ಕಳೆದ 65 ವರ್ಷಗಳಿಂದ, ಅಂದರೆ 1956 ರಿಂದ, ಪ್ರಚಾರಕರಾಗಿ ಸಮಾಜ ಸೇವೆಗಾಗಿಯೇ ತಮ್ಮ ಬದುಕನ್ನೇ ಮೀಸಲಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕಾ. ಶ್ರೀ ನಾಗರಾಜರು ಇಂದು 90 ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
1932 ನೇ ಇಸವಿಯ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ಜನಿಸಿದ ಕಾಶ್ಯಪಗೋತ್ರ ಶ್ರೀಕಂಠಯ್ಯ ನಾಗರಾಜರು ಅವರ ತಂದೆ-ತಾಯಿಗೆ ಮೂರನೇ ಮಗ. ತಂದೆ ಬೂಕನಕೆರೆ ಶ್ರೀಕಂಠಯ್ಯನವರು ಪ್ರೈಮರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದವರು, ತಾಯಿಗುಂಡಮ್ಮ. ಕಾ. ಶ್ರೀ. ನಾಗರಾಜರಿಗೆ ಓರ್ವಅಕ್ಕ ಗುಂಡಮ್ಮ ಹಾಗೂ ಓರ್ವಅಣ್ಣ ವೆಂಕಟಸುಬ್ಬಯ್ಯ. ಅವರೂ ಪ್ರಾಥಮಿಕ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಇಬ್ಬರು ತಮ್ಮಂದಿರು, ರಾಮಣ್ಣ ಹಾಗೂ ಸತ್ಯನಾರಾಯಣ. ಸತ್ಯನಾರಾಯಣರವರು ಭಾರತ ಸರಕಾರದ ಉದ್ಯಮವೊಂದರಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತರು. ಇದೀಗ ಅಮೇರಿಕಾದಲ್ಲಿದ್ದಾರೆ. ತಂಗಿ ಶಾರದೆ ಲಂಡನ್ನಲ್ಲಿ ಶಿಕ್ಷಕಿಯಾಗಿದ್ದಾರೆ.
ಕಾ. ಶ್ರೀ ನಾಗರಾಜರು ಹೊಳೆನರಸೀಪುರದಲ್ಲಿ ಪ್ರೈಮರಿ ಮತ್ತು ಮಿಡ್ಲ್ ಸ್ಕೂಲ್ ಶಿಕ್ಷಣ ಪೂರೈಸಿ ಹಾಸನದಲ್ಲಿ ಎಂಟನೇ ತರಗತಿಗೆ ದಾಖಲಾದರು. ನಂತರ 1945 ರಲ್ಲಿ ಮೈಸೂರಿನಲ್ಲಿ ಶಾರದಾ ವಿಲಾಸ್ ಹೈಸ್ಕೂಲ್ ಮತ್ತುಕಾಲೇಜಿನಲ್ಲಿ ವಿದ್ಯಾಭ್ಯಾಸ.
1947 ರಿಂದ 1950 ರ ತನಕ ಮಂಡ್ಯದ ಕೊತ್ತತ್ತಿಯಲ್ಲಿ ಪ್ರೈಮರಿ ಶಾಲಾಶಿಕ್ಷಕರಾಗಿ ಹಾಗೂ ನಂತರದ ದಿನಗಳಲ್ಲಿ ಇತರ ಒಂದಷ್ಟು ವೃತ್ತಿಯಲ್ಲಿ ತೊಡಗಿದ್ದ ಕಾ. ಶ್ರೀ. ನಾಗರಾಜರಿಗೆ ಆರೆಸ್ಸೆಸ್ ಸಂಪರ್ಕವಾದದ್ದು 1948 ರಲ್ಲಿ.
