‘ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಯೋಧ’ ಇವರಿಬ್ಬರೂ ದೇಶದ ಬೆನ್ನೆಲುಬು. ಇವರನ್ನು ಹೊರತುಪಡಿಸಿ ದೇಶ ಇರಲು ಸಾಧ್ಯವಿಲ್ಲ. ಇದಕ್ಕಾಗಿಯೇ ‘ಜೈ ಜವಾನ್, ಜೈ ಕಿಸಾನ್’ ಎಂದು ಯೋಧ ಮತ್ತು ರೈತರಿಬ್ಬರಿಗೂ ಗೌರವ ಸಲ್ಲಿಸುವ ಘೋಷಣೆಯನ್ನು ಮಾಡಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ದೇಶದ ಎರಡನೇಯ ಪ್ರಧಾನಿಯಾಗಿ ದೇಶದ ಅಭ್ಯುದಯದ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಶಾಸ್ತ್ರೀಜಿ ಅವರ ಬದುರು ಭಾರತೀಯರಿಗೆ ಬೆಳಕು ಎಂದರೆ ಅತಿಶಯವಲ್ಲ.
ಅವರು 1904 ರ ಅ. 2 ರಂದು ವಾರಣಾಸಿಯ ಮೊಘಲ್ ಸರಾಯ್ ನಲ್ಲಿ ಜನಿಸಿದವರು. ತಂದೆ ಶಾರದಾ ಪ್ರಸಾದ್, ತಾಯಿ ರಾಮ್ ದುಲಾರಿ. ಅವರ ಪತ್ನಿಯ ಹೆಸರು ಲಲಿತಾ. ಮೆಟ್ರಿಕ್ ವರೆಗಿನ ವಿದ್ಯಾಭ್ಯಾಸ. 1921 ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ, ಬಂಧನಕ್ಕೆ ಒಳಪಟ್ಟವರು. ದೇಶದ ರೈತರು, ಯೋಧಯ ಮೇಲೆ ಅಪಾರ ಗೌರವ ಹೊಂದಿದ್ದ ಅವರ ಬದುಕು ನಮ್ಮೆಲ್ಲರಿಗೂ ಬೆಳಕು ಎಂದರೆ ತಪ್ಪಾಗಲಾರದೇನೊ.
ದೇಶದ ಏಕತೆಗೆ ಜಾತಿ ವ್ಯವಸ್ಥೆ ತೊಂದರೆಯನ್ನು ಉಂಟು ಮಾಡುತ್ತದೆ ಎಂಬ ಅರಿವು ಹೊಂದಿದ್ದ ಅವರು, ಎಳವೆಯಲ್ಲಿಯೇ ತಮ್ಮ ಸರ್ನೇಮ್ (ಮನೆತನದ ಹೆಸರು) ಅನ್ನು ತ್ಯಜಿಸಿದ್ದರು. ಸಮಾನತೆಯ ಆಶಯವನ್ನು ಹೊಂದಿದ್ದ ರಾಷ್ಟ್ರೀಯ ನಾಯಕ ಶಾಸ್ತ್ರೀಜಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಕಾಶೀ ವಿದ್ಯಾಪೀಠಕ್ಕೆ ಸೇರಿಕೊಂಡು ತತ್ವಜ್ಞಾನದ ಪದವಿ ಪಡೆದ ಬಳಿಕ ಇವರಿಗೆ ಗುಣವಿಶೇಷವಾಗಿ ಶಾಸ್ತ್ರಿ ಎಂಬ ಹೆಸರು ಬಂದಿತು.
ಶಾಸ್ತ್ರೀಜಿ ಅವರು 1921 ರಲ್ಲಿ ಮಹಾತ್ಮಾ ಗಾಂಧಿ ಮತ್ತು ಬಾಲಗಂಗಾಧರ ತಿಲಕರಿಂದ ಪ್ರೇರಣೆ ಪಡೆದು ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದವರು. ಇದಕ್ಕಾಗಿ ಅವರು ತಮ್ಮ ಶಿಕ್ಷಣವನ್ನು ಸಹ ಮೊಟಕುಗೊಳಿಸಿದವರು.
