 2020 ರಲ್ಲಿ 79 ಸ್ಥಾನಗಳ ಏರಿಕೆಯನ್ನು ಕಂಡು 63 ನೇ ಸ್ಥಾನಕ್ಕೆ ಏರಿದೆ. ಇವುಗಳ ಪರಿಣಾಮವಾಗಿ ಭಾರತದಲ್ಲಾಗುತ್ತಿರುವ ನೇರ ವಿದೇಶೀ ಹೂಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿದೆ(ಆದರೆ ದುರದೃಷ್ಟಕರ ವಿಷಯವೇನೆಂದರೆ, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಸೂಚ್ಯಂಕದ ಪಟ್ಟಿಯ ತಯಾರಿಕೆಯ ವಿಚಾರದಲ್ಲಿ ಚೀನಾವು ವಿಪರೀತವಾಗಿ ಹಸ್ತಕ್ಷೇಪ ನಡೆಸುತ್ತಿರುವುದರಿಂದ, ವರದಿಯ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತಿದೆ ಎಂದು ಇನ್ನು ಮುಂದೆ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಸೂಚ್ಯಂಕದ ಪಟ್ಟಿಯನ್ನು ಪ್ರಕಟಿಸುವುದಿಲ್ಲ ಎಂದು ವಿಶ್ವ ಬ್ಯಾಂಕ್ ಹೇಳಿದೆ), 2013-14 ರಲ್ಲಿ ಭಾರತದಲ್ಲಾಗಿದ್ದ ಒಟ್ಟು ವಾರ್ಷಿಕ ನೇರ ವಿದೇಶೀ ಹೂಡಿಕೆ 24.29 ಶತಕೋಟಿ ಡಾಲರ್ ಗಳಾಗಿದ್ದರೆ, ಜಾಗತಿಕ ಕರೋನಾ ಬಿಕ್ಕಟ್ಟಿನ ಎಡೆಯಲ್ಲೂ 2020-21 ರಲ್ಲಿ ಭಾರತದಲ್ಲಾದ ನೇರ ವಿದೇಶೀ ಹೂಡಿಕೆ 81.72 ಶತಕೋಟಿ ಡಾಲರ್ ಗಳು. 1947 ರಿಂದ 2013 ರ ವರೆಗಿನ 63 ವರ್ಷಗಳಲ್ಲಿ ಭಾರತದಲ್ಲಾದ ಒಟ್ಟು ನೇರ ವಿದೇಶೀ ಹೂಡಿಕೆ 292 ಶತಕೋಟಿ ಡಾಲರ್ ಗಳಾಗಿದ್ದರೆ, 2014-15 ರಿಂದ 2020-21 ರ ವರೆಗಿನ ಒಟ್ಟು 7 ವರ್ಷಗಳ ಅವಧಿಯಲ್ಲಿ ಭಾರತದಲ್ಲಾದ ನೇರ ವಿದೇಶೀ ಹೂಡಿಕೆ 440 ಶತಕೋಟಿ ಡಾಲರ್ ಗಳು! ಇದು ಭಾರತದ ಬಗ್ಗೆ ವಿದೇಶೀ ಹೂಡಿಕೆದಾರರಲ್ಲಿ ವಿಶ್ವಾಸವು ಹೆಚ್ಚಿರುವುದನ್ನು ಸೂಚಿಸುತ್ತದೆ. 2021-22 ರ ಮೊದಲ ತ್ರೈಮಾಸಿಕದಲ್ಲಿ(2021 ರ ಎಪ್ರಿಲ್ ನಿಂದ ಜೂನ್ ತಿಂಗಳವರೆಗಿನ ಮೂರು ತಿಂಗಳು) ಭಾರತವು 22.53 ಶತಕೋಟಿ ಡಾಲರ್ ಗಳ ನೇರ ವಿದೇಶೀ ಹೂಡಿಕೆಯನ್ನು ಪಡೆದಿದೆ.
