ಭಾರತದ ಸ್ವರಾಜ್ಯ ಸಂಪಾದನೆಯ ಹೋರಾಟಕ್ಕೆ ನೂರಾರು ಕವಲುಗಳಿವೆ. ಸ್ವಾತಂತ್ರ್ಯದ ಗಂಗೆಗೆ ಸಾವಿರಾರು ತೊರೆಗಳು ಬಂದು ಸೇರಿಕೊಂಡಿದೆ. ಅನೇಕರ ಹೋರಾಟ, ಸತ್ಯಾಗ್ರಹ, ಬಲಿದಾನಗಳಿಂದ ಭಾರತ ಸ್ವಾತಂತ್ರ್ಯವನ್ನು ಪಡೆಯಿತು. ಶತಮಾನಗಳ ಕಾಲ ಬ್ರಿಟಿಷರು ಆಳಿದ್ದ ಭಾರತಕ್ಕೆ ಭಾರತೀಯರಿಂದಲೇ ಆಳಲ್ಪಡುವ ಅವಕಾಶ ಲಭಿಸಿತು.ಆದರೆ ಈ ಕಾಲದಲ್ಲಿ ಕೇವಲ ಬ್ರಿಟಿಷರನ್ನು ಭಾರತದಿಂದ ಹೊರಗಟ್ಟುವ ಹೋರಾಟ ಮಾತ್ರ ನಡೆಯಲಿಲ್ಲ. ಸ್ವತಂತ್ರವಾಗುವ ಭಾರತದ ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ಸುಧಾರಣೆಯ ಹೊಸಗಾಳಿಯೂ ಬೀಸಲಾರಂಭಿಸಿತು. ರಾಜಕೀಯ ಪಾರಂತಂತ್ರ್ಯಕ್ಕೆ ಭಾರತ ತೆತ್ತ ಬೆಲೆ ಏನು? ಎಂದು ಯಾರಾದರೂ ಅಧ್ಯಯನ ಮಾಡಿದರೆ ಕಾಣಬಹುದಾದ ಪ್ರಮುಖ ಸಂಗತಿಗಳೆಂದರೆ ಅದು ನಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಜೀವನವನ್ನೂ ಕಲುಷಿತವಾಗಿಸಿತ್ತು, ಹೀಗಾಗಿ ಸ್ವಾತಂತ್ರ್ಯ ಹೋರಾಟವೆಂದರೆ ಕೇವಲ ಬ್ರಿಟಿಷರನ್ನು ಹೊರಗಟ್ಟಿ ನಿದ್ರಿಸುವಂತಿರಲಿಲ್ಲ. ಸ್ವರಾಜ್ಯ ಸಂಪಾದನೆಗಾಗಿ ಹೋರಾಡುತ್ತಲೇ ನಮ್ಮ ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ಸೇರಿಕೊಂಡಿದ್ದ ಅನಿಷ್ಟಗಳನ್ನೂ ನಿವಾರಿಸಬೇಕಾಗಿತ್ತು. ಒಂದು ವೇಳೆ ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ನಾವು ಸುಧಾರಣೆಯನ್ನು ಮಾಡಿಕೊಳ್ಳದೆ ಕೇವಲ ಸ್ವರಾಜ್ಯವನ್ನು ಮಾತ್ರ ತಂದುಕೊಂಡೆವು ಎಂದಾಗಿದ್ದರೆ ಆ ಸ್ವರಾಜ್ಯ ನಮ್ಮ ದೇಶದ ನಿಜವಾದ ಬಿಡುಗಡೆಯಾಗುತ್ತಿರಲಿಲ್ಲ.ಅದು ಜನರ ಸ್ವರಾಜ್ಯವಾಗುತ್ತಿರಲಿಲ್ಲ. ಯಾಕೆಂದರೆ ಸಮಾಜ ಕಾಲಬಾಹೀರವಾದ ರೂಢಿಗಳನ್ನು, ಧರ್ಮದ ಹೆಸರಿನಲ್ಲಿ ಪಾಲಿಸುತ್ತಿತ್ತು. ವಾಸ್ತವದಲ್ಲಿ ಅಂತಹ ಆಚರಣೆಗಳಿಗೆ ಶಾಸ್ತ್ರ ಗಳ ಸಮ್ಮತಿ ಇರಲಿಲ್ಲವಾದರೂ ಸಮಾಜದಲ್ಲಿ ಕಂದಾಚಾರವಾಗಿ ಆಳವಾಗಿ ಬೇರುಬಿಟ್ಟಿತ್ತು. ಒಂದೆಡೆ ಪರಕೀಯರ ದಬ್ಬಾಳಿಕೆ, ಇನ್ನೊಂದೆಡೆ ಧರ್ಮದ ಮುಸುಕಿನಲ್ಲಿ, ಸ್ತ್ರೀ ಶೋಷಣೆ , ಅಸ್ಪೃಶ್ಯತೆ, ಅಸಮಾನತೆ, ಶಿಕ್ಷಣದ ನಿರಾಕರಣೆ ನಡೆಯುತ್ತಿತ್ತು. ಇವುಗಳನ್ನು ಪ್ರಶ್ನಿಸುವುದು ಸುಲಭವಾಗಿರಲಿಲ್ಲ. ಧರ್ಮದ್ರೋಹದ ಕಳಂಕ ಮೆತ್ತಿಕೊಳ್ಳುತ್ತಿತ್ತು. ಇಂತಹ ಸವಾಲಿನ ನಡುವೆಯೂ ಅನೇಕ ಚಿಂತಕರು ಸಮಾಜದ ಸುಧಾರಣೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ.
