ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಸಂಪತ್ತಿನಿಂದ ತುಂಬಿ ತುಳುಕುತ್ತಿರುವ ಯುಎಇ (ಸಂಯುಕ್ತ ಅರಬ್ ಸಂಸ್ಥಾನಗಳು)ಗೆ ಎರಡು ದಿನಗಳ ಭೇಟಿ ನೀಡಿ, ಭಾರತ-ಅರಬ್ ಮೈತ್ರಿಗೆ ಹೊಸ ಭಾಷ್ಯ ಬರೆದಿದ್ದಾರೆ. 34 ವರ್ಷಗಳ ನಂತರ ಕೊಲ್ಲಿ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೊಬ್ಬರು ನೀಡಿದ ಭೇಟಿ ಇದಾಗಿತ್ತು. ಯುಎಇ ಜನಸಂಖ್ಯೆಯಲ್ಲಿ ಶೇ.30ರಷ್ಟು ಭಾರತೀಯ ಸಮುದಾಯದವರೇ ಇದ್ದಾರೆ. ಅಲ್ಲಿ ಸುಮಾರು 20.6 ಲಕ್ಷ ಭಾರತೀಯ ಕೆಲಸಗಾರರು ವಿವಿಧ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜನಸಂಖ್ಯೆಯಲ್ಲಿ ಶೇ.30ರಷ್ಟು ಭಾರತೀಯರ ಪಾರಮ್ಯ ಇದ್ದರೂ, 34 ವರ್ಷಗಳವರೆಗೆ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ!
ಸಾಮಾನ್ಯವಾಗಿ ಪ್ರಧಾನಿಯೊಬ್ಬರು ಹೊರದೇಶಗಳಿಗೆ ಭೇಟಿ ನೀಡುವುದು ಎರಡು ಕಾರಣಕ್ಕಾಗಿ. ಒಂದು – ಭಾರತದ ಆರ್ಥಿಕತೆಗೆ ಚೇತರಿಕೆ ನೀಡುವುದು. ಎರಡು – ಅನಿವಾಸಿ ಭಾರತೀಯರ ಜೊತೆಗೆ ಸಂಪರ್ಕ ಸಾಧಿಸುವುದು. ಪ್ರಧಾನಿ ಮೋದಿ ಇವೆರಡೂ ಉದ್ದೇಶಗಳನ್ನು ಈಡೇರಿಸಿದ್ದಾರೆ ಎನ್ನಬಹುದು. ಜೊತೆಗೆ ಪ್ರಧಾನಿ ಮೋದಿ ಇನ್ನೊಂದು ಉದ್ದೇಶವನ್ನೂ ಈಡೇರಿಸಿದ್ದಾರೆ. ಅದೆಂದರೆ – ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಯುಎಇ ಹೊಸ ಮಿತ್ರ ರಾಷ್ಟ್ರವಾಗಲಿರುವುದು. ಭಾರತ ಹಾಗೂ ಯುಎಇ ಮೋದಿ ಭೇಟಿಯ ನಂತರ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ಈ ವಿಚಾರ ವ್ಯಕ್ತವಾಗಿದೆ. ಈವರೆಗೆ ಅರಬ್ ರಾಷ್ಟ್ರಗಳ ಜೊತೆಗಿನ ಮೈತ್ರಿ ಕೇವಲ ಆರ್ಥಿಕ ಸಹಕಾರಕ್ಕೆ ಸೀಮಿತವಾಗಿತ್ತು. ಆದರೆ ಮೋದಿ ಭೇಟಿಯಿಂದಾಗಿ, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ ಮೇಲಿನ ಸಮಗ್ರ ನಿರ್ಣಯಕ್ಕೆ (ಸಿಸಿಐಟಿ) ಒತ್ತಾಯಿಸುತ್ತಿರುವ ಭಾರತಕ್ಕೆ ಬೆಂಬಲ ನೀಡಲು ಯುಎಇ ಸಮ್ಮತಿ ಸೂಚಿಸಿದೆ. ಇದೊಂದು ಮಹತ್ವದ ಬೆಳವಣಿಗೆ. ಭಾರತ-ಅರಬ್ ರಾಷ್ಟ್ರಗಳು ಜಂಟಿಯಾಗಿ ಹೊರಡಿಸಿರುವ ಈ ಹೇಳಿಕೆಯನ್ನು `ಅರ್ಥಮಾಡಿಕೊಳ್ಳುವ ಅಗತ್ಯ ಇರುವವರು ಅರ್ಥಮಾಡಿಕೊಳ್ಳುತ್ತಾರೆ’ ಎಂದು ಮೋದಿ ದುಬೈನಲ್ಲಿ ನಡೆದ ಸಭೆಯಲ್ಲಿ ಮಾರ್ಮಿಕವಾಗಿ ಹೇಳಿದ್ದೂ ಇದೇ ಹಿನ್ನೆಲೆಯಲ್ಲಿ.