ಕಳೆದ 6.5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಡಿಯಲ್ಲಿ ದೇಶದ 30 ಕೋಟಿ ಯುವ ಜನರಿಗೆ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಲು 15 ಲಕ್ಷ ಕೋಟಿ ರುಪಾಯಿಗಳಷ್ಟು ಸಾಲವನ್ನು ಕೊಡಮಾಡಲಾಗಿದೆ. ಇದರಿಂದಾಗಿ ದೇಶದ ಯುವ ಜನತೆ ಉದ್ಯಮಶೀಲತೆಯನ್ನು ಬೆಳೆಸಿಕೊಂಡಿದೆ. ಇತ್ತೀಚೆಗೆ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಗುಲ್ಲೆಬ್ಬಿಸಲಾಗುತ್ತಿದೆ. ಆದರೆ ಹೆಚ್ಚುತ್ತಿರುವ ನವೋದ್ಯಮಗಳು ,ವಿದೇಶೀ ನೇರ ಹೂಡಿಕೆಗಳು, ಮುದ್ರಾ ಯೋಜನೆಗಳು ಅಪಾರ ಪ್ರಮಾಣದಲ್ಲಿ ನೇರ , ಪರೋಕ್ಷ ಹಾಗೂ ಸ್ವ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು ಯುವಕರು ನಿರುದ್ಯೋಗ ಸಮಸ್ಯೆಯನ್ನೆದುರಿಸುತ್ತಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದ ವಿಚಾರವಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯು ದೇಶದ 50 ಕೋಟಿಗೂ ಹೆಚ್ಚಿನ ಜನರಿಗೆ ವಾರ್ಷಿಕವಾಗಿ 5 ಲಕ್ಷ ರುಪಾಯಿ ಮೊತ್ತದ ಉಚಿತ ಚಿಕಿತ್ಸಾ ಸೌಲಭ್ಯವನ್ನು ಕೊಡುತ್ತಿರುವುದು ಸತ್ಯವಾದರೂ ಅದಕ್ಕಿಂತಲೂ ಮಿಗಿಲಾಗಿ ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನಾದ ಮೆಡಿಕಲ್ ಶಾಪ್ ಗಳು ಜನರಿಗೆ ದೊಡ್ಡ ಮಟ್ಟಿನಲ್ಲಿ ಸಹಾಯವಾಗುತ್ತಿದೆ. ಈಗಾಗಲೇ ದೇಶಾದ್ಯಂತ 8020 ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ. ಮಾರುಕಟ್ಟೆಯ ಬ್ರ್ಯಾಂಡೆಡ್ ಔಷಧದ ಬೆಲೆಯ 25 ರಿಂದ 30 ಶೇಕಡಾ ಬೆಲೆಯಲ್ಲಿ ಜನೌಷಧ ಕೇಂದ್ರದಲ್ಲಿ ಔಷಧಿಯು ಸಿಗುತ್ತದೆ. ಜನೌಷಧ ಕೇಂದ್ರದಲ್ಲಿ ಬಿಪಿಎಲ್ ಎಪಿಎಲ್ ಎನ್ನುವ ಬೇಧಭಾವ ಇಲ್ಲದೆ ರಿಯಾಯಿತಿ ದರದಲ್ಲಿ ಔಷಧ ಮಾರಲ್ಪಡುತ್ತಿರುವುದರಿಂದ ಜನೌಷಧ ಕೇಂದ್ರಗಳು ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ವರದಾನವಾಗಿ ಪರಿಣಮಿಸಿವೆ. ನಗರ ಪ್ರದೇಶದ 25% ಜನರು ಹಾಗೂ ಗ್ರಾಮೀಣ ಪ್ರದೇಶಗಳ 19% ಔಷಧಿ ಖರೀದಿಯ ವೆಚ್ಚವನ್ನು ಭರಿಸಲು ಸಾಲಕ್ಕೆ ಬಾಧೆಗೆ ಒಳಗಾಗುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಜನರು ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮೊದಲಾದ ಖಾಯಿಲೆಗಳಿಗೆ ಜೀವಿತಾವಧಿಯುದ್ದಕ್ಕೂ ಔಷದಿಯನ್ನು ಖರೀದಿಸಬೇಕಿದ್ದು ಜನೌಷಧ ಕೇಂದ್ರಗಳಿಂದಾಗಿ ಜನರು ಔಷದಕ್ಕಾಗಿ ಮಾಡಬೇಕಾದ ಖರ್ಚಿನ ಮೊತ್ತವನ್ನು ಗಣನೀಯವಾಗಿ ಇಳಿಸಿದೆ. ಈಗ ಜನೌಷಧ ಕೇಂದ್ರಗಳಲ್ಲಿ 1551 ನಮೂನೆಯ ಔಷಧಗಳು ಹಾಗೂ 240 ಶಸ್ತ್ರಚಿಕಿತ್ಸಾ ಉಪಕರಣಗಳು ರಿಯಾಯಿತಿ ದರದಲ್ಲಿ ದೊರಕುತ್ತಿವೆ. ಈ ಯೋಜನೆಯಿಂದಾಗಿ ಇದುವರೆಗೆ ಜನರಿಗೆ ಸುಮಾರು 9000 ಕೋಟಿ ರುಪಾಯಿಗಳಷ್ಟು ಹಣ ಉಳಿತಾಯವಾಗಿದೆ.
