ಬೆಳ್ತಂಗಡಿ: ತಾಲೂಕಿನ ನಕ್ಸಲ್ ಪ್ರಭಾವಿತ ಪ್ರದೇಶಗಳ ಅಭಿವೃದ್ಧಿಗಾಗಿ ರೂ. 5 ಕೋಟಿ ಒದಗಿಸುವುದಾಗಿ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಭರವಸೆ ನೀಡಿದ್ದಾರೆ.
ಅವರು ಸೋಮವಾರ ಬೆಳ್ತಂಗಡಿಯಲ್ಲಿ ಮಿನಿ ವಿಧಾನಸೌಧಕ್ಕೆ ಶಿಲಾನ್ಯಾಸ ಮತ್ತು ರಾಜೀವ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ರಾಜ್ಯದ 178 ತಾಲೂಕುಗಳಲ್ಲಿ 128 ಕಡೆ ಮಿನಿ ವಿಧಾನಸೌಧ ಪೂರ್ಣಗೊಂಡು ಕಾರ್ಯಾರಂಭ ಮಾಡಿವೆ. 20 ಕಡೆ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. 13 ಕಡೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. 17 ಕಡೆ ಸ್ಥಳದ ಅಭಾವವಿದೆ ಎಂದ ಅವರು ದ.ಕ.ಜಿಲ್ಲೆಯಲ್ಲಿ ಪುತ್ತೂರು, ಸುಳ್ಯದಲ್ಲಿ ಸೌಧ ನಿರ್ಮಾಣವಾಗಿದ್ದು ಮಂಗಳೂರಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಕೆಲಸ ಆರಂಭವಾಗಲಿದೆ ಎಂದರು.
ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲೂ ಮಿನಿ ವಿಧಾನಸೌಧಗಳ ನಿರ್ಮಾಣ ಮಾಡಲಾಗುತ್ತಿದ್ದು, 12 ಕಡೆ ಕೆಲಸ ಮುಗಿದಿದೆ. ೩ ಕಡೆ ಪ್ರಗತಿಯಲ್ಲಿದೆ. 2 ಕಡೆ ಹೊಸತಾಗಿ ಅನುಮೋದನೆ ನೀಡಲಾಗಿದೆ. 5 ಕಡೆ ಪರಿಶೀಲನೆಯಲ್ಲಿದೆ ಮತ್ತು 8 ಕಡೆ ಸೂಕ್ತ ಜಾಗ ಸಿಕ್ಕಿಲ್ಲ ಎಂದು ಸಚಿವರು ವಿವರಿಸಿದರು.
ಅಂತ್ಯೋದಯದಿಂದ ಸರ್ವೋದಯವೇ ಸಿದ್ದರಾಮಯ್ಯ ಸರಕಾರದ ಗುರಿ. ದೇಶದ ಅಭಿವೃದ್ಧಿಯನ್ನು ಸಮಯಕ್ಕೆ ಸರಿಯಾಗಿ ಬದಲಾವಣೆ ಮಾಡಿಕೊಂಡು ಹೋಗಬೇಕಾಗಿದೆ. ಕಂದಾಯ ಇಲಾಖೆಯ ಕಾರ್ಯಗಳನ್ನು ಬೇರೆಡೆ ಮಾಡಲು ಸಾಧ್ಯವಿಲ್ಲ. ಇದೊಂದು ಮಾತೃ ಇಲಾಖೆ. ಏನೇ ಕೆಲಸ ಇದ್ದರೂ ಇಲಾಖಾ ಕಚೇರಿಗೇ ಬರಬೇಕಾಗುತ್ತದೆ. ಪಹಣಿ ಪತ್ರಗಳ ದೋಷಗಳನ್ನು ಸರಿಮಾಡಲು ರೈತರ ಮನೆಬಾಗಿಲನ್ನುತಟ್ಟುವ ಕೆಲಸ ಸರಕಾರ ಮಾಡುತ್ತಿದೆ. ಇಲಾಖಾ ಆದೇಶದಂತೆ 40 ಕಂದಾಯ ಅದಾಲತ್ಗಳನ್ನು ಜಿಲ್ಲಾಧಿಕಾರಿಯವರು ಮಾಡಬೇಕಾಗಿದೆ. ಇದರಿಂದ ಆರ್ಟಿಸಿಯಲ್ಲಿನ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗಿದೆ.
ರಾಜ್ಯದಲ್ಲಿ ಇದುವರೆಗೆ 7,711 ಕಂದಾಯ ಅದಾಲತ್ಗಳನ್ನು ಮಾಡಲಾಗಿದೆ. ಪಹಣಿ ಪತ್ರದಲ್ಲಿನ ದೋಷಗಳನ್ನು ಸರಿಪಡಿಸಲು ತಹಶೀಲ್ದಾರರಿಗೇ ಅವಕಾಶ ನೀಡಲಾಗಿದೆ ಎಂದರು. 1,769 ಭೂಮಾಪಕರನ್ನು ನೇಮಿಸಲಾಗಿದೆ. ತಿಂಗಳಿಗೆ 23 ಪೋಡಿಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಮಾಡಲಾಗಿದ್ದು ಇದುವರೆಗೆ 3,507 ಅದಾಲತ್ಗಳು ನಡೆದಿದ್ದು, 1 ಲಕ್ಷದ 39 ಸಾವಿರ ಮಂದಿಗೆ ಪಿಂಚಣಿ ನೀಡಲಾಗಿದೆ. ಸಾಮಾಜಿಕ, ಶೈಕ್ಷಣಿಕ ಗಣತಿ ನಡೆಸಲಾಗುತಿದೆ. ಸರಕಾರಿ ರುದ್ರಭೂಮಿಗಳನ್ನು ನಿರ್ಮಿಸುವ ಯೋಜನೆ ಇದ್ದು ಮುಂದಿನ 3 ವರ್ಷದ ಅವಧಿಯಲ್ಲಿ ಜನರ ನಿರೀಕ್ಷೆಗಳನ್ನು ಈಡೇರಿಸುವ ಸಂಕಲ್ಪ ರಾಜ್ಯ ಸರಕಾರದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರ ಅವರು ದಿಡುಪೆ- ಎಳನೀರು 9 ಕಿ.ಮೀ.ಉದ್ದದ ರಸ್ತೆಯ ಅಭಿವೃದ್ಧಿಗೆ ರೂ.14.5 ಕೋಟಿಯ ಪ್ರಸ್ತಾವನೆ ಕಳುಹಿಸಲಾಗಿದ್ದು ಇದಕ್ಕೆ ಅರಣ್ಯ ಇಲಾಖೆಯ ಅನುಮತಿ ಬೇಕಾಗಿದೆ. ತಾಲೂಕಿನಲ್ಲಿ 4,702 ಮಂದಿ ಬಡವರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಿಗೂ ಅನುಕೂಲ ಮಾಡಿ ಕೊಡುವಲ್ಲಿ ಸರಕಾರಿ ಗಮನ ನೀಡಬೇಕು ಎಂದರು.
ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ತಹಶೀಲ್ದಾರ್ ಬಿ.ಎಸ್.ಪುಟ್ಟ ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಬೆಳ್ತಂಗಡಿ ತಾಲೂಕು ಪಂ.ಅಧ್ಯಕ್ಷೆ ಜಯಂತಿ ಪಾಲೇದು, ಪಟ್ಟಣ ಪಂ.ಅಧ್ಯಕ್ಷೆ ಮುಸ್ತರ್ಜಾನ್ ಮೆಹಬೂಬ್, ಲೋಕೋಪಯೋಗಿ ಇಲಾಖಾ ಇಇ ಎ.ಜೆ.ಧರ್ಮರಾಜ್, ಎಪಿಎಂಸಿ ಅಧ್ಯಕ್ಷ ಧರಣೇಂದ್ರಕುಮಾರ್, ಜಿ.ಪಂ.ಸದಸ್ಯೆ ಚಂದ್ರಕಲಾ ಮತ್ತು ಧನಲಕ್ಷ್ಮೀ, ಶೈಲೇಶ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.