ಸ್ವರಾಜ್ಯ ಸುರಾಜ್ಯವಾಗುವುದರ ಹಿಂದೆ ಇಂತಹ ನೂರಾರು ಜನ ಸಮಾಜ ಸುಧಾರಕರ ಪರಿಶ್ರಮವಿದೆ. ಸುಧಾರಣೆ ಭಾರತೀಯ ಸಮಾಜದ ಸಹಜ ಚಕ್ರವಾಗಿತ್ತು. ಸಮಾಜವು ಬೇರೆ ಬೇರೆ ಕಾಲಘಟ್ಟದಲ್ಲಿ ಕುಸಿದಾಗ ಮಹಾತ್ಮರು ಈ ಸಮಾಜವನ್ನು ಮೇಲೆತ್ತಿದ್ದಾರೆ. ಮತ್ತೆ ಚೈತನ್ಯ ತುಂಬಿದ್ದಾರೆ.ಯಾವಾಗ ಭಾರತ ವಿದೇಶಿ ಆಳ್ವಿಕೆಗೆ ಸಿಲುಕಿಕೊಂಡಿತೋ ಆಗ ತನ್ನ ಸಹಜಗತಿಯ ಚಲನಶೀಲತೆಯನ್ನು ಕಳೆದುಕೊಂಡಿತು.ಸಾಂಸ್ಕೃತಿಕ, ಧಾರ್ಮಿಕ ಚೈತನ್ಯ ನಷ್ಟವಾಯಿತು. ಹದಿನೆಂಟನೆಯ ಶತಮಾನದ ಬಳಿಕ ಮತ್ತೊಮ್ಮೆ ಭಾರತದ ಸಾಮಾಜಿಕ ಬದುಕಿನಲ್ಲಿ ಚಲನಶೀಲತೆಯು ಎದ್ದು ಕಾಣಿಸಿಕೊಳ್ಳುತ್ತದೆ. ಬಹುಶಃ ಈ ಬಗೆಯ ಸುಧಾರಣಾ ಪ್ರಕ್ರಿಯೆ ಅಂದು ನಡೆಯದೇ ಹೋಗಿದ್ದರೆ ಇಂದು ನಾವು ಕಾಣುವ ಭಾರತದ ಚಿತ್ರವೇ ಬೇರೆಯಾಗಿರುತ್ತಿತ್ತು. ಮತ್ತಷ್ಟು ಗ್ರಹಣ ಪೀಡಿತವಾಗಿರುತ್ತಿತ್ತು.ಆ ಶತಮಾನದಲ್ಲಿ ನಡೆದ ಪರಿವರ್ತನೆಯ ಪ್ರಯತ್ನಗಳು ಬುದ್ಧಿಪೂರ್ವಕವಾದ ಪ್ರಯತ್ನಗಳಾಗಿತ್ತೆ ಹೊರತು ಆಕಸ್ಮಿಕವಾದ ಅಥವಾ ಯಾವುದೋ ಉನ್ಮತ್ತತೆಯಿಂದ ನಡೆದುದಲ್ಲ. ನೂರಾರು ವರ್ಷಗಳ ಪರಕೀಯ ಆಳ್ವಿಕೆಯಿಂದ ಆವರಿಸಿದ್ದ ಜಾಢ್ಯದಿಂದ ಮುಕ್ತಿ ಪಡೆಯುವುದು ಎಂದರೆ ಅದು ರಾಜಕೀಯ ಬಿಡುಗಡೆಯ ಜತೆಗೆ ಸಾಮಾಜಿಕ ಬಿಡುಗಡೆಯೂ ಆಗಿರುತ್ತಿತ್ತು. ಈ ಕಾರಣದಿಂದಲೇ ರಾಜಕೀಯ ದಾಸ್ಯದಿಂದ ಬಿಡುಗಡೆಗೊಳಿಸುವುದಕ್ಕಾಗಿ ಸಾವಿರಾರು ಜನ ತಮ್ಮ ಬದುಕನ್ನು ಸಮರ್ಪಿಸಿದಂತೆ ಸಾಮಾಜಿಕ ವಿಮೋಚನೆಗಾಗಿಯೂ ನೂರಾರು ಜನ ತಮ್ಮ ಬದುಕನ್ನು ಮೀಸಲಾಗಿರಿಸಿದರು. ಅಂತಿಮವಾಗಿ ಸ್ವಾತಂತ್ರ್ಯವನ್ನು ಪಡೆಯುವಾಗ ಭಾರತದ ಸಾಮಾಜಿಕ, ಧಾರ್ಮಿಕ ಬದುಕೂ ಹಸನಾಗುತ್ತಾ ಬಂದಿತ್ತು. ದೇಶದ ಸ್ವಾತಂತ್ರ್ಯ ನಷ್ಟವಾಗುವುದಕ್ಕೂ ನಮ್ಮ ಸಮಾಜದಲ್ಲಿ ರೂಢಿಗೆ ಬಂದಿದ್ದ ಕುರೂಢಿಗಳಿಗೂ ನೇರವಾದ ಸಂಬಂಧವಿದೆ ಎನ್ನುವುದನ್ನು ಸಮಾಜ ಸುಧಾರಕರು ಕಂಡುಕೊಂಡಿದ್ದರು. ಹೀಗಾಗಿ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಮಾಜ ಸುಧಾರಣೆಯ ಚಳವಳಿ ಸಮಾನಂತರವಾಗಿ ಚಲಿಸುತ್ತಿತ್ತು. ಈ ಎರಡೂ ಚಳವಳಿಯ ಅಂತಿಮ ಉದ್ದೇಶ ಭಾರತಿಯರು ಘನತೆಯಿಂದ ಬಾಳುವಂತಾಗಬೇಕು ಎನ್ನುವುದೇ ಆಗಿತ್ತು.
ಯಾಕೆ ಸಾಮಾಜಿಕ ಸುಧಾರಣೆಯ ಪ್ರಯತ್ನಗಳು ಮುಖ್ಯವಾಗುತ್ತದೆ ಎಂದರೆ ಯಾವ ದೇಶದಲ್ಲಿ ತನ್ನ ಜನಸಂಖ್ಯೆಯ ಪ್ರತಿಶತ ಅರ್ಧದಷ್ಟಿರುವ ಮಹಿಳೆಯರನ್ನು ಹಲವು ಕರ್ಮಠ ಕಟ್ಟುಪಾಡುಗಳಿಗೆ ಒಳಪಡಿಸಿ ಆಕೆಯ ಸ್ಥಿತಿ ಶೊಚನೀಯವಾಗುವಂತೆ ಮಾಡಲಾಗಿತ್ತೋ, ಯಾವ ದೇಶದಲ್ಲಿ ತನ್ನ ಜನಸಂಖ್ಯೆಯ ಅರ್ಧಭಾಗಕ್ಕಿಂತಲೂ ಹೆಚ್ಚಿದ್ದ ಜನ ಸಮುದಾಯಗಳನ್ನು ಅಸ್ಪೃಶ್ಯತೆಯ ಹೆಸರಿನಲ್ಲಿ, ಜಾತಿ ಮೈಲಿಗೆಯ ಹೆಸರಿನಲ್ಲಿ ಊರಿನಿಂದ ಹೊರಗಟ್ಟಲಾಗಿತ್ತೋ ಅಂತಹ ಸ್ಥಿತಿಯಲ್ಲಿ ಒಂದು ದೇಶ , ಒಂದು ಸಮಾಜ ಹೇಗೆ ತಾನೆ ಉನ್ನತಿಯನ್ನು ಸಾಧಿಸುವುದಕ್ಕೆ ಸಾಧ್ಯ? ಈ ಸಮುದಾಯಗಳ ಬಿಡುಗಡೆಯಾಗದೆ ಭಾರತ ಬೆಳಗುವುದಕ್ಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅಂದಿನ ಸಾಮಾಜಿಕ ನೇತಾರರನ್ನು ಕಾಡಿತ್ತು. ಹೀಗಾಗಿ ಮಹಿಳಾ ವಿಮೋಚನೆ, ಅಸ್ಪೃಶ್ಯತೆಯ ನಿವಾರಣೆ ಪ್ರಧಾನ ಕಾಳಜಿಯಾಗುತ್ತದೆ. ಸ್ತ್ರೀ ಶಿಕ್ಷಣದ ನಿರಾಕರಣೆ, ಸತಿ ಪದ್ಧತಿ,ಬಾಲ್ಯವಿವಾಹ, ವಿಧವಾ ಕೇಶ ಮುಂಡನ ದಂತಹ ಕ್ರೂರ ಕಟ್ಟುಪಾಡುಗಳಿಂದ ನಲುಗಿಹೋಗಿದ್ದ ಭಾರತೀಯ ಸಮಾಜ ಒಂದೆಡೆಯಾದರೆ, ಜಾತೀಯತೆ, ಅಸ್ಪೃಶ್ಯತೆ, ದೇವಾಲಯ ಪ್ರವೇಶ ನಿರಾಕರಣೆಯಂತಹ ಸಮಸ್ಯೆಗಳು ಇನ್ನೊಂದೆಡೆ, ಇವುಗಳ ನಡುವೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಹಾಗಾಗಿ ಅಂದಿನ ಅನೇಕ ಸಾಮಾಜಿಕ ನೇತಾರರಿಗೆ ಸ್ವತಂತ್ರ ಭಾರತದಲ್ಲಿ ಈ ಎಲ್ಲಾ ಸಮುದಾಯಗಳ ಸ್ಥಾನಮಾನವೇನು? ಇವರೆಲ್ಲರ ನೋವಿಗೆ ಬಿಡುಗಡೆ ಸಿಗಲಿದೆಯೇ? ಎಂಬ ಪ್ರಶ್ನೆ ಕಾಡಿತ್ತು. ಹೀಗಾಗಿ ದೇಶದಲ್ಲಿ ಸಾಮಾಜಿಕ ಸುಧಾರಣೆಯೂ ಒಂದು ಚಳವಳಿಯ ರೂಪವನ್ನು ಪಡೆದುಕೊಂಡಿತ್ತು. ಆ ಮೂಲಕ ಸ್ಥಗಿತಗೊಂಡಿದ್ದ ಸಾಮಾಜಿಕ ಚಲನೆಯ ಚಕ್ರ ಮತ್ತೆ ತಿರುಗಲಾರಂಭಿಸಿತ್ತು. ಈ ಎಲ್ಲಾ ಸುಧಾರಕರ ಕನಸಿದ್ದುದು ಭಾರತ ಮತ್ತೆ ಬೆಳಗಬೇಕು. ತನ್ನ ಪೂರ್ವದ ವೈಭವವನ್ನು ಮರಳಿ ಸಂಪಾದಿಸಬೇಕು. ಮತ್ತೆ ಭಾರತದ ಕೀರ್ತಿ ಪತಾಕೆ ಎತ್ತರಕ್ಕೆ ಹಾರುವಂತಾಗಬೇಕು ಎಂದೇ.
