ಸನಾತನ ಹಿಂದೂ ಧರ್ಮದಲ್ಲಿ ಪ್ರತಿದಿನವೂ ವಿಶೇಷ ದಿನವೇ. ಹಬ್ಬ ಹರಿದಿನಗಳು ಸಡಗರದೊಂದಿಗೆ ಮನಸ್ಸಿನ ಚೈತನ್ಯ, ಉಲ್ಲಾಸಕ್ಕೆ ಕಾರಣವಾದರೆ, ಇನ್ನೂ ಕೆಲವು ಮಹತ್ವದ ದಿನಗಳು ಆಧ್ಯಾತ್ಮಿಕ ಅನುಭೂತಿಯನ್ನು ದಯಪಾಲಿಸುತ್ತವೆ. ಇಂತಹ ವಿಶೇಷ ದಿನಗಳಲ್ಲಿ ಒಂದು ಆಷಾಡ ಹುಣ್ಣಿಮೆಯಂದು ಆಚರಿಸುವ ಗುರು ಪೂರ್ಣಿಮಾ.
ಈ ದಿನದಂದು ಗುರು ವ್ಯಾಸರು ಜನಿಸಿದರು ಎಂದು ಉಲ್ಲೇಖಿಸಲಾಗಿದೆ. ಪ್ರತಿ ತಿಂಗಳ ಹುಣ್ಣಿಮೆಯೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿರುತ್ತದೆ. ವೈಶಾಖ ಹುಣ್ಣಿಮೆಯಂದು ಬುದ್ಧ ಜನಿಸಿದ ಎಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲ್ಪಟ್ಟರೆ. ಕಾರ್ತಿಕ ಹುಣ್ಣಿಮೆಯನ್ನು ಗೌರಿ ಪೂರ್ಣಿಮೆಯೆಂದು ಕರೆಯಲಾಗುತ್ತದೆ. ಪ್ರತಿ ಆಷಾಢ ಮಾಸದ ಹುಣ್ಣಿಮೆಯ ದಿನದಂದು ವೇದವ್ಯಾಸರು ಅವತರಿಸಿದರು ಎಂದು ಉಲ್ಲೇಖವಿದೆ. ಈ ದಿನದಂದು ಗುರುಹಿರಿಯರಿಗೆ ನಮಿಸುವ, ಸ್ಮರಿಸುವ, ಸತ್ಕರಿಸುವ ದಿನವಾಗಿ ಆಚರಿಸಲ್ಪಡುತ್ತದೆ. ವ್ಯಾಸ ಪೂರ್ಣಿಮಾ ಅಥವಾ ಗುರುಪೂರ್ಣಿಮಾ ಎಂದು ಇದನ್ನು ಕರೆಯಲಾಗುತ್ತದೆ. ವೇದವ್ಯಾಸರು ಪರಾಶರ ಮತ್ತು ಸತ್ಯವತಿ ದೇವಿಯ ಸುಪುತ್ರ. ಹುಟ್ಟು ಕಪ್ಪು ವರ್ಣದಿಂದ ಕೂಡಿದ್ದ ಕಾರಣ ಇವರನ್ನು ವ್ಯಾಸ ಎಂದು ಕರೆಯಲಾಯಿತು. ತಂದೆಯಂತೆ ಅಪಾರ ಜ್ಞಾನ ಹೊಂದಿದ್ದ ವ್ಯಾಸರು ಹಿಮಾಲಯಕ್ಕೆ ತೆರಳಿ ಹೆಚ್ಚಿನ ತಪಶ್ಚರ್ಯೆ ನಡೆಸಿದರು. ಈಗಲೂ ಬದರಿಕ್ಷೇತ್ರದಲ್ಲಿ ವ್ಯಾಸಗುಹೆಯಿದ್ದು, ಪೂಜ್ಯ ಭಾವದಿಂದ ನಮಿಸಲಾಗುತ್ತದೆ. ವ್ಯಾಸಗುಹೆಯಲ್ಲಿರುವ ಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಿ ಆರಾಧಿಸಲಾಗುತ್ತದೆ.
