ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿದೆ. ವಸಾಹತುಶಾಹಿಯು ಹೆಣೆದಿದ್ದ ಸಾಂಸ್ಕೃತಿಕ ಜಾಲದಿಂದ ಬಿಡಿಸಿಕೊಳ್ಳುವಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತ ಸಫಲವಾಗಿದೆಯೇ? ಭೌತಿಕವಾಗಿ ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ ಬೌದ್ಧಿಕವಾಗಿ ಸಂಪೂರ್ಣ ಬಿಡುಗಡೆಯನ್ನು ಪಡೆದಿದೆಯೇ? ಪಶ್ಚಿಮ ಹುಟ್ಟುಹಾಕಿದ ವಸಾಹತುಶಾಹಿ ಯಜಮಾನಿಕೆ ನಮ್ಮ ಬುದ್ದಿಯನ್ನು ಇಂದಿಗೂ ಆಳುತ್ತಿದೆಯೇ? ಸ್ವಾತಂತ್ರ್ಯೋತ್ತರ ಭಾರತದ 75 ವರ್ಷಗಳಲ್ಲಿ ದಾಸ್ಯವನ್ನು ಕಳೆದು ಭಾರತವಾಗಿ ಮೇಲೆದ್ದು ಜಾಗೃತಗೊಳ್ಳುವಂತೆ ಮಾಡಲು ನಡೆಸಿದ ಪ್ರಯತ್ನಗಳೇನು? ನಮ್ಮ ಅರಿವಿಗೆ ಕವಿದಿದ್ದ ಪಶ್ಚಿಮದ ಪೊರೆಯನ್ನು ಕಳಚುವಲ್ಲಿ ನಾವೆಷ್ಟು ಯಶಸ್ವಿಯಾಗಿದ್ದೇವೆ? ರಾಷ್ಟ್ರೀಯತೆಯ ನವ ಮನ್ವಂತರಕ್ಕೆ ನಾವಿನ್ನೂ ಹೆಜ್ಜೆ ಹಾಕಿದ್ದೇವೆಯೇ? ನಮ್ಮ ಶಿಕ್ಷಣ, ಇತಿಹಾಸ, ಸಮಾಜ ವಿಜ್ಞಾನ,ಆರ್ಥಿಕ ಚಿಂತನೆ, ಆಡಳಿತವೂ ಸೇರಿದಂತೆ ನಮ್ಮ ನಿತ್ಯ ಜೀವನದ ಮೇಲೆ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ನಾವೆಷ್ಟು ಸ್ವಂತಿಕೆಯನ್ನು ಬೆಳೆಸಿಕೊಂಡಿದ್ದೇವೆ? ನಮ್ಮ ಮೇಲೆ ಬಲತ್ಕಾರದಿಂದ ಹೇರಲಾಗಿದ್ದ ದಾಸ್ಯದ ಕುರುಹುಗಳನ್ನು ನಾವು ಕಿತ್ತೆಸೆದಿದ್ದೇವೆಯೇ? ಈ ಎಲ್ಲಾ ಪ್ರಶ್ನೆಗಳನ್ನು ಕೇಳಿಕೊಂಡರೆ ನಮಗೊಂದಿಷ್ಟು ಸಂಕಟವಾಗಬಹುದು.