ರಾಜಾರಾಮ್ ಮೋಹನ್ರಾಯ್, ಈಶ್ವರಚಂದ್ರ ವಿದ್ಯಾಸಾಗರ, ಮಹಾತ್ಮ ಜ್ಯೋತಿಬಾ ಫುಲೆ, ಪಂಡಿತ ರಮಾಬಾಯಿ, ಸಾವಿತ್ರಿಬಾಯಿ ಫುಲೆ,ಸ್ವಾಮಿ ದಯಾನಂದ ಸರಸ್ವತಿ, ,ಶಾಹು ಮಹಾರಾಜ್, ಕುದ್ಮಲ್ ರಂಗರಾವ್, ಮಹಾತ್ಮ ಗಾಂಧೀಜಿ,ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲಾದ ನೂರಾರು ಮಹಾತ್ಮರ ಬದುಕು ಸಮರ್ಪಿತವಾದುದೇ ಭಾರತೀಯ ಸಮಾಜದ ಸುಧಾರಣೆಗಾಗಿ. ಯಾವ ರೂಢಿಗಳಿಂದ ನಮ್ಮ ಸಮಾಜ ದುರ್ಬಲವಾಗುತ್ತಿತ್ತೋ ಅಂತಹ ರೂಢಿಗಳನ್ನು ತಡೆದು ಭಾರತೀಯ ಸಮಾಜ ವಿಘಟಿತವಾಗದಂತೆ ಕಾಪಾಡಿದರು.ಸಮಾಜದ ಐಕ್ಯತೆಗಾಗಿ ದುಡಿದರು.ಜತೆಜತೆಗೆ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುತ್ತಾ ಜನರನ್ನು ಸ್ವಾತಂತ್ರ್ಯದ ಸಂಗ್ರಾಮಕ್ಕೂ ಅಣಿಗೊಳಿಸಿದರು. ಬ್ರಿಟಿಷ್ ಆಳ್ವಿಕೆಯ ಕಾಲಗಟ್ಟದಲ್ಲಿ ಬಂದ ಮಿಷನರಿಗಳು ಹಿಂದೂ ಸಮಾಜದಲ್ಲಿದ್ದ ಆಂತರಿಕ ದೋಷಗಳನ್ನೇ ಮುಂದಿಟ್ಟುಕೊಂಡು ಸಮಾಜವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಿದಾಗ ಆ ಕಾಲಘಟ್ಟದಲ್ಲಿ ಹಿಂದೂ ಸಮಾಜವನ್ನು ಪಾರುಮಾಡಿದ ಮಹಾತ್ಮರು ಇವರೇ. ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ಸಾಮಾಜಿಕ ಬದಲಾವಣೆಗಳು ಅನಿವಾರ್ಯ ಎನ್ನುವುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟರು. ಸುಧಾರಣೆಯ ಈ ಆಂದೋಲನದಲ್ಲಿ ಭಾಗಿಯಾದ ನೇತಾರರು ಭಾರತದ ಪ್ರಾಚೀನ ನಾಗರಿಕತೆಯ ಕುರಿತು, ವೇದ ಉಪನಿಷತ್ಗಳ ಕುರಿತು ಆಳವಾದ ಅಧ್ಯಯನವುಳ್ಳ ಚಿಂತಕರೇ ಆಗಿದ್ದರು. ಅವರು ಮೂಲತಃ ಭಾರತೀಯ ದರ್ಶನಗಳಿಂದಲೇ ಪ್ರಭಾವಕ್ಕೆ ಒಳಗಾಗಿದ್ದರು. ಯಾಕೆಂದರೆ ವೇದಗಳಲ್ಲಿ, ಉಪನಿಷತ್ಗಳಲ್ಲಿ ಇಲ್ಲದ ಸಾಮಾಜಿಕ ಕುರೂಢಿಗಳು ಕಾಲಾನಂತರ ಹಿಂದೂ ಸಮಾಜಕ್ಕೆ ಸೇರಿಕೊಂಡಿದೆ. ಹಾಗಾಗಿ ಇವುಗಳ ನಿವಾರಣೆಯಾಗಬೇಕು.ಈ ನಿವಾರಣೆಯು ಮತ್ತೆ ವೇದಗಳ ಬೆಳಕಿನಲ್ಲೆ ಆಗಬೇಕು ಎಂದು ಅನೇಕ ಸುಧಾರಕರು ಚಿಂತನೆ ನಡೆಸುತ್ತಾರೆ. ಹೀಗಾಗಿ ಸುಧಾರಣೆ ಎಂದರೆ ವೇದಗಳಿಗೆ ಮರಳುವುದು ಎನ್ನುವುದು ಆ ಕಾಲದ ಮುಖ್ಯ ಘೋಷಣೆಯಾಗಿತ್ತು.
