ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲೇ ಭಾರತದ ಬಿಡುಗಡೆಗಾಗಿ ಕ್ರಾಂತಿಕಾರಿ ಹೋರಾಟದ ದಾರಿಯೇ ಅನಿವಾರ್ಯವೆಂದು ಪ್ರತಿಪಾದಿಸಿದ್ದ ಶ್ರೇಷ್ಠ ಹೋರಾಟಗಾರರೂ, ಆಧ್ಯಾತ್ಮಿಕ ಸಾದಕರೂ ಆದ ಶ್ರೀ ಅರವಿಂದರ 150 ನೇ ಜನ್ಮವರ್ಷಾಚರಣೆಯ ಸಂಭ್ರಮಕ್ಕೂ ಸಾಕ್ಷಿಯಾಗಿದ್ದೇವೆ. ಭಾರತೀಯರ ಬುದ್ಧಿಯು ಘೋರ ಸ್ವರೂಪದ ದಾಸ್ಯ ಭಾವಕ್ಕೆ ಅಂಟಿಕೊಂಡಿದ್ದ ಕಾಲಕ್ಕೆ, ಈ ನೆಲದ ಜೀವಸತ್ವವಾದ ಹಿಂದೂ ಧರ್ಮ,ಇಲ್ಲಿನ ನಾಗರಿಕತೆ, ಭಾರತೀಯ ಜೀವನ ಪರಂಪರೆಯ ಬಗೆಗೆ ತೀವ್ರವಾದ ಕೀಳರಿಮೆಯಿಂದ ಜನ ಬಳಲುತ್ತಾ, ಪಶ್ಚಿಮದ ನಾಗರಿಕತೆಯ ಶ್ರೇಷ್ಠತೆಗೆ ಶರಣಾಗಿ ಅದರಲ್ಲೆ ಪರಮಾನಂದವನ್ನು ಅನುಭವಿಸುತ್ತಿದ್ದ ಕಾಲದಲ್ಲಿ ಶ್ರೀ ಅರವಿಂದರ ಜನನವಾಯಿತು. 1872, ಆಗಸ್ಟ್ 15 ಈ ಯುಗಪುರುಷ ಭರತಭೂಮಿಯಲ್ಲಿ ಜನ್ಮ ಪಡೆದ ದಿನದ ಸೌಭಾಗ್ಯವೋ ಎಂಬಂತೆ ಮುಂದೆ ಎಪ್ಪತ್ತೈದನೇ ವರ್ಷಕ್ಕೆ ಭರತಭೂಮಿ ಸ್ವಾತಂತ್ರ್ಯವನ್ನೂ ಪಡೆಯಿತೆನ್ನುವುದು ಲೋಕದ ಪರಮಾಶ್ಚರ್ಯಗಳಲ್ಲಿ ಒಂದು. ಶ್ರೀ ಅರವಿಂದರ ಜೀವನ ಚರಿತ್ರೆಯನ್ನು ಬರೆದ ಶ್ರೀ ಕೋ. ಚೆನ್ನಬಸಪ್ಪನವರ ಈ ಮಾತು ಯಥಾರ್ಥವಾಗಿದೆ. “ ಆಗಸ್ಟ್ 15, ಪವಿತ್ರ ದಿನವೆಂದು ಶ್ರೀ ಅರವಿಂದರು ಹುಟ್ಟಲಿಲ್ಲ, ಅವರು ಅಂದು ಹುಟ್ಟಿದರೆಂದು ಅದು ಪವಿತ್ರ ದಿನವಾಯಿತು”.