ಕಾರಣವೇನೆಂದರೆ ಎಪ್ಪತ್ತೈದು ವರ್ಷಗಳಷ್ಟು ಕಾಲ ನಮ್ಮನ್ನು ನಾವು ಆಳಿಕೊಂಡ ಮೇಲೂ ಕೂಡ ನಾವು ಸಂಪೂರ್ಣ ನಮ್ಮತನವನ್ನು ರೂಢಿಸಿಕೊಂಡಿಲ್ಲ. ನಮ್ಮನ್ನು ನಿಗ್ರಹಿಸಿ, ನಿಯಂತ್ರಿಸಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವುದಕ್ಕಾಗಿಯೇ ಹೂಡಿದ ತಂತ್ರಗಳನ್ನು ನಾವು ಕಿಂಚಿತ್ತೂ ಬದಲಿಸದೆ ಇಂದಿಗೂ ಮುಂದುವರಿಸಿಲ್ಲವೇ? ಯಾವ ನಿರೂಪಣೆಗಳನ್ನು ನಮ್ಮನ್ನು ಕುಬ್ಜಗೊಳಿಸುವುದಕ್ಕಾಗಿ, ನಾವು ಈ ಜಗತ್ತಿನ ಅನಾಗರಿಕ ಶಿಶುಗಳೆಂದು ಚಿತ್ರಿಸಲು ಬಳಸಿಕೊಂಡಿದ್ದರೋ ಅದೆಲ್ಲವನ್ನೂ ಚಾಚೂ ತಪ್ಪದೆ ಮುಂದುವರಿಸಿಲ್ಲವೇ? ಯಾವ ತರಗತಿಗಳಲ್ಲಿ ಕುಳಿತು ನಮ್ಮ ಅಜ್ಞಾನಕ್ಕಾಗಿ ನಮ್ಮನ್ನೇ ಹಳಿದುಕೊಂಡು ಈ ಪಾಪಕೂಪದಿಂದ ಮೇಲೆದ್ದು ಭಾರತವನ್ನು ಉದ್ಧಾರಗೈಯುವ ಎಲೈಟ್ಗಳಾಗುವ ಕನಸುಗಳನ್ನು ಕಾಣುವಂತೆ ಮಾಡಲಾಗುತ್ತಿತ್ತೋ ಅದೇ ಪರಕೀಯ ಪ್ರಜ್ಞೆಯನ್ನು, ಪಾಪಪ್ರಜ್ಞೆಯನ್ನು ತನ್ನ ನೆಲದ ಸಂಸ್ಕೃತಿಯ ಬಗೆಗೆ ಬೆಳೆಸುವ ರೀತಿ ಬದಲಾಗಿದೆಯೇ ? ಅಕ್ಷರ ಕಲಿತ ತಲೆಮಾರು ತಮ್ಮ ಹಿಂದಿನ ಪೂರ್ವಜರನ್ನು ಅಜ್ಞಾನಿಗಳು, ಅನಾಗರಿಕರು ಎಂದು ಭಾವಿಸುತ್ತಿದ್ದಾರೆ ಎಂದು ಅಂದು ಸ್ವಾಮಿ ವಿವೇಕಾನಂದರು ಹೇಳಿದ್ದರೋ ಅಂತಹುದೇ ಸ್ಥಿತಿ ಇಂದಿಗೂ ಹಾಗೇ ಉಳಿದಿಲ್ಲವೇ? ಹಾಗಾದರೆ ಎಪ್ಪತ್ತೈದು ವರ್ಷಗಳಲ್ಲಿ ಬದಲಾದುದು ಏನು? ನಾವು ಇನ್ನೂ ಎಷ್ಟು ಕಾಲ ಸಾಮ್ರಾಜ್ಯಶಾಹಿಗಳು ನಮ್ಮನ್ನು ಗುಲಾಮರನ್ನಾಗಿಸಲು ಹುಟ್ಟುಹಾಕಿದ ಸುಳ್ಳು ಕಥೆಗಳಲ್ಲಿ, ತಪ್ಪು ನಿರೂಪಣೆಗಳಲ್ಲಿ, ಕಪಟ ಚರಿತ್ರೆಯ ಪಠ್ಯಗಳಲ್ಲಿ ಹೊರಳಾಡುತ್ತಿರಬೇಕು? ಸ್ವಾತಂತ್ರ್ಯ ಸ್ವರಾಜ್ಯವಾಗುವುದು ಯಾವಾಗ ? ಸ್ವರಾಜ್ಯವಾಗದೆ ಇರುವ ಸ್ವಾತಂತ್ರ್ಯ ನಮ್ಮ ದೇಶದ ಬಿಡುಗಡೆಗಾಗಿ ಬಲಿಯಾದ ಲಕ್ಷಾಂತರ ಜನ ಹುತಾತ್ಮರಿಗೆ ಮಾಡುವ ಅವಮಾನವಲ್ಲವೇ?