ಭಾರತ ಮತ್ತು ಯುಎಇ ನಡುವಣ ವಾಣಿಜ್ಯ ವಹಿವಾಟಿನ ಒಟ್ಟು ಮೊತ್ತ 66 ಬಿಲಿಯನ್ ಡಾಲರ್ಗಳು. ಇದೀಗ ಭಾರತದಲ್ಲಿ ಯುಎಇ ಕಡೆಯಿಂದ 65 ಲಕ್ಷ ಕೋಟಿ ರೂ. ಹೂಡಿಕೆಗಾಗಿ ಮೋದಿ ಆಹ್ವಾನ ನೀಡಿದ್ದಾರೆ. ಆ ಆಹ್ವಾನವನ್ನು ಅಲ್ಲಿನ ದೊರೆ ಒಪ್ಪಿಕೊಂಡಿದ್ದೂ ಆಗಿದೆ. ಕಟ್ಟಾ ಸಂಪ್ರದಾಯಶೀಲ ಇಸ್ಲಾಂ ನಗರವೆನಿಸಿದ ಅಬೂಧಾಬಿಯಲ್ಲಿ ಹಿಂದು ದೇವಾಲಯ ನಿರ್ಮಾಣಕ್ಕೆ ಭೂಮಿಯನ್ನು ಯುಎಇ ನೀಡಿರುವುದು ಮೋದಿ ಭೇಟಿ ಎಷ್ಟೊಂದು ಪ್ರಭಾವಶಾಲಿ ಎನ್ನುವುದಕ್ಕೆ ಇನ್ನೊಂದು ನಿದರ್ಶನ. ಭಾರತ – ಅರಬ್ ರಾಷ್ಟ್ರಗಳ ಬಾಂಧವ್ಯವನ್ನು ವಿಸ್ತರಿಸುವತ್ತ ಇದು ಮತ್ತೊಂದು ಸಾಂಕೇತಿಕ ದಿಟ್ಟ ಹೆಜ್ಜೆ.