1948 ರಲ್ಲಿ ಮೈಸೂರಿನಲ್ಲಿ ಸುಬ್ಬರಾಯನಕೆರೆಯ ಪ್ರತಾಪ ಶಾಖೆಯ ಸ್ವಯಂಸೇವಕರಾಗಿ ಸಕ್ರಿಯರಾದ ಕಾ. ಶ್ರೀ. ನಾಗರಾಜರು ನಂತರ ಸಂಘವನ್ನೇ ಬದುಕಿನ ಉಸಿರನ್ನಾಗಿಸಿದರು. 16 ನೇ ವಯಸ್ಸಿನ ತಾರುಣ್ಯದಲ್ಲಿ, ಆಗಿನ ಕಾಲದಲ್ಲಿ ಸಂಘ ಕಾರ್ಯ ಕರ್ನಾಟಕದಲ್ಲಿ ಇನ್ನೂ ಬೆಳೆಯುತ್ತಿದ್ದ ಆರಂಭಿಕ ವರ್ಷಗಳ ಆ ವೇಳೆಯಲ್ಲೇ ಜೀವನ ಪೂರ್ತಿ ಸಂಘದ ಕಾರ್ಯಕರ್ತನಾಗುವ ಸಂಕಲ್ಪತೊಟ್ಟರು. ಸಂಘ ಕಾರ್ಯ ಒಂದು ತಪಸ್ಸು, ಅದನ್ನು ಜೀವನ ಪರ್ಯಂತ ಮಾಡುವ ತೀರ್ಮಾನಕೈಗೊಂಡರು. 1948 ರ ಸಂದರ್ಭದಲ್ಲಿ ಗಾಂಧೀ ಹತ್ಯೆಯ ಮಿಥ್ಯಾರೋಪ ಹೊರಿಸಿ ಸಂಘದ ಮೇಲೆ ನಿರ್ಬಂಧ ಹೇರಲಾಗಿತ್ತು. ಆ ಸಂದರ್ಭದಲ್ಲಿ ಸತ್ಯಾಗ್ರಹ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಾಲ್ಕು ತಿಂಗಳು ಜೈಲುವಾಸ.
1950 ರಿಂದ 1956 ರ ವರೆಗೆ ಮೈಸೂರಿನ ರೈಲ್ವೆ ಆಡಿಟ್ ಆಫೀಸ್ನಲ್ಲಿ ಕ್ಲರ್ಕ್ ಆಗಿ ವೃತ್ತಿಯಲ್ಲಿದ್ದರು. ಈ ವೇಳೆ ಮುಖ್ಯ ಶಿಕ್ಷಕ್, ಕಾರ್ಯವಾಹ ಸೇರಿದಂತೆ ವಿವಿಧ ಜವಾಬ್ದಾರಿಗಳ ನಿರ್ವಹಣೆ. 1956 ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮತಾರುಣ್ಯದ 24 ನೇ ವಯಸ್ಸಿನಲ್ಲಿ ಸಂಘದ ಪ್ರಚಾರಕರಾದರು. ಜೀವನಪೂರ್ತಿ ಸಂಘಕಾರ್ಯವನ್ನೇ ಧ್ಯೇಯವಾಗಿರಿಸಿ, ಇದೀಗ ಕಳೆದ ೬೫ ಸುದೀರ್ಘ ವರ್ಷಗಳಿಂದ ಪ್ರಚಾರಕರಾಗಿದ್ದಾರೆ. ಪ್ರಚಾರಕರಾಗಲು ಮುಖ್ಯ ಪ್ರೇರಣೆ ಆಗ ಕರ್ನಾಟಕದ ಪ್ರಾಂತ ಪ್ರಚಾರಕರಾಗಿದ್ದ ಯಾದವ್ರಾವ್ ಜೋಷಿ. ಪ್ರತಿ ವರ್ಷವೂ, ವರ್ಷಕ್ಕೆ ಮೂರ್ನಾಲ್ಕು ಬಾರಿ ಮೈಸೂರಿಗೆ ಬರುತ್ತಿದ್ದ ಯಾದವರಾಯರ ಆತ್ಮೀಯತೆಯ ಮಾತುಗಳು, ಮೇಲ್ಪಂಕ್ತಿ, ಸಂಘಕಾರ್ಯದ ಮಹತ್ವ ಇತ್ಯಾದಿಗಳು ಯುವ ಮನಸ್ಸಿನ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದನ್ನು ಕಾ. ಶ್ರೀ. ನಾಗರಾಜರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅಂತೆಯೇ ಆಗ ಪ್ರಾಂತಕಾರ್ಯವಾಹರಾಗಿದ್ದ ಪ್ರಚಾರಕರಾದ ಹೊ. ವೆ. ಶೇಷಾದ್ರಿಗಳು ಹಾಗೂ ಮೈಸೂರು ಸ್ಟೇಟ್ನ ಪ್ರಚಾರಕರಾಗಿದ್ದ ಕೃ. ಸೂರ್ಯನಾರಾಯಣರಾವ್ ಇವರಿಬ್ಬರ ಪ್ರೇರಣೆಯ ಮಾತುಗಳು, ಕಾರ್ಯವೈಖರಿ ಹಾಗೂ ಆತ್ಮೀಯತೆಯ ಒಡನಾಟ- ಇವುಗಳೂ ತಾನು ಪ್ರಚಾರಕ್ ಆಗಲು ಪ್ರೇರಣೆ ನೀಡಿದ ಅಂಶಗಳು ಎನ್ನುತ್ತಾರೆ ಕಾ. ಶ್ರೀ. ನಾಗರಾಜ್.
1956 ರಲ್ಲಿ ಪ್ರಚಾರಕರಾಗಿ ಮೊದಲ ನಿಯುಕ್ತಿ ಹಾಸನ ಜಿಲ್ಲೆಗೆ. ಎರಡು ವರ್ಷಗಳ ಕಾಲ ಹಾಸನ ಜಿಲ್ಲೆ ಹಾಗೂ ಚಿಕ್ಕಮಗಳೂರಿನ ಮೂಡಿಗೆರೆ, ಚಿಕ್ಕಮಗಳೂರು, ಕಡೂರು ತಾಲೂಕುಗಳನ್ನೊಳಗೊಂಡ ಪ್ರದೇಶದಲ್ಲಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದರು, ನಂತರ 1958 ರಿಂದ 1966 ರ ವರೆಗೆಚಿತ್ರದುರ್ಗದಲ್ಲಿ ಮೊದಲ 6 ವರ್ಷಗಳ ಕಾಲ ಜಿಲ್ಲಾ ಪ್ರಚಾರಕರಾಗಿ ನಂತರ 3 ವರ್ಷಗಳ ಕಾಲ ಹರಪನಹಳ್ಳಿ ಪ್ರದೇಶಗಳಲ್ಲಿ ಪ್ರಚಾರಕರಾಗಿ ಸಂಘಕಾರ್ಯವಿಸ್ತಾರ. 1966 ಹಾಗೂ 1967 ರಲ್ಲಿ ಕೊಪ್ಪಳವನ್ನು ಒಳಗೊಂಡ ಬಳ್ಳಾರಿ ಜಿಲ್ಲೆಯಲ್ಲಿ ಪ್ರಚಾರಕರಾಗಿ ನಿಯುಕ್ತರಾದರು. 1968 ರಿಂದ 1969 ರ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯ ನಿಮಿತ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ನಲ್ಲಿ ವಿಶ್ರಾಂತಿ ಪಡೆದರು.
