ಹಿಂದೂ ಧಾರ್ಮಿಕತೆಯಲ್ಲಿ ಸಮಾಜಕ್ಕೆ ಮಾರ್ಗದರ್ಶಕ ಎನಿಸಬಹುದಾದ ಸಾಂಸ್ಥಿಕತೆಗಳು ಹಲವಿವೆ. ಗುಡಿ, ಗೋಪುರ, ದೇವಸ್ಥಾನಗಳು ಒಂದೆಡೆಯಾದರೆ, ಮಠದ ಪೀಠಾಧಿಪತಿಗಳು, ಸ್ವಾಮೀಜಿಗಳ ಸಮೂಹ ಮತ್ತೊಂದೆಡೆ. ದೇವಸ್ಥಾನದಲ್ಲಿನ ಅರ್ಚಕ ಅಥವಾ ಪೂಜಾರಿ ಭಕ್ತನ ಅಭಿಷ್ಟಗಳನ್ನು ಮನಗಂಡು ದೇವರಲ್ಲಿ ಪ್ರಾರ್ಥಿಸುವುದಾದರೆ, ಸ್ವಾಮೀಜಿಗಳು ತಮ್ಮ ಅನುಷ್ಠಾನಗಳ ಮುಖಾಂತರ ಸಮಾಜಕ್ಕೆ ಸನ್ಮಾರ್ಗದರ್ಶಕರಾಗಿರುತ್ತಾರೆ. ಒಂದು ಮಂದಿರದ ಗೌರವಸ್ಥರು, ವೇದ ಪಂಡಿತರು, ತತ್ವಜ್ಞಾನಿಗಳು, ಆಶ್ರಮವನ್ನು ನಡೆಸಿ ಗುರುವರ್ಯ ಎಂದೆಣಿಸಿದವರು ಹಿಂದೂ ಧಾರ್ಮಿಕ ಸಮಾಜದಲ್ಲಿ ಎಲ್ಲ ತರಹದ ಗೌರವಗಳಿಗೆ, ಉಪಾದಿಗಳಿಗೆ ಭಾಜನರಾಗುತ್ತಾರೆ.
ಬಹಳ ಹಿಂದಿನಿಂದ ದೇಶದಲ್ಲಿ ಧಾರ್ಮಿಕ ಶಿಕ್ಷಣಾರ್ಥಿಗಳು ಒಂದುಗೂಡಿ ಧಾರ್ಮಿಕ ಅಧ್ಯಯನವನ್ನು ಮಾಡುವ ಸ್ಥಳಗಳೇ ಮಠಗಳು ಎಂದು ಪರಿಗಣಿಸಲ್ಪಟ್ಟಿವೆ. ಇಂತಹ ಶಿಕ್ಷಣ ಕೇಂದ್ರಗಳನ್ನು ಮುನ್ನಡೆಸುವವರಿಗೆ ಮಠಾಧಿಪತಿ, ಪೀಠಾಧಿಪತಿ ಯಾ ಸ್ವಾಮೀಜಿ ಎಂದು ಬಹಳ ಗೌರವದಿಂದ ಸಂಬೋಧಿಸಲಾಗುತ್ತದೆ. ಆಯಾ ಮಠದ ಸ್ವಾಮೀಜಿಗಳ ಹೆಸರಿನ ಮುಂದೆ ಶ್ರೀ ಎಂಬ ಸಂಬೋಧೆಯು ಸರ್ವೇ ಸಾಮಾನ್ಯ. ಶ್ರೀ ಎಂಬುದು ಅವರ ಜ್ಞಾನ, ಧರ್ಮಪರವಾದ ನಿಷ್ಠೆ, ಅಲೌಕಿಕ ಚಿಂತನೆ, ಪಾರಮಾರ್ಥಿಕತೆಯ ಸೂಚಿಯಾಗಿಯೇ ಬಳಸಲಾಗುತ್ತದೆ. ಶ್ರೀ ಎಂದರೆ ಸಂಪತ್ತು ಎಂದರ್ಥ, ಇಂತಹ ಜ್ಞಾನ ಸಂಪತ್ತನ್ನು ಒಳಗೊಂಡಾತ ಪರಮಪೂಜ್ಯ ಎಂದೆಣಿಸಿಕೊಳ್ಳುತ್ತಾನೆ. ಇಂತಹ ಪೂಜ್ಯ ಭಾವವೂ ಧರ್ಮೈತಿಹಾಸದ ಪೀಠದೊಂದಿಗೂ, ಅದರಲ್ಲಿ ಅಸೀನರಾದ ವರ್ತಮಾನದ ಗುರುವಿಗೂ ಸೂಚ್ಯವಾಗಿಯೇ ಇರುತ್ತದೆ. ಧರ್ಮಾನುಷ್ಠಾನ, ನಿತ್ಯ ಕರ್ಮಾನುಷ್ಠಾನ, ಧಾರ್ಮಿಕ ವಿವೇಚನೆ, ಸಮಾಜಕ್ಕೆ ಸನ್ಮಾರ್ಗ ದರ್ಶನ, ತತ್ವಬೋಧೆ, ಪಾಂಡಿತ್ಯ ತಾವು ನಂಬಿರುವ ದೈವಿಕತೆಯಲ್ಲಿ ತಲ್ಲೀನತೆ, ಜಪ, ತಪ ಅನುಷ್ಠಾನಗಳು ಹೀಗೆ ಪ್ರತಿಯೋರ್ವ ಸ್ವಾಮೀಜಿಯ ಬದುಕು ಒಂದು ಅಲೌಕಿಕ ಭಾವದಲ್ಲಿ ತಲ್ಲೀನರಾಗಿಬಿಡುವುದೇ ಆಗಿದೆ.