ಉಗ್ರರ ನಿಗ್ರಹ ವಿಚಾರದಲ್ಲಿ ಮೋದಿಯವರ ಅರಬ್ ರಾಷ್ಟ್ರಗಳ ಭೇಟಿ ಭಾರತದ ಮಟ್ಟಿಗೆ ಒಂದು ಹೊಸ ಬೆಳವಣಿಗೆ. ಇಂತಹದೊಂದು ಪ್ರಯತ್ನವನ್ನು ಹಿಂದಿನ ಯಾವ ಪ್ರಧಾನಿಯವರೂ ಮಾಡಿರಲಿಲ್ಲ. ಯುಎಇ ಮತ್ತು ಪಾಕಿಸ್ಥಾನದ ನಡುವೆ ಸಾಕಷ್ಟು ಹಿಂದಿನಿಂದಲೂ ಬಾಂಧವ್ಯ ಇದೆ. ಪಾಕಿಸ್ಥಾನಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತಿರುವ ದೇಶಗಳಲ್ಲಿ ಯುಎಇ ಕೂಡ ಒಂದು. ಆದರೆ ಈಗ ಈ ಬಾಂಧವ್ಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಅರಬ್ ರಾಷ್ಟ್ರಗಳಲ್ಲಿ ಉಗ್ರವಾದ ನಿಗಿನಿಗಿ ಬೆಂಕಿಯಂತೆ ಹರಡಿ, ಇಸ್ಲಾಂ ದೇಶಗಳ ಸಮಗ್ರತೆಗೇ ಸವಾಲಾಗಿ ನಿಂತಿದೆ. ಅಲ್ಲಿನ ಪ್ರಭುತ್ವಕ್ಕೆ ಎಲ್ಲಕ್ಕಿಂತ ಮುಖ್ಯವಾದ ಗಂಭೀರ ಸವಾಲು ಇದೇ ಆಗಿದೆ. ಅದರಲ್ಲೂ ಶರವೇಗದಲ್ಲಿ ಬೆಳೆಯುತ್ತಿರುವ ಐಎಸ್ಐಎಸ್ ಭಯೋತ್ಪಾದನೆ ಮುಸ್ಲಿಂ ದೇಶಗಳನ್ನು ಅರಾಜಕತೆಯತ್ತ ಕೊಂಡೊಯ್ದಿದೆ. ಇರಾಕ್, ಸಿರಿಯಾದಲ್ಲಿರುವ ಅರಾಜಕ ಸ್ಥಿತಿ ಬಳಸಿಕೊಂಡು ಐಎಸ್ಐಎಸ್ ಪ್ರತ್ಯೇಕ ಇಸ್ಲಾಂ ದೇಶ ರಚನೆಗೆ ಮುಂದಾಗಿದೆ. ಲಿಬಿಯಾ, ಯೆಮನ್ನಲ್ಲಿ ಉಗ್ರರ ಹಿಂಸಾಚಾರ ಮಿತಿಮೀರಿದೆ. ಹೀಗಾಗಿ ಕೆಲ ಅರಬ್ ರಾಷ್ಟ್ರಗಳು ಒಟ್ಟಾಗಿ ಸೇರಿ ಒಂದು ವೇದಿಕೆ ರಚಿಸಿ ಉಗ್ರರ ವಿರುದ್ಧ ದಾಳಿಗೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಉಗ್ರರ ಅಟ್ಟಹಾಸ ಅಡಗಿಸಲು ರಚಿಸಲಾದ ಸೌದಿ ಅರೇಬಿಯಾ ನೇತೃತ್ವದ ಸೇನೆಯಲ್ಲಿ ಪಾಲ್ಗೊಳ್ಳಬೇಕೆಂದು ಯುಎಇ ಪಾಕಿಸ್ಥಾನವನ್ನು ಕೇಳಿಕೊಂಡಿತ್ತು. ಆದರೆ ಪಾಕ್ ಮಾತ್ರ ಯುಎಇ ಕೋರಿಕೆಯನ್ನು ನಿರಾಕರಿಸಿದೆ. ಉಗ್ರರ ನಿಗ್ರಹ ವಿಷಯದಲ್ಲಿ ಯುಎಇಗೆ ಪಾಕ್ ಸಹಕರಿಸದಿರುವುದು ಅವೆರಡು ದೇಶಗಳ ನಡುವಿನ ಬಾಂಧವ್ಯ ಹಳಸುವಂತೆ ಮಾಡಿರುವುದು ಅಷ್ಟೇ ನಿಜ.
ಮೋದಿ ಬಹುಶಃ ಇದೇ ಸಮಯಕ್ಕಾಗಿ ಕಾಯುತ್ತಿದ್ದರೆಂದು ಕಾಣುತ್ತದೆ. ಕಬ್ಬಿಣ ಕಾದಾಗಲೇ ಅದಕ್ಕೆ ಬಡಿಯಬೇಕೆಂಬುದು ಗಾದೆ. ಮೋದಿ ಕಬ್ಬಿಣ ಕಾಯುವ ಹಂತದಲ್ಲೇ ಅದಕ್ಕೆ ಸರಿಯಾಗಿ ಹೊಡೆದಿದ್ದಾರೆ. ಭಯೋತ್ಪಾದನೆಗೆ ಬೆಂಬಲ ಸೂಚಿಸುತ್ತಿರುವ ದೇಶ ಒಂದಿದ್ದರೆ ಅದು ಪಾಕಿಸ್ಥಾನ ಎಂಬುದನ್ನು ಮೋದಿ ಯುಎಇಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರೀ ಸಭೆಯಲ್ಲಿ ಮೋದಿ ಪರೋಕ್ಷವಾಗಿ ಪಾಕಿಸ್ಥಾನಕ್ಕೆ ನೀಡಿರುವ ಎಚ್ಚರಿಕೆ ಅತ್ಯಂತ ಮಾರ್ಮಿಕ : `ವಿಶ್ವದಲ್ಲಿ ಈಗ ಎರಡು ರೀತಿಯ ದೇಶಗಳಿವೆ. ಭಯೋತ್ಪಾದನೆಯಲ್ಲಿ ನಂಬಿಕೆಯಿರುವ ದೇಶಗಳು ಮತ್ತು ಮಾನವೀಯತೆಯಲ್ಲಿ ನಂಬಿಕೆಯಿರುವ ದೇಶಗಳು. ಮಾನವೀಯತೆಯಲ್ಲಿ ನಂಬಿಕೆ ಇರುವವರೆಲ್ಲರೂ ಒಂದಾಗಬೇಕು. ಒಳ್ಳೆಯ ತಾಲೀಬಾನ್, ಕೆಟ್ಟ ತಾಲೀಬಾನ್ ಎಂಬುದಿಲ್ಲ. ಎಲ್ಲ ಬಗೆಯ ಉಗ್ರವಾದವೂ ಮಾನವತೆಗೆ ವಿರುದ್ಧವಾದುದು’. ಮುಸ್ಲಿಂ ನೆಲದಲ್ಲಿ ನಿಂತು ಮತ್ತೊಂದು ಮುಸ್ಲಿಂ ರಾಷ್ಟ್ರಕ್ಕೆ ಮೋದಿ ಸಿಡಿಗುಂಡಿನಂತೆ ನೀಡಿರುವ ಈ ಎಚ್ಚರಿಕೆ ಪಾಕಿಸ್ಥಾನವನ್ನು ಉದ್ದೇಶಿಸಿಯೇ ಎಂಬುದರಲ್ಲಿ ಅನುಮಾನವಿಲ್ಲ. ಹೀಗೆ ಸಿಂಹದ ಗುಹೆಗೇ ನುಗ್ಗಿ ಅಲ್ಲಿ ಅಡಗಿರುವ ಸಿಂಹದ ಗಡ್ಡವನ್ನು ಜಗ್ಗುವುದಕ್ಕೂ ಎಂಟೆದೆಯ ಧೈರ್ಯವಿರಬೇಕು. ಮೋದಿಗೆ ಆ ಧೈರ್ಯವಿದೆ. ಹಾಗಲ್ಲದಿದ್ದರೆ ಅವರು 50 ಸಹಸ್ರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದ ಮುಂದೆ ದುಬೈ ಕ್ರೀಡಾಂಗಣದಲ್ಲಿ ಹೀಗೆ ದಿಟ್ಟತನದ ನುಡಿಗಳನ್ನು ಹೇಳಲು ಸಾಧ್ಯವಿತ್ತೇ? ಸೋಜಿಗವೆಂದರೆ ಆ ಸಭೆಯಲ್ಲಿದ್ದ ಮುಸ್ಲಿಮರು, ಅರಬರು, ಅಲ್ಲಿನ ಆಡಳಿತಗಾರರು… ಎಲ್ಲರೂ ಮೋದಿಯವರ ಈ ಸಿಡಿಲ ನುಡಿಗೆ ಮೆಚ್ಚುಗೆ ಸೂಚಿಸಿ ಭಾರೀ ಕರತಾಡನ ಮಾಡಿದ್ದು!