ಸುಧಾರಣೆ ಎಂದರೆ ಹೊರಗಿನಿಂದ ತಂದು ಹೇರುವುದಲ್ಲ, ಹಿಂದು ಸಮಾಜ ತಾನು ಶುದ್ಧೀಕರಣಗೊಂಡು ಮತ್ತೆ ಮೂಲಕ್ಕೆ ಮರಳುವುದು. ಅದಕ್ಕಾಗಿ ಬ್ರಿಟಿಷ್ ಸರ್ಕಾರದ ಕಾನೂನಿನ ನೆರವನ್ನು ಪಡೆದುಕೊಳ್ಳುವುದನ್ನು ಬೆಂಬಲಿಸುತ್ತಾರೆ. ಸಹಬಾಳ್ವೆ, ಸಾಮರಸ್ಯ ಹಾಗೂ ಪ್ರಗತಿಗೆ ಅಡ್ಡಿಯಾಗಿದ್ದ ಎಲ್ಲಾ ಬಗೆಯ ಅನಿಷ್ಟಗಳನ್ನು ನಿವಾರಣೆ ಮಾಡಬೇಕಾಗಿದೆ. ಭಾರತೀಯ ಸಾಮಾಜಿಕ ರಚನೆ, ಧಾರ್ಮಿಕ ನಡವಳಿಕೆಗಳಲ್ಲಿ ಯಾವುದೆಲ್ಲಾ ಕಾಲಬಾಹಿರವಾಗಿದೆಯೋ ಅವುಗಳ ಅಗತ್ಯ ಪರಿಷ್ಕಾರವನ್ನು ಮಾಡುವ, ಪರಿಷ್ಕಾರದ ಮೂಲಕ ಅಪ್ರಸ್ತುತವಾದುದರ ಬಹಿಷ್ಕಾರ ಹಾಗೂ ಹೊಸ ಸಾಮಾಜಿಕ ಬದುಕಿನ ಆವಿಷ್ಕಾರದ ಮೂಲಕ ನವ ಸಮಾಜವನ್ನು ರೂಪಿಸುವುದು ಅವರೆಲ್ಲರ ಕನಸಾಗಿತ್ತು. ಒಂದು ವೇಳೆ ಹಿಂದೂ ಸಮಾಜ ತನ್ನನ್ನು ತಾನು ಇಂತಹ ಸುಧಾರಣಾ ಪ್ರಕ್ರಿಯೆಗೆ ಒಳಗಾಗಿರದೇ ಇದ್ದಿದ್ದರೆ ಅಂದಿನ ಪರಕೀಯ ಒತ್ತಡ ಮತ್ತು ಬಾಹ್ಯ ಪ್ರಭಾವದಿಂದ ಈ ಸಮಾಜ ಪತನದಂಚಿಗೆ ಸಾಗುತ್ತಿತ್ತು. ಇಂತಹ ಅಪಾಯದ ಮುನ್ಸೂಚನೆಯನ್ನು ಅರಿತೇ ಸುಧಾರಣಾ ಪ್ರಕ್ರಿಯೆಗೆ ಜೀವ ತುಂಬಿದರು.ಯಾಕೆಂದರೆ ಅಂದಿನ ಸಮಸ್ಯೆಗಳು ಯಾವುದೋ ಒಂದು ಗುಂಪಿನ , ಒಂದು ಜಾತಿಯ ಅಥವಾ ಒಂದು ಪ್ರದೇಶದ ಸಮಸ್ಯೆಗಳಷ್ಟೇ ಆಗಿರಲಿಲ್ಲ.ಅವುಗಳು ಭಾರತದ ರಾಷ್ಟ್ರೀಯ ಸಮಸ್ಯೆಗಳೆ ಆಗಿತ್ತು. ಹೀಗಾಗಿ ಈ ಸಮಸ್ಯೆಗಳ ನಿವಾರಣೆಯಲ್ಲಿ ಸಮಾಜದ ಕಲ್ಯಾಣವಿತ್ತು, ರಾಷ್ಟ್ರದ ಕಲ್ಯಾಣವಿತ್ತು. ಅಸ್ಪೃಶ್ಯತೆ ಕೇವಲ ಅಸ್ಪೃಶ್ಯತೆಗೆ ಒಳಗಾದವರ ಸಮಸ್ಯೆಯಾಗಿರಲಿಲ್ಲ, ಸತಿ ಪದ್ದತಿ ಕೇವಲ ಮಹಿಳಾ ಸಮಸ್ಯೆಯಾಗಿರಲಿಲ್ಲ. ಇವುಗಳಿಂದ ಇಡೀ ರಾಷ್ಟ್ರವೇ ಬಳಲುತ್ತಿತ್ತು. ಸುಧಾರಣಾ ಪ್ರಕ್ರಿಯೆ ಆರಂಭವಾದಾಗ ಸಮಾಜ ಅದನ್ನು ಸಹರ್ಷದಿಂದ ಸ್ವೀಕಾರಮಾಡಿತ್ತು ಎಂದೇನಿಲ್ಲ. ಸುಧಾರಣೆಗಾಗಿ ಮುಂಚೂಣಿಯಲ್ಲಿ ನಿಂತ ನೆತಾರರ ಬಗೆಗೆ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದರು. ಅವರ ಕೆಲಸದ ಖಂಡನೆ, ವಿಮರ್ಶೇಯೂ ನಡೆಯುತ್ತಿತ್ತು. ಪ್ರತಿರೋಧವೂ ದೊಡ್ಡ ಪ್ರಮಾಣದಲ್ಲಿತ್ತು. ಧರ್ಮವಿರೋಧಿಗಳು ಎಂಬ ನಿಂದನೆಗೂ ಒಳಗಾಗಬೇಕಾಗಿತ್ತು. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಆ ಮಹಾತ್ಮರು ತಮ್ಮ ಕಾರ್ಯದಿಂದ ಹಿಂದೆ ಸರಿಯಲಿಲ್ಲ. ಆ ಮೂಲಕ ಭಾರತ ಬೆಳಗಲು ಕಾರಣರಾದರು. ಸಾಮಾಜಿಕ ಸುಧಾರಣೆಯ ಚಳವಳಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಹಿನ್ನೆಡೆಯಾಗುತ್ತದೆ, ರಾಷ್ಟ್ರೀಯ ಚಳವಳಿ ದುರ್ಬಲವಾಗುತ್ತದೆ ಎಂಬ ಆಕ್ಷೇಪಗಳು, ಕಾನೂನಿನ ಮೂಲಕ ಧಾರ್ಮಿಕ ಸುಧಾರಣೆಗಳನ್ನು ಮಾಡಲು ಅವಕಾಶ ನೀಡುವುದರಿಂದ ವಿದೇಶಿ ಆಳ್ವಿಕೆಗೆ ನಮ್ಮ ಧಾರ್ಮಿಕ ಬದುಕಿನಲ್ಲಿ ಮಧ್ಯೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ವಾದಗಳು ನಿರಾಧಾರವಾದುದೆಂದು ಸಾಧಿಸಿ ತೋರಿಸಿದರು.
ಬ್ರಹ್ಮ ಸಮಾಜ, ಆರ್ಯ ಸಮಾಜ , ಪ್ರಾರ್ಥನಾ ಸಮಾಜ,ರಾಮಕೃಷ್ಣ ಮಿಷನ್, ಥಿಯಾಸಾಫಿಕಲ್ ಸೊಸೈಟಿ, ಡಿಪ್ರೆಸ್ಡ್ ಕ್ಲಾಸಸ್ ಮಿಷನ್ ,ತತ್ವ ಬೋಧಿನಿ ಸಭಾ ಮೊದಲಾದ ಸಂಸ್ಥೆಗಳು ಸಮಾಜದಲ್ಲಿ ಜಾಗೃತಿಯನ್ನು ನಿರ್ಮಿಸುವುದಕ್ಕಾಗಿಯೇ ಸ್ಥಾಪನೆಯಾದವು. ಹಿಂದೂ ಸಮಾಜವನ್ನು ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ಸಿದ್ಧಗೊಳಿಸುವುದೇ ಇವೆಲ್ಲದರ ಕಾಳಜಿಯಾಗಿತ್ತು. ವೇದಾಂತ, ಉಪನಿಷತ್ಗಳ ವಿಚಾರಧಾರೆಯ ಮೂಲಕ ಹಿಂದೂ ಧರ್ಮದ ಸಾರ್ವಕಾಲಿಕ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾರೆ. ಯಾವ ಕಂದಾಚಾರ, ಮೌಢ್ಯಗಳಿಂದ ಧರ್ಮದ ಹಿರಿಮೆ ಕುಗ್ಗಿಹೋಗಿದೆಯೋ ಅವುಗಳಿಂದ ಸಮಾಜವನ್ನು ಮೇಲೆತ್ತಬೇಕು ಎಂದು ಪ್ರಯತ್ನಿಸುತ್ತಾರೆ. ತತ್ವಜ್ಞಾನದ ಆಧಾರದ ಮೇಲೆ ಕಳಂಕವನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಈ ಸಂಸ್ಥೆಗಳ ಮೂಲಕವೇ ವಿಧವಾ ಪುನರ್ ವಿವಾಹಕ್ಕೆ ಕಾನೂನಿನ ಮನ್ನಣೆ ಸಿಗುವಂತೆ ಮಾಡಲಾಯಿತು. ಸತಿ ಪದ್ಧತಿ ನಿಷೇಧಿಸಲ್ಪಟ್ಟಿತು. ಸ್ತ್ರೀ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆದರು. ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸಿದರು. ಜತೆಗೆ ಈ ಯಾವ ಅರ್ಥಹೀನ ಆಚರಣೆಗಳೂ ವೇದಗಳಲ್ಲಿಲ್ಲ ಎನ್ನುವುದನ್ನು ಅಧ್ಯಯನ ಪೂರ್ವಕವಾಗಿ ತೋರಿಸಿ ಕೊಡುತ್ತಾರೆ. ದೇವಾಲಯದ ಪ್ರವೇಶ ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ಆಗ್ರಹಿಸಿ ಆಂದೋಲನ ಮಾಡುತ್ತಾರೆ, ಸಾರ್ವಜನಿಕ ಕೆರೆ, ಬಾವಿಯ ನೀರನ್ನು ಪಡೆಯಲು ಜಾತಿಯ ನಿರ್ಬಂಧ ಕೂಡದು ಎಂದು ಹೋರಾಡುತ್ತಾರೆ. ಜಾಗೃತಿಯ ಜತೆಗೆ ಸವರ್ಣಿಯ ಹಿಂದುಗಳ ಅಂತಃಕರಣವನ್ನು ತೆರೆಯುವ ಪ್ರಯತ್ನವನ್ನು ಮಾಡುತ್ತಾರೆ. ಅಸ್ಪೃಶ್ಯತೆ ಮಹಾ ಪಾತಕವೆಂದು ಘೋಷಿಸಿ ಎಲ್ಲೆಲ್ಲಿ ಆಚರಣೆಯಲ್ಲಿದೆಯೋ ಅಲ್ಲೆಲ್ಲಾ ಅದರ ನಿವಾರಣೆಗಾಗಿ ಪ್ರಯತ್ನಿಸುತ್ತಾರೆ. ಅಗತ್ಯವಿದ್ದಲ್ಲಿ ಶುದ್ಧೀಕರಣ ಚಳವಳಿಯನ್ನು ರೂಪಿಸುತ್ತಾ ಮರಳಿ ಹಿಂದೂ ಧರ್ಮಕ್ಕೆ ಸೇರುವ ಅವಕಾಶವನ್ನು ನೀಡುತ್ತಾರೆ.
ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚುಕಾಲ ನಡೆದ ಈ ಎಲ್ಲಾ ಪ್ರಯತ್ನದ ಫಲವಾಗಿ ಸಮಾಜದಲ್ಲಿ ಸಕಾರಾತ್ಮಕವಾದ ಪರಿವರ್ತನೆ ನಡೆಯಿತು. ಸ್ವಾತಂತ್ರ್ಯಾನಂತರವೂ ಈ ಪ್ರಯತ್ನ ಮುಂದುವರಿದಿದೆ. ಇನ್ನೂ ಸಾಗಬೇಕಾದ ದಾರಿ ದೂರ ಇದೆ. ಆದರೆ ಅಂದು ತಮ್ಮ ಬದುಕನ್ನು ಈ ಮಹಾನ್ ಕಾರ್ಯಕ್ಕಾಗಿ ಸಮರ್ಪಿಸಿದ ಮಹಾತ್ಮರ ಬದುಕು ವ್ಯರ್ಥವಾಗಲಿಲ್ಲ. ಅದು ಫಲಕೊಟ್ಟಿದೆ. ಇನ್ನಷ್ಟು ಸಮೃದ್ಧವಾದ ಭಾರತವನ್ನು ಕಟ್ಟಲು ಅವರ ಚಿಂತನೆಗಳನ್ನು ನಾವಿಂದು ರೂಢಿಸಿಕೊಳ್ಳಬೇಕಾಗಿದೆ.
ಡಾ.ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.