ಪ್ರಸ್ತುತ ಮಳೆಗಾಲದ ನಾಲ್ಕು ತಿಂಗಳ ಕಾಲ(ವರ್ತಮಾನದಲ್ಲಿ ಕಡಮೆ) ಚಾತುರ್ಮಾಸ್ಯ ವೃತಾನುಷ್ಠಾನವೂ ಬಹಳ ಬಹಳ ಮುಖ್ಯವಾದ ಅಂಶವೇ ಆಗಿದೆ. ಭಕ್ತರಿಂದ ಬಹಳ ದೂರ ಉಳಿದು ಜಪತಪದೊಂದಿಗೆ ವೃತಾನುಷ್ಠಾನದಲ್ಲಿ ಗುರುವರ್ಯರು ಸತತವಾಗಿ ತೊಡಗುವುದು ಹಿಂದೂ ಧಾರ್ಮಿಕತೆಯ ವಿಶೇಷತೆಗಳಲ್ಲಿ ಒಂದು. ನಾಲ್ಕು ತಿಂಗಳ ಆ ತಪಸ್ಸಿನ ಶಕ್ತಿಯನ್ನು ಲೋಕದ ಕಲ್ಯಾಣ, ಮಾರ್ಗದರ್ಶನಕ್ಕಾಗಿ ವಿನಿಯೋಗಿಸುವುದು ವಾಡಿಕೆ. ಇದು ನಮ್ಮ ಪರಂಪರೆಯ ಅನೂಹ್ಯತೆಗಳಲ್ಲೂ ಒಂದು. ಇಂದು ಎಷ್ಟು ಮಂದಿ ಮಠಾಧೀಶರು ಇಂತಹ ಕಠಿಣ ವೃತಾನುಷ್ಠಾನ ತೊಡಗುತ್ತಾರೆ ಎಂಬುದು ಅರಿಯದ ಮಾತು, ಆದರೆ ತಪಸ್ಸು ಎಂಬುದು ಮಠಾಧೀಶನ ಶಕ್ತಿ ಎಂಬುದಂತೂ ಸತ್ಯ. ತಪಶ್ಯಕ್ತಿಯಲ್ಲಿ ಕಂಡ, ತಾವು ಅರಿತ ಸತ್ಯವನ್ನು ಜನರ ಮುಂದೆ ಇಡುವುದೇ ಇದರ ಉದ್ದೇಶವಾಗಿದೆ. ಕೆಲ ಸ್ವಾಮೀಜಿಗಳು ದೈವಾಂಶ ಸಂಭೂತರೆಂಬ ಖ್ಯಾತಿಯನ್ನೂ ಹೊತ್ತಿರುತ್ತಾರೆ. ದೇಶದ ಧಾರ್ಮಿಕ ಇತಿಹಾಸದಲ್ಲಿ ಸ್ವಾಮೀಜಿಗಳಲ್ಲೂ ಒಗ್ಗಟ್ಟು, ಪರಸ್ಪರ ಸಹೃದಯತೆ, ಹೃದಯ ವೈಶಾಲ್ಯತೆಯೊಂದಿಗೆ ಶಾಂತಿಪಥವನ್ನು ಕಂಡಿದ್ದೇವೆ. ಸೈದ್ಧಾಂತಿಕತೆಯ ವಿಭಿನ್ನತೆಯೊಂದಿಗೆ ಬೌದ್ಧಿಕ ವಿಚಾರಧಾರೆಗೆ ಪರಸ್ಪರ ಸುಜ್ಞಾನವೃದ್ಧಿಗೆ ತಮ್ಮನ್ನೆಳೆದ ಪೀಠಾಧೀಶರ ಪರಂಪರೆಯನ್ನು ನಾಡು ಕಂಡಿದೆ.
