ಆಗಸ್ಟ್ 9ನ್ನು ವಿಶ್ವಸಂಸ್ಥೆಯು ವಿಶ್ವ ಮೂಲನಿವಾಸಿಗಳ ದಿನಾಚರಣೆ ಎಂದು ಘೋಷಿಸಿದೆ. ಜಗತ್ತಿನಾದ್ಯಂತ ಎಲ್ಲೆಲ್ಲಿ ಮೂಲನಿವಾಸಿಗಳನ್ನು ದಮನಿಸಿ ಪರಕೀಯರ ಸಾಮ್ರಾಜ್ಯಗಳನ್ನು ಕಟ್ಟಲಾಗಿದೆಯೋ ಅಲ್ಲೆಲ್ಲಾ ಸಂಭ್ರಮದ ಆಚರಣೆಯ ಜೊತೆಗೆ ತಮ್ಮ ಜನಾಂಗ ನೂರಾರು ವರ್ಷಗಳ ಕಾಲ ಅನುಭವಿಸಿದ ಯಾತನೆ, ಅವಮಾನ, ನರಸಂಹಾರದ ಕಥನಗಳನ್ನು ಇಂದಿನ ವಿಶ್ವದೆದುರು ಬಿಚ್ಚಿಡುವ ಪ್ರಯತ್ನಗಳೂ ನಡೆಯುತ್ತಿದೆ. ೧೯೯೪ರಲ್ಲಿ ವಿಶ್ವಸಂಸ್ಥೆಯು ತನ್ನ ಸಾಮಾನ್ಯ ಸಭೆಯಲ್ಲಿ ಈ ದಿಣಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಪ್ರಕಟಿಸಿತು. ಆ ಮೂಲಕ ವಿಶ್ವದಾದ್ಯಂತ ಸಾಮ್ರಾಜ್ಯಶಾಹಿಗಳಿಂದ , ವಸಾಹತುಶಾಹಿ ಶಕ್ತಿಗಳಿಂದ ಬರ್ಭರ ಹತ್ಯೆ, ಹಿಂಸೆಗೆ ಒಳಗಾಗಿದ್ದ ಮೂಲನಿವಾಸಿ ಜನಾಂಗಗಳ ಹಕ್ಕನ್ನು ಸಂರಕ್ಷಿಸುವ ಭರವಸೆಯನ್ನು ನೀಡಲಾಯಿತು. ಈ ಆಚರಣೆಯನ್ನು ವಿಶ್ವ ಸಂಸ್ಥೆಯು ಪ್ರಕಟಿಸುವುದಕ್ಕೆ ಕಾರಣವಾಗಿರುವ ಚರಿತ್ರೆಯನ್ನೊಮ್ಮೆ ನಾವು ಅವಲೋಕನ ಮಾಡಿದರೆ ನಮ್ಮ ಕಣ್ಣು ತೇವಗೊಳ್ಳದಿರದು. ಅಮಾಯಕ ಜನಾಂಗಗಳನ್ನು ನಾಗರಿಕತೆಯ ಮುಖವಾಡತೊಟ್ಟ ಜಗತ್ತಿನ ಸಾಮ್ರಾಜ್ಯಶಾಹಿ ಶಕ್ತಿಗಳು ಅದೆಷ್ಟು ಕ್ರೂರವಾಗಿ ದಮನಿಸಿದ್ದಾರೆ ಎನ್ನುವುದು ತಿಳಿದಾಗ ಜಗತ್ತಿನ ನಾಗರಿಕತೆಯ ಶ್ರೇಷ್ಠ ವಾರಸುದಾರರೆಂದು ಬೀಗುವ ಬಿಳಿಯರ ಮುಖವಾಡ ಸಂಪೂರ್ಣ ಕಳಚಿಬೀಳುತ್ತದೆ.