ವ್ಯಾಸಗುರು ಸಮಗ್ರ ವೇದವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಾಲ್ವರು ಶಿಷ್ಯರಿಗೆ ಬೋಧಿಸಿ, ಪ್ರಚುರಪಡಿಸಿದರು ಎಂಬ ಪ್ರತೀತಿಯಿದೆ. ನಂತರ ನಾಲ್ವರು ಮಂದಿ ವೇದಗಳನ್ನು ತಮ್ಮ ನಂತರದ ಶಿಷ್ಯವರ್ಗಕ್ಕೆ ಬೋಧಿಸಿ, ವೇದಜ್ಞಾನದ ಪರಂಪರೆಗೆ ನಾಂದಿ ಹಾಡಿದರು ಎಂದು ಹೇಳಲಾಗುತ್ತದೆ.
ಶುಭ ಕಾರ್ಯಗಳಲ್ಲಿ ಗುರುವಿನ ಉಪಾಸನೆಗೆ ಅತ್ಯಂತ ಮಹತ್ವವಿದ್ದು, ಪೂಜಾದಿ ಸಂದರ್ಭ ಗುರುವನ್ನು ಕಲ್ಪಿಸಿ ಪೂಜಿಸುವ ಕಾರ್ಯಕ್ರಮಗಳು ಇಂದಿಗೂ ನಡೆಯುತ್ತವೆ. ಭಾರತೀಯ ಪರಂಪರೆಯಲ್ಲಿ ಗುರುವಿಗೆ ದೇವರ ಸ್ಥಾನ ನೀಡಲಾಗಿದೆ. ಗುರು ಸಂಸ್ಕೃತಿಯ ದ್ಯೋತಕ ಮತ್ತು ಪ್ರೇರಣೆಯೂ ಹೌದು. ಗುರುಬ್ರಹ್ಮ, ಗುರು ವಿಷ್ಣು, ಗುರುರ್ದೇವೋ ಮಹೇಶ್ವರಃ, ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಎಂಬ ಶ್ಲೋಕವು ಗುರುವೇ ಸಾಕ್ಷಾತ್ ಪರಬ್ರಹ್ಮನ ಸ್ವರೂಪ ಎಂಬುದನ್ನು ಉಲ್ಲೇಖಿಸುತ್ತದೆ. ಇದರಲ್ಲಿ ತ್ರಿಮೂರ್ತಿ ದೇವರುಗಳ ಉಲ್ಲೇಖವೂ ಇದ್ದು- ಜ್ಞಾನ, ಕರ್ಮ, ತಪಸ್ಸಿನ ಸಂಕೇತ. ದೇಶದ ಧಾರ್ಮಿಕತೆ, ಆಧ್ಯಾತ್ಮ, ಸಹಿತ ಹಲವು ಸೈದ್ಧಾಂತಿಕೆಗಳ ಮೂಲ- ಗುರುವೇ ಆಗಿದ್ದಾರೆ. ದೇಶದ ದಾರ್ಶನಿಕತೆಗೆ ದಾರಿದೀಪವೂ ಗುರುವೇ. ಆಧುನಿಕ ಶಿಕ್ಷಣದಲ್ಲೂ ತಮ್ಮ ಬೋಧನಾ ಪ್ರತಿಭೆಯಿಂದ ಮಕ್ಕಳಲ್ಲೂ ಧನಾತ್ಮಕ ಪ್ರಭಾವ ಬೀರಿ ಬದಲಾವಣೆ ತರುವ ಶಿಕ್ಷಕರಿದ್ದಾರೆ. ಇಂತಹ ಶಿಕ್ಷಕರೂ ಕೂಡಾ ಗುರುವೇʼ. ಒಂದು ಕ್ರೀಡೆಯಲ್ಲಿ ತಮ್ಮ ಜ್ಞಾನವನ್ನೆಲ್ಲ ಧಾರೆಯೆರೆದು, ತಮ್ಮ ಶಿಷ್ಯವರ್ಗವಾದ ಯುವ ಕ್ರೀಡಾಳುಗಳಲ್ಲಿ ಮನೋಧೈರ್ಯ ತುಂಬಿ ಕ್ರೀಡಾಕಣಕ್ಕೆ ಕಳುಹಿಸಿ, ಗೆಲುವಲ್ಲಿ ಮಹತ್ತರ ಪಾತ್ರ ವಹಿಸುವವರೂ ಗುರುವೇ. ಉತ್ತರ ಭಾರತದ ಕುಸ್ತಿ ಅಖಾಡದಲ್ಲಿ ಸಾಮಾಜ್ಯವಾಗಿ ಆಂಜನೇಯನನ್ನು ಪೂಜಿಸಲಾಗುತ್ತದೆ. ಮೂಲದಲ್ಲಿ ಕುಸ್ತಿಪಟುಗಳಿಗೆ ಆಂಜನೇಯನೇ ಪ್ರೇರಣಾದಾಯಿ- ಅವ್ಯಕ್ತಗುರು, ನಂತರದಲ್ಲಿ ಗುರುವಿನ ಸ್ಥಾನವನ್ನು ಕುಸ್ತಿ ವಿದ್ಯೆ ಕಲಿಸುವ ಕೋಚ್ ನದ್ದಾಗಿರುತ್ತದೆ.