ದೇಶದ ಅದೇಷ್ಟೋ ಭವ್ಯತೆಯಲ್ಲಿದ್ದ ಸಾಮ್ರಾಜ್ಯಗಳು ಹುಟ್ಟಿ, ಬೆಳೆದು ಅಳಿದು ಹೋಗಿದ್ದರು, ಒಂದು ಮಠ, ಒಂದು ಪೀಠ, ಅಲ್ಲಿರುವ ದೈವಿಕ ಶಕ್ತಿ ಅಳಿಯದೆ ನಿಶ್ಚಲವಾಗಿ ಉಳಿದಿದೆ. ಕೆಲ ಸ್ಥಾನ, ಸ್ಥಳ ಪಲ್ಲಟಗಳಾಗಿದ್ದರೂ ಪೀಠದ ಶಕ್ತಿಯಿಂದ ಹಲವು ಸಹಸ್ರ ವರ್ಷಗಳಿಂದ ಸಮಾಜಕ್ಕೆ ನಿರಂತರ ಬೆಳಕಾಗಿ, ಮಾರ್ಗದರ್ಶನ ನೀಡುತ್ತಾ ಬರುತ್ತಿರುವ ಮಠಗಳಿವೆ. ಮಠ ಪರಂಪರೆಯೂ ಹಿಂದೂ ಧಾರ್ಮಿಕತೆಯ ಶಕ್ತಿ. ಅಜ್ಞಾನ, ಅಂಧಕಾರ, ಸಮಾಜದಲ್ಲಿರುವ ಅಪನಂಬಿಕೆಗಳನ್ನು ಹೋಗಲಾಡಿಸಿ, ಸತ್ಪಥದಲ್ಲಿ ನಡೆಯುವಂತೆ ಮಾಡುವುದು ಮಠ ಮತ್ತು ಮಠಾಧೀಶರ, ಪೀಠಾಧಿಪತಿಗಳ ಮುಖ್ಯ ಉದ್ದೇಶವೂ ಹೌದು. ಕರ್ನಾಟಕ ರಾಜ್ಯವನ್ನೇ ತೆಗೆದುಕೊಳ್ಳುವುದಾದರೆ ಇಲ್ಲಿ ಹಲವಾರು ಮಠಗಳಿವೆ, ಹಲವು ಸಹಸ್ರ ಮಂದಿ ಮಠಾಧೀಶರುಗಳಿದ್ದಾರೆ, ವಿಭಿನ್ನ ಧಾರ್ಮಿಕ ಸೈದ್ಧಾಂತಿಕತೆಯ ಮೂಲಕ ಜನರಲ್ಲಿ ಮೌಲ್ಯ ಬಿತ್ತುವ ಕೆಲಸ, ಕಾಯಕಗಳು ಆಗುತ್ತಿವೆ. ದಕ್ಷಿಣ ಕರಾವಳಿಯಲ್ಲಿರುವ ಉಡುಪಿಯ ಅಷ್ಟಮಠ ಪರಂಪರೆ, ಗಡಿನಾಡು ಕಾಸರಗೋಡಿನ ಎಡನೀರು ಮಠ, ಕರ್ನಾಟಕದ ಹೃದಯಭಾಗದಲ್ಲಿರುವ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಮಠ, ಉತ್ತರ ಕರ್ನಾಟಕದ ಹಲವು ಲಿಂಗಾಯತ ಮಠ ಪರಂಪರೆ, ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿಯ ಶಾರದಾ ಪೀಠ ಹೀಗೆ ಹತ್ತು ಹಲವು ಮಠಗಳು ಜಾತಿ, ಮತ ಬೇಧವಿಲ್ಲದೆ ಎಲ್ಲ ವರ್ಗಗಳನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತಿವೆ ಎಂದರೆ ತಪ್ಪಾಗದು.