ಶ್ರೀ ಅರವಿಂದರು ಹುಟ್ಟಿದ್ದು ಆಂಗ್ಲಮಯ ವಾತಾವರಣವೇ ತುಂಬಿದ್ದ ಮನೆಯಲ್ಲಿ. ವಿದ್ಯಾಭ್ಯಾಸವೂ ನಡೆದುದು ಇಂಗ್ಲೆಂಡಿನ ಇಂಗ್ಲಿಷ್ ಕಾನ್ವೆಂಟ್ನಲ್ಲಿಯೇ. ಬಾಲ್ಯ ಕಾಲದ ಬೆಳವಣಿಗೆ ಸಂಪೂರ್ಣವಾಗಿ ಭಾರತೀಯ ವಾತಾವರಣದಿಂದ ದೂರವೇ ಆಗಿತ್ತು. ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಪಡೆಯುವ ಕಾಲಕ್ಕೆ ಭಾರತವನ್ನಾವರಿಸಿದ್ದ ದಾಸ್ಯ ಬುದ್ಧಿಯ ಕುರಿತಾಗಿ ಚಿಂತನೆಗಳು ಮೂಡುತ್ತದೆ. ಭಾರತದ ಪತನಕ್ಕೆ ಭಾರತದ ರಾಜಕೀಯ ದಾಸ್ಯವೆನ್ನುವುದು ಅವರಿಗೆ ಸ್ಪಷ್ಟವಾಗುತ್ತದೆ. ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳು ಇಲ್ಲಿನ ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದ ರೀತಿ, ಅವರ ದರ್ಪ, ದೌರ್ಜನ್ಯಗಳನ್ನು ತಿಳಿದಾಗ ಬ್ರಿಟಿಷರನ್ನು ಭಾರತದಿಂದ ಹೊರಗಟ್ಟುವುದೊಂದೆ ಪರಿಹಾರ ಎನ್ನುವ ಅವರ ಸಂಕಲ್ಪ ದೃಢವಾಗುತ್ತದೆ. ಒಂದು ಕಾಲಕ್ಕೆ ಜಗಜ್ಜನನಿಯಾಗಿ ಸಂಪದ್ಭರಿತವಾಗಿಯೂ, ಸಾಧನೆಯ ತುತ್ತತುದಿಗೇರಿದ್ದ ಈ ತಾಯ್ನೆಲ ವರ್ತಮಾನದ ವಿಷಮ ಸ್ಥಿತಿಗೆ ತಲುಪಿದ್ದನ್ನು ಕಂಡು ಮರುಗುತ್ತಾರೆ. ಆದರೆ ಅವರದ್ದು ಕೇವಲ ಅಸಾಹಾಯಕನ ಮರುಕವಾಗಿರಲಿಲ್ಲ, ಅದು ದಾಸ್ಯ ವಿಮೋಚನೆಯ ಸಂಕಲ್ಪವಾಗುತ್ತದೆ. ದಾಸ್ಯ ವಿಮೋಚನೆಯಾಗದೆ ಭಾರತದ ಪುನರುತ್ಥಾನ ಸಾಧ್ಯವಿಲ್ಲ ಎನ್ನುವುದು ಶ್ರೀ ಅರವಿಂದರ ನಿಲುವಾಗಿತ್ತು.
ಬುದ್ಧಿವಂತರೆನ್ನಿಸಿಕೊಂಡ ಜನಗಳು ಬ್ರಿಟಿಷರ ಆಳ್ವಿಕೆಯಿಂದ ಭಾರತ ಉದ್ಧಾರವಾಗುತ್ತದೆ ಎನ್ನುತ್ತಾ ಬ್ರಿಟಿಷರನ್ನು ಸ್ತುತಿಸುತ್ತಿದ್ದ ಸಂದರ್ಭದಲ್ಲಿ, ಭಾರತವು ತನ್ನ ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಕಾಲವಿನ್ನೂ ಪಕ್ವವಾಗಿಲ್ಲ ಎನ್ನುತ್ತಾ ಬ್ರಿಟಿಷ್ ನೆರವಿನಲ್ಲಿ ಬದುಕುವುದು ಅನಿವಾರ್ಯವೆಂದು ಭಾವಿಸುತ್ತಿದ್ದ ಜನರಿದ್ದ ಕಾಲಕ್ಕೆ, ಶ್ರೀ ಅರವಿಂದರು ಸ್ವಾತಂತ್ರ್ಯ ವೆನ್ನುವುದು ಭಾರತೀಯರ ಹಕ್ಕು ಅದನ್ನು ಮರಳಿ ಪಡೆಯಲು ಹೋರಾಟ ಒಂದೇ ಪರಿಹಾರ ಎನ್ನುವ ನಿಲುವಿಗೆ ಬಂದಿದ್ದರು. ಭಾರತವನ್ನು ಬ್ರಿಟಿಷ್ ದಾಸ್ಯದಿಂದ ಬಿಡುಗಡೆಗೊಳಿಸಲು ಸಾಧ್ಯವೆನ್ನುವ ವಿಶ್ವಾಸವೂ ಅವರಲ್ಲಿತ್ತು. ಐ.ಸಿ.ಎಸ್ ಪದವಿಯನ್ನು ಪೂರೈಸಿ ಐಶಾರಾಮಿಯಾದ ಜೀವನವನ್ನು ನಿರ್ವಹಿಸಬಹುದಾಗಿದ್ದ ಕಾಲಕ್ಕೆ ಅಕ್ಷರಶಃ ಆ ಪದವಿಯನ್ನು , ಅದು ಕೊಡುವ ಸುಖವನ್ನು ಎಡಗಾಲಿನಿಂದ ಒದ್ದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಗ್ರ ಸೇನಾನಿಯಾಗುತ್ತಾರೆ. ಭಾರತದ ಬಿಡುಗಡೆಗೆ ದೇಶದೆಲ್ಲೆಡೆ ಹೋರಾಟ ನಡೆಯುತ್ತಿತ್ತು. ಅದೇ ಸಮಯದಲ್ಲಿ ರಾಷ್ಟ್ರೀಯ ಕಾಂಗ್ರೇಸ್ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರಿಗೆ ಮನವಿಗಳನ್ನು ಒಪ್ಪಿಸುತ್ತಿದ್ದ ಸಂಗತಿಗಳನ್ನು ನೋಡಿದ ಶ್ರೀ ಅರವಿಂದರಿಗೆ ಕಾಂಗ್ರೇಸ್ನ ಮೂಲಕ ಸ್ವಾತಂತ್ರ್ಯವನ್ನು ಮರಳಿ ಪಡೆಯಬಹುದೆನ್ನುವ ಯಾವ ವಿಶ್ವಾಸವೂ ಇರಲಿಲ್ಲ. ಕಾಂಗ್ರೇಸ್ನ ಗುರಿಯಾಗಲಿ, ದಾರಿಯಾಗಲಿ ಸ್ವಾತಂತ್ರ್ಯವನ್ನು ತಂದುಕೊಡುತ್ತದೆ ಎನ್ನುವ ನಂಬಿಕೆ ಅವರಿಗಿರಲಿಲ್ಲ. ಯಾಕೆಂದರೆ ಆಗಿನ್ನೂ ಕಾಂಗ್ರೇಸ್ಗೆ ಸ್ವರಾಜ್ಯವನ್ನು ಸಂಪಾದಿಸುವುದು ಅದರ ಕನಸೇ ಆಗಿರಲಿಲ್ಲ.
ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿದ ಶ್ರೀ ಅರವಿಂದರು ಭಾರತೀಯರನ್ನು ಜಾಗೃತಗೊಳಿಸುವುದಕ್ಕಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲಾರಂಭಿಸಿದರು. ಅನೇಕ ಲೇಖನಗಳಲ್ಲಿ ಕಾಂಗ್ರೇಸ್ನ ಹೇಡಿತನವನ್ನು ಮತ್ತು ಬ್ರಿಟಿಷರನ್ನು ಅದು ಓಲೈಸಲು ನಡೆಸುತ್ತಿದ್ದ ಪ್ರಯತ್ನಗಳನ್ನು ಕಟು ಶಬ್ಧಗಳಿಂದ ವಿಮರ್ಶಿಸುತ್ತಿದ್ದರು. ಇನ್ನೂ ಕೂಡ ಬ್ರಿಟಿಷರಿಗೆ ಮನವಿಗಳನ್ನು ನೀಡಿ ಸ್ವಾತಂತ್ರ್ಯವನ್ನು ಸಂಪಾದಿಸುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದ ಕಾಂಗ್ರೇಸ್ನ ನಿಲುವಿಗೆ ಅರವಿಂದರು ಸಂಪೂರ್ಣ ವಿರುದ್ಧವಾಗಿದ್ದರು. ನಾವು ನೀಡುವ ಮನವಿಗಳಿಂದ ಭಾರತ ಸ್ವಾತಂತ್ರ್ಯವನ್ನು ಪಡೆಯುವುದು ಸಾಧ್ಯವಿಲ್ಲ, ಅದು ಸಾಧ್ಯವಾಗುವುದು ನಮ್ಮ ಹೋರಾಟದಿಂದ, ಬಲಿದಾನದಿಂದ ಮಾತ್ರ ಎನ್ನುವುದು ಶ್ರೀ ಅರವಿಂದರ ನಂಬಿಕೆಯಾಗಿತ್ತು. ಭಾರತೀಯರ ಹೇಡಿತನದಿಂದಲೇ ಭಾರತ ದಾಸ್ಯಕ್ಕೆ ಸಿಲುಕಿಕೊಂಡಿರುವುದು, ಹೀಗಾಗಿ ತ್ಯಾಗ, ಬಲಿದಾನವಿಲ್ಲದೆ ಭಾರತ ಮರಳಿ ತನ್ನ ಸ್ವಾತಂತ್ರ್ಯವನ್ನು ಸಂಪಾದಿಸಿಕೊಳ್ಳಲಾರದು ಎನ್ನುತ್ತಾ ಸ್ವರಾಜ್ಯದ ಸಂಪಾದನೆಯೇ ಭಾರತದ ಗುರಿಯಾಗಬೇಕು ಎನ್ನುವುದನ್ನು ಪ್ರತಿಪಾದಿಸಿದ ಮೊದಲಿಗರು ಶ್ರೀ ಅರವಿಂದರು.