1969 ರಲ್ಲಿ ಹಿರಿಯರ ಸೂಚನೆಯಂತೆ ವಿಶ್ವ ಹಿಂದೂ ಪರಿಷತ್ನ ಐತಿಹಾಸಿಕ ಸಂತ ಸಮ್ಮೇಳನದ ಆಯೋಜನೆಯ ಕಾರ್ಯದ ತಂಡದಲ್ಲಿ ನಿಯುಕ್ತರಾದರು. ಉಡುಪಿಯಲ್ಲಿ ನಡೆದ ಈ ಸಂತ ಸಮ್ಮೇಳನಕ್ಕೆ ಯೋಜನೆಯ ನೊಗ ಹೊತ್ತಿದ್ದ ಕೃ. ಸೂರ್ಯನಾರಾಯಣರಾಯರಿಗೆ ಆಪ್ತ ಸಹಾಯಕರಾಗಿ ಸುಮಾರು 9 ತಿಂಗಳು ನಿರಂತರವಾಗಿ ಬಿರುಸಿನ ಓಡಾಟ ಮಾಡಿದ್ದ ಆ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ ಕಾ. ಶ್ರೀ. ನಾಗರಾಜರು. ಈ ಕಾರ್ಯಕ್ರಮದ ನಂತರ ಸ್ವಾಮೀ ಚಿನ್ಮಯಾನಂದ ಸೇರಿದಂತೆ ಅನೇಕ ಗಣ್ಯರ ಸಂದರ್ಶನ, ಅದರ ಲೇಖನರೂಪೀ ದಾಖಲೀಕರಣ ಇತ್ಯಾದಿ ಕೆಲಸಗಳು.
1969 ಅಕ್ಟೋಬರ್ನಿಂದ 1970 ರ ಮೇ ತನಕ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮ ನಿಮಿತ್ತ ವಿಶೇಷ ನಿಯೋಜನೆ.
1970 ರ ಮೇ ತಿಂಗಳಿನಿಂದ 1972 ರ ತನಕ ರಾಯಚೂರು ಜಿಲ್ಲೆಯ ಜಿಲ್ಲಾ ಪ್ರಚಾರಕರಾಗಿ ನಿಯುಕ್ತರಾದರು.
1973ರಲ್ಲಿ ಬೆಂಗಳೂರಿನ ಕೇಶವಕೃಪಾ ಪ್ರಾಂತ ಕಾರ್ಯಾಲಯಕ್ಕೆ ಬಂದ ಕಾ. ಶ್ರೀ. ನಾಗರಾಜರು, ಹಿರಿಯರಾದ ಹೊ. ವೆ. ಶೇಷಾದ್ರಿಗಳಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೊ. ವೆ. ಶೇಷಾದ್ರಿಗಳದ್ದು ಬಹುಮುಖ ಪ್ರತಿಭೆ. ವೈಚಾರಿಕ ಹಾಗೂ ಬೌದ್ಧಿಕ ವಲಯದಲ್ಲಿ ಮುಂಚೂಣಿಯ ಹೆಸರು. ಸಂಘಟನಾತ್ಮಕವಾಗಿ ಸಾವಿರಾರು ಕಾರ್ಯಕರ್ತರಿಗೆ ಮೇಲ್ಪಂಕ್ತಿ. ಶೇಷಾದ್ರಿಗಳ ಜೊತೆಗೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ವಿವಿಧ ಜಿಲ್ಲೆಗಳಿಗೆ ಪ್ರವಾಸದ ಸಂದರ್ಭದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾ.ಶ್ರೀ ನಾಗರಾಜರಿಗೆ ಅನೇಕ ವಿಶಿಷ್ಟ ಅನುಭವಗಳಾಯಿತು. ಇದೇ ವರ್ಷಗಳಲ್ಲಿ ಶೇಷಾದ್ರಿಗಳ ಸಾಹಿತ್ಯ ರಚನೆಯ ಅನೇಕ ಕಾರ್ಯಗಳಿಗೆ ಹೆಗಲು ನೀಡಿದರು. ಶೇಷಾದ್ರಿಗಳು ತಿಳಿಸುತ್ತಿದ್ದ ಅನೇಕ ವಿಚಾರಗಳು, ಸುದ್ದಿಗಳ ಕುರಿತು ಮಾಹಿತಿ ಕಲೆಹಾಕುವುದು, ಅಧ್ಯಯನದ ವರದಿ ಸಿದ್ಧಪಡಿಸುವುದು, ಲೇಖನಗಳ ಅನುವಾದ, ಗ್ರಂಥಾಲಯಗಳಿಗೆ ಭೇಟಿ ನೀಡುವುದು, ಆಕರ ಪುಸ್ತಕಗಳನ್ನು ತರಿಸುವುದು, ಸಂದರ್ಶನಗಳು ಸೇರಿದಂತೆ ಅನೇಕ ರೀತಿಯ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಶೇಷಾದ್ರಿಗಳು ಸ್ವಭಾವದಲ್ಲಿ ಬಹಳ ಪರ್ಫೆಕ್ಷನಿಸ್ಟ್ ಅಂದರೆ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಆದ್ದರಿಂದ ಶೇಷಾದ್ರಿಗಳು ವಹಿಸುತ್ತಿದ್ದ ಎಲ್ಲಾ ಕೆಲಸಗಳನ್ನು ಯಾವುದೇ ತಪ್ಪಿಲ್ಲದೆ, ಅಚ್ಚುಕಟ್ಟಾಗಿ ಮಾಡುತ್ತಾ ಅನೇಕ ವರ್ಷಅವರಜತೆಗಿದ್ದರು. ದೇಶ ವಿಭಜನೆಯ ದುರಂತಕಥೆ, ಆ ಕಾಳರಾತ್ರಿಯ ಪ್ರಶ್ನೆ-ಇತ್ಯಾದಿ ಪುಸ್ತಕ ಹೊರತರುವಲ್ಲಿ ಮಹತ್ವದ ಭೂಮಿಕೆ ನಿರ್ವಹಿಸಿದರು.
1975 ರಲ್ಲಿ ತುರ್ತು ಪರಿಸ್ಥಿತಿಯ ವೇಳೆ ಬಂಧಿಸಲ್ಪಟ್ಟರು. ಜೈಲಿನಲ್ಲಿ ಸ್ವಾಗತಿಸಿದವರೇ ಅಟಲ್ ಬಿಹಾರಿ ವಾಜಪೇಯಿ ‘ಕಹಾಂ ಸೇ ಆಯೇ?’ ಎಂದಾಗ ‘ಕೇಶವಕೃಪಾ’ ಎಂದಿದ್ದ ಕಾ. ಶ್ರೀ. ನಾಗರಾಜರು, ‘ಔರ್ ಸಂಕಷ್ಟ್ ಆನೇ ವಾಲಾ ಹೈ’ ಎಂದು ವಾಜಪೇಯಿ ಹೇಳಿದ್ದ ಆ ಕ್ಷಣವನ್ನು ಇಂದಿಗೂ ಸ್ಮರಿಸುತ್ತಾರೆ. ಲಾಲ್ಕೃಷ್ಣ ಅಡ್ವಾಣಿಯವರು ಪಕ್ಕದರೂಂನಲ್ಲೇ ಜೈಲೊಳಗಿದ್ದರು. ಸೆಪ್ಟಂಬರ್ 10 ರಂದು ಬಿಡುಗಡೆ, ಬಳಿಕ ಮತ್ತೆ ಕಾಡಿದ ಆರೋಗ್ಯ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು; ನಂತರ ಬೇಗನೇ ಚೇತರಿಸಿ, ಮೈಕೊಡವಿ ಎದ್ದ ಕಾ. ಶ್ರೀ. ನಾಗರಾಜರು ಎಮರ್ಜನ್ಸಿ ಕಾರ್ಯಾಲಯದ ನಿರ್ವಹಣೆಯ ಜವಾಬ್ದಾರಿ ಹೊತ್ತರು. ಜೈಲುಗಳಿಗೆ ಭೇಟಿ, ಮಹತ್ವದ ಪತ್ರ ವ್ಯವಹಾರ ಮಾಡುತ್ತಿದ್ದರು. ಆಗ ನರೇಂದ್ರ ಮೋದಿಯವರು ದೆಹಲಿಯ ಎಮರ್ಜೆನ್ಸಿ ಕಾರ್ಯಾಲಯದ ಪ್ರಮುಖರಾಗಿದ್ದರು. ಈ ಕುರಿತು, ಈಗ ಆರೆಸ್ಸಸ್ನ ಅಖಿಲ ಭಾರತೀಯ ಪ್ರಚಾರ ಪ್ರಮುಖರಾಗಿರುವ ಸುನಿಲ್ ಅಂಬೇಕರ್ ತಮ್ಮ ಪುಸ್ತಕ ‘ದಿ ಆರೆಸ್ಸೆಸ್: ರೋಡ್ಮ್ಯಾಪ್ಸ್ ಫಾರ್ದ ಟ್ವೆಂಟಿ ಫಸ್ಟ್ ಸೆಂಚುರಿ’ ಪುಸ್ತಕದಲ್ಲಿ ಬರೆದಿದ್ದಾರೆ.
