ಮಂಗಳೂರು : ತುಳು ಚಿತ್ರರಂಗದಲ್ಲಿ ಒಂದು ಅತ್ಯಪರೂಪದ ದಾಖಲೆ ಬರೆದು, ಎಲ್ಲ ಚಿತ್ರೋದ್ಯಮಿಗಳ ಗಮನ ಸೆಳೆದಿರುವ ಜಯಕಿರಣ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬಂದಿರುವ ಚಾಲಿಪೋಲಿಲು ಸಿನಿಮಾವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಮುಂದಾಗಿದೆ. ಇದು ಮತ್ತೊಂದು ದಾಖಲೆ ಎಂದು ಹೇಳಬೇಕಾಗುತ್ತದೆ.
ಹಲವು ಪ್ರಥಮಗಳ ಮತ್ತು ಪ್ರಸ್ತುತ 300 ದಿನಗಳ ಪ್ರದರ್ಶನ ಕಾಣಲು ಸಿದ್ಧವಾಗಿರುವ ಚಾಲಿಪೋಲಿಲು ಆ. 23ರಂದು ಆಸ್ಟ್ರೇಲಿಯಾದ ಮೆಲ್ಬರ್ನ್ನ ಯೂನಿಯನ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಆ. 29ರಂದು ಪರ್ತ್ನ ಜಾರ್ರೂಂ ಚಿತ್ರಮಂದಿರದಲ್ಲೂ ಇದು ಪ್ರದರ್ಶನ ಕಾಣುವ ಮೂಲಕ ಆ ದೇಶದ ಎರಡು ಪ್ರಮುಖ ನಗರಗಳ ತುಳು- ಕನ್ನಡಿಗರನ್ನು ರಂಜಿಸಲಿದೆ. ಈಗಾಗಲೇ ಅಬುಧಾಬಿಯಲ್ಲಿ ಪ್ರದರ್ಶನ ಕಂಡು ಎಲ್ಲರಿಂದಲೂ ಮುಕ್ತ ಕಂಠದಿಂದ ಶ್ಲಾಘನೆಗೆ ಒಳಗಾಗಿರುವ ಈ ಸಿನಿಮಾವು ಮುಂದಿನ ದಿನಗಳಲ್ಲಿ ನ್ಯೂಜಿಲ್ಯಾಂಡ್, ಕೆನಡ, ಸಿಂಗಾಪುರ್ ಮತ್ತು ದುಬೈಯಲ್ಲೂ ಪ್ರದರ್ಶನವಾಗಲಿದೆ.
ತುಳು ಸಿನಿಮಾವೊಂದು ಆಸ್ಟ್ರೇಲಿಯಾದಂಥ ಒಂದು ಪ್ರಮುಖ ದೇಶದಲ್ಲಿ ಪ್ರದರ್ಶನ ಕಾಣುವುದು ಸಣ್ಣ ಸಂಗತಿಯಲ್ಲ. ಅಂಥ ಅಸಾಧಾರಣ ಸಾಧನೆಯನ್ನು ಚಾಲಿಪೋಲಿಲು ಮೆರೆಯುತ್ತಿರುವುದಕ್ಕೆ ಆ ಸಿನಿಮಾದಲ್ಲಿರುವ ಗುಣಾತ್ಮಕ ಅಂಶ ಮತ್ತು ಅದಕ್ಕೆ ಸಿಕ್ಕಿರುವ ಅಪೂರ್ವ ಪ್ರೇಕ್ಷಕ ಬೆಂಬಲವೇ ಒಂದು ಪ್ರಮುಖ ಕಾರಣ ಎಂದು ಹೇಳಬೇಕಾಗುತ್ತದೆ. 300 ದಿನಗಳ ಪ್ರದರ್ಶನ ಕಾಣುವ ಸಿದ್ಧತೆಯಲ್ಲಿರುವ ಈ ಸಿನಿಮಾವು ಈಗಾಗಲೇ ಜಗತ್ತಿನ ವಿವಿಧ ಮೂಲೆಗಳಲ್ಲಿರುವ ತುಳು-ಕನ್ನಡಿಗರ ಗಮನ ಸೆಳೆದಿದೆ. ಅದನ್ನು ಒಮ್ಮೆ ನೋಡಲೇಬೇಕು ಎಂದು ಅವರೆಲ್ಲರೂ ನಿರ್ಧರಿಸಿದ್ದು, ನಮ್ಮೂರಿನಲ್ಲೂ ಆ ಸಿನಿಮಾದ ಪ್ರದರ್ಶನ ಏರ್ಪಡಿಸಬೇಕು ಎಂಬುದು ವಿಶ್ವದೆಲ್ಲೆಡೆಗಳಿಂದ ಬೇಡಿಕೆ ಬರುತ್ತಿರುವುದು ಚಾಲಿಪೋಲಿಲು ತಂಡದ ಶ್ರಮಕ್ಕೆ ಸಲ್ಲುತ್ತಿರುವ ಗೌರವ ಎಂದು ಹೇಳಲೇಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.