ಭಾರತೀಯರ ಆರ್ಥಿಕ ವ್ಯವಹಾರದ ದಿಕ್ಕನ್ನೇ ಬದಲಿಸಿದ್ದು ಡಿಜಿಟಲ್ ಇಂಡಿಯಾ. ತಾನು ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿಯವರು ಮಾತನಾಡುತ್ತಾ ಸರಕಾರದ ಒಂದು ರುಪಾಯಿಯು ಜನರನ್ನು ತಲುಪುವಾಗ ಅದು 15 ಪೈಸೆಗೆ ಇಳಿಯುತ್ತದೆ ಎಂದು ಹೇಳಿದ್ದರು. ಇದು ನಿಜವೂ ಹೌದು. ಸರಕಾರವು ಜನರ ಕಲ್ಯಾಣಕ್ಕಾಗಿ ಬಿಡುಗಡೆ ಮಾಡುತ್ತಿದ್ದ ಸಹಾಯಧನ, ಪ್ರೋತ್ಸಾಹಕಗಳು, ವಿದ್ಯಾರ್ಥಿ ವೇತನಗಳು, ಪೆನ್ಷನ್ ಗಳು ಜನರ ಬಳಿಗೆ ತಲುಪುವ ಮೊದಲೇ ಭ್ರಷ್ಟ ಅಧಿಕಾರಶಾಹೀ ವ್ಯವಸ್ಥೆಯಲ್ಲಿ ಅರ್ಧಕ್ಕರ್ಧ ಕರಗಿ ಹೋಗುತ್ತಿದ್ದವು. ಇದೀಗ ಜನಧನ್ ಅಕೌಂಟ್,ಆಧಾರ್ ಹಾಗೂ ಮೊಬೈಲ್ ನಂಬರ್ ಗಳನ್ನು ಪರಸ್ಪರ ಬೆಸೆದ ಜೆ ಎ ಎಂ (ಜಾಮ್) ವ್ಯವಸ್ಥೆಯಿಂದಾಗಿ ಸರಕಾರವು ಜನರಿಗೆ ಕೊಡುತ್ತಿರುವ ಸಹಾಯಧನದಲ್ಲಿ 100 ಶೇಕಡಾ ಮೊತ್ತವು ಜನರನ್ನು ನೇರವಾಗಿ ತಲುಪುತ್ತಿದೆ. ಉದಾಹರಣೆಗ ಕಳೆದ ವರ್ಷ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ ತಲಾ 6000 ರುಪಾಯಿಗಳಂತೆ 54,000 ಕೋಟಿ ರುಪಾಯಿಗಳನ್ನು ನೇರವಾಗಿ ವರ್ಗಾಯಿಸಲಾಗಿದೆ. ಕರೋನಾ ಸಂದಿಗ್ಧ ಕಾಲದಲ್ಲಿ ಜನಧನ್ ಖಾತೆ ಹೊಂದಿರುವ 42 ಕೋಟಿ ಬಡವರ ಬ್ಯಾಂಕ್ ಖಾತೆಗಳಿಗೆ ತಿಂಗಳೊಂದಕ್ಕೆ ತಲಾ 500 ರುಪಾಯಿಗಳಂತೆ 