ಭಾರತದಲ್ಲಿ ಆಗಾಗ ಸರಣಿ ಬಾಂಬ್ ಸ್ಫೋಟ, ಜನರ ಮಾರಣಹೋಮ ಇತ್ಯಾದಿ ಹಿಂಸಾಚಾರ ಕೃತ್ಯಗಳನ್ನು ನಡೆಸಿದ ಪಾತಕಿಗಳು ನೇರವಾಗಿ ಆಶ್ರಯಿಸುತ್ತಿದ್ದ ಅಡಗುದಾಣವೆಂದರೆ ದುಬೈ ಆಗಿತ್ತು. ಮುಂಬೈ ಸರಣಿ ಸ್ಫೋಟದ ಹಿಂದಿನ ಪಾತಕಿ ದಾವುದ್ ಇಬ್ರಾಹಿಂ ಕೂಡ ಮೊದಲು ಪರಾರಿಯಾಗಿ ತಲೆಮರೆಸಿಕೊಂಡಿದ್ದು ಇದೇ ದುಬೈನಲ್ಲಿ. ಅನೇಕ ಉಗ್ರರು ಸುರಕ್ಷಿತ ತಾಣವಾಗಿ ಮಾಡಿಕೊಂಡಿದ್ದೂ ಇದೇ ದುಬೈ ನೆಲವನ್ನು. ಆದರೆ ಇನ್ನುಮುಂದೆ ದುಬೈ ಅವರ ಪಾಲಿಗೆ ನರಕವಾಗಬಹುದು!
ಪ್ರಧಾನಿ ಮೋದಿ ಅಬುದಾಬಿಯಲ್ಲಿ ಶೇಕ್ ಜಾವೆದ್ ಮಸೀದಿಗೂ ಭೇಟಿ ನೀಡಿ ಬಂದಿದ್ದಾರೆ. `ಮೋದಿ ಮೊದಲು ಭಾರತದಲ್ಲಿರುವ ಮಸೀದಿಗಳಿಗೆ ಭೇಟಿ ನೀಡಲಿ, ಅನಂತರ ಬೇಕಿದ್ದರೆ ಅಬೂದಾಬಿ ಮಸೀದಿಗೆ ಹೋಗಬಹುದಿತ್ತು’ ಎಂಬ ಟೀಕೆಯೂ ಇದಕ್ಕೆ ವ್ಯಕ್ತವಾಗಿದೆ. ಅಕಸ್ಮಾತ್ ಮೋದಿ ಅಬುದಾಬಿಯ ಮಸೀದಿಗೆ ಭೇಟಿ ನೀಡದಿದ್ದಲ್ಲಿ ಅದಕ್ಕೂ ಟೀಕೆ ವ್ಯಕ್ತವಾಗುತ್ತಿತ್ತು. `ಮಸೀದಿಗೆ ಭೇಟಿ ನೀಡದ ಕೋಮುವಾದಿ’ ಎಂದು ಪ್ರಗತಿಪರರು ಹುಯಿಲೆಬ್ಬಿಸುತ್ತಿದ್ದರು. ಮೋದಿಯವರ ಅರಬ್ ರಾಷ್ಟ್ರಗಳ ಭೇಟಿಯ ಬಗ್ಗೆ ಈ ಪ್ರಗತಿಪರರದು ಈಗ ಮಾತ್ರ ದಿವ್ಯ ಮೌನ! ಮುಸ್ಲಿಂ ರಾಷ್ಟ್ರಗಳೊಂದಿಗೆ ಬಾಂಧವ್ಯದ ಹೊಸ ಮಜಲನ್ನು ಮೋದಿ ತೆರೆದಿದ್ದಕ್ಕಾಗಿ ಪ್ರಗತಿಪರರು, ವಿರೋಧಿ ರಾಜಕಾರಣಿಗಳು ಅವರನ್ನು ಮನಸಾರೆ ಶ್ಲಾಘಿಸಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. `ಮೋದಿ ಒಬ್ಬ ಟೂರಿಸ್ಟ್ ಪ್ರಧಾನಿ. ವಿದೇಶಗಳಿಗೆ ಟೂರ್ ಮಾಡುವುದೊಂದೇ ಅವರ ಕೆಲಸವಾಗಿದೆ’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಟಕಿಯಾಡಿದ್ದಾರೆ. ಮೋದಿ ಯಾಕಾಗಿ ವಿದೇಶಗಳ ಟೂರ್ ಮಾಡುತ್ತಿದ್ದಾರೆಂಬುದು ದೇಶದ ಜನರಿಗೆ ಮಾತ್ರ ಗೊತ್ತಿದೆ. ವಿದೇಶಗಳಲ್ಲಿ ಮೋದಿಯ ಜಾಣ ನಡೆಗಳಿಂದ ಭಾರತದ ಪ್ರಭಾವ ಹೇಗೆ ಕ್ರಮೇಣ ದಟ್ಟವಾಗಿ ಹರಡುತ್ತಿದೆ ಎಂಬುದೂ ದೇಶವಾಸಿಗಳ ಗಮನಕ್ಕೆ ಬಂದಿದೆ. ವಿರೋಧಿ ನಾಯಕರಿಗೆ ಮಾತ್ರ ಮೋದಿ ಏನೇ ಮಾಡಿದರೂ ಸಹ್ಯವಾಗುತ್ತಿಲ್ಲ. ಮೊಸರಲ್ಲಿ ಕಲ್ಲು ಹುಡುಕುವುದೇ ಇವರ ಜಾಯಮಾನ!
ವಿರೋಧಿಗಳು ಮೋದಿಯವರನ್ನು ಎಷ್ಟೇ ದ್ವೇಷಿಸಲಿ, ಆದರೆ ಅವರು ಪ್ರಧಾನಿಯಾದ ಬಳಿಕ ಜಾಗತಿಕ ಮಟ್ಟದಲ್ಲಿ ಇಟ್ಟಿರುವ ಚಾಣಾಕ್ಷ ಹೆಜ್ಜೆಗಳನ್ನು ಯಾರಾದರೂ ಮೆಚ್ಚಿಕೊಳ್ಳಲೇಬೇಕು. ವಿದೇಶಿ ನೆಲದಲ್ಲಿ ಕಿಕ್ಕಿರಿದು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಬೇರೊಂದು ದೇಶದ ಪ್ರಧಾನಿ ಮಾತನಾಡಿದ ನಿದರ್ಶನಗಳು ವಿರಳ. ಮೋದಿ ಮಾತ್ರ ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ತಮ್ಮ ವಿದೇಶ ಪ್ರವಾಸದ ವೇಳೆ ಅಲ್ಲಿ ನೆಲೆಸಿರುವ ಭಾರತೀಯರಲ್ಲಿ ಭಾರತ ಹಾಗೂ ಅದರ ಪ್ರಗತಿಯ ಬಗ್ಗೆ ಭರಪೂರ ವಿಶ್ವಾಸ ತುಂಬಿದ್ದಾರೆ. ಮೋದಿಯವರ ಬಗ್ಗೆ ಹೇಳಬಹುದಾದ ಒಂದೇ ಒಂದು ಅಸಮಾಧಾನದ ಸಂಗತಿಯೆಂದರೆ – ಅವರು ವಿದೇಶಿ ನೆಲದಲ್ಲಿ ಭಾಷಣ ಮಾಡುವಾಗ ಭಾರತದ ವಿರೋಧ ಪಕ್ಷಗಳನ್ನು ಟೀಕಿಸುವುದು ತರವಲ್ಲ. ಭಾರತದ ನೆಲದಲ್ಲಿ ಎಷ್ಟಾದರೂ ಟೀಕೆ ಹರಿಯಲಿ. ಆದರೆ ವಿದೇಶದಲ್ಲಿ ಭಾರತದ ಪ್ರಧಾನಿ ಅಪ್ಪಿತಪ್ಪಿಯೂ ತನ್ನ ದೇಶದ ವಿರೋಧ ಪಕ್ಷಗಳ ವಿರುದ್ಧ ಟೀಕಿಸಕೂಡದು. ಅಲ್ಲಿ ಅವರು ಅನುಸರಿಸಬೇಕಾದುದು – ಮಹಾಭಾರತದ `ವಯಂ ಪಂಚಾಧಿಕಂ ಶತಂ’ ಎಂಬ ರಾಜನೀತಿಯನ್ನು.
