ಬೆಂಗಳೂರು: ನನ್ನ ಎರಡೂ ಖಾತೆಗಳ ವಿಚಾರದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ. ವಿದ್ಯುತ್ ಕ್ಷೇತ್ರದಲ್ಲಿ ದೇಶವು ಸ್ವಾವಲಂಬಿ ಆಗಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ನಾಲ್ಕು ಹೊಸ ರಸಗೊಬ್ಬರ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿದ್ದು, ಯೂರಿಯಾ ಉತ್ಪಾದನೆಯಲ್ಲಿ ದೇಶವು ಶೀಘ್ರವೇ ಸ್ವಾವಲಂಬಿ ಆಗಲಿದೆ ಎಂದು ಕೇಂದ್ರ ಸರಕಾರದ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿ ಭಗವಂತ್ ಖೂಬಾ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಫ್ಕೋ ಕಂಪೆನಿಯು ಕರ್ನಾಟಕದಲ್ಲಿ ನ್ಯಾನೊ ಯೂರಿಯಾ ಉತ್ಪಾದನಾ ಘಟಕ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ರಾಜ್ಯ ಸರಕಾರವು ಮೂಲಸೌಕರ್ಯ ನೀಡಿದ ಬಳಿಕ ಅದು ರಾಜ್ಯದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಜುಲೈ 7ರಂದು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವನಾಗಲು ಅವಕಾಶ ನೀಡಿದ ಪ್ರಧಾನಿ ಮೋದಿ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು. ಕಳೆದ 22 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. ಅದಕ್ಕಿಂತ ಮೊದಲು ಸಂಘ ಪರಿವಾರದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲೂ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗ ಹೊಸ ಜವಾಬ್ದಾರಿ ಸಿಕ್ಕಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು. ಕೇಂದ್ರ ಸರಕಾರವು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕಳೆದ 7 ವರ್ಷಗಳ ಅಧಿಕಾರಾವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮಾಡಿದೆ. ಭಾರತದ ಹೆಮ್ಮೆ, ಗರಿಮೆ ವಿಶ್ವಮಾನ್ಯವಾಗಿ ಹೊರಹೊಮ್ಮುತ್ತಿದೆ ಎಂದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನೇತೃತ್ವವನ್ನು ಪ್ರಧಾನಿ ಮೋದಿ ಅವರು ವಹಿಸುತ್ತಿದ್ದಾರೆ. ಇದು ಅತ್ಯಂತ ಹೆಮ್ಮೆಯ ವಿಚಾರ ಎಂದರು. ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರವನ್ನು ಮರು ಸ್ಥಾಪಿಸುವ ಮಸೂದೆಗೆ ರಾಜ್ಯಸಭೆಯು ಒಪ್ಪಿಗೆ ನೀಡಿದ್ದು, ಇದೊಂದು ಮಹತ್ವದ ಕ್ರಮ ಎಂದು ಅವರು ಶ್ಲಾಘಿಸಿದರು.
ರಸ್ತೆ, ರೈಲ್ವೆ, ವಿಮಾನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಅಭೂತಪೂರ್ವ ಸಾಧನೆಯನ್ನು ಪ್ರಧಾನಿ ಮೋದಿ ಅವರ ಸರ್ಕಾರ ಮಾಡಿದೆ. ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಿದ್ದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು. ಪಕ್ಷ ಮತ್ತುಮೋದಿ ಅವರ ಕೀರ್ತಿ ಹೆಚ್ಚಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.