ಗುರು ಎಂದರೆ ಅಜ್ಞಾನವನ್ನು ಹೋಗಲಾಡಿಸುವಾತ ಎಂದರ್ಥ. ಮಾನವನ ಅಭ್ಯುದಯದ ಪಥವನ್ನು ಅವಲೋಕಿಸಿದರೆ, ಆತನಿಗೆ ಮೂಲದಲ್ಲಿ ಪ್ರಕೃತಿಯೇ ಗುರು. ಪ್ರಕೃತಿ ಮನುಷ್ಯನಿಗೆ ಹಲವು ರೀತಿಯ ಜ್ಞಾನವನ್ನು ಧಾರೆಯೆರೆದು, ಸಂಸ್ಕೃತಿಯೆಡೆಗೆ ನಡೆಯುವಂತೆ ಪ್ರೇರೇಪಿಸಿತ್ತು. ಗುರು ಶಿಷ್ಯನಲ್ಲಿ ತಾಳ್ಮೆ, ಸಹನೆ, ವಿಶ್ವಾಸ, ಕಾಳಜಿ, ವಿವೇಕ, ಆಸಕ್ತಿ, ಇಚ್ಛಾಶಕ್ತಿಯಂತಹ ಗುಣಗಳನ್ನು ಕಾಣ ಬಯಸುತ್ತಾನೆ ಮಾತ್ರವಲ್ಲ ಈ ಗುಣಗಳು ಬೆಳೆಯುವಂತೆ ಮಾಡುತ್ತಾನೆ. ಪ್ರಭು ಶ್ರೀಕೃಷ್ಣನ ಗುರು ಸಾಂದೀಪಿನಿ, ಪಾಂಡವರ ಮತ್ತು ಕೌರವರ ಗುರುವಾಗಿದ್ದವರು ದ್ರೋಣಾಚಾರ್ಯರು, ಏಕಲವ್ಯನಿಗೂ ದ್ರೋಣಾಚಾರ್ಯರೇ ಗುರುವಾಗಿದ್ದರು ಮಾತ್ರವಲ್ಲ, ಏಕಲವ್ಯನು ಗುರುವಿನ ಮೂರ್ತಿ ನಿರ್ಮಾಣ ಮಾಡಿ ಅವ್ಯಕ್ತ ಗುರುವಿನ ಆಶ್ರಯದಲ್ಲಿ ಬಿಲ್ವೆದ್ಯೆಯನ್ನು ಕಲಿತ ಕೀರ್ತಿ ಹೊಂದಿದ್ದಾನೆ. ತನ್ನ ಹೆಬ್ಬೆರಳನ್ನು ಕತ್ತರಿಸಿ ಗುರು ದಕ್ಷಿಣೆಯಾಗಿ ನೀಡಿ ಸಮರ್ಪಣಾಭಾವವನ್ನು ಮೆರೆದ ಕೀರ್ತಿಯೂ ಏಕಲವ್ಯನದು. ವಶಿಷ್ಠರು ಪ್ರಭು ಶ್ರೀರಾಮಚಂದ್ರನ ಗುರುವಾಗಿದ್ದವರು. ಶ್ರೀರಾಮನಲ್ಲಿ ಕ್ಷಾತ್ರಗುಣ ಅವಿರ್ಭವಿಸುವಂತೆ ಮಾಡಿದ ಕೀರ್ತಿಯೂ ವಶಿಷ್ಠರದ್ದಾಗಿದೆ.
ಇನ್ನು ವಿದ್ಯೆಯನ್ನು ಕಲಿಯಲು ಬಂದ ಶಿಷ್ಯರನ್ನು ಅವರ ತಾಳ್ಮೆ ಸಹನೆ ಪರೀಕ್ಷೆಗಾಗಿ ಹಲವು ಸವಾಲುಗಳನ್ನು ನೀಡಿದವರು ಗುರುಗಳೇ. ಶಿಷ್ಯನನ್ನು ದನ ಕಾಯಲು ಕಳುಹಿಸಿ ನಿರ್ದಿಷ್ಟ ಸಂಖ್ಯೆ ತಲುಪಿದಾಗ ಆಶ್ರಮಕ್ಕೆ ಬರಬಹುದು ಎಂದು ಕಳುಹಿಸಿದ ಗುರುವೂ ಶಿಷ್ಯನ ಅಂತಃಕರಣ, ಆತ್ಮಪರೀಕ್ಷೆ ಮಾಡಿದ ಸನ್ನಿವೇಶಗಳನ್ನು ಭಾರತೀಯ ಪುರಾಣಗಳಲ್ಲಿ ಕಾಣಬಹುದಾಗಿದೆ.
ಭಾರತೀಯ ದಾರ್ಶನಿಕತೆಯಲ್ಲಿ ಗುರುವಿಗೆ ವಿಶೇಷ ಸ್ಥಾನ ಕಲ್ಪಿಸಿದವರು ಶೈವ ಮತ್ತು ಬೌದ್ಧ ಸಿದ್ಧರು. ಶೈವ ಸಿದ್ಧರು ತಮ್ಮ ಗುರುವಾಗಿ ಶಿವನನ್ನು ಸ್ವೀಕರಿಸಿ, ಆತನ ಮೂರ್ತಿಯನ್ನು ತಮ್ಮ ಜಟೆಯಲ್ಲಿಟ್ಟರೆ, ಬೌದ್ಧ ಸಿದ್ಧರು ತಥಾಗತನ ಕಲ್ಪಿತ ಮೂರ್ತಿಯನ್ನು ಜಟೆಯಲ್ಲಿಟ್ಟು ಪೂಜಿಸಿ, ಆದರಿಸಿದರು. ಇದರೊಂದಿಗೆ ಅವ್ಯಕ್ತ ಅಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸಿದರು ಎಂದು ಚರಿತ್ರೆಗಳಲ್ಲಿ ಉಲ್ಲೇಖವಿದೆ. ನಾಥ ಪರಂಪರೆಯಲ್ಲಿ ಬಂದಂತಹ ಗೋರಕನಾಥ ಮತ್ತು ಮತ್ಸೇಂದ್ರನಾಥರು ಶಿವನ ದೈವತಾ ಮೂರ್ತಿಯನ್ನು ಜಟೆಯಲ್ಲಿ ಹೊತ್ತಿದ್ದರು ಮಾತ್ರವಲ್ಲ ಆದಿದೇವ ಜ್ಞಾನಕ್ಕೆ ಸಮಾನ ಎಂಬ ಕಲ್ಪನೆಯ ಮೂಲಕ ಸೂಕ್ತ ಸಮಯದಲ್ಲಿ ಪೂಜಿಸುತ್ತಿದ್ದರು. ಹೆಚ್ಚಾಗಿ ಅವರ ಧ್ಯಾನ, ಜಪ ತಪಗಳಲ್ಲೂ ಈ ಅವ್ಯಕ್ತ ಗುರುವಿನ ಧ್ಯಾನ ಮತ್ತು ಸ್ಮರಣೆಯಿತ್ತು.