ಮೇಲೆ ಹೆಸರಿಸಿದ ಎಲ್ಲಾ ಮಠಗಳದು ಬೇರೆ ಬೇರೆ ಧಾರ್ಮಿಕ ಸೈದ್ಧಾಂತಿಕತೆಯೇ, ಒಂದು ಮಠ ದ್ವೈತ ಮತ ಸಿದ್ಧಾಂತವನ್ನು ಪ್ರಚುರಪಡಿಸಿದರೆ, ಮಗದೊಂದು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಒಂದು ಮಠ ವಿಷ್ಣುವೇ ಸರ್ವೋತ್ತಮ ಎಂದರೆ, ಮತ್ತೊಂದು ಮಠ ಹರಿಹರರಲ್ಲಿ ಯಾವುದೇ ಬೇಧಗಳಿಲ್ಲ ಎಂಬದುನ್ನು ಪ್ರತಿಪಾದಿಸುತ್ತದೆ, ಮಗದೊಂದು ಮಠ ಕೇವಲ ಶಿವನೇ ಎಲ್ಲಾ ಎಂದರೆ ಇನ್ನೊಂದು ಮಠ ಪರಂಪರೆ ಪಂಚಯಾತನ ಪದ್ಧತಿಯ ಮೂಲಕ ಎಲ್ಲಾ ದೇವರುಗಳನ್ನು ಸಮನಾಗಿ ಕಾಣು ಎಂಬ ವಾಣಿಯನ್ನು ಪ್ರತಿಪಾದಿಸುತ್ತದೆ. ಒಂದು ಮಠ ಕಾಯಕಕ್ಕೆ ಹೆಸರಾದರೆ, ಮಗದೊಂದು ಸಂಸ್ಕೃತದ ಕರ್ಮಸಿದ್ಧಾಂತವನ್ನು ಹೇಳುತ್ತದೆ. ಹೀಗೆ ಬಹಳ ಭಿನ್ನ, ವಿಭಿನ್ನ ಧಾರ್ಮಿಕ ದೃಷ್ಠಿಕೋನ, ಸೈದ್ಧಾಂತಿಕತೆ, ಲೌಕಿಕ, ಅಲೌಕಿಕ ಜ್ಞಾನದ ಪರಿಧಿಯನ್ನು ಹೊತ್ತಿದ್ದರೂ ತಾವು ಇರಿಸಿದ ದೈವಿಕ ಪರಿಕಲ್ಪನೆಯಲ್ಲಿ ಶ್ರದ್ಧೆ, ವಿಶ್ವಾಸ ಇರಿಸಿ, ಮುನ್ನಡೆಯುತ್ತಿರುವುದರಿಂದ ಮಠಾಧೀಶರು ನಾಡಿನ ಏಳಿಗೆಗೆ ಕಾರಣೀಭೂತವೂ ಹೌದು. ಎಲ್ಲವನ್ನು ಪ್ರಶ್ನಿಸುವ ವ್ಯಕ್ತಿಗೆ ಇದ್ಯಾಕೆ ಹೀಗೆ ಎನ್ನುವುದಕ್ಕೂ ಉತ್ತರವಿದೆ!! ಆದರೆ ಇಲ್ಲಿ ಪ್ರಸ್ತಾಪಿಸಲೇಬೇಕಾದ್ದು ಕೆಲ ಮಠಗಳು ಯಾಕೆ ಸಂಕುಚಿತವಾಗುತ್ತಿವೆ? ಎಂಬ ಪ್ರಶ್ನೆ. ತನ್ನ ಧಾರ್ಮಿಕ ಇತಿಹಾಸದ ಹೊರತಾಗಿಯೂ, ಕೆಲ ಪೀಠಾಧಿಪತಿಗಳು ಯಾಕೆ ಒಂದು ಜಾತಿಗೆ ಸೀಮಿತವಾಗುತ್ತಿದ್ದಾರೆ ಎಂಬುದು. ಮಾನವೀಯ ಮೌಲ್ಯ, ದಾರ್ಶನಿಕತೆ, ಜ್ಞಾನದ ಹರಿವನ್ನು ಎಲ್ಲರಲ್ಲೂ ಹರಿಸಬೇಕಾದ ಕೆಲ ಮಠಾಧೀಶರು ಕೇವಲ ಒಂದು ಜಾತಿಗೋ, ಅಥವಾ ಉಪಜಾತಿಗೋ ಅಂಟಿಕೊಂಡು ಸಂಕುಚಿತಗೊಳ್ಳುತ್ತಿದ್ದಂತೆ ಕಾಣುತ್ತದೆ. ಹಲವಾರು ಬಾರಿ ತಮ್ಮ ಹೃದಯ ವೈಶ್ಯಾಲ್ಯತೆಯಲ್ಲಿ ಮೆರೆಯಬೇಕಾದವರು ಬಹಳ ಸಣ್ಣವರಾಗುತ್ತಿದ್ದಾರೋ ಎಂಬಂತೆ ಭಾಸವಾಗಿಬಿಡುತ್ತದೆ. ಪ್ರತಿ ಮಠದ ಪರಂಪರೆಯ ಆಧಾರದಲ್ಲಿ ಅಲ್ಲಿಗೆ ಅಗಣಿತ ಭಕ್ತ ಸಮೂಹ ಬರುತ್ತದೆ, ಪೀಠದ ಶಕ್ತಿಯಾನುಸಾರ ಭಕ್ತರಿಂದ ಗುರು ದಕ್ಷಿಣೆ, ಕಾಣಿಕೆಗಳು ಹರಿದು ಬರುತ್ತವೆ, ಹೀಗೆ ಸಣ್ಣ ಮಠ ಭೌತಿಕವಾಗಿ ಬೆಳೆಯುತ್ತದೆ. ಬೆಳೆದಂತೆ ಮಠದ ವರಮಾನ ಜಾಸ್ತಿಯಾಗಿಬಿಡುತ್ತದೆ. ಭಕ್ತರು ಹೆಚ್ಚಿದಂತೆ ಮಠದ ವರಮಾನಗಳು ಹೆಚ್ಚುವುದು ಸಹಜ ಪ್ರಕ್ರಿಯೆಯ ಭಾಗ, ಆದರೆ ಪೀಠಾಧಿಪತಿ, ಅಥವಾ ಮಠಾಧಿಪತಿಗಳು ಅಲ್ಲಿನ ಲೌಕಿಕ ಆಸೆ, ಆಕಾಂಕ್ಷೆ, ದೂರದಲ್ಲಿ ಕಾಣುವ ರಾಜಕೀಯ ವ್ಯಾಮೋಹಗಳಿಗೆ ಬಲಿಯಾಗಿ, ತನ್ನ ಜಾತಿಗೆ ಅಂಟಿಕೊಂಡರೆ ಹೇಗೆ ಎನ್ನುವ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ. ಎಲ್ಲಾ ರಾಜಕೀಯ ಪಕ್ಷಗಳನ್ನು ಸಮನಾಗಿ ಕಂಡು, ರಾಜಕೀಯ ನಾಯಕರಿಗೆ ಮಾರ್ಗದರ್ಶನ ಮಾಡಬೇಕಾದ ಕೆಲ ಮಠಾಧಿಪತಿಗಳು ರಾಜಕೀಯ ನೇತಾರನ ದಾಳಕ್ಕೆ ಉರುಳುತ್ತಿರುವುದು ದುರ್ವೈವ. ಶೃಂಗೇರಿಯಂತಹ ಮೇರು ಮಠ ವಿದ್ಯಾರಣ್ಯರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೂ ಕಾರಣೀಭೂತವಾಗಿತ್ತು. ಹಕ್ಕಬುಕ್ಕರಿಗೆ ಮಾರ್ಗದರ್ಶನ ಮಾಡಿದವರು ಸ್ವಯಂ ವಿದ್ಯಾರಣ್ಯರು. ಹೀಗೆ ಮಠದ ಇತಿಹಾಸವೂ ನಮ್ಮ ಭವ್ಯ ಚರಿತ್ರೆಯ ಭಾಗವಾಗಿಯೇ ಇದೆ. ಇಂದು ಶೃಂಗೇರಿ ಮಠ ಇತರೆ ಎಲ್ಲಾ ಮಠಗಳಿಗೆ ಮಾರ್ಗದರ್ಶಿಯೂ ಹೌದು. ಕರ್ಮ, ಧರ್ಮದ ಅನುಷ್ಠಾನದಿಂದ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಿದೆ. ಸಿದ್ಧಗಂಗಾ ಮಠವೂ ದಾಸೋಹ, ಶಿಕ್ಷಣದಿಂದ ಮಾರ್ಗದರ್ಶಿ ಎನಿಸಿದೆ. ಇಂತಹ ಮಠಗಳಿಂದ ಪ್ರೇರಣೆ ಪಡೆದು ಇತರ ಮಠಗಳು ಬೆಳೆಯಬೇಕಾದ ಕಾಲವಿದು.