ಇಂದು ಜಗತ್ತಿನ ಅನೇಕ ದೇಶಗಳಲ್ಲಿ ಅಲ್ಲಿನ ಮೂಲನಿವಾಸಿಗರೇ ಇಲ್ಲ ಎಂದರೆ ಅಚ್ಚರಿಯಾಗಬಹುದು. ಒಂದು ವೇಳೆ ಇದ್ದರೂ ಅವರು ಅಲ್ಲಿನ ಮೂಲನಿವಾಸಿಗರ ಹಾಗಿಲ್ಲ.ಅಳಿದುಳಿದ ಮೂಲನಿವಾಸಿಗರು ಯಾತನಾಮಯ ದಿನಗಳನ್ನು ಕಳೆಯುತ್ತಿದ್ದಾರೆ. ಯುರೋಪಿನ ಬರ್ಬರತೆಗೆ ಸಿಕ್ಕಿ ತಮ್ಮ ಹೆಸರು, ಮತಾಚರಣೆ, ಸಂಪ್ರದಾಯಗಳನ್ನು ಕಳೆದುಕೊಂಡು ತಮ್ಮ ದೇಶದಲ್ಲೆ ಅನ್ಯರಾಗಿ ಬದುಕುತ್ತಿದ್ದಾರೆ. ಬಹುಶಃ ಜಗತ್ತು ಯಾವ ಮಹಾಯುದ್ಧದಲ್ಲೂ ಕಳೆದುಕೊಂಡಿರದಷ್ಟು ಜನಸಂಖ್ಯೆಯನ್ನು ಯುರೋಪಿನ ಸಾಮ್ರಾಜ್ಯವಾದಿಗಳ ವಿಸ್ತರಣೆಯಲ್ಲಿ, ಜಗತ್ತನ್ನು ನಾಗರಿಕಗೊಳಿಸುವ ಸಾಂಸ್ಕೃತಿಕ ಯುದ್ಧದಲ್ಲಿ ಕಳೆದುಕೊಂಡಿದೆ. ಕೋಟಿ ಕೋಟಿ ಮೂಲನಿವಾಸಿಗರನ್ನು ಸಾಮೂಹಿಕವಾಗಿ ಹತ್ಯೆಮಾಡಲಾಗಿದೆ. ಬೀದಿ ಹೆಣಗಳಾಗಿ ಕಾಡಿನ ಪ್ರಾಣಿ ಪಕ್ಷಿಗಳ ಒಂದು ಹೊತ್ತಿನ ಆಹಾರವಾಗಿ ಮೂಲನಿವಾಸಿಗರ ದೇಹಗಳು ಮಣ್ಣಾಗಿದೆ. ಜಗತ್ತು ದಾಖಲಿಸದ ಅತಿದೊಡ್ಡ ನರಹತ್ಯೆ ಎಂದರೆ ಇದೇ ಇರಬೇಕು. ತಮ್ಮದೇ ದೇಶದಲ್ಲಿ ತಾವು ಗುಲಾಮರಾಗಿ ಬದುಕಬೇಕಾಗಿ ಬಂದ, ಗುಲಾಮರ ಸಂಖ್ಯೆ ಹೆಚ್ಚಾಯಿತೆಂದು ಅನ್ನಿಸಿದಾಗ ನಿರ್ದಾಕ್ಷ್ಯಿಣ್ಯವಾಗಿ ಹತ್ಯೆಗೈದು ನಿರ್ಮೂಲನಗೈದ ಹೃಯವಿದ್ರಾವಕ ಘಟನೆಗಳನ್ನು ನಾಗರಿಕತೆಯ ಇತಿಹಾಸ ನಯವಾಗಿ ಮರೆಸಿದೆ.