ಈ ಚಿಂತನ ದಾಸ್ಯಕ್ಕೆ ನಾವು ತೆತ್ತ ಬೆಲೆಯನ್ನು ಲೆಕ್ಕಹಾಕುವುದಕ್ಕೆ ಸಾಧ್ಯವೇ? ಸ್ವರಾಜ್ಯ ಸಂಪಾದನೆಯ ಬಳಿಕವಾದರೂ ನಾವು ನಮ್ಮದೇ ಆದ ವೈಚಾರಿಕ ಸೂತ್ರವನ್ನು ಕಂಡುಕೊಳ್ಳಬೇಕಾಗಿತ್ತು. ನಮ್ಮ ಸಾಮಾಜಿಕ, ಧಾರ್ಮಿಕ ದೃಷ್ಟಿಕೋನಗಳಿಗೆ ಅನುಗುಣವಾದ ವಿಶ್ವಾತ್ಮಕ ಪರಿಹಾರದ ಸೂತ್ರಗಳನ್ನು ಕಂಡುಕೊಳ್ಳಲು ಸಾಧ್ಯವಿತ್ತು. ಯಾಕೆಂದರೆ ಯಾವ ಸಿದ್ದಾಂತಗಳನ್ನು, ದೃಷ್ಟಿ ಧೋರಣೆಗಳನ್ನು ಇಂದು ಜಾಗತಿಕವಾದ ಪರಿಹಾರ ಸೂತ್ರವೆಂದೋ, ಸಿದ್ಧಾಂತವೆಂದೋ ಪರಿಗಣಿಸಲಾಗಿದೆಯೋ ಅವೆಲ್ಲವೂ ಗುಲಾಮರ ಮೇಲೆ ಹೇರಿದ ಕಬಂಧ ಬಾಹುಗಳೇ ಹೊರತು ಸಹಜವಾಗಿ ಸ್ವೀಕೃತವಾದುದಲ್ಲ. ಸ್ವಂತಿಕೆಯ ಆಧಾರದಲ್ಲಿ ನಾವು ಕಟ್ಟಿಕೊಳ್ಳಬೇಕಾಗಿದ್ದ ನಮ್ಮ ಬದುಕು ಪಶ್ಚಿಮದ ನೆರಳಿನಲ್ಲಿ ಕಮರಿಹೋಗಿದೆ. ಹೊಸತನ ಇಲ್ಲಿ ಚಿಗುರಲೇ ಇಲ್ಲ. ಯಾವ ಸಮಾಜದಲ್ಲಿ ಸ್ವಂತಿಕೆಯ ಹೊಸ ಮೊಳಕೆ ಹುಟ್ಟುವುದಿಲ್ಲವೋ ಅಂತಹ ಸಮಾಜ ಸೃಷ್ಟಿಶೀಲವಾದುದನ್ನು ಜಗತ್ತಿಗೆ ನೀಡಲು ಸಾಧ್ಯವಿಲ್ಲ. ಯಾವ ನೆಲದಲ್ಲಿ ನಮ್ಮ ಸೃಷ್ಟಿಶೀಲತೆ ಅರಳಬಹುದಾಗಿತ್ತೋ ಅವೆಲ್ಲವನ್ನೂ ಸಾಮ್ರಾಜ್ಯಶಾಹಿಯ ದಾಹ ಬಲಿ ಪಡೆದಿತ್ತು. ನಾವು ಏನು ಮಾಡುತ್ತಿದ್ದೇವೆಯೋ ಅದು ಪಶ್ಚಿಮದ ಮಾನದಂಡದಲ್ಲಿ, ಪಶ್ಚಿಮದ ಪಡಿಯಚ್ಚಾಗುತ್ತಿದೆಯೇ ಹೊರತು ಸ್ವಂತಿಕೆಯ ನೆಲೆಯದ್ದಾಗುತ್ತಿಲ್ಲ. ಹೀಗಾಗಿ ನಾವು ಹೊಸದನ್ನು ನಮ್ಮದೇ ಸಾಮರ್ಥ್ಯದಿಂದ ಕಟ್ಟುವ ಬದಲು ಪಶ್ಚಿಮದ ವಕ್ತಾರರಾದೆವು. ಚಿಂತನೆಯ ದಾಸರಾದೆವು. ಹೀಗಾಗಿ ನಮ್ಮದೆನ್ನುವ ವೈಶ್ವಿಕ ಪರಂಪರೆಯನ್ನು ನಾವು ಕುರುಡುಗಣ್ಣಿನಿಂದ ಅಪಾರ್ಥ ಮಾಡಿಕೊಂಡೆವು.
