ಉಡುಪಿ : ಮುಂದಿನ ವರ್ಷ ಪೇಜಾವರ ಶ್ರೀಗಳ ಪರ್ಯಾಯದ ಪೂರ್ವಭಾವಿಯಾಗಿ ನಡೆಸಲಾಗುವ ನಾಲ್ಕು ಮುಹೂರ್ತಗಳ ಪೈಕಿ ಮೂರನೇ ಮುಹೂರ್ತವಾದ ಕಟ್ಟಿಗೆ ಮುಹೂರ್ತ ಇಂದು ಸಂಪನ್ನಗೊಂಡಿತು.
ಶ್ರೀ ಕೃಷ್ಣ ಮಠದ ಅಷ್ಟಮಠಾಧೀಶರ ಪಾಲಿಗೆ 2 ವರ್ಷಕ್ಕೊಮ್ಮೆ ಬರುವ ಪರ್ಯಾಯದ ಪೂರ್ವಭಾವಿಯಾಗಿ ನಾಲ್ಕು ಮುಹೂರ್ತಗಳನ್ನು ನಡೆಸುವುದು ಸಂಪ್ರದಾಯವಾಗಿದೆ. ಮುಂದಿನ ವರ್ಷ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಶ್ರೀಪದರ ಪರ್ಯಾಯವಾಗಿರುವ ಹಿನ್ನಲೆಯಲ್ಲಿ ಈ ಪರ್ಯಾಯ ಮಹೋತ್ಸವ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನಡೆದಿದ್ದು ಇಂದು ಮೂರನೇ ಮುಹೂರ್ತವಾದ ಕಟ್ಟಿಗೆ ಮುಹೂರ್ತ ಸಂಪನ್ನಗೊಂಡಿತು. ನಾಲ್ಕನೇ ಮುಹೂರ್ತವಾದ ಭತ್ತ ಮುಹೂರ್ತ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ.
ಅನ್ನಬ್ರಹ್ಮನ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕೃಷ್ಣ ಮಠ ಅನ್ನದಾನವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಇದಕ್ಕೆ ಚ್ಯುತಿ ಬಾರದಂತೆ ಮಠಾಧೀಶರೂ ಕೂಡಾ ನಿಗಾವಹಿಸುತ್ತಾರೆ. ಎರಡು ವರ್ಷಕ್ಕೆ ಅನ್ನದಾನಕ್ಕೆ ಬೇಕಾಗುವ ಕಟ್ಟಿಗೆಯನ್ನು ಸಂಗ್ರಹಿಸಿ ಇಡುವುದೇ ಕಟ್ಟಿಗೆ ಮುಹೂರ್ತದ ಉದ್ದೇಶವಾಗಿದ್ದು, ಇಂದು ಧಾರ್ಮಿಕ ವಿಧಿ ವಿಧಾನದ ಮೂಲಕ ಕಟ್ಟಿಗೆ ಮುಹೂರ್ತ ಸಂಪನ್ನಗೊಂಡಿತು.
ನವಧಾನ್ಯಗಳ ಸಮರ್ಪಣೆಯ ಬಳಿಕ ಕೃಷ್ಣ ಮಠ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ ಬಳಿಕ ಕಟ್ಟಿಗೆಯ ಕಟ್ಟು ಹಿಡಿದು ಮಂಗಳ ವಾದ್ಯಗಳೊಂದಿಗೆ ರಥಬೀದಿಗೆ ಸುತ್ತು ಬರಲಾಯಿತು.
ಬಳಿಕ ಕಟ್ಟಿಗೆ ಸಂಗ್ರಹ ಮಾಡುವ ಮದ್ವಸರೋವರದ ಪಕ್ಕದಲ್ಲಿ ಪೂಜೆ ನೆರವೇರಿಸಿ ಮುಹೂರ್ತ ಸಂಪನ್ನಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಧಾರ್ಮಿಕ, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.