ಸಾಮ್ರಾಜ್ಯ ವಿಸ್ತರಣೆ ಮತ್ತು ಮತ ವಿಸ್ತರಣೆಯ ಜಂಟಿಯುದ್ದದ ಕತ್ತಿಗೆ ಬಲಿಯಾದ ಕೋಟಿ ಕೋಟಿ ಮೂಲನಿವಾಸಿಗರನ್ನು ಯಾರು ಸ್ಮರಿಸುತ್ತಾರೆ? ಅಥವಾ ಹಾಗೆ ತಮ್ಮ ಪಾಪ ಕೃತ್ಯಕ್ಕಾಗಿ ಯಾರು ಪಶ್ಚಾತಾಪವನ್ನು ಪಟ್ಟಿದ್ದಾರೆ? ನಾವೆಲ್ಲ ವಿಶ್ವದ ದೊಡ್ಡಣ್ಣನೆಂದು ಮೆರೆಸುವ ಅಮೇರಿಕಾದ ಮೂಲನಿವಾಸಿಗರು ಯಾರು? ಅವರು ಎಲ್ಲಿದ್ದಾರೆ? ಈ ಅಮೇರಿಕಾವನ್ನು ಕಟ್ಟುವುದಕ್ಕಾಗಿ ಸಾಮೂಹಿಕವಾಗಿ ಸಂಹಾರಗೈದ ಮೂಲನಿವಾಸಿಗರೆಷ್ಟು? ಸ್ವಾತಂತ್ರ್ಯದ ಪ್ರತಿಮೆಯ ಹಿಂದೆ ಮರೆಯಾದ ಅಮಾಯಕರ ಧ್ವನಿ ಯಾರ ಕಿವಿಗೆ ಕೇಳುತ್ತದೆ? ೫೦೦ ವರ್ಷಗಳ ಹಿಂದೆ ಆ ನೆಲದ ಮೇಲೆ ಕಾಲಿಟ್ಟ ಕ್ರಿಸ್ಟೋಫರ್ ಕೊಲಂಬಸ್ (೧೪೯೨) ಪಾದಾಘಾತಕ್ಕೆ ಇಡೀ ಅಮೆಕಾದ ನಾಗರಿಕತೆ ತತ್ತರಿಸಿತ್ತು. ಅಲ್ಲಿನ ಮತ ಸಾಮ್ರಾಜ್ಯ ಕಟ್ಟಿದ್ದು ಮೂಲನಿವಾಸಿಗರಾದ ಬುಡಕಟ್ಟು ಜನ ಸಮುದಾಯಗಳ ನಿರ್ಮೂಲನೆಯಿಂದ.ತಮ್ಮದೇ ರೂಢಿ, ಆಚರಣೆಗಳೊಂದಿಗೆ ಸಮೃದ್ಧವಾದ ಬದುಕನ್ನು ಬಾಳುತ್ತಿದ್ದ ಆ ನಾಡಿನಲ್ಲಿ ಕೊಲಂಬಸ್ ಇಟ್ಟ ಹೆಜ್ಜೆ ಶಾಪವಾಯಿತು. ಅಮೇರಿಕಾ, ಬ್ರೆಜಿಲ್, ಅರ್ಜೆಂಟೈನಾ, ಪೆರು, ಮೆಕ್ಸಿಕೋ, ಕೆನಡಾ ಮೊದಲಾದ ದೇಶಗಳಲ್ಲಿ ಅಲ್ಲಿನ ಬುಡಕಟ್ಟು ಜನರೇ ನಾಗರಿಕತೆಯನ್ನು ಕಟ್ಟಿಕೊಂಡು ಬದುಕುತ್ತಿದ್ದರು. ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ ಪ್ರಾಕೃತಿಕ ಶ್ರೀಮಂತಿಕೆಯೂ ಸೇರಿ ಅವರ ಬದುಕು ಸುಂದರವಾಗಿತ್ತು. ಒಂದು ಅಂದಾಜಿನ ಪ್ರಕಾರ ಅಮೆರಿಕಾ ಖಂಡದಲ್ಲಿ ಕೋಟಿ ಕೋಟಿ ಬುಡಕಟ್ಟು ಜನರನ್ನು ಸಂಹಾರ ಮಾಡಲಾಯಿತು. ಬಲಾತ್ಕಾರದ ಗುಲಾಮಗಿರಿಯನ್ನು ಅವರ ಮೇಲೆ ಹೇರಲಾಯಿತು. ಯುರೋಪ್ ದೇಶಗಳಿಗೆ ಗುಲಾಮರನ್ನಾಗಿ ರಫ್ತು ಮಾಡಲಾಯಿತು. ಯುರೋಪ್ನ ವಸಾಹತುವಾಗುತ್ತಿದ್ದಂತೆ ಆ ನೆಲ ಮೂಲನಿವಾಸಿಗರ ಕೈ ತಪ್ಪಿಹೋಯಿತು. ಚರ್ಚ್ನ ಕೈವಶವಾಯಿತು. ಇದು ಕೇವಲ ಅಮೆರಿಕಾದ ಕಥೆಯಲ್ಲ. ಎಲ್ಲೆಲ್ಲಿ ಯುರೋಪ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದೆಯೋ ಅಲ್ಲೆಲ್ಲಾ ಇದೇ ಬಗೆಯ ದಮನ ನಡೆದಿದೆ. ಇಂದಿಗೂ ಜಗತ್ತು ಒಂದು ವಾಸಿಯಾಗದ ಗಾಯದ ನೋವನ್ನು ಅನುಭವಿಸುತ್ತಿದೆ.