ಭಾರತದ ಪರಾಧೀನತೆಗೆ ಕಾರಣವಾದುದು ಇಲ್ಲಿಗೆ ಆಕ್ರಮಣಕಾರರಾಗಿ ಬಂದವರ ಶಕ್ತಿಗಿಂತಲೂ ಭಾರತೀಯರ ದೌರ್ಬಲ್ಯವೇ.ತನ್ನ ಹೇಡಿತನವನ್ನು ಬಿಟ್ಟು ಬ್ರಿಟಿಷರಿಗೆ ಸರಿಸಮಾನವಾದ ಶಕ್ತಿ ಧಾರಣೆಯನ್ನು ಮಾಡಿಕೊಂಡು ಹೋರಾಡಿದಾಗ ಮಾತ್ರ ಬಿಡುಗಡೆ ಸಾಧ್ಯ ಎಂದು ನಂಬಿದ್ದರು. ಹೋರಾಟವಿಲ್ಲದೆ ಸ್ವಾತಂತ್ರ್ಯವಿಲ್ಲ, ಬಲಿದಾನ, ರಕ್ತತರ್ಪಣ ಈ ದಾರಿಯಲ್ಲಿ ಅನಿವಾರ್ಯವಾಗಬಹುದು. ಆದರೆ ಬಿಡುಗಡೆಗೆ ಇದೊಂದೆ ದಾರಿ. ಈ ಉದ್ದೇಶಕ್ಕಾಗಿಯೇ ಭಾರತೀಯರನ್ನು ಮತ್ತೆ ಶಕ್ತಿಯ ಆರಾಧಕರನ್ನಾಗಿಸಬೇಕು ಎನ್ನುತ್ತಲೇ ಭಾರತದ ಶೌರ್ಯ ಪರಂಪರೆಯನ್ನು ನೆನಪಿಸಿಕೊಡುತ್ತಾರೆ. ಬ್ರಿಟಿಷರು ಭಾರತೀಯರನ್ನು ವಿಘಟಿಸುವುದಕ್ಕಾಗಿಯೇ ಬಂಗಾಲವನ್ನು ವಿಭಜಿಸಲು ಹೊರಟಾಗ ಬಂಗಾಲವೂ ಸೇರಿದಂತೆ ದೇಶಾದ್ಯಂತ ಮೊಳಗಿದ ಏಕತೆಯ ಧ್ವನಿಯ ಹಿಂದೆ ಶ್ರೀ ಅರವಿಂದರ ತಪಸ್ಸಿದೆ. ಬಂಗಾಳವು ಕ್ರಾಂತಿಕಾರಿಗಳ ಕರ್ಮಭೂಮಿಯಾಗಿ ಬೆಳಗುವಲ್ಲಿ ಶ್ರೀ ಅರವಿಂದರ ಯೋಗದಾನವಿದೆ. ಯಾವ ಬಂಗಾಳವನ್ನು ವಿಭಜಿಸಿ ಭಾರತೀಯರ ಐಕ್ಯತೆಯನ್ನು ಮುರಿಯಬಹುದೆಂದು ಬ್ರಿಟಿಷರು ಯೋಚನೆ ನಡೆಸಿದ್ದರೊ ಅದೇ ಬಂಗಾಳದ ಐಕ್ಯತೆಯನ್ನು ಕಾಪಾಡಲು ನಡೆಸಿದ ಹೋರಾಟ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಮೊಳಗಿದ ಅತಿದೊಡ್ಡ ಹೋರಾಟವಾಗಿ ರೂಪಾಂತರವಾಯಿತು. ಬಂಗಾಳದಲ್ಲಿ ಹುಟ್ಟಿಕೊಂಡಿದ್ದ ಹತ್ತಾರು ಕ್ರಾಂತಿಕಾರಿ ತಂಡಗಳ ನಡುವೆ ಸಮನ್ವಯವನ್ನು ರೂಪಿಸುವ ಕೆಲಸವನ್ನು ಅವರೇ ಮಾಡುತ್ತಾರೆ. ಬಂಗಾಳದ ಕಾಲೇಜೊಂದರ ಪ್ರಾಂಶುಪಾಲರಾಗಿ ಕೆಲಸವನ್ನು ಮಾಡುತ್ತಿದ್ದ ಅರವಿಂದರು ತನ್ನ ಪ್ರಖರವಾದ ಲೇಖನಗಳಿಂದ ಜನರನ್ನು ಎಚ್ಚರಗೊಳಿಸುತ್ತಾರೆ. ದೇಶಾಭಿಮಾನವನ್ನು ಮೂಡಿಸುವ ಬರಹಗಳಿಗಾಗಿಯೇ ಅವರ ಲೇಖನಿ ಮೀಸಲಾಗುತ್ತದೆ.