6 ತಿಂಗಳುಗಳ ಕಾಲ ಸಹಾಯಧನವನ್ನು ಜಮಾ ಮಾಡಲಾಗಿದೆ. ರೈತರು ಬೆಳೆದ ಕೃಷಿ ವಸ್ತುಗಳಿಗೆ ಸರಕಾರವು ಕೊಡಮಾಡುತ್ತಿರುವ ಕನಿಷ್ಠ ಬೆಂಬಲಬೆಲೆಯೂ ರೈತರ ನೇರ ಖಾತೆಗೆ ಜಮೆಯಾಗುತ್ತಿರುವುದೂ ಡಿಜಿಟಲ್ ಮಾಧ್ಯಮದ ಮೂಲಕವೇ. ಪಡಿತರ ವಸ್ತುಗಳ ವಿತರಣೆ, ವಿದ್ಯಾರ್ಥಿವೇತನ, ರಸಗೊಬ್ಬರ ಸಬ್ಸಿಡಿ, ವೃದ್ಧರು ಹಾಗೂ ದಿವ್ಯಾಂಗರ ಪೆನ್ಷನ್, ಮೊದಲಾದವುಗಳು ಡಿಜಿಟಲ್ ಮಾಧ್ಯಮದ ಸಂದಾಯವಾಗುತ್ತಿದೆ. ಜನಸಾಮಾನ್ಯರು ಭಾರತ್ ಇಂಟರ್ಫೇಸ್ ಫಾರ್ ಮನಿ( ಭೀಮ್) ಮೂಲಕ ಹಣ ವರ್ಗಾವಣೆ ಹಾಗೂ ವ್ಯವಹಾರ ಮಾಡಿಕೊಳ್ಳುತ್ತಿದ್ದು ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ 365 ಕೋಟಿ ಬಾರಿ ಯುಪಿಐ ಮೂಲಕ ಹಣ ವರ್ಗಾವಣೆಗೊಂಡಿದ್ದು ಸುಮಾರು 6.5 ಲಕ್ಷ ಕೋಟಿ ರುಪಾಯಿಗಳ ಹಣ ವರ್ಗಾವಣೆಗೊಂಡಿದೆ. 2010 ನೇ ಇಸವಿಯಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ವಹಿವಾಟು ನಡೆಸುವುದರಲ್ಲಿ ಜಾಗತಿಕವಾಗಿ ಹಿಂದಿದ್ದ ಭಾರತವಿಂದು ಚೀನಾ ಅಮೇರಿಕಗಳನ್ನು ಹಿಂದಿಕ್ಕಿ ಜಾಗತಿಕವಾಗಿ ಅತೀ ಹೆಚ್ಚು ಡಿಜಿಟಲ್ ಮಾಧ್ಯಮದ ಮೂಲಕ ವಹಿವಾಟನ್ನು ನಡೆಸುವ ದೇಶವಾಗಿ ಹೊರ ಹೊಮ್ಮಿದೆ. ಭಾರತದಲ್ಲಿಂದು ಚೀನಾಗಿಂತಲೂ 2 ಪಟ್ಟು ಹೆಚ್ಚು ಡಿಜಿಟಲ್ ವಹಿವಾಟುಗಳು ನಡೆಯುತ್ತಿವೆ.
ಭಾರತದ ಆಂತರಿಕ ಭದ್ರತೆ ಬಹಳಷ್ಟು ಸುಧಾರಿಸಿದೆ. ದೇಶದ ಬೇಹುಗಾರಿಕಾ ಇಲಾಖೆ ಹಾಗೂ ರಕ್ಷಣಾ ಇಲಾಖೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಒದಗಿಸಲಾಗಿದ್ದು ಈ ಮೂಲಕ ಭಯೋತ್ಪಾದನಾ ಸಂಚುಗಳನ್ನು ಸಮರ್ಥವಾಗಿ ಮಟ್ಟಹಾಕಲಾಗುತ್ತಿವೆ. ಇದರ ಪರಿಣಾಮವಾಗಿ 2014 ರ ನಂತರ ಭಯೋತ್ಪಾದಕರಿಗೆ ಕಾಶ್ಮೀರದ ಗಡಿ ಹಾಗೂ ರಕ್ಷಣಾ ಪಡೆಗಳನ್ನು ದಾಟಿ ನಾಗರಿಕರ ಮೇಲೆ ಒಂದೇ ಒಂದು ಭಯೋತ್ಪಾದನಾ ಧಾಳಿಯನ್ನು ಮಾಡಲು ಸಾಧ್ಯವಾಗಿಲ್ಲ. ಮೊದಲು ದೇಶದ 100 ಕ್ಕೂ ಹೆಚ್ಚಿನ ಜಿಲ್ಲೆಗಳು ನಕ್ಸಲ್ ವಾದೀ ಉಗ್ರರ ಉಪಟಳವನ್ನು ಎದುರಿಸುತ್ತಿದ್ದು ಈಗ ಆ ಜಿಲ್ಲೆಗಳ ಸಂಖ್ಯೆ 46 ಕ್ಕೆ ಇಳಿದಿದೆ. ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ದೇಶದ ಬಹುತೇಕ ಮನೆಗಳಿಗೆ ಶೌಚಾಲಯವು ಲಭ್ಯವಾಗಿದ್ದು ಇದರಿಂದಾಗಿ ವಾರ್ಷಿಕವಾಗಿ 3 ಲಕ್ಷ ಮಕ್ಕಳು ಬಹಿರ್ದೆಸೆಯಿಂದಾಗಿ ಬರುವ ವಿವಿಧ ಸೋಂಕುಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುವುದು ನಿಂತುಹೋಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಶ್ಲಾಘಿಸಿದೆ.
ಮೇಲೆ ಹೇಳಿದ ಯಾವ ಕಾರ್ಯಕ್ರಮಗಳೂ ಜನಪ್ರಿಯ ಯೋಜನೆಗಳಲ್ಲ, ಹಾಗಾಗಿ ಇವುಗಳು ಸಾಮಾಜಿಕ ಅಥವಾ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ರಾರಾಜಿಸುವ ವಿಷಯಗಳಲ್ಲ. ಆದರೆ ಈ ಕಾರ್ಯಕ್ರಮಗಳು ದೂರಗಾಮೀ ದೃಷ್ಟಿಯುಳ್ಳ, ಅಭಿವೃದ್ಧಿಪರ ಯೋಜನೆಗಳಾಗಿವೆ. ಜನಪ್ರಿಯ ಯೋಜನೆಗಳು ಜನರ ಓಟ್ ಗಳನ್ನು ಗಳಿಸಲು ಸಹಕಾರಿಯಾಗಬಹುದು, ಆದರೆ ಸದ್ದಿಲ್ಲದೆ ದೇಶದ ರಸ್ತೆಗಳ ನಿರ್ಮಾಣದಲ್ಲಾಗುತ್ತಿರುವ ಕ್ರಾಂತಿ, ದೇಶದ 5.5 ಕೋಟಿ ರೈತರ ಆರ್ಥಿಕ ಭದ್ರತೆಯನ್ನು ಕಾಯುತ್ತಿರುವ ಬೆಳೆ ವಿಮಾ ಯೋಜನೆ ಫಸಲ್ ಬೀಮಾ ಯೋಜನೆ, ರೈಲ್ವೇಯಲ್ಲಾಗುತ್ತಿರುವ ಆಮೂಲಾಗ್ರ ಬದಲಾವಣೆ, ಈ ಹಿಂದೆ ಜಾಗತಿಕವಾಗಿ 10 ನೇ ಸ್ಥಾನದಲ್ಲಿದ್ದಿದ್ದ ಭಾರತವು ಈಗ 6 ನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದು, ಜಾಗತಿಕವಾಗಿ 4 ನೇ ಅತೀ ಹೆಚ್ಚು ವಿದೇಶೀ ವಿನಿಮಯವನ್ನು ಹೊಂದಿದ ದೇಶವಾಗಿ ಬೆಳೆದುದು, ಕಳೆದ ಏಳು ವರ್ಷಗಳಲ್ಲಿ ಭಾರತದ ಶೇರು ಮಾರುಕಟ್ಟೆಯ ಹೂಡಿಕೆಯ ಮೌಲ್ಯ ದುಪ್ಪಟ್ಟಾಗಿರುವುದು ಮೊದಲಾದ ವಿಷಯಗಳು ದೇಶದ ಅಭಿವೃದ್ಧಿಯ ಸೂಚಕಗಳಾಗುವ ಧನಾತ್ಮಕ ಬೆಳವಣಿಗೆಗೆಳು.
✍️ ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.