ನಮ್ಮ ಅನುಭವಕ್ಕೆ ಮರಳುವುದೇ ನಮ್ಮ ನಿಜವಾದ ಸ್ವರಾಜ್ಯ ಆಗಬೇಕಾಗಿತ್ತು. ದುರಂತವೆಂದರೆ ನಾವು ಸ್ವರಾಜ್ಯಕ್ಕೆ ಕಾಲಿಟ್ಟದ್ದೇ ಅಪ್ಪಟ ಪಶ್ಚಿಮದ ಸಂಸ್ಕೃತಿಯ ಕೂಸಾದ ನೆಹರು ನೇತೃತ್ವದಲ್ಲಿ! ಅಲ್ಲಿಗೆ ನಮ್ಮ ಸಂಸ್ಕೃತಿ ಭ್ರಷ್ಟವಾಯಿತು, ಧರ್ಮ ಭ್ರಷ್ಟವಾಯಿತು. ಮತ್ತಷ್ಟು ಭ್ರöಷ್ಟಗೊಳಿಸುವುದಕ್ಕೆ ಬೇಕಾದ ಬೀಜ ಬಿತ್ತನೆಯೂ ಆಯಿತು. ಪಶ್ಚಿಮವನ್ನು ಅನುಕರಣೆ ಮಾಡುವುದು ಪ್ರಗತಿಯ ಸೂಚಕವಾದುದು ಇದೇ ಕಾರಣದಿಂದ. ನಮ್ಮ ಸ್ವಂತಿಕೆಯ ಪರಂಪರೆಯ ಆಧಾರದ ಮೇಲೆ ಸಾಧಿಸಬೇಕಾದುದನ್ನು ಮರೆತೆವು. ಪ್ರತಿಯೊಂದು ಸಂಗತಿಗಳಿಗೂ ಪಶ್ಚಿಮದ ಮಾನದಂಡಗಳನ್ನೇ ಮಾಪನವಾಗಿಸಿಕೊಂಡೆವು. ಜಗತ್ತಿನಲ್ಲಿ ಅನೇಕ ದೇಶಗಳು ಪರಕೀಯ ಗುಲಾಮಿತನದಿಂದ ಬಿಡುಗಡೆಗೊಂಡ ಕೂಡಲೇ ಮೊದಲು ಮಾಡಿದ ಪ್ರಯತ್ನವೇ ತಮ್ಮ ಸ್ವ ಪರಂಪರೆಯ ಬೇರುಗಳನ್ನು ಹುಡುಕಿಕೊಂಡು ಅದಕ್ಕೆ ಮರಳಿದ್ದು. ಯಾಕೆಂದರೆ ಸಾಮ್ರಾಜ್ಯಶಾಹಿಯ ಹಿಡಿತದಲ್ಲಿದ್ದಾಗ ತಾವು ಬಲತ್ಕಾರದಿಂದ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎನ್ನುವ ಜಾಗೃತಿ ಅಲ್ಲಿ ನಿರ್ಮಾಣವಾಗಿತ್ತು. ಆಧುನಿಕ ಜಗತ್ತಿನ ಬಹುಪ್ರಸಿದ್ದ ಪೋಸ್ಟ್ ಕೊಲೋನಿಯಲ್ ಚಿಂತಕರೆಂದು ಗುರುತಿಸಲಾಗಿರುವ ಗೂಗಿ ವಾ ಥಿಯಾಂಗೋ, ಎಡ್ವರ್ಡ್ ಸೈದ್, ಪ್ರಾಂಜ್ ಫ್ಯಾನನ್ ಮೊದಲಾದವರು ಜಗತ್ತಿನ ಮುಂದೆ ಬಿಚ್ಚಿಟ್ಟದ್ದೇ ಸ್ವಂತಿಕೆಗೆ ಮರಳಬೇಕಾದ ಅಗತ್ಯವೇನು ಎನ್ನುವುದನ್ನೇ. ವಸಾಹತು ಪ್ರಭುತ್ವಕ್ಕೆ ಸಿಲುಕಿದ ದೇಶಗಳು ಹೇಗೆ ತಮ್ಮತನವನ್ನು ಕಳೆದುಕೊಳ್ಳುತ್ತವೆ? ಮಾತ್ರವಲ್ಲ, ವಸಾಹತು ಶಾಹಿ ಆಡಳಿತ ಕೊನೆಗೊಂಡ ಬಳಿಕವೂ ಆ ಪ್ರಜ್ಞೆ ವಸಾಹತಿಗೆ ಒಳಗಾದ ದೇಶಗಳನ್ನು ಹೇಗೆ ಆಳುತ್ತಿರುತ್ತದೆ ಎನ್ನುವುದನ್ನು ವಿವರವಾಗಿ ಚರ್ಚಿಸಿದ್ದಾರೆ. ಹಾಗಾಗಿ ವಸಾಹತುಶಾಹಿಗೆ ಒಳಗಾಗುವ ಪೂರ್ವದಲ್ಲಿದ್ದ ತಮ್ಮ ಮೂಲ ಪರಂಪರೆಗೆ ಮರಳುವುದು ಸ್ವಾಭಿಮಾನದ ನಡೆಯಾಗಬೇಕು. ಅದು ಸಂಕುಚಿತತೆಯಾಗಲೀ, ತಮ್ಮನ್ನು ಆಳಿದವರ ಮೇಲಿನ ದ್ವೇಷದಿಂದಾಗಲೀ ಅಲ್ಲ. ಆದರೆ ಭಾರತದಲ್ಲಿ ಮಾತ್ರ ಒಂದು ಬಗೆಯ ವಿಚಿತ್ರ ವಿದ್ಯಮಾನ ನಡೆದಿದೆ. ನಮ್ಮ ಪರಂಪರೆಗೆ , ವಸಾಹತುಪೂರ್ವ ಸ್ವಂತಿಕೆಗೆ ಮರಳುವುದನ್ನು ನಾವು ಸಂಭ್ರಮಿಸಬೇಕಾಗಿತ್ತು. ಆದರೆ ನಾವಿನ್ನೂ ಬೌದ್ಧಿಕ ಗುಲಾಮಗಿರಿಯನ್ನು ಸಂಭ್ರಮಿಸುತ್ತಿದ್ದೇವೆ.