ಶ್ರೀ ಅರವಿಂದರ ಹೆಸರು ಜಗತ್ತಿನ ಆಧ್ಯಾತ್ಮಿಕ ಸಾಧಕರ ನಡುವೆ ಬಹುಪರಿಚಿತವಾಗಿದೆ. ಅವರು ಪಾಂಡಿಚೇರಿಯಲ್ಲಿ ನೆಲೆಸಿ ನಡೆಸಿದ ಯೋಗಸಾಧನೆ ಲೋಕ ವಿಖ್ಯಾತ. ಶ್ರೀ ಅರವಿಂದರೆಂದರೆ ಯೋಗಿ ಎಂತೋ,ಅಂತೆಯೇ ಯೋಧರೂ ಹೌದು. ಅವರ ಜೀವನವೆಂದರೆ ಅದು ಯೋಧನ ಜೀವನವೇ. ಅದು ಪರಾಕ್ರಮದ ಬದುಕೇ. ಯೋಗಿತ್ವ ಮತ್ತು ಯೋಧತ್ವ ಸಮ್ಮಿಳಿತಗೊಂಡಿದ್ದ ವ್ಯಕ್ತಿತ್ವದ ಅರವಿಂದರಿಗೆ ಕ್ರಾಂತಿಕಾರಿ ಮಾರ್ಗವೆನ್ನುವುದು ತಾತ್ಕಾಲಿಕವಾದ ಉನ್ಮಾದವಾಗಿರಲಿಲ್ಲ. ಅದು ಆಧ್ಯಾತ್ಮಿಕ ಮಾರ್ಗವೂ ಆಗಿತ್ತು. ಭಾರತದ ಪರಂಪರೆಯುದ್ದಕ್ಕೂ ಇಂತಹ ಗುರುತುಗಳನ್ನು ಕಾಣುತ್ತೇವೆ. ದೇಶ – ಧರ್ಮ ಆಪತ್ತಿಗೆ ಸಿಲುಕಿದಾಗ ಸ್ವತಃ ಯೋಗಿಗಳು, ಸಾಧು ಸಂತರು ಯೋಧರಂತೆ ಹೋರಾಟದ ರಣಾಂಗಣಕ್ಕೆ ಇಳಿದಿದ್ದಾರೆ. ಸಾವಿರಾರು ಜನರಿಗೆ ಪ್ರೇರಣೆ ತುಂಬಿದ್ದಾರೆ. ಕ್ರಾಂತಿಯ ದಾರಿಯನ್ನು ತಾತ್ವಿಕವಾಗಿಯೂ ಶ್ರೀ ಅರವಿಂದರು ಸ್ವೀಕರಿಸಿದ್ದರು. ದೇಶ ಸಂಕಟಕ್ಕೆ ಸಿಲುಕಿದಾಗ, ಪರಕೀಯರು ಕ್ರೌರ್ಯದ ದಾರಿಯನ್ನು ತುಳಿದಾಗ, ಜನ ದಾಸ್ಯಕ್ಕೆ ಸಿಲುಕಿದಾಗ ಕ್ರಾಂತಿಯ ದಾರಿಗೆ ಹಿಂಜರಿಯದೆ, ಅಂಜದೆ ಮುನ್ನಡೆಯಬೇಕೆಂದು ಸಾರಿದವರು ಶ್ರಿ ಅರವಿಂದರು. ಯೋಗಿ, ತಪಸ್ವಿಯ ಆತ್ಮಶಕ್ತಿ ಮತ್ತು ಯೋಧ, ಕ್ರಾಂತಿಕಾರಿಯ ಖಡ್ಗಶಕ್ತಿ ಸೇರಿದಾಗ ಮಾತ್ರ ಧರ್ಮ ಮತ್ತು ನ್ಯಾಯದ ಸಂರಕ್ಷಣೆ ಸಾಧ್ಯ . ಬ್ರಿಟಿಷರಿಂದ ಭಾರತ ಆಳಲ್ಪಡುವುದು ಅಧರ್ಮ, ಅನ್ಯಾಯ. ಹೀಗಾಗಿ ನ್ಯಾಯವನ್ನು ಸ್ಥಾಪನೆ ಮಾಡುವುದು, ಧರ್ಮವನ್ನು ಕಾಪಾಡುವುದು ಯೋಗಿಗಳ ಕರ್ತವ್ಯವೂ ಹೌದು, ಯೋಧರ ಕರ್ತವ್ಯವೂ ಹೌದು ಎನ್ನುವಂತೆ ಸ್ವಾತಂತ್ರ್ಯದ ಸಮರ ಭೂಮಿಯಲ್ಲಿ ಶ್ರೀ ಅರವಿಂದರು ಚಾಲಕ ಶಕ್ತಿಯಾಗಿ ನಿಂತಿದ್ದರು. ಎರಡೂ ಶಕ್ತಿಗಳ ಸಂಗಮ ರೂಪದಲ್ಲಿದ್ದ ಅರವಿಂದರು ಮಹಾನ್ ಸಾಧಕರೇ ಹೌದು. ಅವರು ಭಾರತ ಕಂಡ ಮಹಾನ್ ಮೇಧಾವಿಗಳಲ್ಲೊಬ್ಬರು.
ದೇಶಭಕ್ತಿಯು ಪ್ರಜ್ವಲಿಸುವಂತೆ ಅವರು ಬರೆಯುತ್ತಿದ್ದ ಲೇಖನಗಳು ಬ್ರಿಟಿಷರನ್ನು ನಿದ್ದೆಗೆಡಿಸಿತ್ತು. ಅವರನ್ನು ಹೇಗಾದರೂ ಬಂಧಿಸಿ ದಂಡಿಸಲೇ ಬೇಕು ಎಂದು ಕಾಯುತ್ತಿದ್ದ ಸರ್ಕಾರ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿತು. ಆದರೆ ಬ್ರಿಟಿಷರಿಗೆ ಅವರ ಮೇಲೆ ಹೊರಿಸಿದ ತೀವ್ರತರವಾದ ಆರೋಪಗಳನ್ನು ಸಾಬೀತುಮಾಡಲಾಗಲಿಲ್ಲ. ಜೈಲಿನಲ್ಲಿ ಬಂಧಿಯಾಗಿದ್ದಾಗ ಅವರು ಆಧ್ಯಾತ್ಮದ ಸಾಧನೆಯಲ್ಲಿ ಇನ್ನಷ್ಟು ಆಳಕ್ಕಿಳಿಯುತ್ತಾರೆ. ಆದ್ಯಾತ್ಮಿಕ ಸಾಧನೆಯಲ್ಲಿ ಅತ್ಯುನ್ನತ ಸ್ಥಿತಿಯನ್ನು ಏರುತ್ತಾರೆ. ಪಾಂಡಿಚೇರಿಗೆ ಬಂದ ಬಳಿಕ ಆಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಅವರು ಒಂದು ಹಂತದಲ್ಲಿ ರಾಜಕೀಯ ಹೋರಾಟದಿಂದ ಸಂಪೂರ್ಣವಾಗಿ ಹೊರಬರುತ್ತಾರೆ. ರಾಜಕೀಯ ಹೋರಾಟದಿಂದ ಹಿಂದೆ ಸರಿದ ಕಾರಣಕ್ಕೆ ಅವರ ಸ್ವರಾಜ್ಯದ ಹಂಬಲವಾಗಲಿ , ಅದಕ್ಕಾಗಿ ಮಾಡಿದ್ದ ಸಂಕಲ್ಪವಾಗಲಿ ದುರ್ಬಲಗೊಳ್ಳಲಿಲ್ಲ. ಭಾರತದ ಸ್ವಾತಂತ್ರ್ಯ ನಿಶ್ಚಯ ಎನ್ನುವ ದೃಢತೆ ಅವರಲ್ಲಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವೇಗವನ್ನು ನೀಡಿದ ಸ್ವದೇಶಿ ಚಳವಳಿ, ವಿದೇಶಿ ವಸ್ತುಗಳ ಬಹಿಷ್ಕಾರದಂತಹ ಚಿಂತನೆಗಳು ಶ್ರೀ ಅರವಿಂದರಲ್ಲಿ ರೂಪುಪಡೆಯುತ್ತದೆ.