ಸ್ವಾಮೀಜಿಗಳು ಸಮಾಜಕ್ಕೆ, ಭಕ್ತರಿಗೆ ದೇವರ ಸಮಾನರು. ಭಕ್ತರಲ್ಲಿ ಆಸ್ತಿಕತೆಯನ್ನು ಬೆಳೆಸಿ, ಸತ್ಪಥವನ್ನು ನೀಡುವ ಸತ್ಕಾರ್ಯ ನಿರಂತರವಾಗಿ ಮುನ್ನಡೆಯಬೇಕಿದೆ. ಜಾತಿಯ ಎಲ್ಲೆಯನ್ನು ಮೀರಿ ಮುನ್ನಡೆಯಬೇಕಿದೆ. ಇತ್ತೀಚೆಗೆ ಜಾತಿಗೊಬ್ಬ ಸ್ವಾಮೀಜಿಯನ್ನು ಕಾಣುವ ದುರ್ದೈವವೂ ಎದುರಾಗಿದೆ. ಜಾತಿಗೆ ಓರ್ವ ರಾಜಕೀಯ ನೇತಾರ, ಜಾತಿಗೆ ಓರ್ವ ಸ್ವಾಮಿಯಿದ್ದರಷ್ಟೇ ನಮ್ಮ ಜಾತಿ ಶ್ರೇಷ್ಠ ಎನ್ನುವ ಅಪನಂಬಿಕೆಯನ್ನು ಬಿತ್ತಿ ಬೆಳೆಸಲಾಗುತ್ತಿದೆ. ಓರ್ವ ಸ್ವಾಮೀಜಿ ಅಥವಾ ಪೀಠಾಧಿಪತಿ ಯಾವ ಜಾತಿ ಎನ್ನುವುದು ಮುಖ್ಯವಲ್ಲ, ಬದಲು ಸ್ವಾಮೀಜಿ ಎಂದು ಕರೆಸಿಕೊಳ್ಳುವ ವ್ಯಕ್ತಿಯ ಕರ್ಮ, ಧರ್ಮನಿಷ್ಠೆ ಅತಿ ಮುಖ್ಯವಾಗುತ್ತದೆ. ಧನಕನಕಗಳ ಒತ್ತಾಸೆಗಳಿಗೆ ಬಲಿಯಾಗಿ ಎಳೆ ಕಂದನನ್ನು ಪೀಠಾಧಿಯನ್ನಾಗಿಸುವ ಧಾವಂತವೂ ಕೆಲವೆಡೆಯ ಮಾತಾಪಿತೃಗಳಲ್ಲಿ ಸಾದೃಶವಾಗುವಂತಿದೆ.
ದೇಶದೆಲ್ಲೆಡೆ ಗುರು ಪರಂಪರೆಯನ್ನು ಶ್ರೇಷ್ಠ ಎಂದು ಅಂಗೀಕರಿಸಿದವರು ಭಾರತೀಯರು. ಸದ್ಗುರು, ಸ್ವಾಮೀ, ಪೀಠಾಧಿಪತಿ, ಗುರುವರ್ಯ, ಯೋಗಿ, ಆಚಾರ್ಯ, ಸಂತ, ಧರ್ಮಾಧಿಕಾರಿ, ಮಹರ್ಷಿ, ತಪಸ್ವಿ ಹೀಗೆ ಹಲವು ರೀತಿಯಲ್ಲಿ ಸಂಬೋಧಿಸಲ್ಪಡುವ ಮಠಾಧೀಶರು, ಧಾರ್ಮಿಕ ಮುಂದಾಳುಗಳು ಸಮಾಜಕ್ಕೆ ಬೆಳಕಾಗಬೇಕು, ತಾವು ನಂಬಿರುವ ಚಿಂತನೆ, ದೈವಿಕತೆಯಲ್ಲಿ ಅದಮ್ಯ ವಿಶ್ವಾಸದೊಂದಿಗೆ ಧಾರ್ಮಿಕ ಮೌಲ್ಯಗಳನ್ನು ಜನಮಾನಸದಲ್ಲಿ ಇನ್ನಷ್ಟೂ, ಮತ್ತಷ್ಟೂ ಬಿತ್ತಬೇಕಿದೆ.