ಸಾಮ್ರಾಜ್ಯಶಾಹಿಯ ಆಳ್ವಿಕೆಯಡಿಯಲ್ಲಿ ನಾವು ಹೇಗೆ ಬದಲಾಗಿ ಬಿಟ್ಟೆವು ಎಂದರೆ ನಮ್ಮ ಪರಂಪರೆಯನ್ನೇ ಮರೆತು, ವಸಾಹತು ಪ್ರಭುತ್ವದ ಆಯ್ಕೆಯನ್ನೆ ನಮ್ಮ ಆಯ್ಕೆಯಾಗಿ ಬದುಕಲಾರಂಬಿಸಿದೆವು. ಬ್ರಿಟಿಷರು ಭಾರತವನ್ನು ಯಾವ ಚೌಕಟ್ಟಿನಲ್ಲಿಟ್ಟು ನೋಡಿದರೋ, ನಾವೂ ಭ್ರಮಿಸಿ ಅದೇ ಚೌಕಟ್ಟಿನೊಳಗೆ ಸಿಲುಕಿಕೊಂಡೆವು. ಭಾರತ ‘ಇಂಡಾಲಜಿ’ಯು ಪರಿಚಯಿಸಿದಂತೆ ಇರಲಿಲ್ಲ. ಆದರೆ ಭಾರತೀಯರೇ ಭಾರತವನ್ನು ಇಂಡಾಲಜಿಯ ಮೂಲಕ ಪರಿಚಯಿಸಿಕೊಂಡರು. ಮತ್ತು ಅವರು ನಿರೂಪಿಸಿದ ಭಾರತದ ಚಿತ್ರಣವೇ ಮನಸ್ಸಿನ ಆಳದಲ್ಲಿ ಉಳಿಯಿತು. ಪಶ್ಚಿಮದ ವಿದ್ವಾಂಸರು ತಾವು ಭಾರತವನ್ನು ಅರ್ಥಮಾಡಿಕೊಂಡಿದ್ದೇವೆ ಎಂಬಂತೆ ಬಿಂಬಿಸಿಕೊಂಡಾಗ ಭಾರತದ ಒಂದು ಪ್ರತಿಷ್ಟಿತ ವರ್ಗ ಅದನ್ನು ಕಣ್ಮುಚ್ಚಿ ಸ್ವೀಕರಿಸಿತು. ಈ ವಿದ್ವಾಂಸರು ತಮಗನುಕೂಲಕರವಾದ ಭಾರತದ ಚಿತ್ರಣವನ್ನು ಸೃಷ್ಟಿಸಿದ್ದರು. ಈ ಚಿತ್ರಣವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವುದಕ್ಕಾಗಿ ಪೂರಕ ಪಠ್ಯಗಳನ್ನು ರಚಿಸಿದರು. ಮೇಲ್ನೋಟಕ್ಕೆ ಆ ಪಠ್ಯಗಳೆಲ್ಲವೂ ಭಾರತೀಯವೇ.ಭಾರತದ ಬಗೆಗೇ ಇವೆ. ಆದರೆ ತಿರುಳಿನಲ್ಲಿ ಭಾರತವನ್ನು ನಯವಾಗಿ ಭಂಜಿಸುತ್ತಿತ್ತು. ಆದರೆ ವಿದ್ವತ್ತಿನ ಮುಖವಾಡ ಹೊತ್ತ ಈ ನಿರೂಪಣೆಗಳು ಭಾರತದ ಬಗೆಗಿನ ಪಶ್ಚಿಮದ ಆವೃತ್ತಿಯೊಂದನ್ನು ಸೃಷ್ಟಿಸುವಲ್ಲಿ ಸಫಲವಾದರು. ನಾವು ಬ್ರಿಟಿಷ್ ವಿದ್ವಾಂಸರ ಮೂಲಕ ಸೃಷ್ಟಿಯಾದ ಭಾರತದ ಪಶ್ಚಿಮ ಆವೃತ್ತಿಯನ್ನೇ ನಿಜವಾದ ಭಾರತ ಎಂದು ನಂಬಿದೆವು. ಇದರ ಮೂಲಕವೇ ಭಾರತವೇನು ಎಂದು ನಿರೂಪಿತವಾಗುತ್ತಾ ಹೋಯಿತು. ನಿಜವಾದ ಭಾರತ, ಇದರ ಜ್ಞಾನ ಪರಂಪರೆ ಮೂಲೆಗೆ ಸೇರಿತು.