ಅವರ ವೈಚಾರಿಕ ಪ್ರಖರತೆ, ಭಾರತೀಯ ಪರಂಪರೆಯ ಬಗೆಗೆ ಅವರಲ್ಲಿದ್ದ ಸ್ಪುಟತೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿಯೇ ವೈಶಿಷ್ಟ್ಯ ಪೂರ್ಣವಾದುದು. ಹೋರಾಟವು ತಾತ್ಕಾಲಿಕ ಪ್ರತಿಕ್ರಿಯೆಯಲ್ಲ, ಅದು ಕ್ಷಾತ್ರ ಮಾರ್ಗದಲ್ಲೇ ಎದುರಿಸಬೇಕಾದ ಕರ್ತವ್ಯ ಎನ್ನುವ ಸೈದ್ಧಾಂತಿಕ ಸ್ಪಷ್ಟತೆ ಅವರಲ್ಲಿ ಇತ್ತು. ಭಾರತವನ್ನು ಅವರು ಕೇವಲ ತುಂಡು ನೆಲವೆಂದು ಪರಿಗಣಿಸಿರಲಿಲ್ಲ. ತಾಯ್ನೆಲವೆಂದರೆ ನಿರ್ಜೀವವಾದ ಭೂಖಂಡವಲ್ಲ. ಹಡೆದ ತಾಯಿಯಷ್ಟೇ ಸಚೇತನ. ಹೀಗಾಗಿ ಭಾರತ ಎಂದರೆ ಸಜೀವ ಚೇತನ ಎನ್ನುತ್ತಾರೆ. ಭಾರತ ಇಡೀ ಭೂಲೋಕದ ಆಧ್ಯಾತ್ಮಿಕ ಜ್ಞಾನದ ಅಧಿದೇವತೆ, ಭಾರತ ಮಾತೆ ಲೋಕಗುರು, ಜಗಜ್ಜನನಿ ಎಂದು ಪ್ರತಿಪಾದಿಸುತ್ತಾರೆ. ಆಧ್ಯಾತ್ಮಿಕತೆ ಭಾರತೀಯರ ಬಾಳಿನ ಬೀಜಮಂತ್ರವಿದ್ದಂತೆ. ಆದರೆ ಭಾರತದ ಸಾಧನೆ ಅಷ್ಟಕ್ಕೇ ಸೀಮಿತಗೊಳ್ಳಲಿಲ್ಲ. ಯುರೋಪ್ನ ಯಾವ ಒಂದು ದೇಶವೂ ಸಾಧಿಸಲಾಗದ ಎತ್ತರವನ್ನು ಭಾರತ ಹಲವು ಕ್ಷೇತ್ರಗಳಲ್ಲಿ ಸಾಧಿಸಿದೆ. ಇಲ್ಲಿ ಕಟ್ಟಿದ ಸಾಮ್ರಾಜ್ಯಗಳಿರಬಹುದು, ತತ್ವಜ್ಞಾನ, ವಿಜಾನ, ಕಲೆ, ಕಾವ್ಯ, ಸಂಗೀತ, ಶಿಲ್ಪ, ರಾಜನೀತಿ, ಯೋಗ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನ ಸಮೃದ್ಧಿಯನ್ನು ತೋರಿದೆ. ಜಗತ್ತಿನ ದೇಶಗಳಿಗೆ ಹೋಲಿಸಿದರೆ ಇಲ್ಲಿನ ಜೀವನ ದೃಷ್ಟಿ ಶ್ರೀಮಂತವಾಗಿತ್ತು.ಇಲ್ಲಿನ ವಿದ್ವಜ್ಜನರು ಲೋಕದ ಹಿತಕ್ಕಾಗಿ ನಡೆಸಿದ ಶೋಧನೆಗಳು ಅಪರಿಮಿತ. ಬೇರಾವ ದೇಶಗಳೂ, ಬೇರಾವ ಜನಾಂಗಗಳೂ ಸಾಧಿಸಲಾರದಷ್ಟು ಸಾಧನೆಯನ್ನು ಪ್ರಾಚೀನ ಭಾರತ ಮಾಡಿತ್ತು. ಇದರ ಆಧಾರದಲ್ಲೇ ಭಾರತದ ನಾಗರಿಕತೆ ನೆಲೆನಿಂತಿತ್ತು. ಇಂತಹ ಶ್ರೀಮಂತ ನಾಗರಿಕತೆ ತನ್ನ ಮೈಮರೆವು ಮತ್ತು ಹೇಡಿತನದಿಂದ ಪರಕೀಯರ ದಾಸ್ಯಕ್ಕೆ ಸಿಲುಕಿಕೊಂಡಿತ್ತು. ಭಾರತ ಮತ್ತೆ ಬೆಳಗುವುದೆಂದರೆ ಈ ದಾಸ್ಯವನ್ನು ಕಿತ್ತೊಗೆದು ತನ್ನ ಸಂಸ್ಕೃತಿಯ ಆಧಾರದಲ್ಲೆ ಮೇಲೆಳಬೇಕು. ಆಗ ಮಾತ್ರ ಆ ಭಾರತದ ಪುನರುತ್ಥಾನ ಸಾಧ್ಯ ಎಂದವರು ಶ್ರೀ ಅರವಿಂದರು. ಹೀಗಾಗಿ ಇಂದಿಗೂ ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಶ್ರೀ ಅರವಿಂದರ ಬರವಣಿಗೆಗಳನ್ನು ಓದಬೇಕು. ಅದು ಭಾರತದ ಚಾರಿತ್ರ್ಯವನ್ನು, ಶ್ರೀಮಂತಿಕೆಯನ್ನು ತಿಳಿಸಿಕೊಡುತ್ತದೆ.