1977 ರ ಮಾರ್ಚ್ ನಂತರ ಶೇಷಾದ್ರಿಗಳ ಸೂಚನೆಯ ಮೇರೆಗೆ ದೆಹಲಿಗೆ ತೆರಳಿದ ಕಾ. ಶ್ರೀ. ನಾಗರಾಜರು ಹಿರಿಯರಾಗಿದ್ದ ದತ್ತೋಪಂತ ಠೇಂಗಡಿಯವರ ಜತೆಗೆ ಸಹಾಯಕರಾಗಿ ಅಲ್ಪಕಾಲ ಜವಾಬ್ದಾರಿ ನಿರ್ವಹಿಸಿದರು. ‘ಆಪತ್ಕಾಲೀನ್ ಸಂಘರ್ಷ್’ ಪುಸ್ತಕಕ್ಕೆ ಬೇಕಾದ ಕರ್ನಾಟಕ ಹಾಗೂ ದಕ್ಷಿಣ ಭಾರತದ ಮಾಹಿತಿಗಳನ್ನು ಒದಗಿಸಿದ್ದರು ಕಾ. ಶ್ರೀ. ನಾಗರಾಜರು.
1977 ರಲ್ಲಿ ‘ಪುಂಗವ’ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರ ಸಂಸ್ಥಾಪಕ ಪ್ರಕಾಶಕರಾಗಿ, ಸಂಪಾದಕರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.
1982 ರಲ್ಲಿ ಹಿಂದೂ ತರುಣ ಶಿಬಿರದ ನಂತರದ ಮತ್ತೆ ಸಂಘ ಕ್ಷೇತ್ರದ ಜವಾಬ್ದಾರಿ. 1982 ರಿಂದ 1984ರ ತನಕ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಗರ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. 1984 ರಿಂದ 86 ರ ತನಕ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಚಾರಕರಾಗಿ ಕಾರ್ಯನಿರ್ವಹಿಸಿದರು. 1986 ರಿಂದ ಮತ್ತೆ ಕೇಶವಕೃಪಾ ಕಾರ್ಯಾಲಯಕ್ಕೆ ಮರಳಿದ ಕಾ. ಶ್ರೀ. ನಾಗರಾಜರು ಇಂದಿಗೂ ಕೇಶವಕೃಪಾ ಕೇಂದ್ರಿತವಾಗಿ ಸಕ್ರಿಯ ಬರವಣಿಗೆ, ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
1987-88 ರಲ್ಲಿ ಕೇಶವ ಕೃಪಾದ ಅಭಿಲೇಖಾಗಾರದ (ಡಾಕ್ಯುಮೆಂಟೇಷನ್) ಜವಾಬ್ದಾರಿ ನಿವರ್ಹಿಸಿದರು. ಇದೇ ವೇಳೆ ಶೇಷಾದ್ರಿಗಳ ಜೊತೆ ದೇಶಾದ್ಯಂತ ಪ್ರವಾಸದ ಸಂದರ್ಭದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಈ ವೇಳೆ ಒರಿಸ್ಸಾ ಹಾಗೂ ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
✍ ರಾಜೇಶ್ ಪದ್ಮಾರ್
ಪ್ರಾಂತ ಸಹಪ್ರಚಾರ ಪ್ರಮುಖರು, ಆರೆಸ್ಸೆಸ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.