ಈ ನಿರೂಪಣೆಗಳು ಪಶ್ಚಿಮವು ಸಾಮ್ರಾಜ್ಯಶಾಹಿ ಶಕ್ತಿಯಾಗಿ ಭಾರತವನ್ನು ಪ್ರವೇಶಿಸುವ ಪೂರ್ವದಲ್ಲಿದ್ದ ಭಾರತದ ಸಹಜವೂ, ಸುಂದರವೂ ಆಗಿದ್ದ ಬದುಕನ್ನು ಮರೆಮಾಡಿತು. ಮತ್ತು ಇಲ್ಲಿನ ಬದುಕನ್ನು ತಮ್ಮದೇ ಪರಿಭಾಷೆಯಲ್ಲಿ ನೋಡುತ್ತಾ, ಗ್ರಹಿಸುತ್ತಾ, ವಿವರಿಸುತ್ತಾ ಇದೇ ಭಾರತ ಎಂದಿತು. ವಾಸ್ತವದಲ್ಲಿ ಈ ನೋಟದಲ್ಲಿ, ವಿವರಣೆಯಲ್ಲಿ ಇದ್ದುದು ಪಶ್ಚಿಮವೇ. ಈ ನೀರೂಪಣೆಗಳು ಕಾಲ ಕಳೆದಂತೆ ಎಷ್ಟು ಪ್ರಭಾವಿಯಾಗುತ್ತಾ ಬಂತೆಂದರೆ ಭಾರತೀಯರು ಈ ವಿವರಣೆಗಳೇ ತಮ್ಮ ಕುರಿತ ವಿದ್ವತ್ ರೂಪದ ಪ್ರಸ್ತುತಿ ಎಂದು ಭಾವಿಸಿಕೊಂಡು ಅದನ್ನೆ ಸ್ವೀಕರಿಸಿದರು. ತಾವೂ ಕೂಡ ಅದೇ ಪರಿಬಾಷೆಯಲ್ಲಿ ಮಾತನಾಡಲಾರಂಬಿಸಿದರು. ಭಾರತೀಯರ ಇಂತಹ ನಿರೂಪಣೆಗಳಲ್ಲಿ ತಾವು ಭಾರತವನ್ನು ವೈಚಾರಿಕವಾಗಿ ನಿರೂಪಿಸುತ್ತಿದ್ದೇವೆ ಎಂಬ ಹೆಮ್ಮೆ ಕಾಣಿಸಿಕೊಳ್ಳುತ್ತಿತ್ತು. ಮತ್ತು ಈ ಕಾರಣದಿಂದಾಗಿ ತಾವು ತಮ್ಮ ಪೂರ್ವಜರಿಗಿಂತಲೂ ಭಾರತವನ್ನು ಚೆನ್ನಾಗಿ ಅರಿತಿದ್ದೇವೆ ಮತ್ತು ಅದನ್ನು ನಿರೂಪಿಸುತ್ತದ್ದೇವೆ ಎಂದು ಭಾವಿಸುತ್ತಿದ್ದರು. ಆದರೆ ನಿಜವಾಗಿಯೂ ಅವರು ಮಾನಸಿಕವಾಗಿ , ಸಾಂಸ್ಕೃತಿಕವಾಗಿ ಭಾರತದಿಂದ ದೂರವಾಗುತ್ತಿದ್ದರು. ಈ ನೆಲದ ಆಚರಣೆಗಳು, ನಂಬಿಕೆಗಳು, ಕಲೆ ಸಾಹಿತ್ಯ, ವಿಜ್ಞಾನ . . ಹೀಗೆ ಎಲ್ಲವನ್ನೂ ತಮ್ಮದೇ ಪರಿಭಾಷೆಯಲ್ಲಿ ನಿರೂಪಿಸಲಾರಂಬಿಸಿದ್ದರು. ಈ ಚಿತ್ರಣಗಳು ಭಾರತವನ್ನು ವ್ಯವಸ್ಥಿತವಾಗಿ ನಾಶಮಾಡುವ ಸಂಚಿನ ಭಾಗವೇ ಆಗಿತ್ತು. ಉದಾಹರಣೆಗೆ ಭಾರತವನ್ನು ಅದು ಏನು ಎಂದು ವಿವರಿಸುವ ಬಗೆ ಬಗೆಯ ಸಾಹಿತ್ಯ, ಅಧ್ಯಯನ ವರದಿಗಳು ಪ್ರಕಟವಾಗಲಾರಂಭಿಸಿತು. ಇವೆಲ್ಲದರ ಸಾರವೂ ಒಂದೇ ಆಗಿತ್ತು. ಅದೆಂದರೆ ಭಾರತ ಎಂದರೆ ಅವೈಜ್ಞಾನಿಕವಾದುದು, ಭಾರತವೆಂದರೆ ಯಾವುದೇ ಸತ್ವರಹಿತವಾದ ಸಮಾಜ, ಭಾರತವೆಂದರೆ ಐತಿಹಾಸಿಕವಲ್ಲದ ಸಮಾಜ, ಭಾರತವೆಂದರೆ ಜಗತ್ತಿನ ಬೇರೆ ಬೇರೆ ಭಾಗಗಳಿಂದ ವಲಸೆ ಬಂದವರಿಂದ ರೂಪುಗೊಂಡ ಒಂದು ಸಂಕರ ಸಂಸ್ಕೃತಿ ಎಂಬ ಚಿತ್ರಣಗಳನ್ನು ನೀಡಲಾಯಿತು. ಪ್ರಭಾವಿ ಭಾರತೀಯ ಗುಂಪುಗಳು ಈ ನಿರೂಪಣೆಗಳಿಂದ ತಾವು ಭಾರತವನ್ನು ಅರಿತವರಂತೆ ಸಮ್ಮತಿಸುತ್ತಾ ಬಂದುವು. ಈ ನಿರೂಪಣೆಗಳು ಭಾರತದ ಗುಲಾಮಿ ಕಾಲದ ಶತಮಾನಗಳಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಸಂಪಾದನೆಯ ಎಪ್ಪತ್ತೈದು ವರ್ಷಗಳ ನಂತರವೂ ಬದಲಾಗಲಿಲ್ಲ.
ಪಶ್ಚಿಮ ಸೃಷ್ಟಿಸಿದ ಇಂತಹ ಆಳವಾದ ಪ್ರಭಾವವವನ್ನು ವಸಾಹತುಶಾಹಿ ಅನುಭವ ಎಂದು ಪರಿಗಣಿಸುವುದಾದರೆ, ಇಂತಹ ಅನುಭವದಿಂದ ಹೊರಬರುವ ದಾರಿಗಳ ಬಗ್ಗೆ ಶ್ರೀ ಅರವಿಂದರು, ಶ್ರೀ ಆನಂದ ಕುಮಾರಸ್ವಾಮಿ, ಶ್ರೀ ಧರಮ್ಪಾಲ್ ಮೊದಲಾದ ಮಹನೀಯರು ತೀಕ್ಷ್ಣವಾಗಿ ಪ್ರತಿಪಾದನೆ ಮಾಡಿಕೊಂಡು ಬಂದಿದ್ದರು. ಇಂತಹ ಮಹನೀಯರ ಚಿಂತನೆಗಳನ್ನು ಭಾರತ ದಾಸ್ಯದಿಂದ ಬಿಡುಗಡೆಯಾಗುವ ಬೆಳಕಾಗಿ ನೋಡಬೆಕಾಗಿತ್ತು. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಇಂದಿಗೂ ಈ ತಪಸ್ವೀ ಸಾಧಕರ ಬಗೆಗೆ ಗಾಢವಾದ ಅಜ್ಞಾನವಿದೆ. ನಮ್ಮ ಸಮಾಜದ ಬುದ್ದಿಜೀವಿಗಳೆಂದು ಕರೆಯಲ್ಪಟ್ಟವರೂ ಕೂಡ ಇಂತಹ ವಿಷಯಗಳಲ್ಲಿ ತಮ್ಮ ಮೌನ ಮುರಿಯುವುದಿಲ್ಲ.ಅವರಲ್ಲನೇಕರು ಆಫ್ರೀಕಾದ ಬಿಡುಗಡೆಯನ್ನು ಕುರಿತು, ಗೂಗಿ ವಾ ಥಿಯಾಂಗೋ ವಿಚಾರಗಳನ್ನು, ಎಡ್ವರ್ಡ್ ಸೈದ್ ವಿಚಾರಗಳನ್ನು ಸಂಭ್ರಮಿಸಿ ಮಾತನಾಡುತ್ತಾರೆ. ಸಾಹಿತ್ಯ ವಿಚಾರ ಗೋಷ್ಠಿಗಳಲ್ಲಿ ಇವರುಗಳ ಬಗೆಗೆ ಮಾತನಾಡುವುದು ಬಹು ಪ್ರತಿಷ್ಠೆಯ ಸಂಗತಿಯೂ ಕೂಡ ಆಗಿದೆ. ವಿಮರ್ಶೆಯ ಒಂದು ಸಿದ್ಧಾಂತವಾಗಿ ಪೋಸ್ಟ್ ಕೊಲೋನಿಯಲ್ ಚಿಂತನೆಯನ್ನು ಮಾತನಾಡುತ್ತಾ ತಾವು ಘನ ವಿದ್ವಾಂಸರೆಂದು ಬಿಂಬಿಸಿಕೊಳ್ಳುವವರೂ ಕೂಡ ಭಾರತೀಯ ಚಿಂತಕರ ಬಗೆಗೆ ನಿರ್ಲಕ್ಷ್ಯವನ್ನೇ ಮುಂದುವರಿಸುತ್ತಾರೆ. ಸ್ವತಃ ಇದೇ ವಿದ್ವಾಂಸರು ಇನ್ನೂ ಬ್ರಿಟಿಷ್ ಆಳ್ವಿಕೆ ಸೃಷ್ಟಿಸಿದ ಆರ್ಯ-ದ್ರಾವಿಡ ಎಂಬ ಕಲ್ಪಿತ ನಿರೂಪಣೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ.
ಯುರೋಪ್ ಭಾರತವನ್ನೂ ಸೇರಿದಂತೆ ತಾನು ಕಾಲಿಟ್ಟಲ್ಲಿ ಸ್ಥಳೀಯವಾದ ಸಂಸ್ಕೃತಿಯನ್ನು, ನಾಗರಿಕತೆಯನ್ನು ನಾಶಮಾಡಿತು, ಆ ಜಾಗದಲ್ಲಿ ತನ್ನ ಸಂಸ್ಕೃತಿ, ನಾಗರಿಕತೆಯನ್ನು ಅದು ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಿತು ಎನ್ನುವುದರ ಬಗ್ಗೆ ಮಾತನಾಡಬೆಕಾಗಿತ್ತು. ಯುರೋಪಿನ ನಾಗರಿಕತೆಯ ಅಟ್ಟಹಾಸ ಸ್ಥಳೀಯವಾದ ಜನರ ಜೀವನವನ್ನು ಹೇಗೆ ಬಲಿ ಪಡೆದುಕೊಂಡಿತು ? ಸಂಸ್ಕೃತಿಗಳನ್ನು ಕೊಂದುಹಾಕಿತು ? ಎನ್ನುವುದನ್ನು ತಿಳಿಯುವುದು ಬಹು ಮುಖ್ಯ. ಇಂದಿಗೂ ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಭಾರತ ತನ್ನ ಬಹುತ್ವವನ್ನು ಕಳೆದುಕೊಂಡು ಏಕರೂಪತೆಯ ಕಡೆಗೆ ಸಾಗುತ್ತಿದೆ ಎನ್ನುವಾಗ ತಪ್ಪಿಯೂ ವಸಾಹತುಶಾಹಿ ಆಳ್ವಿಕೆಯ ಪರಿಣಾಮವಾಗಿ ನಮ್ಮ ದೇಶಿಯ ಸಾಂಸ್ಕೃತಿಕ ವೈವಿಧ್ಯತೆಗಳು,ಭಾಷೆ,ಜೀವನ ಕ್ರಮಗಳ ಶ್ರೀಮಂತಿಕೆಯನ್ನು ಹೇಗೆ ಕೊಂದುಹಾಕಿತು ? ಎನ್ನುವುದರ ಬಗೆಗೆ ಮಾತನಾಡುವುದಿಲ್ಲ. ಭಾರತವನ್ನು ಪಾರುಮಾಡಬೇಕಾದುದು ಚಿಂತನದಾಸ್ಯದಿಂದ. ಅದಕ್ಕಾಗಿ ನಾವಿಂದು ಸ್ವರಾಜ್ಯವನ್ನು ಕಾಪಾಡುವ ಬೌದ್ಧಿಕ ಕ್ಷತ್ರಿಯರಾಗಬೇಕಾಗಿದೆ.
ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.