ಆದರೆ ನಮ್ಮ ವರ್ತಮಾನದ ಪೀಳಿಗೆಗೆ ಶ್ರೀ ಅರವಿಂದರ ಪರಿಚಯವಿದೆಯೇ? ಅವರ ಜೀವನವನ್ನು , ಅವರ ಸಾಧನೆಯನ್ನು, ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಏರಿದ್ದ ಎತ್ತರವನ್ನು, ಸ್ವಾತಂತ್ರ್ಯದ ರಣದುಂಧುಭಿಯನ್ನು ಮೊಳಗಿಸಿದ ಅವರ ಹೋರಾಟದ ಕಥೆಯನ್ನು ನಮ್ಮ ಪೀಳಿಗೆಗೆ ನೆನಪಿಸಿಕೊಡಬೇಡವೇ? ಅಂತಹದ್ದೊಂದು ಅವಶ್ಯಕತೆ ಇಂದಿದೆ. ಅವಕಾಶವೂ ಇದೆ. ಈ ವರ್ಷ ಶ್ರೀ ಅರವಿಂದರ ನೂರೈವತ್ತನೆಯ ಜನ್ಮ ವರ್ಷ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳು ಈ ಸಾಧಕ ಮಹಾಯೋಗಿಯ ಜೀವನ ಸಾಧನೆಯನ್ನು ಪರಿಚಯಿಸಿ ಕೊಡುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಅರವಿಂದರ ದರ್ಶನದ ಮೂಲಕ ಭಾರತ ದರ್ಶನವನ್ನು ಮಾಡುವ ಅವಕಾಶವಿದೆ. ಭಾರತವನ್ನು ಅರಿಯುವ ಒಂದು ಮಹಾಯಾನವನ್ನಾಗಿ ಮಾಡಬಹುದಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೇ ಈ ದೇಶದ ಬಿಡುಗಡೆಗಾಗಿ ಕ್ರಾಂತಿಕಾರಿ ಮಾರ್ಗವನ್ನು ತುಳಿದು, ಸಾವಿರಾರು ಜನರಿಗೆ ಹೋರಾಟದ ಸ್ಫೂರ್ತಿಯಾಗಿ ಬಾಳಿದ, ಜತೆಗೆ ಆಧ್ಯಾತ್ಮಿಕ ರಂಗದಲ್ಲಿ ಅತಿ ದೊಡ್ಡ ಸಾಧಕರಾದ ಮತ್ತು ಭಾರತವನ್ನು ಅಧ್ಯಯನ ಮಾಡಿ ಭಾರತದ ವೈಭವವನ್ನು ಅಮೂಲಾಗ್ರವಾಗಿ ಚಿತ್ರಿಸಿದ ಅಪೂರ್ವ ವ್ಯಕ್ತಿ, ಶಕ್ತಿ ಎಂದರೆ ಅದು ಶ್ರಿ ಅರವಿಂದರು. ದೇಶಾದ್ಯಂತ ಈ ವರ್ಷ ಅರವಿಂದರ ಹೋರಾಟದ ಕಥನಗಳ ಪುನರ್ ಸ್ಮರಣೆಯಾಗಲಿ. ಅವರ ಸಾಹಿತ್ಯ ಕೃತಿಗಳ ಅಧ್ಯಯನ ನಡೆಯಲಿ. ಜತೆಗೆ ಕಾಲೇಜು – ವಿಶ್ವವಿದ್ಯಾಲಯಗಳಲ್ಲಿ ಅವರ ಸಾಹಿತ್ಯ ಕೃತಿಗಳ ಬಗೆಗೆ ವಿಚಾರ ಸಂಕಿರಣಗಳು ನಡೆಯುವಂತಾಗಲಿ. ಆ ಮೂಲಕ ತನ್ನಿಡೀ ಬದುಕನ್ನು ಭಾರತದ ಪುನರ್ ವೈಭವಕ್ಕಾಗಿ ಸಮರ್ಪಿಸಿದ ಸಾಧಕನ ಸಾಧನೆಯನ್ನು ತಿಳಿಸಿಕೊಡುವ ಕೆಲಸವಾಗಲಿ. ಶ್ರೀ ಅರವಿಂದರ ಬರವಣಿಗೆಯ ಒಂದೊಂದು ಪುಟಗಳೂ ಕೂಡ ಮೈಮರೆತ ಭಾರತೀಯರು ಮೈಕೊಡವಿ ಮೇಲೆದ್ದು ನಿಲ್ಲಬಲ್ಲಂತೆ ಮಾಡುವ ಶಕ್ತಿಯುಳ್ಳದ್ದು ಎಂದರೆ ಅತಿಶಯೋಕ್ತಿಯಲ್ಲ.
✍️ ಡಾ.ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.