ಶಾಸ್ತ್ರೀಜಿ ಅವರು ಪ್ರಧಾನಿಯಾಗಿ ಪದವಿ ಹೊಂದಿದ್ದಾಗಲೂ ಸ್ವಂತ ಕಾರು ಸಹ ಹೊಂದಿರಲಿಲ್ಲ. ಆದರೆ ತಮ್ಮ ಮನೆಯ ಸದಸ್ಯರ ಒತ್ತಾಯದ ಮೇರೆಗೆ ಕಾರು ಖರೀದಿಸಲು ಮುಂದಾದಾಗ ಅವರಲ್ಲಿ ಅದನ್ನು ಖರೀದಿಸಲು ಹಣದ ಕೊರತೆ ಎದುರಾಯಿತು. ಆ ಸಂದರ್ಭದಲ್ಲಿ ಬ್ಯಾಂಕ್ ಒಂದರಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಅವರ ಅರ್ಜಿಗೆ ಶೀಘ್ರದಲ್ಲೇ ಅಧಿಕಾರಿಗಳು ಸಾಲ ಮಂಜೂರು ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರು ಅಧಿಕಾರಿಗಳನ್ನು ಕರೆದು ಜನಸಾಮಾನ್ಯರಿಗೂ ಇಷ್ಟೇ ತ್ವರಿತವಾಗಿ ಸಾಲ ಸೌಲಭ್ಯ ದೊರೆಯುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಆ ಮೂಲಕ ನಾಯಕರಿಗೊಂದು ನ್ಯಾಯ, ಜನ ಸಾಮಾನ್ಯರಿಗೆ ಮತ್ತೊಂದು ನ್ಯಾಯ ಮಾಡದಂತೆ ಅಧಿಕಾರಿಗಳಲ್ಲಿ ಎಚ್ಚರ ಮೂಡಿಸುವ ಮೂಲಕ ಸರಳತೆ, ಪ್ರಾಮಾಣಿಕತೆ ಮೆರೆದ ಮಹಾ ನಾಯಕ ಅವರೆಂದರೂ ತಪ್ಪಾಗಲಾರದು.
ಶಾಸ್ತ್ರಿ ಅವರು ಈ ದೇಶ ಕಂಡ ಧೀಮಂತ, ನಿರ್ವಿವಾದಿ ನಾಯಕ ಎಂದು ಗಟ್ಟಿಯಾಗಿ ಹೇಳಬಹುದು. ಅಲ್ಪಾವಧಿಯ ತಮ್ಮ ಪ್ರಧಾನಿ ಹುದ್ದೆಯ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ ವ್ಯಕ್ತಿ ಶಕ್ತಿಯಾಗಿಯೂ ನಾವು ಶಾಸ್ತ್ರೀಜಿ ಅವರನ್ನು ನೆನಪಿಸಿಕೊಳ್ಳಲೇ ಬೇಕು. ಅಮೆರಿಕದ ಕಳಪೆ ಗೋಧಿ ಸರಬರಾಜು ತಿರಸ್ಕರಿಸಿ, ದೇಶವಾಸಿಗಳಿಗೆ ವಾರದಲ್ಲಿ ಒಂದು ದಿನ ಉಪವಾಸ ನಡೆಸಲು ಕರೆಕೊಟ್ಟ ಅವರು ಸ್ವಾಭಿಮಾನದ ಪ್ರತೀಕ. ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೊಳಿಸಿದ ಮಾದರಿ ನಾಯಕನಾಗಿಯೂ ನಾವು ಶಾಸ್ತ್ರಿ ಅವರನ್ನು ಸ್ಮರಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.