ಇತಿಹಾದುದ್ದಕ್ಕೂ ದೇಶದಲ್ಲಿ ಸಂತರು, ಸ್ವಾಮೀಜಿಗಳು, ಆಧ್ಯಾತ್ಮಿಕ ಗುರುಗಳು ಸಮಾಜವನ್ನು ಮತ್ತು ಸಮೂಹವನ್ನು ಧನಾತ್ಮಕವಾಗಿ ಪರಿವರ್ತಿಸಿದ್ದಾರೆ. ಇಂತಹ ಮಹಾಮುನಿಗಳಲ್ಲಿ ಹಲವು ಮಂದಿ ಇದ್ದಾರೆ. ಮಹಾರಾಷ್ಟ್ರದ ಸಂತ ಸಮರ್ಥ ರಾಮದಾಸರು, ಶೃಂಗೇರಿ ಮಠದ ಯತಿಗಳಾಗಿದ್ದ ವಿದ್ಯಾರಣ್ಯರು, ಆಧುನಿಕ ಕಾಲಘಟ್ಟದಲ್ಲಿ ಧಾರ್ಮಿಕ ದರ್ಶನ ಬೋಧೆಗಳನ್ನು ನೀಡಿದ ಕಾಂಚಿ ಕಾಮಕೋಟಿ ಮಠದ ಯತಿವರ್ಯರಾದ ಚಂದ್ರಶೇಖರ ಸರಸ್ವತಿ ಸ್ವಾಮೀಜಿ, ಶೃಂಗೇರಿ ಮಠದ ಯತಿವರ್ಯರಾಗಿದ್ದ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು, ಪೇಜಾವರ ಮಠಾಧೀಶರಾದ ವಿಶ್ವೇಷತೀರ್ಥರು ಹೀಗೆ ಹಲವು ಮಂದಿ ಸಮಾಜವನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿದ್ದಾರೆ. ಯತಿ ಪರಂಪರೆ, ಸ್ವಾಮೀಜಿಗಳು ಮಾಡಿದ ತಪೋನುಷ್ಠಾನ ಸಮಾಜದ ಶ್ರೇಯೋಭಿವೃದ್ಧಿಗೆ ಆಗಿದೆ. ಅಂದಂದಿನ ಕಾಲಮಾನಕ್ಕೆ ಅನುಗುಣವಾಗಿ ಇದು ಸರಿಯಾದ ದಿಶೆ ಎಂದು ಮನಗಂಡು ದೇಶದ ಉದ್ದಗಲ್ಲಕ್ಕೂ ಸಾಗಿ ಜನರಲ್ಲಿ ಧಾರ್ಮಿಕ ಬೋಧೆ ಮೂಡಿಸಿದವರಲ್ಲಿ ಅಗ್ರಗಣ್ಯರು ಸಮರ್ಥ ರಾಮದಾಸರು. ಅವರ ಜೀವನ ಚರಿತ್ರೆಯೂ ಒಂದು ವಿಶೇಷ ಪ್ರೇರಣೆ ನೀಡುತ್ತದೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ಗುರುವಾಗಿ ಮಾಡಿದ ಮಾರ್ಗದರ್ಶನದಿಂದ ಹಿಂದೂ ಸಮಾಜದ ಪರಿವರ್ತನೆ ಅಂದು ಸಾಧ್ಯವಾಗಿತ್ತು. ಮಹರ್ಷಿ ರಮಣರದೂ ಅನನ್ಯ ಧಾರ್ಮಿಕ ಬದುಕು, ಕರ್ಮಯೋಗ, ಆಧ್ಯಾತ್ಮದಲ್ಲಿ ಮಿಂದೆದ್ದ ಇವರು ದೀನರ ಏಳಿಗೆಯೊಂದಿಗೆ ಎಲ್ಲರಲ್ಲೂ ಧಾರ್ಮಿಕ ಬೋಧೆಯ ಜೊತೆ ಜೊತೆಯಲ್ಲಿ ಯೋಗಾನುಷ್ಠಾನದ ಬಗ್ಗೆ ಅರಿವನ್ನು ಮೂಡಿಸಿದ್ದರು. ಕಾಂಚಿಪೀಠದ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ಸ್ವಾತಂತ್ರ್ಯಪೂರ್ವದಲ್ಲಿ ದೇಶದ ಉದ್ದಗಲಕ್ಕೂ ಸಂಚರಿಸಿ, ವೇದ, ವೇದಾಂಗ, ಶಂಕರಾಚಾರ್ಯರ ತತ್ವಗಳ ಬಗ್ಗೆಗಿನ ಅರಿವು ಮೂಡಿಸಿ, ಸನ್ಮಾರ್ಗದ ಮಹತ್ವವನ್ನು ತಿಳಿ ಹೇಳಿದರು. ಹಲವೆಡೆ ವೇದಪಾಠಶಾಲೆಗಳನ್ನು ಆರಂಭಿಸಿ ಶಂಕರಾಚಾರ್ಯರ ಅದ್ವೈತ ತತ್ವಗಳನ್ನು ಸ್ವಯಂ ಬೋಧಿಸಿದರು. ಇಂದು ಕಾಂಚಿಯಲ್ಲಿ ಶ್ರೀ ಸ್ವಾಮಿಗಳನ್ನು ವಿಶೇಷ ದೈವಾಂಶಸಂಭೂತರಾಗಿ ಪರಿಗಣಿಸಲಾಗಿದೆ.