ಕೊನೆಯದಾಗಿ, ಒಂದು ಅಂಶವನ್ನು ಮೋದಿ ವಿರೋಧಿಗಳು ಕೂಡ ಮೆಚ್ಚಿಕೊಳ್ಳಬೇಕಾಗುತ್ತದೆ. ಮೋದಿ ಎರಡು ದಿನಗಳ ಅರಬ್ ರಾಷ್ಟ್ರಗಳ ಭೇಟಿ ಮುಗಿಸಿ, ದೆಹಲಿಗೆ ಬಂದ ತಕ್ಷಣ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪತ್ನಿಯ ನಿಧನಕ್ಕೆ ಸಂತಾಪ ಸೂಚಿಸಲು ರಾಷ್ಟ್ರಪತಿ ಭವನಕ್ಕೆ ದೌಡಾಯಿಸಿದರು. ಅದಾದ ಕೂಡಲೇ ಬಿಹಾರಕ್ಕೆ ಹಾರಿ, ಅಲ್ಲಿ ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದರು. ಬೇರೆ ಯಾರೇ ಪ್ರಧಾನಿಯಾಗಿದ್ದರೂ ಇಷ್ಟೊಂದು ನಿರಂತರ ಧಾವಂತದ ಓಡಾಟ ಮಾಡಲಾಗುತ್ತಿರಲಿಲ್ಲ. 63ರ ವಯಸ್ಸಿನಲ್ಲೂ 23ರ ಹರೆಯದವರನ್ನು ನಾಚಿಸುವ ಚುರುಕುತನ! ಅವರದು ಅದೆಂತಹ ಎನರ್ಜಿ ಲೆವೆಲ್ ಎಂದು ಅನೇಕರಿಗೆ ಸೋಜಿಗವಾಗಿದ್ದರೆ ಅದು ಸಹಜ. ಮೋದಿ ಸಂಪುಟದ, ಅವರಿಗಿಂತಲೂ ಕಿರಿಯರಾದ ಸಚಿವರು ಇವರಷ್ಟು ಚುರುಕುತನ, ಕ್ರಿಯಾಶೀಲತೆ ತೋರಿದ್ದಿಲ್ಲ. ಮೋದಿ ಆಗಾಗ ಪ್ರಸ್ತಾಪಿಸುವ `ಟೀಂ ಇಂಡಿಯಾ’ ಅವರಂತೆಯೇ ಕ್ರಿಯಾಶೀಲವಾದಲ್ಲಿ, ಚುರುಕಾದಲ್ಲಿ ಭಾರತದ ಅಭಿವೃದ್ಧಿಯ ಚಿತ್ರಣ ಶರವೇಗದಲ್ಲಿ ಬದಲಾಗಬಹುದು. `ಟೀಂ ಇಂಡಿಯಾ’ ಮೋದಿಯವರಷ್ಟೇ ಚೈತನ್ಯ, ದೃಢ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.