ಜಗತ್ತಿನೆಲ್ಲೆಡೆ ಬೀಸಿದ ಸ್ವಾತಂತ್ರ್ಯದ ಹೊಸಗಾಳಿ ಅಳಿದುಳಿದ ಮೂಲನಿವಾಸಿಗರ ಧ್ವನಿಯನ್ನು ವಿಶ್ವದ ವೇದಿಕೆಯಲ್ಲಿ ಮೊಳಗುವಂತೆ ಮಾಡಿತ್ತು. ತಮ್ಮ ಪೂರ್ವಜರನ್ನು ಅಮಾನವೀಯವಾಗಿ ಹತ್ಯೆಗೈದ ಕ್ರೌರ್ಯಕ್ಕಾಗಿ ಯುರೋಪ್ ಕನಿಷ್ಠ ಕ್ಷಮೆಯನ್ನಾದರೂ ಕೇಳಬೇಕೆಂಬ ಕೂಗು ಬಲವಾದಾಗ ೨೦೧೫ ರಲ್ಲಿ ಅಂದಿನ ಪೋಪ್ ಫ್ರಾನ್ಸಿಸ್ ವಸಾಹತುವಿನ ಹೆಸರಿನಲ್ಲಿ ನಡೆದ ಘೋರ ಕೃತ್ಯಕ್ಕಾಗಿ ಕ್ಷಮೆಯನ್ನೂ ಕೇಳಿದರು. ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ತೀರಾ ಇತ್ತೀಚಿನ ದಶಕಗಳವರೆಗೂ ಮೂಲನಿವಾಸಿಗರ ಮಕ್ಕಳನ್ನು ಬಲವಂತದಿಂದ ಅವರ ಪೋಷಕರಿಂದ ಪ್ರತ್ಯೇಕಿಸಿ ಅವರನ್ನು ನಾಗರಿಕ ಗೊಳಿಸುವ ಶಾಲೆಗಳನ್ನು ನಡೆಸಲಾಗುತ್ತಿತ್ತು ಎಂದರೆ ಬಿಳಿಯ ನಾಗರಿಕತೆಯ ಕ್ರೌರ್ಯ ಅದೆಷ್ಟಿರಬಹುದೆಂದು ತಿಳಿಯಬಹುದು. ಇದು ಸರ್ಕಾರದ ನೀತಿಯೇ ಆಗಿತ್ತು ! ಮೂಲನಿವಾಸಿಗರ ಮಕ್ಕಳನ್ನು ಬಿಳಿಯರ ನಡುವೆ ಬೆಳೆಸಿದರೆ ಆ ಜನಾಂಗಗಳು ಉದ್ಧಾರವಾಗುತ್ತದೆ ಎಂಬ ಪೂರ್ವಾಗ್ರಹ ಬೆಳೆದಿತ್ತು. ಪೋಷಕರಿಂದ ಬೇರ್ಪಟ್ಟ ಮಕ್ಕಳಲ್ಲಿ ಅವರ ಸಾಂಸ್ಕೃತಿಕ ಅಸ್ಮಿತೆಯನ್ನು ನಾಶಮಾಡಲಾಗುತ್ತಿತ್ತು. ಬಲವಂತದಿಂದ ಬಿಳಿಯರ ಸಂಸ್ಕೃತಿಯನ್ನು ಕಲಿಸಲಾಗುತ್ತಿತ್ತು. ಅವರುಗಳ ಹೆಸರು ಬದಲಾಯಿತು, ಭಾಷೆ ಬದಲಾಯಿತು. ಆ ಮೂಲಕ ಸಾಂಸ್ಕೃತಿಕ ಕೊಂಡಿಯಿಂದ ಕಳಚಲ್ಪಟ್ಟ ಒಂದು ಪೇಲವ ಜನಾಂಗವನ್ನು ಸೃಷ್ಟಿಸಲಾಯಿತು. ಇದರಿಂದ ಆ ತಲೆಮಾರಿಗೆ ಉಂಟಾದ ಸಾಂಸ್ಕೃತಿಕ ಆಘಾತದಿಂದ ಕುಸಿದುಹೋಯಿತು, ಇದರ ಜತೆಗೆ ದೈಹಿಕ, ಲೈಂಗಿಕ ಶೋಷಣೆಯಿಂದಲೂ ಕುಸಿದರು. ಆ ಮಕ್ಕಳಲ್ಲಿ ತಾವು ಮೂಲನಿವಾಸಿಗರ ಮಕ್ಕಳೆನ್ನುವ ಯಾವ ಕುರುಹುಗಳೂ ಕಾಣದಂತೆ ಅವರನ್ನು ಬೆಳೆಸಲಾಯಿತು. ಈ ತಲೆಮಾರನ್ನು “The stolen Generation”ಎಂದೇ ಕರೆಯಲಾಗಿದೆ.
ವಿಶ್ವಸಂಸ್ಥೆಯು ಜಗತ್ತಿನ ಮೂಲನಿವಾಸಿರ ಹಕ್ಕುಗಳನ್ನು ಸಂಕ್ಷಿಸುವ ಭರವಸೆಯನ್ನು ನೀಡುವ ಘೋಷಣೆಯನ್ನು (United Nations Declaretion on the rights of Indigenous Peoples-UNDRIP) ಸಾಮಾನ್ಯ ಸಭೆಯಲ್ಲಿ ಮಂಡಿಸಿದಾಗ ಕೆನಡಾ, ಅಮೇರಿಕಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾಗಳ ವಿರೋಧದ ನಡುವೆಯೂ ಭಾರತ ಬೆಂಬಲಿಸಿತ್ತು. ಮೂಲನಿವಾಸಿಗರ ಹಕ್ಕು ಮತ್ತು ಆತ್ಮಗೌರವವನ್ನು ರಕ್ಷಿಸುವುದೇ ಇದರ ಮೂಲ ಉದ್ದೇಶವಾಗಿತ್ತು. ಭಾರತ ತನ್ನ ನಿಲುವನ್ನು ಬಹಳ ಸ್ಪಷ್ಟವಾಗಿಯೇ ತಿಳಿಸಿತ್ತು. ವಿಶ್ವದಾದ್ಯಂತ ಮೂಲನಿವಾಸಿಗರ ಹಕ್ಕುಗಳ ಸಂರಕ್ಷಣೆಗಾಗಿ ಈ ನಿಲುವನ್ನು ಭಾರತ ಬೆಂಬಲಿಸುತ್ತದೆ. ಭಾರತದಲ್ಲಿ ಸ್ವಾತಂತ್ರ್ಯಾನಂತರ ಬದುಕುತ್ತಿರುವ ಎಲ್ಲಾ ಭಾರತೀಯರೂ ಇಲ್ಲಿನ ಮೂಲನಿವಾಸಿಗಳೇ ಎನ್ನುವುದನ್ನು ದೃಢವಾಗಿ ತಿಳಿಸಿತ್ತು. ಭಾರತ ಒಂದು ರಾಷ್ಟ್ರವಾಗಿ ವಸಾಹತುಶಾಹಿಗಳ ಆಕ್ರಮಣವನ್ನು ಎದುರಿಸಿದೆ. ಹೀಗಾಗಿ ಇಲ್ಲಿನ ನಿವಾಸಿಗಳಲ್ಲಿ ಮೂಲನಿವಾಸಿಗಳು ಮತ್ತು ಹೊರಗಿನಿಂದ ಬಂದವರು ಎನ್ನುವ ವಿಂಗಡನೆ ಇಲ್ಲ. ಭಾರತದಲ್ಲಿರುವವರೆಲ್ಲರೂ ಭಾರತೀಯರೇ. ಭಾರತೀಯ ಸಂವಿಧಾನವೂ ಮೂಲನಿವಾಸಿಗಳು ಮತ್ತು ಹೊರಗಿನಿಂದ ಬಂದವರು ಎನ್ನುವ ಯಾವ ವಿಂಗಡನೆಯನ್ನೂ ಮಾನ್ಯ ಮಾಡಿಲ್ಲ. ಕೆಲವೊಂದು ವಿಘಟನಕಾರಿ ಶಕ್ತಿಗಳು ಸದಾ ಕಾಲ ಭಾರತವನ್ನು ಆರ್ಯರು ಮತ್ತು ದ್ರಾವಿಡರು ಎಂದು ವಿಂಗಡಿಸಿ, ಆರ್ಯರು ಹೊರಗಿನಿಂದ ಬಂದರು , ದ್ರಾವಿಡರು ಇಲ್ಲಿನ ಮೂಲನಿವಾಸಿಗಳು ಎಂಬ ವಿಂಗಡನೆಯನ್ನು ಮಾಡುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಆದರೂ ಬಾಬಾಸಾಹೇಬ್ ಅಂಬೇಡ್ಕರ್ ಅವರೂ ಸೇರಿದಂತೆ ಅನೇಕರು ನಡೆಸಿದ ಅತ್ಯಂತ ವೈಜ್ಞಾನಿಕ ಅಧ್ಯಯನಗಳ ಮೂಲಕ ಆರ್ಯರು ಹೊರನಿಂದ ಬಂದವರೆನ್ನುವ ವಾದವನ್ನು ಸಂಪೂರ್ಣವಾಗಿ ನಿರಾಧಾರ ಎಂದು ತಳ್ಳಿಹಾಕಿದ್ದಾರೆ. ಕೆಲವರು ಈ ಮೂಲನಿವಾಸಿಗರ ದಿನಾಚರಣೆಯ ನೆಪದಲ್ಲಿ ಭಾರತೀಯರಲ್ಲಿ ಮೂಲನಿವಾಸಿಗರು ಮತ್ತು ಹೊರಗಿನಿಂದ ಬಂದವರೆನ್ನುವ ಒಡಕು ಹುಟ್ಟುಹಾಕುವ ವಾದಗಳನ್ನು ಮಾಡಿದರೂ ಇವುಗಳಿಗೆ ಯಾವ ಆಧಾರವೂ ಇಲ್ಲ.