ಸ್ವಾಮೀಜಿಗಳ ಸಮಾಧಿ ಸ್ಥಳದಲ್ಲಿ ಭವ್ಯ ದೇಗುಲದ ನಿರ್ಮಾಣವು ನಡೆಯುತ್ತಿದೆ. ಪೇಜಾವರ ಶ್ರೀ ವಿಶ್ವೇಶತೀರ್ಥರು ಆಧುನಿಕ ಸಮಾಜದಲ್ಲಿ ಹಿಂದೂ ಧಾರ್ಮಿಕತೆಯ ಮಹತ್ವ, ಸಮಾನತೆಗಾಗಿ ಬಹಳ ಶ್ರಮಿಸಿದ ಶ್ರೀಗಳು. ದಲಿತ ಕೇರಿಯ ಭೇಟಿ, ಸಹಭೋಜನದ ಮೂಲಕ ಸಮಾಜದಲ್ಲಿ ಸಹೃದಯೀ ಭಾವವನ್ನು ಬಿತ್ತಿದ ವ್ಯಕ್ತಿತ್ವ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಧಾರ್ಮಿಕ ಸೈದ್ಧಾಂತಿಕ ನಿಲವುಗಳು ವಿಭಿನ್ನವಾಗಿದ್ದರೂ ಎಲ್ಲರ ಧ್ಯೇಯ ಒಂದೆ- ಅದು ಧಾರ್ಮಿಕ ಐಕ್ಯತೆ ಮತ್ತು ಸಮಾನತೆ ಎಂದು ಸಾರಿದ ವ್ಯಕ್ತಿತ್ವ ಪೇಜಾವರ ಶ್ರೀಗಳದ್ದು. ಇನ್ನು ಮಠಗಳಿಂದ ಪಾರಂಪರಿಕ ಸಂಸ್ಕೃತ, ವೇದಾಧ್ಯಯನದೊಂದಿಗೆ ಆಧುನಿಕ ಶಿಕ್ಷಣಕ್ಕೂ ಒತ್ತು ನೀಡಿದ ಸಂತರುಗಳು ಹಲವು ಮಂದಿ ಇದ್ದಾರೆ. ಇದರಲ್ಲಿ ಉಲ್ಲೇಖಿಸಲೇಬೇಕಾದ್ದು ಆದಿಚುಂಚನಗಿರಿ ಮಠದ ಸ್ವಾಮೀಜಿಗಳು, ಹಲವು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸಮಾಜೋದ್ಧಾರದ ಜೊತೆ ಸೇವೆಯತ್ತ ಚಿತ್ತ ಹರಿಸುವ ವಿದ್ಯಾರ್ಥಿ ಸಮೂಹದ ಸೃಷ್ಠಿಯೂ ಮಠಾಧೀಶರಿಂದ ಆಗಿದೆ. ಇಂತಹ ಅಗಣಿತ ಮಠಾಧೀಶರುಗಳ ಬಳಗ ನಮ್ಮ ಸಮಾಜದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ ಎಂದರೆ ತಪ್ಪಾಗದು.
ಕರ್ಮಬೋಧೆಯೊಂದಿಗೆ, ಜ್ಞಾನಬೋಧೆಗೆ ಸಾಕ್ಷಿಯಾದ ದೇಶ ಮತ್ತು ನಾಡಿನ ಮಠ ಪರಂಪರೆಯು ವಿಸ್ತರವಾಗಲಿ, ಸಂಕುಚಿತಯಿಂದ ಹೊರಬಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯ ಹಾದಿಯತ್ತ ಮುಖಮಾಡಬಲ್ಲ ಸದೃಢ ಸಮಾಜದ ನಿರ್ಮಾಣ ನಿರಂತರವಾಗಿ ಸ್ವಾಮೀಜಿ, ಸಂತರಿಂದ ಸಾಧ್ಯವಾಗಲಿ. ಜಾತಿ ವಿಜಾತಿ ಎನ್ನದೆ ಸಕಲರ ಸಮಬಾಳ್ವೆಯ ಚಿತ್ತವನ್ನು ಎಲ್ಲಾ ಮಠಾಧೀಶರು ಹರಿಸಲಿ. ದೇಶದ ಧಾರ್ಮಿಕತೆಯ ಅನನ್ಯ ಭಾಗವಾದ ಕರ್ಮಯೋಗ, ಜ್ಞಾನಯೋಗದತ್ತ ಎಲ್ಲ ಮಠಾಧೀಶರ ಕೊಡುಗೆಯೂ ನಿರಂತರವಾಗಿ ಇರಲಿ ಎಂಬ ಸದ್ಬಯಕೆಯೊಂದಿಗೆ. ಅವಿಚ್ಛಿನ್ನ ಪರಂಪರೆಯನ್ನು ಮುನ್ನಡೆಸುತ್ತಿರುವ ಎಲ್ಲಾ ದೈವಾಂಶ ಶಕ್ತಿಗೆ ನಮೋನಮಃ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.