ಹೀಗೆ ಹಲವು ವಿಶೇಷತೆಗಳೊಂದಿಗೆ ಸಮಾಜ ಸಮುದಾಯಗಳಿಗೆ ವಿಶೇಷ ತತ್ವಜ್ಞಾನದ ಧಾರೆ ಎರೆದು, ಭಕ್ತಿ ಅನುರಣಿಸುವಂತೆ ಮಾಡಿದ ಕೀರ್ತಿ ಆದಿ ಶಂಕರಾಚಾರ್ಯರದು. ಇವರನ್ನು ಜಗದ್ಗುರು ಎಂದು ಸಂಬೋಧಿಸಲಾಗುತ್ತದೆ. ಅದ್ವೈತ ತತ್ವದ ಗುರು ಎಂದು ಉಲ್ಲೇಖಿಸಲ್ಪಟ್ಟಿದ್ದಾರೆ. ವೇದ, ವೇದಾಂಗಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಆದಿ ಶಂಕರಾಚಾರ್ಯರು ಚತುರಾನ್ಮಯ ಮಠಗಳನ್ನು ಬದರಿ, ಸೋಮನಾಥ, ಪುರಿ, ಶೃಂಗೇರಿಗಳಲ್ಲಿ ಸ್ಥಾಪಿಸಿ ಒಂದು ಅವಿಚ್ಛಿನ್ನ ಪರಂಪರೆಗೆ ನಾಂದಿ ಹಾಡಿದರು. ಇಂದು ಹಿಂದೂ ಧರ್ಮೀಯರಿಗೆ ಈ ಪೀಠಗಳು ಬಹಳ ಪೂಜನೀಯವಾಗಿವೆ. ಅಲ್ಲಿನ ಗುರುಗಳು ಜಗತ್ತಿಗೆ ಸನ್ಮಾರ್ಗ ಮಾಡುವ ಜಗದ್ಗುರುಗಳಾಗಿದ್ದಾರೆ. ಪ್ರತಿ ಪೀಠಕ್ಕೂ ವಿಶೇಷ ಜವಾಬ್ದಾರಿಗಳನ್ನು ನೀಡಿದ ಶಂಕಾರಾಚಾರ್ಯರು ಇಂದು ಹಿಂದೂ ಧಾರ್ಮಿಕತೆ, ಆಧ್ಯಾತ್ಮದ ಮೇರು ಗುರುವಾಗಿ ಆದರಿಸಲ್ಪಡುತ್ತಾರೆ.
ಹೀಗೆ ಮಾಧ್ಯಮಕ ಶಾಖೆಯ ಗುರು ನಾಗಾರ್ಜುನ, ದ್ವೈತ ಸಿದ್ಧಾಂತ ಪ್ರಚುರಿಸಿದ ಮಧ್ವಾಚಾರ್ಯ, ಬುದ್ಧ, ಬಸವ, ಮಹಾವೀರ ಸಹಿತ ಎಲ್ಲ ತೀರ್ಥಂಕರರೂ ಗುರುವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಪತಂಜಲಿಯೂ ಯೋಗ ಗುರುವಾಗಿದ್ದು, ಯೋಗಾಸಕ್ತರು ಅರಿಯಲೇಬೇಕಾದ ಗುರುವಾಗಿದ್ದಾರೆ.
ಭಾರತೀಯ ಬೌದ್ಧಿಕತೆ, ಧಾರ್ಮಿಕತೆ, ಆಧ್ಯಾತ್ಮ, ಕಲೆ, ಸಮರಕಲೆ, ಕ್ರೀಡೆ ಹೀಗೆ ಹಲವು ಆಯಾಮಗಳಲ್ಲಿ ಗುರುವಾಗಿ ಅಂಗೀಕರಿಸಲ್ಪಟ್ಟವರು ಹಲವರು. ತಂತಮ್ಮ ಆಸಕ್ತಿಗಳಿಗೆ ಅನುಸಾರವಾಗಿ ಗುರುವಿನ ಬಳಿ ತೆರಳಿ ಜ್ಞಾನ ಅನ್ವೇಷಣೆಯ ಮೂಲಕ ವಿದ್ಯೆಯನ್ನು ಕಲಿತು, ಗುರುವಿಗೆ ತನ್ನಿಂದಾದ ಕಾಣಿಕೆ ನೀಡುವುದು ಈ ನೆಲದ ಪರಂಪರೆ. ಶಿಷ್ಯನ ಜ್ಞಾನದ ಹಸಿವನ್ನು ತಣಿಸುವ ಕಲೆಯು ಗುರುವಿಗೆ ಮಾತ್ರ ತಿಳಿದಿದೆ ವಿನಃ ಬೇರೆ ಯಾರಿಗೂ ಅಲ್ಲ. ಭಾರತೀಯ ಈ ಗುರು ಪರಂಪರೆಯನ್ನು ಸ್ಮರಿಸೋಣ, ನಮಿಸೋಣ. ಎಲ್ಲರಿಗೂ ಗುರು ಪೂರ್ಣಿಮಾ ಸತ್ಪ್ರೇರಣೆಯಾಗಲಿ. ಗುರುಭ್ಯೋ ನಮಃ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.