ಮೂಲನಿವಾಸಿಗರ ಹತ್ಯೆ ಎಂದರೆ ಅದು ಕೇವಲ ಒಂದು ಜನಾಂಗದ ಹತ್ಯೆಯಷ್ಟೇ ಅಲ್ಲ.ಅದು ಜಗತ್ತಿನ ಶ್ರೇಷ್ಟ ನಾಗರಿಕತೆಯೊಂದರ ಲೋಕದೃಷ್ಟಿಯ ಹತ್ಯೆ, ಸಂಸ್ಕೃತಿಯ ಹತ್ಯೆ, ಭಾಷೆಯ ಹತ್ಯೆಯಾಗಿದೆ. ಯಾಕೆಂದರೆ ಎಲ್ಲೆಲ್ಲಿ ಈ ಮೂಲನಿವಾಸಿಗರನ್ನು ಹತ್ಯೆ ಮಾಡಲಾಗಿದೆಯೋ ಅಲ್ಲಿ ಒಂದು ಉತೃಷ್ಟವಾದ ಜೀವನ ವಿಧಾನವಿತ್ತು, ಪ್ರಕೃತಿಯೊಂದಿಗೆ ಬೆಸೆದು ಬದುಕುತ್ತಿತ್ತು. ಆದರೆ ಮತ ಮತ್ತು ಸಾಮ್ರಾಜ್ಯ ವಿಸ್ತರಣೆಯ ದಾಹಕ್ಕೆ ಸಿಲುಕಿ ಅವೆಲ್ಲವೂ ಬಲಿಯಾಯಿತು. ಈ ದಿನಾಚರಣೆಯ ನೆಪದಲ್ಲಿ ಜಗತ್ತಿನ ನಾಗರಿಕತೆಯ ಹೆಸರಿನಲ್ಲಿ ನಡೆದ ಈ ಭೀಕರ ಹತ್ಯೆಯನ್ನು ನೆನಪಿಸಿಕೊಳ್ಳುವ ಮೂಲಕ ನಾಗರಿಕತೆಗೆ ಅಂಟಿದ ಕಪ್ಪು ಚುಕ್ಕೆಗಾಗಿ ಮರುಗದೆ ಇರಲು ಸಾಧ್ಯವಿಲ್ಲ.
ಡಾ. ರೋಹಿಣಾಕ್ಷ ಶಿರ್ಲಾಲು
ಮೂಲನಿವಾಸಿಗರ ಹತ್ಯೆ ಎಂದರೆ ಅದು ಕೇವಲ ಒಂದು ಜನಾಂಗದ ಹತ್ಯೆಯಷ್ಟೇ ಅಲ್ಲ.ಅದು ಜಗತ್ತಿನ ಶ್ರೇಷ್ಟ ನಾಗರಿಕತೆಯೊಂದರ ಲೋಕದೃಷ್ಟಿಯ ಹತ್ಯೆ, ಸಂಸ್ಕೃತಿಯ ಹತ್ಯೆ, ಭಾಷೆಯ ಹತ್ಯೆಯಾಗಿದೆ. ಯಾಕೆಂದರೆ ಎಲ್ಲೆಲ್ಲಿ ಈ ಮೂಲನಿವಾಸಿಗರನ್ನು ಹತ್ಯೆ ಮಾಡಲಾಗಿದೆಯೋ ಅಲ್ಲಿ ಒಂದು ಉತೃಷ್ಟವಾದ ಜೀವನ ವಿಧಾನವಿತ್ತು, ಪ್ರಕೃತಿಯೊಂದಿಗೆ ಬೆಸೆದು ಬದುಕುತ್ತಿತ್ತು. ಆದರೆ ಮತ ಮತ್ತು ಸಾಮ್ರಾಜ್ಯ ವಿಸ್ತರಣೆಯ ದಾಹಕ್ಕೆ ಸಿಲುಕಿ ಅವೆಲ್ಲವೂ ಬಲಿಯಾಯಿತು. ಈ ದಿನಾಚರಣೆಯ ನೆಪದಲ್ಲಿ ಜಗತ್ತಿನ ನಾಗರಿಕತೆಯ ಹೆಸರಿನಲ್ಲಿ ನಡೆದ ಈ ಭೀಕರ ಹತ್ಯೆಯನ್ನು ನೆನಪಿಸಿಕೊಳ್ಳುವ ಮೂಲಕ ನಾಗರಿಕತೆಗೆ ಅಂಟಿದ ಕಪ್ಪು ಚುಕ್ಕೆಗಾಗಿ ಮರುಗದೆ ಇರಲು ಸಾಧ್ಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.